ಮ್ಯಾಟ್ರಿಮೋನಿಯಲ್ಲಿ 30 ವರ್ಷ ಮೇಲ್ಪಟ್ಟವರೇ ಟಾರ್ಗೆಟ್.. ವಿಚ್ಛೇದನ ಪಡೆದವರನ್ನೇ ಗುರುತಿಸಿ, ಬಲೆ ಬೀಸಿದ ಚಾಲಾಕಿ ಅಂದರ್

ಮ್ಯಾಟ್ರಿಮೋನಿಯಲ್ಲಿ 30 ವರ್ಷ ಮೇಲ್ಪಟ್ಟವರೇ ಟಾರ್ಗೆಟ್.. ವಿಚ್ಛೇದನ ಪಡೆದವರನ್ನೇ ಗುರುತಿಸಿ, ಬಲೆ ಬೀಸಿದ ಚಾಲಾಕಿ ಅಂದರ್

ಜನ ಹೀಗೂ ಇರ್ತಾರೆ ನೋಡಿ. ದುಡ್ಡು ಮಾಡ್ಬೇಕು, ಆಸ್ತಿ ಮಾಡ್ಬೇಕು ಅನ್ನೋ ದುರಾಸೆಗೆ ಬಿದ್ದು ಕೆಲವರ ಬಾಳಲ್ಲಿ ಆಟವಾಡಿ ಬಿಡ್ತಾರೆ. ಇಂತಹ ವಂಚಕರನ್ನು ಮುಗ್ದರು ಅದ್ಹೇಗೆ ನಂಬಿ ಬಿಡ್ತಾರೋ ಗೊತ್ತಿಲ್ಲಾ. ಇವನು ಮಾಡಿದ ವಂಚನೆ ಬಗ್ಗೆ ಕೇಳಿದ್ರೆ ನೀವು ದಂಗಾಗ್ತೀರಾ. ಮ್ಯಾಟ್ರಿಮೋನಿಯಲ್ಲಿ ವರನನ್ನು ಹುಡುಕುವಾಗ ಎಚ್ಚರದಿಂದ ಇರಲಿಲ್ಲ ಅಂದ್ರೆ ಏನಾಗುತ್ತೆ ಅನ್ನೋದ್ರ ಸ್ಯಾಂಪಲ್‌ ಇದು..

ಇದು ಇಂಟರ್ನೆಟ್ ಕಾಲ. ಮನೆ ಬೇಕೆಂದರೆ ? ಮೋಬೈಲ್, ಊಟ ಬೇಕೆಂದರೆ ? ಮೊಬೈಲ್, ಇದೆಲ್ಲ ಬಿಡಿ ಮದುವೆ ಆಗಲು ಮ್ಯಾಟ್ರಿಮೋನಿ ನೋಡೋದು ? ಇದು ಎಲ್ಲದಿಕ್ಕಿಂತ ಡೇಂಜರಸ್​. ಹಾಗಂತ ಹುಡುಕೋದು ಬಿಟ್ಟು ಬಿಡಿ ಅಂತ ಆಲ್ಲ. ಎಚ್ಚರಿಕೆ ಇರಲಿ ಅನ್ನೋದನ್ನು ಹೇಳ್ತಾ ಇದ್ದಿವಿ ಈಗಂತು ಮ್ಯಾಟ್ರಿಮೋನಿಯಲ್ ಸೈಟ್ ಗಳು ಹತ್ತಾರು ಇವೆ. ತಿಂಗಳು ಗಟ್ಟಲೇ, ವರ್ಷಗಟ್ಟಲೇ ವಧು ವರರನ್ನು ಮ್ಯಾಚ್ ಮಾಡುವುದಲ್ಲಿ ಕಾಲ ಕಳೆದು ಹೋಗಿರುತ್ತದೆ. ಅದರ ಮೂಲಕ ಜೀವನ ಸಂಗಾತಿಯನ್ನು ಆರಿಸಿಕೊಂಡು ಮದುವೆಯಾದವರು ಕೂಡ ಹಲವರು ಇದ್ದಾರೆ. ಕೆಲವರು ಸಂತೋಷದಿಂದ ಜೀವನ ಸಾಗಿಸುತ್ತಲಿದ್ದಾರೆ. ಇನ್ನು ಕೆಲವರು ಮದುವೆಯ ನಂತರ ವಂಚಿತರಾಗ್ತಾರೆ. ಆದರೆ ಮದುವೆಗೂ ಮುಂಚೆ ವಂಚನೆ ಮಾಡೋಕೆ ಇಂತವರು ಇರ್ತಾರೆ ನೋಡಿ.

blank

ಈ ಮೇಲಿರುವ ಚಿತ್ರವನ್ನ ನೋಡಿದರೆ ಮೋಸ ಮಾಡಿದವನ ರೀತಿ ಇದ್ದಾನಾ ? ಕ್ಯೂಟ್ ಆಗಿ, ಬುದ್ದಿವಂತನ ರೀತಿ.. ಒಳ್ಳೆ ಕೆಲಸದಲ್ಲಿರುವ ಹಾಗೆ ಕಾಣ್ತಾನೆ. ಕನ್ನಡಕದೊಳಗೆ ಮುದ್ದಾಗಿ ಕಾಣ್ತಾನೆ ಅಂತ ನಂಬಿ ಇವನ ಮುಂದೆ ಮದುವೆಯ ಮಾತು ಎತ್ತಿ ಬಿಟ್ರೆ. ಪಂಗನಾಮ ಹಾಕಿ ಪರಾರಿ ಆಗಿ ಬಿಡ್ತಾನೆ ಇವನು. ಇವನ ಈ ಜಾಲಕ್ಕೆ ಬಲಿಯಾದವರು ಒಬ್ಬಿಬ್ಬರಲ್ಲ. ಬರೋಬರಿ 35 ಯುವತಿಯರು. ರವಿ, ಮೋಹನ್, ಅಜಯ್, ವಿಜಯ್ ಹೀಗೆ ಅದೆಷ್ಟೂ ನಾಮ ಫಲಕ ಹಿಡಿದು ಮ್ಯಾಟ್ರಿಮೋನಿಯಲ್ಲಿ ಹುಡುಗಿಯರಿಗೆ ಕಾಳ್ ಹಾಕ್ತಾ ಇದ್ದ ಇವನು.

ಮದುವೆ ಆಗಿ ಸೆಟ್ಲಾಗಿ ಬಿಡೋಣ ಅನ್ನೋ ಆಲೋಚನೆಯಿಂದ ಇವನನ್ನು ನಂಬಿ ಲಕ್ಷ ಲಕ್ಷ ಹಣ ಕೊಟ್ಟು ಮೋಸ ಹೋಗಿದ್ದಾರೆ ಯುವತಿಯರು. ಇವನಿಂದ ಮೋಸ ಹೋಗೋದು ಅಷ್ಟು ಸುಲಭನಾ ? ಅಂತಹದ್ದೇನು ಮಾಡ್ತಾ ಇದ್ದ ಇವನು ? ಈ ಮುದ್ದು ಮೋಸಗಾರನ ಬಳಿ ಅದಕ್ಕಾಗೆ ಸ್ಟ್ಯಾಟರ್ಜಿಗಳಿದ್ದವು.

ಹೆಸರು ಜಗನ್ನಾಥ್. ಇವನೇ ನೋಡಿ ಆ ಕಿಲಾಡಿ ಮಧುಮಗ. 34 ವರ್ಷ ವಯಸ್ಸಾದ ಮೇಲೆ ಈತನಿಗೆ ಹುಡುಗಿಯರಿಗೆ ಮೋಸ ಮಾಡ್ಬೆಕು ಅನ್ನೋ ಮನಸ್ಸು ಬಂದಿದೆ. ಕಾರಣ.. ಇವನಿಗೆ ಲವ್ ಮಾಡಿ ಮದುವೆ ಆಗಬೇಕು ಅನ್ನೋ ಆಸೆ ಇತ್ತಂತೆ. ಆದರೆ ಲವ್ ಮಾಡೋ ವಯಸ್ಸಲ್ಲಿ ಒಂದು ಹುಡುಗಿಯರು ಇವನಿಗೆ ದಕ್ಕಿದ್ದಿಲ್ಲ. ಕೊನೆಗೆ ಇವನು ಮದುವೆಗೆ ಯುವತಿಯರಿಗಾಗಿ ಕಾಲಿಟ್ಟಿದ್ದು ಮ್ಯಾಟ್ರಿಮೋನಿ ವೆಬ್ ಸೈಟ್ಸ್​ಗಳಿಗೆ. ಅದುವೇ ಅವನ ಸ್ವಂತ ಹೆಸರಲ್ಲಿ ಬಂದಿದ್ದರೇ ಬೇರೇ. ಈತ ಬಂದಿದ್ದು ನಕಲಿ ಹೆಸರಿನಲ್ಲಿ. ಮ್ಯಾಟ್ರಿಮೋನಿಯಲ್ಲಿ 30 ಕ್ಕೂ ಹೆಚ್ಚು ವಯಸ್ಸಾದ ಹುಡುಗಿಯರು, ಹಾಗೂ ಮದುವೆ ಆಗಿ ವಿಚ್ಛೇದನ ಆದ ಹುಡುಗಿಯರು ಇವನ ಮೇಜರ್ ಟಾರ್ಗೆಟ್. ಮೊದಲೇ ನೋವಿನಲ್ಲಿ ಇದ್ದವರ ಸಂಕಟವನ್ನೆ ಇವನು ಲಾಭವಾಗಿಸಿಕೊಂಡಿದ್ದಾನೆ.

ಓದಿರೋದು ಬಿ.ಎ. ಹೇಳೋದು ಬಿ.ಇ ಸಿವಿಲ್ ಕಂಟ್ರಾಕ್ಟರ್
ಹೆಸರಿಗೊಂದು ಬೆಂಗಳೂರಿನ ಉಲ್ಲಾಳದಲ್ಲಿ ಬಾಡಿಗೆ ಮನೆ
ಕಾರಿನಲ್ಲೇ ವಾಸ. ವಾರಕ್ಕೊಮ್ಮೆ ಮಾತ್ರ ಮನೆಗೆ ಪ್ರವೇಶ
ಸುಳ್ಳು ಹೇಳಿಯೇ ಹುಡುಗಿಯರಿಗೆ ಬೀಸುತ್ತಿದ್ದ ಪ್ರೇಮ ಪಾಶ

ಈ ವಂಚಕ ಜಗನ್ನಾಥ್, ಮೂಲತಹ ವಿಜಯಪುರದವನು. ಅವನ ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿ 8 ವರ್ಷಗಳ ಹಿಂದೆ ಕೆಲಸ ಅರಿಸಿ ಬೆಂಗಳೂರಿಗೆ ಬಂದಿದ್ದಾನೆ. ಅಲ್ಲಿ ಇಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್, ಮ್ಯಾಟ್ರಿಮೋನಿಯಲ್ಲಿ ಹಣ ಗಳಿಸುವ ಸುಲಭ ಮಾರ್ಗವನ್ನು ಕಳೆದೆರಡು ವರ್ಷಗಳಿಂದ ರೂಢಿ ಮಾಡ್ಕೊಂಡ್ ಇದ್ದ. ಬಿ. ಎ ಓದಿರುವ ಇವನು ಹುಡುಗಿಯರನ್ನು ತನ್ನ ಪ್ರೇಮ ಪಾಶಕ್ಕೆ ಬಲಿಯಾಗಿಸಲು ತಾನೋಬ್ಬ ಬಿ.ಇ ಎಂಜಿನಿಯರ್. ಸಿವಿಲ್ ಕಾಂಟ್ರಾಕ್ಟರ್ ಅಂತ ಹೇಳಿ ಯುವತಿಯರನ್ನು ವಂಚಿಸುತ್ತಿದ್ದನಂತೆ.

blank

ಇನ್ನು ಉಲ್ಲಾಳದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಇವನು ಮನೆಗೆ ವಾರಕ್ಕೊಮ್ಮೆ, ಎರಡು ವಾರಕೊಮ್ಮೆ ಮಾತ್ರ ಹೋಗ್ತಾ ಇದ್ನಂತೆ. ಇನ್ನುಳಿದಂತೆ ತನ್ನ ಕ್ವಿಡ್ ಕಾರನ್ನೆ ಮನೆ ಮಾಡ್ಕೊಂಡ್ ಇದ್ದನಂತೆ. ಕಾರ್​ನಲ್ಲಿ ಯಾವಗಲೂ ಬ್ರೀಫ್ ಕೇಸ್ ಅದರಲ್ಲಿ ಊರು ಸುತ್ತಲು ಬಟ್ಟೆ ಬರೆ ಹೊತ್ತು ತಿರುಗ್ತಾ ಇದ್ನಂತೆ., ಬ್ಯಾಗ್ ಹಿಡಿದು ಅದೆಲ್ಲಿಗೆ ಹೋಗ್ತಾ ಇದ್ದ ಗೊತ್ತಾ ಇವನು ?ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಹುಡುಗಿಯರ ಭೇಟಿಗೆ.

ಮದುವೆಯ ಬಗ್ಗೆ ಚರ್ಚೆ ಐಷಾರಾಮಿ ಹೋಟಲ್​ನಲ್ಲಿ ಮೀಟಿಂಗ್
ಜಗನ್ನಾಥ್​ನನ್ನು ಸಭ್ಯಸ್ಥನೆಂದು ನಂಬಿ ಮೋಸ ಹೋದ ಯುವತಿಯರು

30 ಆದರೂ ಮದುವೆಯಾಗದೆ ಕಾಯುತ್ತಿರುವವರು, ವಿಚ್ಛೇಧನ ಆಗಿ ಒಂಟಿಯಾಗಿ ಬದುಕುತ್ತಿರುವವರು ಇವನಿಗೆ ಬಿಸ್ನೆಸ್ ಇನ್ವೆಸ್ಟ್ಮೆಂಟ್. ಅದಕ್ಕಾಗಿ ಇವನ್ನು 10 ರಿಂದ 30 ಸಾವಿರ ಖರ್ಚು ಮಾಡಿ ಆ ಹುಡುಗಿಯರನ್ನು ನಂಬಿಸಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡ್ತಾ ಇದ್ದ. ಈ ಬಿಸ್ನೆಸ್​ಗೆ ಅವನು ಹಣ ಉಳ್ಳವನು, ಶ್ರೀಮಂತ ಎಂದು ತೋರಿಸಲು, ಯುವತಿಯರು ಇರುವ ಊರಿನಲ್ಲೆ ಒಂದು ಐಷಾರಾಮಿ ಹೋಟಲ್ ನಲ್ಲಿ ರೂಂ ಬುಕ್ ಮಾಡಿ ಮಾತಿಗೆ ಕರೆಯುತ್ತಿದ್ದ. ಅಲ್ಲಿಯೂ ಆತನ ಸಭ್ಯಸ್ಥ ವರ್ತನೆ ಕಂಡ ಯುವತಿಯರು ಜಗನ್ನಾಥನನ್ನು ಸಂಪೂರ್ಣವಾಗಿ ನಂಬಿ ಮೋಸ ಹೋಗಿದ್ದಾರೆ.

ಡಿವೋರ್ಸ್ ಆಗಿದೆ ಅಂತ ಸಂಕೋಚ ಪಟ್ಕೋಳ್ಬೇಡಿ ಅನ್ನುತ್ತಿದ್ದ
ನನಗೆ ನೀವೆ ಮಗು ನೀವೆ ತಾಯಿ ಅಂತ ನಂಬಿಕೆ ಹುಟ್ಟಿಸುತ್ತಿದ್ದ
ಮದುವೆ ಆಗೋವರೆಗೂ ಮುಟ್ಟಲ್ಲ ಅನ್ನೋದು ಇವನ ಪಾಲಿಸಿ
ಯುವತಿಯರೇ ಮೈ-ಮೇಲೆ ಬಿದ್ದರೂ, ದೂರ.. ಬಲು ದೂರ..
ನಿಮ್ಮನ್ನು ರಾಣಿಯ ರೀತಿ ನೋಡ್ಕೊತೀನಿ, ಎಂಬ ಬೆಣ್ಣೆ ಮಾತು
ಮದುವೆಗೂ ಮುನ್ನ ಮನೆ ಕಟ್ಟಿಸ್ತೀನಿ ಎಂದು ಬಿಡ್ತಿದ್ದ ಓಳು

ನೋಡಿ ಹೇಗಿದೆ ಜಗನ್ನಾಥನ ಸ್ಟ್ಯಾಟರ್ಜಿ. ಒಂದು ಹುಡುಗಿಯನ್ನು ಪ್ರೇಮ ಪಾಶಕ್ಕೆ ಬೀಳಿಸಿಕೊಳ್ಳಲು ಹೀಗೆ ಒಲವಿನ ಮಾತುಗಳನ್ನಾಡುತ್ತಿದ್ದ ಜಗನ್ನಾಥ್. ಇವನ ಮಾತುಗಳನ್ನು ನಂಬಿ ಯುವತಿಯರು, ತಮ್ಮ ಜೀವನದ ಕನಸನ್ನು ಕಟ್ಟಿಕೊಂಡು ಈತ ಹೇಳಿದಷ್ಟು, ಕೇಳಿದಷ್ಟು ಹಣ ಒಡವೆ ಕೊಟ್ಟು ಬಿಟ್ಟಿದ್ದಾರೆ. ಕೈಗೆ ಅವರಿಂದ ಹಣ ಬಂದ ತಕ್ಷಣ ಈತ ಮಾಡುತ್ತಿದ್ದದ್ದು ಇಷ್ಟೇ. ನಂಬರ್ ಬ್ಲಾಕ್ ಮಾಡಿ ಮೊಬೈಲ್ ಸ್ವಿಚ್ ಆಫ್ ನಲ್ಲಿ ಇಟ್ಟು , ಅವರ ಕಾಂಟ್ಯಾಕ್ಟ್ ನಿಂದ ದೂರ ಉಳಿದು ಬಿಡ್ತಾ ಇದ್ದ.

ಇವನ ಜಾಲಕ್ಕೆ ತುತ್ತಾದವರು 35ಕ್ಕೂ ಹೆಚ್ಚು ಯುವತಿಯರು
ಬರೋಬ್ಬರಿ 70 ಲಕ್ಷಕ್ಕೂ ಹೆಚ್ಚು ಹಣ ಪೀಕಿರೋ ಆಸಾಮಿ

ಜಗನ್ನಾಥ್, ದೃಷ್ಟಿ ಇಟ್ಟ ಜಿಲ್ಲೆ ಇಲ್ಲ. ಬೆಂಗಳೂರು ಮಂಗಳೂರು ಉಡುಪಿ ಕೊಡಗು ಚಿಕ್ಕಮಗಳೂರು ಹಾಸನ ದಾವಣಗೆರೆ ಶಿವಮೊಗ್ಗ ಹೀಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 35 ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ ಮಾಡಿದ್ದಾನೆ. ಅದರಲ್ಲಿ 10 ಯುವತಿಯರು ಬೆಂಗಳೂರಿನವರೇ ಆಗಿದ್ದಾರೆ. ಅಲ್ಲದೆ ಈ 35 ಜನ ಯುವತಿಯರಿಂದ ಒಟ್ಟಾರೆ 70 ಲಕ್ಷಕ್ಕೂ ಅಧಿಕ ಹಣ ಪೀಕಿರೋ ಆರೋಪ ಇವನ ತಲೆ ಮೇಲಿದೆ. ಆಕ್ಸಿಡೆಂಟ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ಬೇರೆ ಬೇರೆ ರೀತಿಯಲ್ಲಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡ್ತಿದ್ದ.

blank

35 ಯುವತಿಯರಲ್ಲಿ ದೂರು ನೀಡಿದವರು ಕೇವಲ ಮೂವರು
ಇದೆ ಪ್ರಕರಣದಲ್ಲಿ 2020 ರಲ್ಲಿ ಅರೆಸ್ಟ್ ಆದವನು ಈ ಜಗನ್ನಾಥ

ಅಚ್ಚರಿಯ ವಿಷಯ ಅಂದ್ರೆ ಇವನು ರಾಜ್ಯಾದ್ಯಂತ 35 ಹುಡುಗಿಯರಿಗೆ ವಂಚಿಸಿದ್ದಾನೆ. ಆದರೆ ಇವನ ಈ ಮೋಸವನ್ನು ಖಂಡಿಸಿ ದೂರು ನೀಡಿರುವುದು ಮೂವರು ಮಾತ್ರ. ಮೊದಲಿಗೆ ಬನಶಂಕರಿ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಹಣಪಡೆದು ವಂಚಿಸಿದ್ದ. ಈ‌ ಕೇಸ್ ನಲ್ಲಿ ಅಂದರ್ ಆಗಿ ಹೊರಬಂದಿದ್ದ. ಹೊರಬಂದ ನಂತರ ಬುದ್ದಿ ಕಲಿಯದೆ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾನೆ ಆರೋಪಿ. ಇದಾದ ಬಳಿಕ ಬಾಗಲೂರು ಠಾಣೆಯಲ್ಲಿ ಮತ್ತು ಹೆಣ್ಣೂರಿನಲ್ಲಿ ಜಗನ್ನಾಥ್ ಕೈ ಚಳಕದ ಬಗ್ಗೆ ದೂರು ದಾಖಲಾಗಿದೆ.

ಜಗನ್ನಾಥ್ ವಿರುದ್ದ ದಾಖಲಾಗಿರೋ ದೂರು 01
ಬನಶಂಕರಿ ನಿವಾಸಿಯಾಗಿರುವ 30 ವರ್ಷದ ಅಕೌಂಟೆಂಟ್, ಮದುವೆಯಾಗಿ ವಿಚ್ಚೇದನ ಪಡೆದಿದ್ದ ಯುವತಿಗೆ, ಮ್ಯಾಟ್ರಿಮೋನಿಯಲ್ಲಿ ರಮೇಶ ಎಂಬ ಹೆಸರಿನಲ್ಲಿ ಸಂಪರ್ಕಿಸಿ, ಮಾತುಕತೆಯ ನಂತರ ಸೈಟ್ ತೆಗೆದುಕೊಳ್ಳಲು ಹಣ ಕಡಿಮೆಯಿದೆ ಎಂದು 7 ಲಕ್ಷ ಹಣಪಡೆದಿದ್ದ. ನಂತರ ಮದುವೆಯಾಗದೇ ನಂಬರ್ ಬ್ಲಾಕ್ ಮಾಡಿ ಎಸ್ಕೇಪ್.

ಜಗನ್ನಾಥ್ ವಿರುದ್ದ ದಾಖಲಾಗಿರೋ ದೂರು 02
ವಿಜಯ್ ಎಂಬ ಹೆಸರಿನಲ್ಲಿ ಹೆಣ್ಣೂರಿನ 32 ವರ್ಷದ ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ. ಸಿವಿಲ್ ಇಂಜಿನಿಯರ್ ಎಂದು ಯುವತಿಗೆ ಪರಿಚಿತನಾಗಿದ್ದ. ನಾನು ಹುಡುಗಿಯ ಅಂದ ನೋಡುವುದಿಲ್ಲ. ಗುಣ ಸಂಸ್ಕಾರ ಮುಖ್ಯ ಅಂತ ನಂಬಿಸಿದ್ದ. ನಾನು ಹುಬ್ಬಳ್ಳಿಯವನು ಆದಷ್ಟು ಬೇಗ ನಮ್ಮ ಮನೆಯಲ್ಲಿ ಮದುವೆ ಬಗ್ಗೆ ಮಾತಾಡ್ತೀನಿ ಅಂತ ನಂಬಿಸಿದ್ದ. ಕಾರು ಆಕ್ಸಿಡೆಂಟ್ ಆಗಿ ಹಾಸ್ಪಿಟಲ್ ನಲ್ಲಿ ಇದ್ದೀನಿ ಅಂತ ನಾಲ್ಕು ಲಕ್ಷ ಹಣ ಪಡೆದಿದ್ದ. ಹಣ ಪಡೆದ ನಂತರ ಸಿಮ್ ತೆಗೆದು ಮದುವೆಯಾಗದೇ ವಂಚನೆ.

blank

ಜಗನ್ನಾಥ್ ವಿರುದ್ದ ದಾಖಲಾಗಿರೋ ದೂರು 03
ವಿಚ್ಚೇದಿತ 38 ವರ್ಷದ ಖಾಸಗಿ ಆಸ್ಪತ್ರೆ ಸ್ಟಾಫ್ ನರ್ಸ್ ಗೆ ಮಂಗಳೂರಿನಲ್ಲಿದ್ದೇನೆ ಆಫೀಸ್ ಗೆ ಹಣ ಕಟ್ಬೇಕು. ಆಫಿಸ್ ಹಣವನ್ನ ನಾನ್ ಖರ್ಚು ಮಾಡ್ಕೊಂಡಿದ್ದೀನಿ. ಮುಂದಿನ ವಾರ ಬಂದು ಮದುವೆ ಆಗ್ತೀನಿ ಅಂತ ಆರು ಲಕ್ಷ ಮೌಲ್ಯದ 130 ಕ್ಕೂ ಅಧಿಕ ಚಿನ್ನಾಭರಣ ಪಡೆದು ಮದುವೆಯಾಗದೇ ಎಸ್ಕೇಪ್.

ಈತ ಯಾವುದೆ ಹುಡುಗಿಯನ್ನಾದರೂ ಭೇಟಿ ಮಾಡಲು ತನ್ನ ಕಾರ್ ಬಳಸುತ್ತಿದ್ದ ಕಿರಾತಕ, ಒಮ್ಮೆ ತನ್ನ ಕಾರ್ ಆಕ್ಸಿಡೆಂಟ್ ಆಗಿದೆ, ತಾನು ಆಸ್ಪತ್ರೆಯಲ್ಲಿ ಇದ್ದೇನೆ ಎಂದು, ಫೋಟೋಗಳನ್ನು ಯುವತಿಗೆ ಕಳುಹಿಸಿದ್ದನಂತೆ. ಇದನ್ನು ನಂಬಿದ ಯುವತಿ ನಾಲ್ಕು ಲಕ್ಷದವರೆಗೂ ಹಣ ನೀಡಿದ್ದಾಳೆ. ಇನ್ನು ಮೂರನೇ ದೂರಿನಲ್ಲಿ ಸ್ಟಾಫ್ ನರ್ಸ್ ಗೆ 6 ತಿಂಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಬಳಿ ಇದ್ದ ಮಾಂಗಲ್ಯ ಸರವನ್ನು ಸೇರಿ ಹಲವು ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ. ಹೀಗೆ ಅದೆಷ್ಟೋ ಹುಡುಗಿಯನ್ನು, ಒಬ್ಬೊಬ್ಬರ ಬಳಿ ಮಿನಿಮಮ್ 4 ಲಕ್ಷದ ವರೆಗೂ ವಂಚನೆ ಮಾಡಿದ್ದಾನೆ ಕಿಲಾಡಿ ಜಗನ್ನಾಥ್

ಮೂರು ಜನ ದೂರುದಾರರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಂಚನೆಯಾದ ಬಗ್ಗೆ ಅಳಲು ತೋಡಿಕೊಂಡಿದ್ರು ಇದರಿಂದ ಎಚ್ಚೆತ್ತ ಪೊಲೀಸರು, ಆರೋಪಿಯನ್ನು ಬಂಧಿಸಲು ಟೀಂ ಸಿದ್ದ ಪಡಿಸಿಕೊಂಡು ಜಗನ್ನಾಥ್ ನನ್ನು ಹಿಡಿಯಲು ಮುಂದಾಗಿದ್ದಾರೆ. 35 ಯುವತಿಯರಿಗೆ ವಂಚಿಸಿದ ಜಗನ್ನಾಥ್ ಲಿಸ್ಟ್ ನಲ್ಲಿ ಇನ್ನು 60 ಜನ ಇದ್ದಾರೆಂದು ತಿಳಿದು ಬಂದಿದೆ. ಅಲ್ಲದೆ ಎಲ್ಲ ಹುಡುಗಿಯರನ್ನು ತನ್ನ ಬಳಿ ಇದ್ದ ಇದೇ ರಿನಾಲ್ಟ್ ಕ್ವಿಡ್ ಕಾರ್ ನಲ್ಲೆ ಭೇಟಿಯಾಗಿದ್ದಾನೆ. ಇವನನ್ನು ಮುಂದುವರೆಯಲು ಬಿಡದೆ ಕಿರಾತಕನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಪೊಲೀಸರು.

blank

ಹೆಣ್ಣೂರು ಪೊಲೀಸರ ಕಾರ್ಯಾಚರಣೆಗೆ ಇಳಿದಾಗ ಬನಶಂಕರಿ ಹೆಣ್ಣೂರು ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರೋದು ತಿಳಿದು ಬಂದಿದೆ. ಹೆಣ್ಣೂರು ಇನ್ಸ್’ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ಸ್ಪೆಷಲ್ ಟೀಂ ಜಗನ್ನಾಥನ ಪೊನ್ ನಂಬರ್ ಹಾಗೂ ರೆನಾಲ್ಟ್ ಕ್ವಿಡ್ ಕಾರು ನಂಬರ್ ಹಿಡಿದು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಅವನ ಕಾರ್ ಖರೀದಿ ವೇಳೆ ಉಲ್ಲಾಳದ ಬಾಡಿಗೆ ಮನೆ ವಿಳಾಸ ನೀಡಿದ್ದರಿಂದ. ಮನೆ ಬಳಿ ತೆರಳಿದ್ದಾರೆ ಪೊಲೀಸರಿಗೆ ಮನೆಯ ಮಾಲೀಕ ಮತ್ತೊಂದು ನಂಬರ್ ನೀಡಿ ಅವನನ್ನು ಹಿಡಿಯಲು ಸಹಾಯ ಮಾಡಿದ್ದಾರೆ. ವಾರಕ್ಕೊಮ್ಮೆ ಮನೆಗೆ ಬರೋದನ್ನ ತಿಳಿದು, ಸರಿಯಾದ ಸಮಯ ನೋಡಿ ಅವನು ಉಳ್ಳಾಲದ ನಿವಾಸಕ್ಕೆ ಬಂದಾಗ ಆರೋಪಿಯನ್ನ ಲಾಕ್ ಮಾಡಿದ್ದಾರೆ.

ಬಂಧಿತನಿಂದ 5 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣವನ್ನು, ಒಂದು ಕಾರ್ ಅನ್ನು ವಶ ಪೊಲೀಸರು ಪಡೆದುಕೊಂಡಿದ್ದಾರೆ. ಬೇರೆ ಬೇರೆ ಅಡ್ರೆಸ್ ಕೊಟ್ಟು ಸಿಮ್ ಖರೀದಿ ಮಾಡಿದ್ದ ಜಗನ್ನಾಥ್ 20 ಕ್ಕೂ ಹೆಚ್ಚು ಸಿಮ್ ಕಾರ್ಡ್ ಬಳಸ್ತಿದ್ದ. ಇತನಿಂದ ವಂಚನೆಗೆ ಒಳಗಾದವರಿಗೆ ಪೊಲೀಸರೇ ಸಂಪರ್ಕಿಸಿ ದೂರು ಕೊಡಿ ಅಂದ್ರು ಮರ್ಯಾದೆಗೆ ಅಂಜಿ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಬಂಧಿತ ಆರೋಪಿ ಜಗನ್ನಾಥ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಹಿಂದೆ ಕೂತು ತನ್ನಾಟಕ್ಕೆ ಪುಲ್ ಸ್ಟಾಪ್ ಇಟ್ಟಿದ್ದಾನೆ.

ಮ್ಯಾಟ್ರಿಮೋನಿ ವಧುವರರನ್ನು ಹುಡುಕಲು ಕೈಗೆಟುವ ಹಾಗಿದೆ ಎಂದು, ಸಿಕ್ಕ ಸಿಕ್ಕವರನ್ನು ನಂಬಿ ಮುಂದಾದರೆ ಏನಾಗುತ್ತೆ ನೋಡಿ. ಕಿಲಾಡಿ ಮಧುಮಗ ಜಗನ್ನಾಥ್ ಜೈಲು ಸೇರಿದ್ದಾನೆ.. ಹಾಗಂತ ಇವನ ರೀತಿ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವ ವಂಚಕರು ಇನ್ನು ಹಲವರು ಇದ್ದಾರೆ. ಜೋಪಾನ.

 

Source: newsfirstlive.com Source link