ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

ಮುಂಬೈ: ನಟ, ಬಿಗ್ ಬಾಸ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ(40) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಈ ಕುರಿತು ಕೂಪರ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದು, ಸಿದ್ಧಾರ್ಥ್ ಶುಕ್ಲಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ಧಾರ್ಥ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ಸುದ್ದಿ ಕೇಳಿದ ಅವರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರು ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಹಾಗೂ ಡ್ಯಾನ್ಸ್ ದಿವಾನೆ 3ಯಲ್ಲಿ ಅವರ ಗರ್ಲ್‍ಫ್ರೆಂಡ್ ಎಂದೇ ಬಿಂಬಿತವಾಗಿರುವ ಶೇಹ್ನಾಜ್ ಗಿಲ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್

ಸಿದ್ಧಾರ್ಥ್ ಬಿಗ್ ಬಾಸ್ 13ರ ವಿನ್ನರ್ ಆಗಿದ್ದು, ಹಂಪ್ಟಿ ಶರ್ಮಾ ಕೆ ದುಲ್ಹನಿಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ಅವರ ಜನಪ್ರಿಯ ಶೋ ಬ್ರೋಕನ್ ಬಟ್ ಬ್ಯೂಟಿಫುಲ್ 3 ನಲ್ಲಿ ಕೊನೆಯದಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು. ಇದರಲ್ಲಿ ಅಗಸ್ತ್ಯ ಪಾತ್ರವನ್ನು ನಿರ್ವಹಿಸಿದ್ದರು.

ಅಶೋಕ್ ಶುಕ್ಲಾ, ರೀಟಾ ಶುಕ್ಲಾ ದಂಪತಿ ಪುತ್ರನಾಗಿ 12 ಡಿಸೆಂಬರ್ 1980ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸಿದ್ಧಾರ್ಥ್, ಪೋಷಕರೊಂದಿಗೆ ಪ್ರಯಾಗ್‍ರಾಜ್‍ಗೆ ತೆರಳಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಫೋರ್ಟ್‍ನ ಸೇಂಟ್ ಕ್ಸೇವಿಯರ್ಸ್ ಹೈ ಸ್ಕೂಲ್‍ನಲ್ಲಿ ಮುಗಿಸಿದ್ದರು. ರಚನಾ ಸಂಸದ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನ್‍ನಲ್ಲಿ ಪದವಿ ಪಡೆದಿದ್ದಾರೆ.

Source: publictv.in Source link