ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ- 16 ಬೈಕ್ ವಶ

– ಕಳ್ಳತನದ ಬೈಕ್ ಖರೀದಿಸಿದವರ ಮೇಲೂ ಕೇಸ್

ಕೊಪ್ಪಳ: ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿದ್ದು, ಆರೋಪಿಯಿಂದ 16 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ವೆಂಕಟಾಪುರದ ಕೆ.ಮಂಜುನಾಥ ಬಂಧಿತ ಆರೋಪಿಯಾಗಿದ್ದಾನೆ. ವಾಹನಗಳ ತಪಾಸಣೆ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಅನುಮಾನಸ್ಪದವಾಗಿ ಓಡಿ ಹೋದ ವ್ಯಕ್ತಿಯನ್ನು ಬೆನ್ನತ್ತಿ ಹಿಡಿದು ವಿಚಾರಣೆ ಮಾಡಿದಾಗ ಬೈಕ್ ಕಳ್ಳತನ ಪ್ರಕರಣ ಹೊರ ಬಂದಿದೆ. ಇದನ್ನೂ ಓದಿ : KSRTC ಬಸ್‍ನಲ್ಲಿ ಕೋಳಿ ಪ್ರಯಾಣ- ಟಿಕೆಟ್ ಕೊಟ್ಟ ನಿರ್ವಾಹಕ

ಬಂಧಿತ ಮಂಜುನಾಥನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಬ್ಬ ಆರೋಪಿ ಸಣ್ಣ ಬಸವನಗೌಡ ನನ್ನು ಹೊಸಪೇಟೆ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಸ್ನೇಹಿತ ಸಣ್ಣ ಬಸವನಗೌಡ ಜೊತೆ ಸೇರಿ ಕಳ್ಳತನ ಮಾಡಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ಕಡೆ ಒಟ್ಟು 16 ಬೈಕ್ ಮಾರಾಟ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ : ರಶ್ಮಿಕಾ ಜೊತೆಗೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್

ಕಳ್ಳತನ ಮಾಡಿರುವ ಬೈಕ್ ಎಂಬುದು ಗೊತ್ತಿದ್ದರೂ ಕಡಿಮೆ ಬೆಲೆಗೆ ವಾಹನ ಖರೀದಿ ಮಾಡಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಪ್ಪಳ ನಗರ ಠಾಣೆ ಪೊಲೀಸರು ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 16 ಬೈಕ್‍ಗಳನ್ನು ಖರೀದಿಸಿದ ವ್ಯಕ್ತಿಗಳಿಂದ ಜಪ್ತಿ ಮಾಡಿಕೊಂಡಿದ್ದಾರೆ.

ಎಸ್‍ಪಿ ಟಿ.ಶ್ರೀಧರ ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಗೀತಾ ಬೆನಹಾಳ ನೇತೃತ್ವದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ ಪಿಐ ಮಾರುತಿ ಗುಳ್ಳಾರಿ, ಪಿಎಸ್‍ಐ ಎಚ್. ನಾಗಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಖಾಜಾಸಾಬ ಸುಭಾಸ ಸಜ್ಜನ್, ಗವಿಸಿದ್ದಪ್ಪ ಕೊಲ್ಲಿ, ದೇವೇಂದ್ರಪ್ಪ, ಹನುಮಂತಪ್ಪ ಶರಣಪ್ಪ, ಆನಂದ, ಬಸವರಾಜ್ ಕಾರ್ಯಾಚರಣೆ ನಡೆಸಿದ್ದಾರೆ.

Source: publictv.in Source link