ಮೈಸೂರು; ಚಿನ್ನಾಭರಣ ಅಂಗಡಿಯಲ್ಲಿ ಫೈರಿಂಗ್​ ಕೇಸ್.. ಪಾಕ್​​ ಗಡಿಯಲ್ಲಿ ಆರೋಪಿಗಳ ಬಂಧನ

ಮೈಸೂರು; ಚಿನ್ನಾಭರಣ ಅಂಗಡಿಯಲ್ಲಿ ಫೈರಿಂಗ್​ ಕೇಸ್.. ಪಾಕ್​​ ಗಡಿಯಲ್ಲಿ ಆರೋಪಿಗಳ ಬಂಧನ

ಮೈಸೂರು: ನಗರದ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ದರೋಡೆ ಹಾಗೂ ಕೊಲೆ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಪಾಕಿಸ್ತಾನದ ಗಡಿಯಲ್ಲಿ ಬಂಧನ ಮಾಡಿದ್ದಾರೆ.

ವಿಜಯಸೇನ್, ಮಂಜೂರ್ ಬಂಧಿತ ಆರೋಪಿಗಳಾಗಿದ್ದಾರೆ. ವಿಶೇಷ ತನಿಖಾ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಗಡಿಗೆ ಸುಮಾರು 60 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಗ್ರಾಮವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ವಿಜಯಸೇನ್‌ ನನ್ನು ಈಗಾಗಲೇ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಉಳಿದಂತೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗ್ರಾಮವೊಂದರಲ್ಲಿ ತಲೆಮರೆಸಿಕೊಂಡಿದ್ದ ಮಂಜೂರ್‌ನನ್ನು ಪೊಲೀಸರು ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗ್ರಾಮ ಪಾಕಿಸ್ತಾನ ಗಡಿಗೆ 10 ಕಿ.ಮೀ ದೂರಲ್ಲಿದೆ.

blank

ಮೊಬೈಲ್ ಟವರ್ ಮೂಲಕ ಮಂಜೂರ್‌ ಇದ್ದ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದ್ದರು. ಬೆಂಗಳೂರಿನ ಇನ್‌ಸ್ಪೆಕ್ಟರ್‌ ನವೀನ್‌, ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯ ಇನ್‌ಸ್ಪೆಕ್ಟರ್‌ ರಾಜು, ಕೆ.ಆರ್‌ ಠಾಣೆಯ ಪಿಎಸ್‌ಐ ಮಹಾವೀರ್‌‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ರಾಜಸ್ಥಾನದ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದರೋಡೆಕೋರರ ಬಂಧನ ಮಾಡಲಾಗಿದ್ದು, ಆರೋಪಿಗಳು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್‌ ಪ್ಯಾಲೇಸ್ ಅಂಗಡಿಯಲ್ಲೂ ದರೋಡೆ ಮಾಡಿ, ಅಂಗಡಿ ಮುಂಭಾಗ ನಿಂತಿದ್ದ ಗ್ರಾಹಕರೊಬ್ಬರನ್ನು ಗುಂಡಿಕ್ಕಿ ಕೊಂದು ಎಸ್ಕೇಪ್ ಆಗಿದ್ದರು.

ದರೋಡೆ ಬಲಿಕ ಇಬ್ಬರು ಮಹಾರಾಷ್ಟ್ರದಲ್ಲೇ ಉಳಿದರೆ ಮತ್ತೊಬ್ಬ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ಘಟನೆ ಬಳಿಕ ಮೈಸೂರು ಪೊಲೀಸರೊಂದಿಗೆ ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಬೆಂಗಳೂರಿನ 120 ಪೊಲೀಸರನ್ನು ಒಳಗೊಂಡ ಒಟ್ಟು ಏಳು ತಂಡಗಳನ್ನು ರಚಿಸಲಾಗಿತ್ತು. ಪಶ್ಚಿಮ ಬಂಗಾಳದಿಂದ ಒಬ್ಬ, ಮಹಾರಾಷ್ಟ್ರದಿಂದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿ ಕರೆತರಲಾಗಿದೆ. ಇನ್ನು ದರೋಡೆಗೆ ಮೈಸೂರಿನಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಫೈರಿಂಗ್ ಕೇಸ್​​: 6 ಆರೋಪಿಗಳ ಬಂಧನ; ಯಾರೂ ಸ್ಥಳೀಯರಲ್ಲ ಎಂದ ಪ್ರವೀಣ್ ಸೂದ್

Source: newsfirstlive.com Source link