ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ ಯಾರು ಗೊತ್ತಾ..?

ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ ಯಾರು ಗೊತ್ತಾ..?

ನವದೆಹಲಿ: ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಸಿಕ್ಕಿಕೊಂಡಿದೆ, ಸದ್ಯ ಜಗತ್ತಿನ ಎಲ್ಲಾ ದೇಶಗಳೂ ತಮ್ಮ ನಾಗರಿಕರನ್ನ ತಾಯ್ನಾಡಿಗೆ ಕರೆದುಕೊಂಡು ಹೋಗುವ ಪ್ರಕ್ರಿಯೆಗಳು ಮುಗಿದಿವೆ. ಅಮೆರಿಕ ಸೇನೆಯೂ ಕೂಡ 20 ವರ್ಷಗಳ ಬಳಿಕ ಅಫ್ಘಾನ್​ ನೆಲೆಯಿಂದ ವಾಪಸ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಭಾರತದ ಕತಾರ್ ರಾಯಭಾರಿಯನ್ನ ತಾಲಿಬಾನಿಗಳು ಭೇಟಿ ಮಾಡಿದ್ದಾರೆ.

ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನಿಕ್‌ಜೈ, ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಭೇಟಿಯಾಗಿದ್ದಾರೆ. ಭಾರತದ ರಾಯಭಾರಿ ಡಾ. ದೀಪಕ್​​ ಮಿತ್ತಲ್​​ರನ್ನು ಮೊದಲ ಬಾರಿಗೆ ಭೇಟಿಯಾಗಿರುವ ಸ್ವಾನಿಕ್​​ಜೈ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಭದ್ರತೆ ಕುರಿತು ತಾಲಿಬಾನಿಗಳ ಪ್ರತಿನಿಧಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

ಯಾರು ಈ ಸ್ಟಾನಿಕ್‌ಜೈ..?
ಶೇರ್​ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ ಜೈ, ದೋಹದ ತಾಲಿಬಾನ್​ ಪಕ್ಷದ ಮುಖ್ಯಸ್ಥನಾಗಿದ್ದಾನೆ. ಈತ ಭಾರತದ ಪಾಲಿಗೆ ಎಂದೂ ಮರೆಯಲಾಗದ ಮನುಷ್ಯ. ಯಾಕಂದ್ರೆ ಈತ 1980ರ ಸಂದರ್ಭದಲ್ಲಿ ಉತ್ತರಾಖಂಡ್​​ನ ಡೆಹ್ರಾಡೂನ್​​ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ)ನಲ್ಲಿ ಟ್ರೈನಿಂಗ್ ಪಡೆದುಕೊಂಡಿದ್ದ. ನಂತರದ ದಿನಗಳಲ್ಲಿ ಸ್ಟಾನಿಕ್ ಜೈ ತಾಲಿಬಾನ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿ, ತಾಲಿಬಾನ್ ನಾಯಕನಾಗುತ್ತಾನೆ.

ಐಎಂಎ 1948ರಿಂದ ಸೇನಾ ಕೆಡೆಟ್​ಗಳಿಗೆ ತರಬೇತಿಯನ್ನ ನೀಡುತ್ತ ಬಂದಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳು ಸೇರಿದಂತೆ ಅಫ್ಘಾನಿಸ್ತಾನದಂತಹ ದೇಶಗಳ ನಾಗರಿಕರಿಗೂ ತರಬೇತಿಯನ್ನ ನೀಡಿದೆ. ಹೀಗಿದ್ದೂ ಅದರ ಕೇಡೆಟ್​​ಗಳಲ್ಲಿ ತರಬೇತಿ ಪಡೆದ ವ್ಯಕ್ತಿಯೊಬ್ಬ ಭಯೋತ್ಪಾದಕ ಸಂಘಟನೆಯ ನಾಯಕನಾಗುತ್ತಾನೆ ಅಂದರೆ ನಿಜಕ್ಕೂ ಊಹಿಸಲಾಗದ ಸಂಗತಿಯಾಗಿದೆ.

ಆತ ಬೇರೆ ಕಂಪನಿ ಮತ್ತು ಬೆಟಾಲಿಯನ್​ನಲ್ಲಿದ್ದ. ಆದರೆ ನಾವಿಬ್ಬರೂ ಒಂದೇ ಬ್ಯಾಚ್​​ನವರು ಆಗಿದ್ದೇವು. ಆತನ ಹೊಗಳಲು ಯೋಗ್ಯನಲ್ಲ ಅನ್ನೋದನ್ನ ಈ ಸಂದರ್ಭದಲ್ಲಿ ನೆನಪಿಸಿಕೊಳ್ತೇನೆ. ಯಾಕಂದ್ರೆ ಅವರು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ.
ನಿವೃತ್ತ ಬ್ರಿಗೇಡಿಯರ್ ಸಂದೀಪ್ ಥಾಪರ್, ಸ್ಟಾನಿಕ್ ಜೈನ ಬ್ಯಾಚ್​​ಮೇಟ್

ಸ್ಟಾನಿಕ್ ಜೈ ಅಫ್ಘಾನಿಸ್ತಾನದ ಬರಕಿ ಬರಕ್ ಜಿಲ್ಲೆಯಲ್ಲಿ 1963ರಲ್ಲಿ ಹುಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಆಸಕ್ತಿ ಹುಟ್ಟಿಸಿಕೊಂಡಿದ್ದ ಈತ, ರಾಜಕೀಯ ಶಾಸ್ತ್ರದಲ್ಲಿ ಪದವಿಯನ್ನೂ ಪಡೆದುಕೊಂಡಿದ್ದಾನೆ. ನಂತರ ಭಾರತದ IMAನ ಭಗತ್ ಬೆಟಾಲಿಯನ್​ನ ಕೆರೆನ್ ಕಂಪನಿಗೆ ಸೇರಿ ಮಿಲಿಟರಿ ಬಗ್ಗೆ ತರಬೇತಿ ಪಡೆದುಕೊಳ್ತಾನೆ. 1980ರ ವೇಳೆಗೆ ಸ್ಟಾನಿಕ್ ಜೈ ಐಎಂಎನಿಂದ ತರಬೇತಿ ಪಡೆದು ಉತ್ತೀರ್ಣನಾಗಿ ಅಫ್ಘಾನ್ ಸೇನೆಗೆ ಸೇರಿದ್ದ. ಅಫ್ಘಾನ್​ ಸೇನೆಯಲ್ಲಿದ್ದ ಈತ ಸೋವಿಯತ್ ಯುದ್ಧದಲ್ಲಿ ಭಾಗಿಯಾಗುತ್ತಾನೆ.

ಅಫ್ಘಾನ್ ಸೇನೆಯಲ್ಲಿ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡುತ್ತಾನೆ. ನಂತರದ ದಿನಗಳಲ್ಲಿ ತಾಲಿಬಾನ್​​ ಸಂಘಟನೆಯಲ್ಲಿ ತೊಡಗಿಕೊಂಡು 1996ರಲ್ಲಿ ಅಧಿಕೃತವಾಗಿ ತಾಲಿಬಾನ್ ಸಂಘಟನೆಗೆ ಸೇರುತ್ತಾನೆ.

ಪಾಕ್ ಜೊತೆ ಉತ್ತಮ ಸಂಬಂಧ
ಕೆಲವು ಮಾಧ್ಯಮಗಳ ವರದಿ ಪ್ರಕಾರ, ಈತ ಪಾಕಿಸ್ತಾನದಲ್ಲಿರುವ ಬುದ್ಧಿಜೀವಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾನೆ. ಮಾತ್ರವಲ್ಲಿ ವಾಗ್ಮಯಿ ಆಗಿರುವ ಆತ, ಇಂಗ್ಲಿಷ್​ ಭಾಷೆ ಮೇಲೆ ಹಿಡಿತ ಹೊಂದಿದ್ದಾನೆ. ಮಿಲಿಟರಿ ಕಾರ್ಯನಿರ್ವಣೆಯಲ್ಲಿರುವ ಅನುಭವ ಹಾಗೂ ಇಂಗ್ಲಿಷ್ ಭಾಷೆ ಮೇಲೆ ಇರುವ ಹಿಡಿತದಿಂದಾಗಿ 2001ರ ಅಫ್ಘಾನ್ ವಿದೇಶಾಂಗ ಸಚಿವ ವಾಕಿಲ್ ಅಹ್ಮದ್ ಮುತ್ತವಾಕಿಲ್ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡಿದ ಅನುಭವ ಕೂಡ ಇದೆ. ನಂತರ ಆಫ್ಘಾನ್​ನಲ್ಲಿ ತಾಲಿಬಾನ್​ ತನ್ನ ಆಡಳಿತವನ್ನ ಕಳೆದಕೊಂಡ ಬಳಿಕ ಈತ ದೋಹಾಗೆ ಹೋಗುತ್ತಾನೆ.

ಮುಂದೆ ಅಫ್ಘಾನ್​ ಮಂತ್ರಿ..?
2015ರಲ್ಲಿ ತಾಲಿಬಾನ್ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ. ಅಲ್ಲಿಂದ ಅಫ್ಘಾನ್ ಸರ್ಕಾರದೊಂದಿಗೆ ತಾಲಿಬಾನ್ ಮುಖಂಡನಾಗಿ ಈ ಹಿಂದೆ ಅನೇಕ ಮಾತುಕತೆಯನ್ನ ನಡೆಸಿದ್ದ. ಮಾತ್ರವಲ್ಲ, ಹಲವು ದೇಶಗಳ ಮಾತುಕತೆಯಲ್ಲಿ ತಾಲಿಬಾನಿಗಳ ಪ್ರತಿನಿಧಿಯಾಗಿ ಭಾಗಯಾಗಿದ್ದಾನೆ. ಕೆಲವು ವರದಿಗಳ ಪ್ರಕಾರ ಅಫ್ಘಾನ್​ನಲ್ಲಿ ತಾಲಿಬಾನ್ ಸರ್ಕಾರ ರಚನೆಯಾದಾಗ ಇವರು ವಿದೇಶಾಂಗ ವ್ಯವಹಾರಗಳ ಸಚಿವರಾಗುತ್ತಾರೆ ಅಂತಾ ಹೇಳಲಾಗಿದೆ.

Source: newsfirstlive.com Source link