ಭಕ್ತರ ಆಕ್ರೋಶಕ್ಕೆ ಕಾರಣವಾಯ್ತು ಶಿರಸಿಯ ಮಾರಿಕಾಂಬ ದೇಗುಲ ಆಡಳಿತ ಮಂಡಳಿ ನಿರ್ಧಾರ

ಭಕ್ತರ ಆಕ್ರೋಶಕ್ಕೆ ಕಾರಣವಾಯ್ತು ಶಿರಸಿಯ ಮಾರಿಕಾಂಬ ದೇಗುಲ ಆಡಳಿತ ಮಂಡಳಿ ನಿರ್ಧಾರ

ಶಿರಸಿ: ಮಾರಿಕಾಂಬ ದೇಗುಲ ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯ. ಅತಿ ದೊಡ್ಡ ಭಕ್ತ ಸಮೂಹವೇ ಈ ದೇವಾಲಯಕ್ಕಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬ ಜಾತ್ರೆಗೆ ಭಕ್ತರ ದಂಡೇ ಹರಿದು ಬರುತ್ತೆ.. ಆದ್ರೆ ಇದೀಗ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರೋ ಆ ಒಂದು ನಿರ್ಧಾರ, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಕನ್ನಡದ ಶಿರಸಿಯ ಮಾರಿಕಾಂಬಾ ದೇವಾಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ. ಈ ದೇವಾಲಯ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಶಕ್ತಿ ಪೀಠಗಳಲ್ಲೊಂದು. ಇದೇ ಕಾರಣಕ್ಕೆ ದೇಶಾದ್ಯಂತ ಭಕ್ತರು ಮಾರಿಕಾಂಬ ದೇವರನ್ನ ಆರಾಧಿಸ್ತಾರೆ. ಕೇವಲ ಕರ್ನಾಟಕವಲ್ಲದೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಇಲ್ಲಿಗೆ ಭೇಟಿ ನೀಡ್ತಾರೆ.. ದೇವಿಯ ದರ್ಶನ ಪಡೆದು ಪುನೀತರಾಗ್ತಾರೆ.

blank

ಸದ್ಯ ಇಂಥದ್ದೊಂದು ದೊಡ್ಡ ಭಕ್ತರ ಸಮೂಹ ಇದೀಗ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಪಡಿಸ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರೋ ಆ ಒಂದು ನಿರ್ಧಾರ ಇಡೀ ಭಕ್ತರನ್ನ ಕೆರಳುವಂತೆ ಮಾಡಿದೆ. ಅಷ್ಟಕ್ಕೂ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವೇನು ಗೊತ್ತಾ?

ಮಾರಿಕಾಂಬ ದೇವಾಲಯದಲ್ಲಿ ಧಾರ್ಮಿಕ ಪೂಜಾ ಸೇವೆಗಳ ದರ ಹೆಚ್ಚಿಸಲು ಆಡಳಿತ ಮಂಡಳಿ ತಯಾರಿ ನಡೆಸ್ತಿದೆ. ಏಕಾಏಕಿ ಪೂಜಾ ಸೇವೆಗಳ ದರ 100 ಪಟ್ಟು ಹೆಚ್ಚಳ ಮಾಡ್ತಿದೆ. ಈಗಾಗಲೇ ಹೊಸ ಕರಡು ದರ ಪಟ್ಟಿಯನ್ನು ದೇವಸ್ಥಾನದ ಪ್ರವೇಶ ದ್ವಾರದ ಬಳಿ ಹಾಕಲಾಗಿದೆ. ಅಷ್ಟಕ್ಕೂ ಆಡಳಿತ ಮಂಡಳಿ ಪ್ರಕಟಿಸಿರೋ ಹೊಸ ದರದ ಪಟ್ಟಿಯನ್ನ ನೋಡೋದಾದ್ರೆ..

ಪೂಜಾ ಸೇವೆಗಳ ದರ ಗಗನಕ್ಕೆ?

ಮಹಾಪೂಜೆಯ ದರ ಈ ಹಿಂದೆ 75 ರೂಪಾಯಿಯಷ್ಟಿದ್ರೆ, ಇದೀಗ 300 ರೂಪಾಯಿಗೆ ಏರಿಕೆಯಾಗಿದೆ. ಇನ್ನು ವಸ್ತ್ರಾಲಂಕಾರ ಪೂಜೆಯ ಬೆಲೆ ಈ ಹಿಂದೆ 300 ರೂಪಾಯಿಯಷ್ಟಿದ್ರೆ ಇದೀಗ 1,001 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಪಲ್ಲವ ಪಾರಾಯಣದ ಸೇವಾಶುಲ್ಕ 250 ರೂಪಾಯಿ ಇಂದ 750ರೂಪಾಯಿಗೆ ಹೆಚ್ಚಾಗಿದೆ. ಅನ್ನ ಸಂತರ್ಪಣೆಯ ದರ 2,001 ರೂಪಾಯಿಯಿಂದ 5,001ರಷ್ಟು ದುಪ್ಪಟ್ಟಾಗಿದೆ. ಅಲ್ಲದೆ ಪಲ್ಲಕ್ಕಿ ಸೇವೆಯ ಬೆಲೆ 650 ರುಪಾಯಿಂದ ಬರೊಬ್ಬರಿ 5,000 ರೂಪಾಯಿಗೆ ಜಿಗಿದಿದೆ.

blank

ಹೀಗೆ ಆಡಳಿತ ಮಂಡಳಿ ದಿಢೀರನೇ ಬೆಲೆ ಏರಿಕೆ ಮಾಡೋಕೆ ಮುಂದಾಗಿರೋದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದಂತಹ ಪುಣ್ಯ ಸ್ಥಳದಲ್ಲಿ ವ್ಯಾವಹಾರಿಕತೆಯ ಚಿಂತನೆ ಸೂಕ್ತವಲ್ಲ. ಕೂಡಲೆ ಹೆಚ್ಚಿನ ಸೇವಾ ದರ ಪರಿಷ್ಕರಣೆಯನ್ನು ಹಿಂಪಡೆಯಬೇಕು ಅಂತ ಭಕ್ತರು ಅಗ್ರಹಿಸುತ್ತಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರೋ ಆಡಳಿತ ಮಂಡಳಿ, ಈಗ ನಿಗದಿಪಡಿಸಿದ ದರವೇ ಅಂತಿಮವಲ್ಲ ಎಂದಿದ್ದಾರೆ. ಸೆಪ್ಟೆಂಬರ್ 5ರ ವರೆಗೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸೋಕೆ ಭಕ್ತರಿಗೆ ಅವಕಾಶವಿದೆ. ಆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಅಂತಾ ತಿಳಿಸಿದ್ದಾರೆ.

ಅದೇನೆ ಇರ್ಲಿ ಕೊರೊನಾ ನಡುವೆ ದೇವಸ್ಥಾನ ಇಂಥದ್ದೊಂದು ನಿರ್ಧಾರ ಕೈಗೊಂಡಿರೋದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಪೂಜಾ ಸೇವೆಯನ್ನ ದುಬಾರಿಗೊಳಿಸೋಕೆ ಮುಂದಾಗಿರೋದು ಭಕ್ತರನ್ನ ಕೆರಳುವಂತೆ ಮಾಡಿದೆ.. ಕೊರೊನಾದಿಂದ ಸಂಕಷ್ಟದಲ್ಲಿರೋ ಸಮಯದಲ್ಲಿ ಈ ದರ ಏರಿಕೆ ಎಷ್ಟು ಸರಿ ಅನ್ನೋದು ಭಕ್ತರ ಪ್ರಶ್ನೆಯಾಗಿದೆ.

Source: newsfirstlive.com Source link