ಗರ್ಭಿಣಿ ಆಗಿದ್ದೆ ಅಂತ ಗೊತ್ತಾಗಿದ್ದೇ ಹೆರಿಗೆ ಆದ್ಮೇಲೆ! -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಗರ್ಭಿಣಿ ಆಗಿದ್ದೆ ಅಂತ ಗೊತ್ತಾಗಿದ್ದೇ ಹೆರಿಗೆ ಆದ್ಮೇಲೆ! -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

1. ಸ್ವಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಸಿಎಂ ಸಜ್ಜು

ಸಿಎಂ ಬಸವರಾಜ ಬೊಮ್ಮಾಯಿ‌ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣ ‌ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸಲಿರೋ ಸಿಎಂ ಅಲ್ಲಿಂದ ರಸ್ತೆ ಮೂಲಕ ಶಿಗ್ಗಾವಿ​ಗೆ ಹೊರಡಲಿದ್ದಾರೆ. ಇನ್ನು, ಶಿಗ್ಗಾಂವ್ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲಿದ್ದಾರೆ. ಸಂಜೆ ಶಿಗ್ಗಾಂವ್ ರಸ್ತೆ ಮೂಲಕ ಹುಬ್ಬಳ್ಳಿಗೆ ಸಿಎಂ ಹೊರಡಲಿದ್ದು, ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಇಂದು ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

2.ಇಂದು ಅರುಣ್​ ಸಿಂಗ್ ಸರಣಿ ಸಭೆ

blank

ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೈಸೂರು ಭಾಗದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನ ನೀಡ್ತಿದ್ದಾರೆ. ನಿನ್ನೆ ನಾಡದೇವತೆ ಚಾಮುಂಡೇಶ್ವರಿ ಆಶೀರ್ವಾದ ಪಡೆದಿರೋ ಅರುಣ್ ಸಿಂಗ್ ನಿರಂತರ ಸಭೆ ನಡೆಸುವ ಮೂಲಕ‌ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸ್ತಿದ್ದಾರೆ‌. ನಿನ್ನೆ ಬೆಳಿಗ್ಗೆಯಿಂದಲೂ ನಿರಂತರ ಸಭೆ ನಡೆಸಿರುವ ಅರುಣ್ ಸಿಂಗ್ ಇಂದು ಚನ್ನರಾಯಪಟ್ಟಣದಲ್ಲಿ ಹಾಸನ ಭಾಗದ ಬಿಜೆಪಿ ಮುಖಂಡರ ಸಭೆ ನಡೆಸಲಿದ್ದಾರೆ.

3.ಚಾಮರಾಜನಗರದಲ್ಲಿ ವೀಕೆಂಡ್ ಕರ್ಫ್ಯೂ ತೆರವು

ಚಾಮರಾಜನಗರ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾದ ಹಿನ್ನಲೆ, ಗಡಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿತ್ತು, ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆ, ವೀಕೆಂಡ್ ಕರ್ಫ್ಯೂವನ್ನ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಆದ್ರೆ ಸೆಪ್ಟೆಂಬರ್ 13 ರ ವರೆಗೆ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಮುಂದುವರಿಯಲಿದೆ ಅಂತ ಡಿಸಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

4. ‘ಶಾಲೆಗಳನ್ನು ತೆರೆಯಲು ಇದು ಸೂಕ್ತ ಸಮಯ’

ಕೋವಿಡ್ -19 ರ ನಡುವೆ ಶಾಲೆಗಳನ್ನು ಪುನಃ ತೆರೆಯಲು ಇದು ಸರಿಯಾದ ಸಮಯ ಅಂತ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸದ್ಯ ಕೊರೊನಾ ಸೋಂಕು ಹರಡುವ ಸಾಧ್ಯತೆಗೆ ಕಡಿಮೆಯಾಗಿದೆ, ಹೀಗಾಗಿ ಸರಿಯಾದ ರೀತಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣವನ್ನ ಪರಿಗಣಿಸಿ, ಶಾಲೆಗಳನ್ನು ತೆರೆಯಲು ಇದು ಸೂಕ್ತ ಸಮಯ ಅಂತ ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದ್ದಾರೆ.

5. ಪಂಜ್​ಶೀರ್​ನಲ್ಲಿ ಪವರ್​ಫುಲ್​ ಟ್ರೈನಿಂಗ್!

ಇಡೀ ಅಫ್ಘಾನ್​ ದೇಶವನ್ನೇ ನಿಯಂತ್ರಣಕ್ಕೆ ತಂದುಕೊಳ್ಳುವಲ್ಲಿ ತಾಲಿಬಾನಿಗಳು ಯಶಸ್ವಿಯಾದರೂ ಸಹ ಪಂಜ್​ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅತ್ತ ಪಂಜಶೀರ್​ನಲ್ಲಿ ತಾಲಿಬಾನಿ​ಗಳನ್ನ ಎದುರಿಸೋದಕ್ಕೆ ಪವರ್​ಫುಲ್​ ಟ್ರೈನಿಂಗ್ ನಡೆಸಲಾಗ್ತಿದೆ. ತಾಲಿಬಾನ್ ವಿರೋಧಿ ಪಡೆಗಳು ಮಿಲಿಟರಿ ತರಬೇತಿಯಲ್ಲಿ ನಡೆಸಿವೆ. ಕೆಲವರು ಮರದ ದಿಮ್ಮಿಗಳೊಂದಿಗೆ ಕಠಿಣ ಮಿಲಿಟರಿ ತರಬೇತಿಯಲ್ಲಿ ಭಾಗವಹಿಸುವ ಫೋಟೋ ಸಹ ಈಗ ವೈರಲ್ ಆಗಿದೆ.

6. ವಾಪಸ್ಸಾತಿ ನಿರ್ಧಾರ ಸಮರ್ಥಿಸಿಕೊಂಡ ಬೈಡನ್

blank
ಅಮೆರಿಕಾ ಸೇನೆ ಅಫ್ಘಾನ್​ನಿಂದ ವಾಪಸಾಗಿರೋ ಬಗ್ಗೆ ಜೋ ಬೈಡನ್​ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ರು. ಅಫ್ಘಾನ್​ನಲ್ಲಿನ ಯುದ್ಧ ಮುಗಿದಿದೆ ಎಂದ ಬೈಡನ್​ ಸೇನಾ ಹಿಂಪಡೆದಿದ್ದನ್ನ ಉತ್ತಮ ನಿರ್ಧಾರ ಅಂತಾ ಸಮರ್ಥಿಸಿಕೊಂಡಿದ್ದಾರೆ. ಇದು ನಾನು ಕೈಗೊಂಡಿರೋ ಉತ್ತಮ ನಿರ್ಧಾರವಾಗಿದ್ದು, ಇದರ ಹೊಣೆಯನ್ನನಾನೇ ಹೊರುತ್ತೇನೆ ಅಂತಲೂ ಬೈಡನ್ ಹೇಳಿದ್ದಾರೆ. ಆದ್ರೆ ಐಸಿಸ್​-ಕೆ ಉಗ್ರರಿಗೆ ನಿಮ್ಮ ವಿಚಾರದಲ್ಲಿ ಹೋರಾಟ ಇಲ್ಲಿಗೆ ಅಂತ್ಯವಾಗಿಲ್ಲ ಅಂತಾ ದೊಡ್ಡಣ್ಣನ ಎಚ್ಚರಿಕೆ ರವಾನೆಯಾಗಿದೆ.

7. ‘ಮಗು ಕೈಗಿಟ್ಟಾಗ ಅಮ್ಮ ಆಗಿರೋದು ಗೊತ್ತಾಯ್ತು’
ಮಗುವಿಗೆ ಜನ್ಮ ಕೊಟ್ಟ ಮೇಲೆಯೇ ತಾನು ಪ್ರಗ್ನೆಂಟ್ ಆಗಿದ್ದರ ಬಗ್ಗೆ ಅಮೇರಿಕಾದ ಮಹಿಳೆಯೊಬ್ಬಳಿಗೆ ಖಾತ್ರಿಯಾದ ಪ್ರಸಂಗ ನಡೆದಿದೆ. ಲೇವೇನಿಯಾ ಎನ್ನುವ ಮಹಿಳೆಗೆ ಸ್ನೇಹಿತರ ಜೊತೆ ಹೊರಗಡೆ ಹೋದಾಗ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋದಾಗ ಆಕೆ ಗರ್ಭವತಿಯಾಗಿರೋದ್ರ ಬಗ್ಗೆ ವೈದ್ಯರು ಖಚಿತ ಪಡಿಸಿ ಆಪರೇಶನ್ ಮಾಡಲಾಗಿದೆ. ಹೀಗೆ ಲೇವೇನಿಯಾ ಕೈಗೆ 8 ತಿಂಗಳ ಮಗು ಕೊಟ್ಟಾಗಲೇ ಆಕೆ ಗರ್ಭವತಿಯಾಗಿದ್ದರ ಬಗ್ಗೆ ಆಕೆಗೆ ಗೊತ್ತಾಗಿದ್ದು, ಈ ಬಗ್ಗೆ ಖುದ್ದು ಲೆವೆಲೀನಾ ಅವರೇ ಪ್ರತಿಕ್ರಿಯಿಸಿದ್ದು, ನನ್ನ ದೇಹದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ, ಸ್ವಲ್ಪ ದಪ್ಪಾಗಿಗಿದ್ದೇ ಅನ್ನೋದನ್ನ ಬಿಟ್ರೆ, ಇನ್ಯಾವ ಪ್ರಗ್ನೆನ್ಸಿಯ ಲಕ್ಷಣ ಕಂಡುಬಂದಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

8. ಪತ್ನಿಯ ನೆನಪು ಮಗಳೊಂದಿಗೆ ಮರುಸೃಷ್ಠಿ

blank
ಕಳೆದ ವರ್ಷ ಪತ್ನಿ ಜೊತೆ ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿಕೊಂಡಿದ್ದ ಜೇಮ್ಸ್‌ ಅಲ್ವಾರೆಜ್ ಒಂದು ವರ್ಷದ ಬಳಿಕ ಈ ದಿನದಂದು ಪತ್ನಿ ಜೊತೆಗಿರೋಲ್ಲ ಅಂತಾ ಕನಸಿನಲ್ಲಿಯೂ ಅಂದ್ಕೊಂಡಿರಲಿಲ್ಲ. ಆದ್ರೆ, ವಿಧಿಯಾಟ ನೋಡಿ ತುಂಬು ಗರ್ಭಿಣಿಯಾಗಿದ್ದ ಜೇಮ್ಸ್​ ಪತ್ನಿ ವಾಕಿಂಗ್​ ಹೋಗಿದ್ದಾಗ ಅಪಘಾತಕ್ಕೀಡಾಗಿದ್ದಳು. ಮಗುವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ವೈದ್ಯರು ತಾಯಿಯನ್ನ ಉಳಿಸುವಲ್ಲಿ ವಿಫಲರಾದ್ರು. ಈಗ ಆ ಪುಟ್ಟ ಕಂದಮ್ಮನಿಗೆ ಮೊದಲ ಹುಟ್ಟು ಹಬ್ಬ. ಆದ್ರೆ, ಹುಟ್ಟುಹಬ್ಬ ಆಚರಿಸಿಕೊಳ್ಳಲು ತಾಯಿ ಇಲ್ಲ. ಈ ವೇಳೆ ಜೇಮ್ಸ್​, ಅಗಲಿದ ಪತ್ನಿಗೆ ಗೌರವ ಸಲ್ಲಿಸಲು ನಿರ್ಧರಿಸಿ ಮಗಳ ಜೊತೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಒಂದು ವರ್ಷದ ಹಿಂದೆ ತನ್ನ ಮೆಟರ್ನಿಟಿ ಫೋಟೋಶೂಟ್‌ಗಾಗಿ ಪತ್ನಿ ಪೋಸ್ ಕೊಟ್ಟಿದ್ದ ಜಾಗದಲ್ಲೇ ಜೇಮ್ಸ್‌ ತನ್ನ ಪುತ್ರಿಯ ಫೋಟೋಶೂಟ್ ಮಾಡಿಸಿದ್ದಾರೆ.

9. ಜಾವೆಲಿನ್​ಗೂ ಜೈ.. ಹಾಕಿಗೂ ಸೈ!

blank
ಪಂಜಾಬ್​ನ ಜಲಂಧರ್​ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ, ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್, ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಮತ್ತು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ ಜಾವೆಲಿನ್ ಎಸೆಯುವ ದೃಶ್ಯ ಕಂಡುಬಂತು. ಇನ್ನು ಇದೇ ವೇಳೆ ಕಂಚಿನ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡದ ಆಟಗಾರರೊಂದಿಗೆ ನೀರಜ್ ಚೋಪ್ರಾ ಹಾಕಿ ಆಟವಾಡಿ ಸಂಭ್ರಮಿಸಿದ್ರು.

10. ಹೇಗಿದೆ ರೂಟ್​ ಬಳಗದ ಗೇಮ್​ ಪ್ಲಾನ್?
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಉಳಿದೆರಡು ಮ್ಯಾಚ್​​ಗಳು ಉಭಯ ತಂಡಕ್ಕೆ ಪ್ರಮುಖವಾಗಿದ್ದು, ಆಂಗ್ಲ ಪಡೆ ಸಖತ್​ ಗೇಮ್​ ಪ್ಲಾನ್ ರೂಪಿಸ್ತಿದೆ. ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ಗೆ ಅಶ್ವಿನ್​ರನ್ನ ಕಣಕ್ಕಿಳಿಸೋ ಬಗ್ಗೆ ಟೀಮ್​ ಇಂಡಿಯಾದಲ್ಲಿ ಚರ್ಚೆಯಾಗ್ತಿದೆ. ಆದ್ರೆ ಅಶ್ವಿನ್​ರನ್ನ ಎದರಿಸೋದಕ್ಕೆ ನಾವು ಸಜ್ಜಾಗಿದ್ದೇವೆ ಅಂತಾ ಇಂಗ್ಲೆಂಡ್​ ಕ್ಯಾಪ್ಟನ್ ಜೋ ರೂಟ್​ ಹೇಳಿದ್ದಾರೆ. ಅಲ್ಲದೇ ಕೊಹ್ಲಿ ಕಟ್ಟಿ ಹಾಕೋ ತಂತ್ರ ಇದೆ ಅನ್ನೋದನ್ನೂ ಬಿಚ್ಚಿಟ್ಟಿದ್ದಾರೆ. ಕೊಹ್ಲಿ ಆಟವನ್ನು ಕಂಟ್ರೋಲ್ ಮಾಡಿದ್ರೆ, ಬಹುತೇಕ ಯಶಸ್ಸು ಸಿಕ್ಕಂತೆ ಅಂತಾ ರೂಟ್ ಅಭಿಪ್ರಾಯ ಪಟ್ಟಿದ್ದಾರೆ.

Source: newsfirstlive.com Source link