ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ

ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯೋರೇ ಹೆಚ್ಚು. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಅನ್ನೋ ಆರೋಪ ನಿರಂತರ. ಇಂತಹ ಸಾಂಪ್ರದಾಯಿಕ ಮಾತುಗಳನ್ನು ಹುಸಿ ಮಾಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲೆ ರೈಲೊಂದನ್ನು ಚಿತ್ರಿಸುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ಅಂಬಲಗೆರೆ ಶಾಲೆಯ ಶಿಕ್ಷಕರಾದ ನಾಗಭೂಷಣ್ ಅವರು ತುಂಬಾ ಶ್ರಮವಹಿಸಿ, ತಮ್ಮ ಸ್ವಂತ ಹಣ ಖರ್ಚುಮಾಡಿ ಅಂಬಲಗೆರೆಯ ಸರ್ಕಾರಿ ಶಾಲೆಯನ್ನು ತುಂಬಾ ಸುಂದರವಾಗಿ ಬದಲಾವಣೆ ಮಾಡಿದ್ದಾರೆ. ಹಿರಿಯೂರು ತಾಲೂಕಿನ ಶಿವನಗರ ಗ್ರಾಮದವರಾದ ನಾಗಭೂಷಣ್ ರವರು ಬಹುಮುಖ ಪ್ರತಿಭೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳಗುಡ್ಡದಿಂದ 2016ರಲ್ಲಿ ಈ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಕಲಿಸದೇ ಎಣಿಸುವ ಸಂಬಳ ನನ್ನದಲ್ಲ ಎಂಬ ಧ್ಯೇಯವಾಕ್ಯ ಪಾಲಿಸುತ್ತಿರುವ ಶಿಕ್ಷಕ ಎನಿಸಿರುವ ನಾಗಭೂಷನ್, ತುಂಬಾ ಹದಗೆಟ್ಟು, ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಯ ಗೋಡೆಗಳು, ಅರೆಬರೆ ಬಣ್ಣ, ಮಾಸಿದ ಹಂಚು, ಬಿದ್ದು ಹೋಗುವಂತಿದ್ದ ಶಾಲೆಯನ್ನು ಕೇವಲ ಆರೇ ತಿಂಗಳಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಇದನ್ನೂ ಓದಿ: ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಹೊಂದಿರುವವರನ್ನು ನೋಡಬನ್ನಿ ನಮ್ಮೂರ ಶಾಲೆಯ ಚಂದವನ್ನು ಎಂದು ಖಾಸಗಿ ಶಾಲೆಯನ್ನು ನಾಚಿಸುವಂತೆ ಹೊಸ ರೂಪ ನೀಡಿ ಶಾಲೆಯನ್ನು ಮರು ನಿರ್ಮಾಣ ಮಾಡಿದ್ದಾರೆ. ಕನ್ನಡ ಶಿಕ್ಷಕರಾಗಿರುವ ನಾಗಭೂಷಣ್, ಶಾಲೆಯಲ್ಲಿ ಇಂಗ್ಲೀಷ್ ವಿಷಯ ಶಿಕ್ಷಕರಿಲ್ಲದ ಕಾರಣದಿಂದ ಇಂಗ್ಲೀಷ್ ಬೋಧನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಶಾಲೆಯ ದುಸ್ಥಿತಿ ಕಂಡು ನಾಗಭೂಷಣ್ ರವರು ಆರು ತಿಂಗಳ ಹಿಂದೆ ಒಂದು ಕೊಠಡಿಯನ್ನು ದತ್ತು ಪಡೆದು, ತಮ್ಮ ಸ್ವಂತ ಜೇಬಿನಿಂದ ಸುಮಾರು 2 ಲಕ್ಷ ರೂಗಳನ್ನು ವಿನಿಯೋಗಿಸಿ, ಈ ಶಾಲೆಗೆ ಸುಸಜ್ಜಿತ ಡೆಸ್ಕ್ ಗಳು, ಟಿ.ವಿ, ಕಂಪ್ಯೂಟರ್, ವೈಟ್ ಬೋರ್ಡ್, ಟೇಬಲ್, ಕುರ್ಚಿ, ನೆಲಕ್ಕೆ ಟೈಲ್ಸ್ ಹೊದಿಕೆಯ ವ್ಯವಸ್ಥೆ ಸೇರಿದಂತೆ ಈ ಶಾಲೆಯ ಗೋಡೆಗಳನ್ನು ಬಣ್ಣ ಬಣ್ಣಗಳಿಂದ ಸಿಂಗರಿಸುವ ಮೂಲಕ ಆಕರ್ಷಣೆಗೊಳಿಸಿದ್ದರು.

ಈ ಕಾರ್ಯದಲ್ಲಿ ಸ್ಥಳೀಯ ಕಲಾವಿದರಾದ ವೀರೇಂದ್ರ ಅಂಬಲಗೆರೆ, ಶಿವಕುಮಾರ್ ಕಂದಿಕೆರೆ, ಶಾಲಾಭಿವೃದ್ಧಿ ಸಮಿತಿಯವರು, ಶಾಲೆಯ ವಿದ್ಯಾರ್ಥಿಗಳು ಸುಮಾರು 1 ಲಕ್ಷ ರೂ.ಗಳನ್ನು ಸಂಗ್ರಹಿಸಿ ಕೊಟ್ಟಿದ್ದು, ಈ ಹಣದಲ್ಲಿ ಇಡೀ ಶಾಲೆಯನ್ನು ಮರು ನಿರ್ಮಾಣ ಮಾಡಿದ್ದಾರೆ. ಈ ಕಾರ್ಯದಲ್ಲಿ ಕೋವಿಡ್ ಕಾರಣದಿಂದ ನಗರ ಬಿಟ್ಟು ಊರಿಗೆ ಮರಳಿದ್ದ ಹಲವು ಸ್ಥಳೀಯ ಯುವಕರು ಶಾಲೆಯ ಮರು ನಿರ್ಮಾಣಕ್ಕೆ ಕೈಜೋಡಿಸಿದ್ದು, ಸುಸ್ಥಿತಿಯಲ್ಲಿದ್ದ ಹಳೆಯ ಹಂಚುಗಳನ್ನು ಒಯ್ದು ತೊಳೆದು ತಂದು ಬಣ್ಣ ಹಚ್ಚಿ, ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಆವರಣದಲ್ಲಿನ ಕಸ-ಕಡ್ಡಿ ತೆಗೆದು ಸ್ವಚ್ಛಗೊಳಿಸಿದ್ದಾರೆ. ಇಂತಹ ಹಲವು ಕೆಲಸಗಳನ್ನು ಈ ಯುವಕರು ಮಾಡಿದ್ದು, ಗಾರೆ ಕೆಲಸದವರಿಗೆ ಮಾತ್ರ ನಾವು ಕೂಲಿ ಕೊಡಲಾಗಿದೆ ಎಂಬುದಾಗಿ ನಾಗಭೂಷಣ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

ಶಾಲೆಯಲ್ಲಿ ಕಲಿಕಾ ವ್ಯವಸ್ಥೆ ಸರಿಯಿಲ್ಲದಿದ್ದರೆ ಮಕ್ಕಳ ಮನಸ್ಸನ್ನು ಗೆಲ್ಲುವುದು ಅಸಾಧ್ಯ, ಎಂಬುದುನ್ನು ಅರಿತಿರುವ ನಾಗಭೂಷಣ್ ಮಕ್ಕಳಿಗೆ ಕಲಿಕೆಯಲ್ಲಿ ಸ್ವಯಂ ಆಸಕ್ತಿ ಮೂಡಿಸಲು ಅಗತ್ಯ ಕಲಿಕಾ ವಾತಾವರಣವೂ ಇರಬೇಕೆಂದು ತಮ್ಮ ಕುಟುಂಬಕ್ಕಿಂತಲೂ ಶಾಲೆಯನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ. ಅವರ ಬಹುಪಾಲು ಸಮಯ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಪಾಲಾಗಿದೆ. ಇದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದೂರದ ಅಂಬಲಗೆರೆ ಗ್ರಾಮದಿಂದ ನಗರದ ವಿವಿಧ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಗ್ರಾಮದ ಬಹಳಷ್ಟು ಜನ ಮಕ್ಕಳನ್ನು ಪೋಷಕರು ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.

Source: publictv.in Source link