ನಿಯಮ ಉಲ್ಲಂಘಿಸಿ 2 ರಿಂದ 7ನೇ ಕ್ಲಾಸ್ ಮಕ್ಕಳಿಗೆ ಪರೀಕ್ಷೆ ನಡೆಸಿದ ಖಾಸಗಿ ಶಾಲೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿಯೇ ಸರ್ಕಾರ ಕೂಡ ಇಂದಿಗೂ ಕೊಡಗು ಜಿಲ್ಲೆಯಲ್ಲಿ ಇಂದಿಗೂ ವೀಕೆಂಡ್ ಕರ್ಫ್ಯೂವನ್ನು ಮುಂದುವರಿಸಿದೆ. ಶಾಲೆಗಳ ಆರಂಭಕ್ಕೂ ಅನುಮತಿ ನೀಡಿಲ್ಲ. ಅದರೆ ಖಾಸಗಿ ಶಾಲೆಯೊಂದು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮಕ್ಕಳಿಗೆ ಪರೀಕ್ಷೆ ನಡೆಸಿದ್ದು, ಪೋಷಕರ ಆಕ್ರೋಶ ಕಾರಣವಾಗಿದೆ.

ಮಡಿಕೇರಿ ನಗರ ಜಿಲ್ಲಾಧಿಕಾರಿ ಪಕ್ಕದಲ್ಲೇ ಇರುವ ಸಂತ ಮೈಕಲರ ಶಾಲೆಯಲ್ಲಿ ಇಂದು ಕೊವೀಡ್ ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 2 ರಿಂದ 7 ತರಗತಿ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಪರೀಕ್ಷೆ ನಡೆಸಿದೆ. ಪರೀಕ್ಷೆ ನಡೆಸುವುದಕ್ಕಾಗಿ ಸೋಮವಾರವೇ ವಿದ್ಯಾರ್ಥಿಗಳ ಪೋಷಕರಿಗೆ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿದೆ. ಸೆಪ್ಟೆಂಬರ್ 1, 3 ಮತ್ತು 4 ನೇ ತಾರೀಖಿನಂದು ಪರೀಕ್ಷೆ ನಡೆಸಲಾಗುವುದು. ಆನ್‍ಲೈನ್ ಪರೀಕ್ಷೆ ನಡೆಸುವುದಿಲ್ಲ. ಹೀಗಾಗಿ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದು ಪೋಷಕರೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದು ತರಗತಿಗಳಲ್ಲಿ ಪರೀಕ್ಷೆ ಬರೆಸಿದ್ದಾರೆ.

ಇನ್ನೂ ಈ ವಿಷಯ ತಿಳಿದು ಸ್ಥಳಕ್ಕೆ ಮಾಧ್ಯಮಗಳು ಭೇಟಿ ನೀಡುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಕಕ್ಕಾಬಿಕ್ಕಿ ಆಗಿದೆ. ಅಲ್ಲದೆ ಇದೊಂದು ಬಾರಿ ತಪ್ಪಾಗಿದೆ ಬಿಟ್ಟು ಬಿಡಿ ಎಂದು ಮಾಧ್ಯಮಗಳ ಜೊತೆಗೆ ಬೇಡಿಕೊಂಡ್ರು. ಬಳಿಕ ನಿಧಾನವಾಗಿ ಸಾವರಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯರಾದ ಸರಿತಾ ನಾವು ಪರೀಕ್ಷೆ ನಡೆಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಗೊತ್ತಾಗದಿರುವುದನ್ನು ಕೇಳಲು ಬಂದಿದ್ದಾರೆ ಅಷ್ಟೆ ಎಂದು ಸಮಜಾಯಿಷಿ ನೀಡಿದರು. ಆದರೆ ತರಗತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರಲ್ಲ ಎಂದು ಕೇಳಿದಾಗ ಶಾಲಾ ಆಡಳಿತ ಮಂಡಳಿ ಮತ್ತೆ ತಬ್ಬಿಬ್ಬಾಯಿತು. ಮತ್ತೆ ತಮ್ಮ ಹೇಳಿಕೆ ಬದಲಿಸಿದ ಮುಖ್ಯ ಶಿಕ್ಷಕಿ ಸರಿತಾ, ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಶಾಲೆಗೆ ಕರೆದಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ತಮ್ಮ ಪೋಷಕರೊಂದಿಗೆ ಬರಲು ಹೇಳಿದ್ದೇವೆ. ಅದನ್ನು ಕೂಡ ಕಡ್ಡಾಯಗೊಳಿಸಿಲ್ಲ ಎಂದು ಹೇಳಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ವಾಪಸ್ ಕಳುಹಿಸಿದರು. ಇದನ್ನೂ ಓದಿ: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್

blank

ಒಟ್ಟಿನಲ್ಲಿ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಜಾಸ್ತಿ ಆಗುತ್ತಿರುವುದರಿಂದ ಶಾಲೆ ಆರಂಭಕ್ಕೂ ಸರ್ಕಾರ ಅನುಮತಿ ನೀಡಿಲ್ಲ. ಆದರೂ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದು ಪರೀಕ್ಷೆ ಬರೆಸಿ ಕೋವಿಡ್ ನಿಯಮ ಉಲ್ಲಂಘಿಸಿದೆ. ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಆತಂಕ, ನಿಷೇಧದ ನಡುವೆಯೂ ಅದ್ಧೂರಿಯಾಗಿ ನಡೆದ ಜಾತ್ರೆ

Source: publictv.in Source link