ಜಿ.ಟಿ.ದೇವೇಗೌಡ ಪಕ್ಷ ತೊರೆದರೆ ಜೆಡಿಎಸ್‍ಗೆ ನಷ್ಟ : ವೈ.ಎಸ್.ವಿ.ದತ್ತ

ಚಿಕ್ಕಮಗಳೂರು: ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಒಂದು ಶಕ್ತಿ. ಅವರು ಜೆಡಿಎಸ್‍ನಿಂದ ಹೋದರೆ ನಮ್ಮ ಪಕ್ಷಕ್ಕೆ ನಷ್ಟ ಎಂದು ಜಿಲ್ಲೆಯ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಅಭಿಪ್ರಾಯ ಪಟ್ಟಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದರು. ಎಲ್ಲವೂ ಪಕ್ಷದ ಸ್ಥಳೀಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತೆ. ಜಿ.ಟಿ.ದೇವೇಗೌಡರಿಗೆ ಜೆಡಿಎಸ್‍ನಲ್ಲಿ ಸೂಕ್ತ ಸ್ಥಾನ, ಆದ್ಯತೆ ಹಾಗೂ ಗೌರವ ಕೊಟ್ಟಿಲ್ಲ ಎಂದರೆ ತಪ್ಪು. ಜಿ.ಟಿ.ದೇವೇಗೌಡ ಹಿರಿಯರು, ಪಕ್ಷ ಸಂಘಟನೆ ಮಾಡೋ ಶಕ್ತಿ ಇದ್ದು, ಜನತಾ ಪರಿವಾರದಿಂದ ಬಂದ ಅವರ ಮನಸ್ಸಿಗೆ ನೋವು ಆಗಿರಬಹುದು ಎಂದಿದ್ದಾರೆ.

ಜಿ.ಟಿ.ದೇವೇಗೌಡರನ್ನ ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದರೆ ಅದು ಅವರ ಮನಸ್ಸಿಗೆ ನೋವು ತಂದಿರಬಹುದು. ನಾವು ಅವರನ್ನ ಪಕ್ಷ ಬಿಟ್ಟು ಹೋಗಲು ಬಿಡಬಾರದು. ಹಿರಿಯರಾದ ಹೆಚ್.ಡಿ.ದೇವೇಗೌಡ ಅವರು ಅವರನ್ನ ಕರೆಸಿ ಮಾತನಾಡಬೇಕು. ಅವರ ಮನಸ್ಸಿನ ಭಾವನೆಯನ್ನ ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಬೇಕು. ಅವರು ಮೂತಲಃ ಜನತಾ ಪರಿವಾರದಿಂದ ಬಂದವರಾಗಿದ್ದು ನಮ್ಮಲ್ಲೇ ಉಳಿಯುತ್ತಾರೆಂಬ ನಂಬಿಕೆ ಇದೆ ಎಂದರು.

ಜಿ.ಟಿ.ದೇವೇಗೌಡರು ಒಂದು ಶಕ್ತಿ. ಅವರು ನಮ್ಮ ಪಕ್ಷದಿಂದ ಹೊರ ಹೋದರೆ ನಮ್ಮ ಪಕ್ಷಕ್ಕೆ ನಷ್ಟ ಎಂಬುದೇ ನನ್ನ ಭಾವನೆ ಎಂದರು. ಇದೇ ವೇಳೆ, ದತ್ತ ಕಾಂಗ್ರೆಸ್ ಸೇರುತ್ತಾರೆಂಬ ಪ್ರಶ್ನೆ ಬಗ್ಗೆಯೂ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಜೊತೆ ಹತ್ತಿರವಾದರೆ ನಮ್ಮಂತವರಿಗೆ ಕಷ್ಟವಾಗುತ್ತೆ. ನಾವು ಅಲ್ಪಸಂಖ್ಯಾತರ ಒಡನಾಟ ಹೊಂದಿ ಅವರನ್ನೇ ನೆಚ್ಚಿಕೊಂಡಿರುವವರು. ಇದು ನಮ್ಮಂಥವರಿಗೆ ತುಂಬಾ ಕಷ್ಟವಾಗುತ್ತೆ ಎಂದು ನುಡಿದರು. ಇದನ್ನೂ ಓದಿ: ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

blank

ನಾವು ಕೋಮುವಾದಿ ಶಕ್ತಿಗಳನ್ನ ವಿರೋಧಿಸಿ, ಜಾತ್ಯಾತೀತ ನಿಲುವಿಗೆ ಬದ್ಧರಾಗಿರೋರು. ಪಕ್ಷ ಎಲ್ಲಿವರೆಗೂ ಸ್ಪಷ್ಟವಾಗಿರುತ್ತೋ ಅಲ್ಲಿವರೆಗೂ ಜೆಡಿಎಸ್ ತೊರೆಯುವ ಬೇರೆ ಆಲೋಚನೆಯೇ ಇಲ್ಲ. ಜೆಡಿಎಸ್ ಎಲ್ಲಿವರೆಗೆ ಸಾಮಾಜಿಕ ನ್ಯಾಯ, ಜಾತ್ಯಾತೀತಕ್ಕೆ ಬದ್ಧವಾಗಿರುತ್ತೋ ಅಲ್ಲಿವರೆಗೂ ನನ್ನ-ಜೆಡಿಎಸ್ ನಿಲುವು ಒಂದೇ. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದರು.

Source: publictv.in Source link