ಪಂಜ್‌ಶೀರ್​​ನಲ್ಲಿ ‘ಚಕ್ರವ್ಯೂಹ’ -ಕಾಬೂಲ್​ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

ಪಂಜ್‌ಶೀರ್​​ನಲ್ಲಿ ‘ಚಕ್ರವ್ಯೂಹ’ -ಕಾಬೂಲ್​ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

ಇದತಾಲಿಬಾನ್‌ ಉಗ್ರರು ಅಮೆರಿಕ ಸೇನೆಯ ವಿರುದ್ಧ ಹೋರಾಡಿ ಗೆದ್ದಿದ್ದೇವೆ ಅಂತ ಗಾಳಿಯಲ್ಲಿ ಗುಂಡಿನ ಮಳೆ ಸುರಿಸಿ ಸಂಭ್ರಮಿಸಿದ್ದಾರೆ. ಆದ್ರೆ, ಇದೇ ಉಗ್ರರು ಕಾಬೂಲ್‌ನಿಂದ ಕೂಗಳತೆ ದೂರದಲ್ಲಿರೋ ಪಂಜ್‌ಶೀರ್‌ ವಶಕ್ಕೆ ಹೋಗಿ ಏನಾಗಿದ್ದಾರೆ ಗೊತ್ತಾ? ಕಾಬೂಲ್‌ ವಿಮಾನ ನಿಲ್ದಾಣ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

blank

ಅಮೆರಿಕ ಸೇನೆಯ ಹೆಸರು ಕೇಳಿದ್ರೆ ವಿರೋಧಿಗಳು ಗಡಗಡ ನಡುಗಿ ಬಿಡ್ತಾ ಇದ್ರು. ಕನಸ್ಸಿನಲ್ಲಿಯೂ ಬೆಚ್ಚಿ ಬೀಳ್ತಾ ಇದ್ರು. ಯಾಕಂದ್ರೆ ಅವರ ಬಳಿ ಅಣು ಬಾಂಬ್‌ಗಳು ಇವೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇವೆ, ಅತ್ಯಾಕರ್ಷಕ ಫೈಟರ್‌ ಜೆಟ್‌ಗಳು ಇವೆ, ಮಷಿನ್‌ ಗನ್‌ಗಳು ಇವೆ, ವಿರೋಧಿ ಪಡೆಯನ್ನೇ ನಾಶಮಾಡಬಲ್ಲ ರಾಕೆಟ್‌ಗಳು ಇವೆ….ಆದ್ರೆ, ತಾಲಿಬಾನ್‌ ವಿಚಾರದಲ್ಲಿ ಆಗಿದ್ದು ಏನು? ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಅಮೆರಿಕದ ಬಗ್ಗೆ ಇದ್ದ ಅಂತಹ ಎಲ್ಲಾ ಭಾವನೆಯೂ ಮಣ್ಣು ಪಾಲಾಯಿತು. ಅಮೆರಿಕ ಸೇನೆಯ ದಾಳಿಯನ್ನು 20 ವರ್ಷ ಎದುರಿಸಿದ ತಾಲಿಬಾನ್‌ ಇದೀಗ ತಾನು ಗೆಲುವು ಸಾಧಿಸಿದ್ದೇನೆ ಅಂತ ರಣಕೇಕೆ ಹಾಕುತ್ತಿದೆ. ಇನ್ನೇನು ಸರ್ಕಾರ ರಚನೆಗೆ ತಾಲಿಬಾನ್‌ ಉಗ್ರರು ಕ್ಷಣಗಣನೆ ಎಣಿಸುತ್ತಿದ್ದಾರೆ. ಆದ್ರೆ, ಸ್ವತಃ ಅಫ್ಘಾನ್‌ನಲ್ಲಿಯೇ ಇರೋ ಪಂಜ್‌ಶೀರ್‌ ಪ್ರಾಂತ್ಯ ಮಾತ್ರ ತಾಲಿಬಾನ್‌ ಉಗ್ರರ ನಿದ್ದೆಗೆಡಿಸಿ ಬಿಟ್ಟಿದೆ. ಪಂಜ್‌ಶೀರ್‌ ವಶಪಡಿಸಿಕೊಳ್ಳುತ್ತೇವೆ ಅಂತ ದಂಡೆತ್ತಿ ಹೋದ ತಾಲಿಬಾನ್‌ ಉಗ್ರರು ಏನಾದ್ರು ಗೊತ್ತಾ? ಪಂಜಶೀರ್​​ ಪ್ರಾಂತ್ಯದಲ್ಲಿ ಉತ್ತರ ಮೈತ್ರಿ ಪಡೆ ನಿರ್ಮಿಸಿಕೊಂಡಿರೋ ಚಕ್ರವ್ಯೂಹದಂತೆ ಹೇಗಿದೆ ಗೊತ್ತಾ?

ಪಂಜ್​ಶೀರ್​​ಗೆ ಎಂಟ್ರಿ ಕೊಟ್ಟ ತಾಲಿಬಾನಿಗಳ ಕಥೆ ಏನಾಯ್ತು?
350 ಕ್ಕೂ ಹೆಚ್ಚು ತಾಲಿಬಾನಿಗಳು ಸಾವು, 41 ಮಂದಿ ವಶಕ್ಕೆ

ಅದು, ಸೋಮವಾರ ರಾತ್ರಿ ನಡೆದ ಘಟನೆಯಾಗಿದೆ. ತಾಲಿಬಾನ್‌ ಉಗ್ರರು ಅತ್ಯಾಧುನಿಕ ಗನ್‌ಗಳನ್ನು ಹಿಡಿದು ಪಂಜ್‌ಶೀರ್‌ಗೆ ನುಗ್ಗಿದ್ದಾರೆ. ಅದು ಹೇಗಾದ್ರೂ ಮಾಡಿ ಪಂಜ್‌ಶೀರ್‌ ಯೋಧರನ್ನು ಸಾಯಿಸಬೇಕು, ಪಂಜ್‌ಶೀರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಬೇಕು ಅಂತ ಉತ್ಸಾಹದಲ್ಲಿಯೇ ನುಗ್ಗಿದ್ದಾರೆ. ಆದ್ರೆ, ಕಣಿವೆ ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದ ಪಂಜ್‌ಶೀರ್‌ ಯೋಧರ ಪಡೆ ತಾಲಿಬಾನಿಗಳ ಮೇಲೆ ಅಟ್ಯಾಕ್‌ ಮಾಡಿದೆ. ಈ ದಾಳಿಯಲ್ಲಿ ಸುಮಾರು 41 ತಾಲಿಬಾನ್‌ ಉಗ್ರರು ಹತರಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ತಾಲಿಬಾನ್‌ ಉಗ್ರರನ್ನು ಪಂಜ್‌ಶೀರ್‌ ಯೋಧರು ಸೆರೆ ಹಿಡಿದಿದ್ದಾರೆ. ಅದೇ ರೀತಿ ಮಂಗಳವಾರ ರಾತ್ರಿ 300ಕ್ಕೂ ಹೆಚ್ಚು ತಾಲಿಬಾನ್‌ ಉಗ್ರರನ್ನು ಹೊಡೆದುರುಳಿಸಿದ್ದಾಗಿ ಉತ್ತರ ಮೈತ್ರಿ ಪಡೆ ಹೇಳಿಕೊಂಡಿದೆ. ಅಲ್ಲದೇ ಸ್ವತಃ ತಾನೇ ಟ್ವೀಟ್ ಮಾಡಿ ವಿಶ್ವಕ್ಕೆ ತಿಳಿಯುವಂತೆ ಮಾಡಿದೆ.

ಇದನ್ನೂ ಓದಿ: ಅಮೆರಿಕದ ಶಸ್ತ್ರಾಸ್ತ್ರ, ವಾಹನಗಳ ಬೃಹತ್ ಪರೇಡ್ ನಡೆಸಿದ ತಾಲಿಬಾನ್.. ಜಗತ್ತಿಗೆ ಕೊಟ್ಟ ಸಂದೇಶವೇನು..?

blank

ಪಂಜ್‌ಶೀರ್‌ ಒಳಗೆ ಬರಬಹುದು, ಹೊರ ಹೋಗಲು ಬಿಡಲ್ಲ
ತಾಲಿಬಾನ್‌ ಉಗ್ರರ ವಿರುದ್ಧ ಹೋರಾಡುವುದಾಕ್ಕಾಗಿಯೇ ಉತ್ತರ ಮೈತ್ರಿ ಪಡೆಯನ್ನು ರಚಿಸಿಕೊಳ್ಳಲಾಗಿದೆ. ಸೋಮವಾರ, ಮಂಗಳವಾರ ರಾತ್ರಿ ತಾಲಿಬಾನ್‌ ಉಗ್ರರು ಹತ್ಯೆ ಆಗುತ್ತಿದ್ದಂತೆ ಉತ್ತರ ಮೈತ್ರಿ ಪಡೆಯ ಕಮಾಂಡ್‌ ಆಗಿರೋ ಹಸೀಬ್‌ ಒಂದು ಎಚ್ಚರಿಕೆ ನೀಡಿದ್ದಾರೆ. ಅದೇನಂದ್ರೆ, ನೀವು ಪಂಜ್‌ಶೀರ್‌ ಒಳಗೆ ಬರಬಹುದು, ಆದ್ರೆ ಹೊರಹೋಗಲು ನಿಮ್ಮನ್ನು ಬಿಡುವುದಿಲ್ಲ……ಈ ಮಾತಿನ ಹಿಂದೆ ಪಂಜ್‌ಶೀರ್‌ನ ಪ್ರತಿಯೊಬ್ಬ ವ್ಯಕ್ತಿಯ ಧ್ವನಿ ಇದೆ. ಅಲ್ಲಿಯ ಜನರ ಛಲ ಅಡಗಿದೆ. ಯಾವುದೇ ಕಾರಣಕ್ಕೂ ಪಂಜ್‌ಶೀರ್‌ ಬಿಟ್ಟುಕೊಡಲ್ಲ ಎಂಬ ಸೂಚನೆ ಇದೆ. ತಾವು ಹೋರಾಡುತ್ತೆವೆ ಹೊರತು ಶರಣಾಗುವುದಿಲ್ಲ ಅನ್ನೋ ಕಠಿಣ ಸಂದೇಶವಿದೆ.

 

ಪಂಜ್‌ಶೀರ್‌ ಕಣಿವೆಯಲ್ಲಿದ್ದಾರೆ 12 ಸಾವಿರ ಶಸ್ತ್ರ ಸಜ್ಜಿತ ಸೈನಿಕರು
ಪಂಜ್‌ಶೀರ್‌ ಅನ್ನೋದು ಕಣಿವೆಗಳಿಂದ ಕೂಡಿರೋ ಪ್ರದೇಶ. ಇದೇ ಕಣಿವೆಗಳೇ ಇಂದು ಪಂಜ್‌ಶೀರ್‌ ಜನರ ಶಕ್ತಿಯಾಗಿದೆ. ತಾಲಿಬಾನ್‌ ಉಗ್ರರ ವಿರುದ್ಧ ಹೋರಾಡಲು ಕೋಟೆಯಾಗಿ ಬಿಟ್ಟಿದೆ. ಹೌದು, ಪಂಜ್‌ಶೀರ್‌ ಸೈನಿಕರು ಅಂದ್ರೆ ಇಂದಿನ ಉತ್ತರ ಮೈತ್ರಿ ಪಡೆಯ ಸೈನಿಕರು ಇದೆ ಕಣಿವೆಗಳ ಆಯಕಟ್ಟಿನ ಪ್ರದೇಶದಲ್ಲಿ ಗುಂಪು ಗುಂಪಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿರುತ್ತಾರೆ. ಸುಮಾರು 12 ಸಾವಿರಕ್ಕೂ ಹೆಚ್ಚಿನ ಸೈನಿಕರು ಗಣಿವೆಯಲ್ಲಿದ್ದಾರೆ. ಅವರಿಗೆ ಪಂಜ್‌ಶೀರ್‌ ಪ್ರದೇಶದ ಸ್ಥಳೀಯ ಯುವಕರು ಸಾಥ್‌ ನೀಡುತ್ತಿದ್ದಾರೆ. ಶತ್ರುಗಳು ಅಂದ್ರೆ, ತಾಲಿಬಾನ್‌ ಉಗ್ರರು ಒಳನುಗ್ಗುತ್ತಲೇ ಗೆರಿಲ್ಲಾ ಮಾದರಿಯಲ್ಲಿ ದಾಳಿ ನಡೆಸಿ ಬಿಡ್ತಾರೆ. ಕ್ಷಣಾರ್ಧದಲ್ಲಿಯೇ ಶತ್ರುಗಳ ಬೇಟೆಯಾಡುತ್ತಾರೆ. ಅದು ಹೇಗೆ? ಯಾವ ರೀತಿಯಲ್ಲಿ ದಾಳಿ ಮಾಡಿದ್ರು ಅನ್ನೋದನ್ನು ಅರಿಯಲು ಸಾಧ್ಯವಾಗುವುದಿಲ್ಲ.

ಪಂಜ್‌ಶೀರ್‌ಗೆ ತಜಕೀಸ್ತಾನ್‌ ಬೆಂಬಲ?
ತಜಕೀಸ್ತಾನ್‌ನಿಂದಲೇ ಶಸ್ತ್ರಾಸ್ತ್ರ ಪೂರೈಕೆ?

ಪಂಜ್‌ಶೀರ್‌ ಮೊದಲಿನಿಂದಲೂ ಅಷ್ಟೇ ಯಾವುದೇ ಬಾಹ್ಯ ಶಕ್ತಿಗೆ ತಲೆಬಾಗಿದ್ದೇ ಇಲ್ಲ. ಸೋವಿಯತ್‌ ಒಕ್ಕೂಟ ಕೂಡ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತಾಲಿಬಾನ್‌ ಉಗ್ರರು ಈ ಹಿಂದೆ 1996ರಿಂದ 2001ರ ವರೆಗೆ ಅಫ್ಘಾನ್‌ನಲ್ಲಿ ಆಡಳಿತ ನಡೆಸಿದ್ದಾರೆ. ಆದ್ರೆ, ಅಂದು ಕೂಡ ತಾಲಿಬಾನ್‌ ಉಗ್ರರಿಗೆ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಇಡೀ ಅಫ್ಘಾನ್‌ನ 34 ಪ್ರಾಂತ್ಯಗಳಲ್ಲಿ 33 ಪ್ರಾಂತ್ಯ ವಶಪಡಿಸಿಕೊಂಡಿರೋ ತಾಲಿಬಾನ್‌ ಉಗ್ರರಿಗೆ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

blank

ಇಂದು ಪಂಜ್‌ಶೀರ್‌ ಹೋರಾಟದ ಹಿಂದೆ ತಜಕೀಸ್ತಾನ್‌ ಹೆಸರು ಜೋರಾಗಿ ಕೇಳಿ ಬರ್ತಾ ಇದೆ. ಆದಕ್ಕೆ ಕಾರಣವೂ ಇದೆ. ತಜಕೀಸ್ತಾನ್‌ಗೂ ತಾಲಿಬಾನ್‌ ಉಗ್ರರಿಗೂ ಹಿಂದಿನಿಂದಲೂ ಆಗಿ ಬರುವುದಿಲ್ಲ. ಅಫ್ಘಾನ್‌, ತಜಕೀಸ್ತಾನ್‌ ಗಡಿಯಲ್ಲಿರೋ ತಜಕಿ ಜನಾಂಗದವರಿಗೆ ಈ ತಾಲಿಬಾನ್‌ ಉಗ್ರರು ಕಿರುಕುಳ ನೀಡುತ್ತಾರೆ. ಇನ್ನು ಪಂಜ್‌ಶೀರ್‌ನಲ್ಲಿ ಕೂಡ ತಜಕಿ ಜನಾಂಗದವರು ಇದ್ದಾರೆ. ಹೀಗಾಗಿಯೇ ಪಂಜ್‌ಶೀರ್‌ಗೆ ತಜಕೀಸ್ತಾನ್‌ ಬೆಂಬಲ ನೀಡುತ್ತಿದೆ ಎನ್ನಲಾಗಿದೆ. ಈ ಹಿಂದೆ ತಾಲಿಬಾನ್‌ ಉಗ್ರರ ಆಗ್ರಮಣದಿಂದ ಬೇರೆ ಬೇರೆ ದೇಶಗಳಿಗೆ ಓಡಿ ಹೋಗಿದ್ದ ಅಫ್ಘಾನ್‌ ಯೋಧರು ಕೂಡ ಪಂಜ್‌ಶೀರ್‌ಗೆ ಬಂದು ಸೇರಿಕೊಂಡಿದ್ದಾರೆ. ಇದೆಲ್ಲದಕ್ಕೂ ಮುಖ್ಯವಾಗಿ ಪಂಜ್‌ಶೀರ್‌ ಸೇನೆಯನ್ನು ಅಹಮ್ಮದ್‌ ಮಸೂದ್‌ ಮುನ್ನಡೆಸುತ್ತಿದ್ದಾರೆ. ಈ ಅಹಮ್ಮದ್‌ ಮಸೂದ್‌ ಬೇರೆ ಯಾರು ಅಲ್ಲ, ತಾಲಿಬಾನ್‌ ವಿರುದ್ಧ ಹೋರಾಟ ನಡೆಸಿದ, ಮಿಲಿಟರಿ ಕಮಾಂಡರ್‌ ಆಗಿ ಕೆಲಸ ಮಾಡಿದ, ರಾಜಕಾರಣಿಯಾಗಿ ಕಾರ್ಯನಿರ್ವಹಿಸಿದ್ದ ಅಹಮ್ಮದ್‌ ಶಾ ಮಸೂದ್‌ ಮಗನಾಗಿದ್ದಾನೆ. ಇದರ ಜೊತೆಗೆ ಅಫ್ಘಾನ್‌ನ ಉಪಾಧ್ಯಕ್ಷನಾಗಿದ್ದ ಅಮ್ರುಲ್ಲಾ ಸಲೇಹ್ ಪಂಜ್‌ಶೀರ್‌ನಲ್ಲಿಯೇ ನೆಲೆನಿಂತು ಸೈನ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಹೀಗಾಗಿ ಪಂಜ್‌ಶೀರ್‌ ಹೆಸರು ಕೇಳಿದ್ರೆ ತಲಾಬಾನ್‌ ಉಗ್ರರೇ ಗಡಗಡ ನಡುಗುವಂತಾಗಿದೆ.

ಇದನ್ನೂ ಓದಿ: ಅಮೆರಿಕದ ಯಡವಟ್ಟೇ ತಾಲಿಬಾನ್​​ಗೆ ವರದಾನ; USA ಸ್ನೇಹಿತರಿಗೆ ಶುರುವಾಗಿದೆ ‘ಯಮ’ಯಾತನೆ

ತಾಲಿಬಾನ್‌ ಉಗ್ರರಿಗೆ ಒಂದು ಕಡೆ ಪಂಜ್‌ಶೀರ್‌ ತಲೆನೋವು ತರುತ್ತಿದೆ. ಏನೇ ಮಾಡಿದ್ರೂ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಸಾಧ್ಯವಾಗಲ್ಲ ಅನಿಸಿ ಬಿಟ್ಟಿದೆ. ಅಮೆರಿಕ ಸೇನೆಯ ವಿರುದ್ಧ ಗೆಲುವು ಸಾಧಿಸಿದ್ದೇವೆ ಅಂತ ಎದೆ ತಟ್ಟಿ ಹೇಳಿಕೊಳ್ಳುವ ತಾಲಿಬಾನ್‌ ಮುಖಂಡರಿಗೆ ಪಂಜ್‌ಶೀರ್‌ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಮತ್ತೊಂದು ಆಘಾತ ತಾಲಿಬಾನ್‌ ಮುಖಂಡರಿಗೆ ಎದುರಾಗಿದೆ. ಹೌದು, ಅಂತಹವೊಂದು ಆಘಾತ ನೀಡಿರುವುದು ಅಮೆರಿಕವಾಗಿದೆ. ಅದೇನದು ಗೊತ್ತಾ?

ಅಫ್ಘಾನ್‌ ತೊರೆಯುವ ಮುನ್ನ ಅಮೆರಿಕ ಸೇನೆ ಮಾಡಿದ್ದೇನು?
ತಾಲಿಬಾನ್‌ ಉಗ್ರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು

ಅಮೆರಿಕ ಸೇನೆ ತನ್ನ ವಶದಲ್ಲಿದ್ದ ಕಾಬೂಲ್‌ ವಿಮಾನ ನಿಲ್ದಾಣವನ್ನು ಬಿಟ್ಟು ಹೋಗಿದೆ. ಆದ್ರೆ, ಅದು, ಹೋಗುವಾಗ ಒಂದು ಮಹತ್ವದ ಕಾರ್ಯ ಮಾಡಿ ಹೋಗಿದೆ. ಇಲ್ಲಿಯವರೆಗೆ ಇಡೀ ಜಗತ್ತು ತಾಲಿಬಾನ್‌ ವಿಚಾರದಲ್ಲಿ ಅಮೆರಿಕ ಮಾಡಿದ ಕೆಲಸಕ್ಕೆ ಬೇಸರ ವ್ಯಕ್ತಪಡಿಸುತ್ತಿತ್ತು. ಆದ್ರೆ, ಈಗ ಅಮೆರಿಕ ಸೇನೆ ಮಾಡಿ ಹೋಗಿರೋ ಕೆಲಸಕ್ಕೆ ಇಡೀ ಜಗತ್ತು ಖುಷಿಪಡುವಂತಾಗಿದೆ. ಈ ಒಂದು ಕೆಲಸದಿಂದ ತಾಲಿಬಾನ್‌ ಉಗ್ರರ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿ ಬಿಟ್ಟಿದೆ. ಅಷ್ಟಕ್ಕೂ ಅಮೆರಿಕ ಸೇನೆ ಮಾಡಿದ್ದಾದ್ರೂ ಏನು ಗೊತ್ತಾ?

73 ಯುದ್ಧ ವಿಮಾನ, 97 ಮಿಲಿಟರಿ ವಾಹನ ನಿಷ್ಕ್ರಿಯ
ಉಪಕರಣಗಳು ಉಗ್ರರಿಗೆ ಸಿಗದಂತೆ ಮಾಡಿದ ದೊಡ್ಡಣ್ಣ

blank

ಇದನ್ನೂ ಓದಿ: ಯಾರಿಗೂ ಸುಖವಲ್ಲ ತಾಲಿಬಾನ್ ಗೆಲುವು; ಭಾರತ-ಚೀನಾ-ಪಾಕ್​ ಎಲ್ಲರಿಗೂ ಇದು ಚಾಲೆಂಜ್ ಯಾಕೆ?

ಇದಕ್ಕೂ ಮುನ್ನ ಅಮೆರಿಕ ಒಂದು ದೊಡ್ಡ ಎಡವಟ್ಟು ಮಾಡಿತ್ತು. ಅದೇನಂದ್ರೆ ಅತ್ಯಾಧುನಿಕ ಗನ್‌ಗಳು, ಮಷಿನ್‌ ಗನ್‌ಗಳು, ಅತ್ಯಾಧುನಿಕ ವಾಹನಗಳು, ಬುಲೇಟ್‌ಫ್ರೂಪ್‌ ಜಾಕೇಟ್‌ಗಳು ತಾಲಿಬಾನ್‌ ಉಗ್ರರಿಗೆ ಕೈಗೆ ಸಿಗುವಂತೆ ಮಾಡಿತ್ತು. ಸುಮಾರು 7 ಲಕ್ಷ ಮೌಲ್ಯದ ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸಿಕ್ಕಿದ್ದವು. ಅದೇ ಶಸ್ತ್ರಾಸ್ತ್ರ ಹಿಡಿದು ತಾಲಿಬಾನಿಗಳು ಶೋ ನಡೆಸಿದ್ರು. ಅಷ್ಟೇ ಅಲ್ಲ, ಟ್ರಕ್‌ಗಳಲ್ಲಿ ಆ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ರವಾನೆ ಆಗಿದ್ದವು…..ಇದು ಅಮೆರಿಕ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ರೆ, ಅಮೆರಿಕ ಸೇನೆ ಕಾಬೂಲ್‌ ತೆರೆಯುವಾಗ ಒಂದು ಮಹತ್ವದ ಕೆಲಸವನ್ನು ಮಾಡಿದೆ. ಅದೇನಂದ್ರೆ, ಅಫ್ಘಾನ್‌ ಸರ್ಕಾರಕ್ಕೆ ತಾನು ನೀಡಿದ್ದ 73 ಯುದ್ಧ ವಿಮಾನಗಳು, 97 ಮಿಲಿಟರಿ ವಾಹನಗಳನ್ನು ನಿಷ್ಕ್ರಿಯ ಮಾಡಿದೆ. ಅಂದ್ರೆ, ಅವುಗಳು ಉಪಯೋಗಕ್ಕೆ ಬಾರದಂತೆ ಮಾಡಿ ಬಿಟ್ಟಿದೆ. ವಿಮಾನದ ಕಾಕ್‌ಪಿಟ್‌ ಕಿಟಕಿಗಳನ್ನು ಧ್ವಂಸ ಮಾಡಿದ್ದಾರೆ. ಟೈರ್‌ಗಳಿಗೆ ಗುಂಡು ಹಾರಿಸಿ ಹಾಳು ಮಾಡಿದ್ದಾರೆ.

ಇನ್ಮೇಲೆ ವಿಮಾನ ಹಾರುವುದಿಲ್ಲವೆಂದ ಅಮೆರಿಕ
ಯಾರಿಂದಲೂ ಹಾರಿಸಲು ಸಾಧ್ಯವಿಲ್ಲ ಅಂದಿದ್ದೇಕೆ?

ಕಾಬೂಲ್‌ ವಿಮಾನ ನಿಲ್ದಾಣದಲ್ಲಿದ್ದ ಯುದ್ಧ ವಿಮಾನಗಳನ್ನು ನಿಷ್ಕ್ರಿಯಗೊಳಿಸಿರುವ ಬಗ್ಗೆ ಅಮೆರಿಕ ಹೆಮ್ಮೆಯಿಂದ ಹೇಳಿಕೊಂಡಿದೆ. ಯುದ್ಧ ವಿಮಾನಗಳು ಯಾವುದೇ ಕಾರಣಕ್ಕೂ ಈ ವಿಮಾನ ನಿಲ್ದಾಣದಿಂದ ಹಾರಲು ಸಾಧ್ಯವಿಲ್ಲ. ಯಾರಿಂದಲೂ ಅವುಗಳನ್ನು ಹಾರಿಸಲು ಆಗುವುದಿಲ್ಲ ಎಂದು ಅಮೆರಿಕ ಕೇಂದ್ರ ಕಮಾಂಡರ್‌ ಮುಖ್ಯಸ್ಥ ಜನರಲ್‌ ಕೆನ್ನೆಥ್‌ ಮೆಕ್‌ಕೆಂಜಿ ತಿಳಿಸಿದ್ದಾರೆ. ಅಂದ್ರೆ, ಅಮೆರಿಕ ಸೇನೆ ಕಾಬೂಲ್‌ ವಿಮಾನ ನಿಲ್ದಾಣ ತೊರೆಯುವ ವೇಳೆ ಅಮೆರಿಕದ ಯುದ್ಧ ವಿಮಾನಗಳ ತಂತ್ರಜ್ಞರು ಆಗಮಿಸಿದ್ದಾರೆ. ಅವರು ಯುದ್ಧ ವಿಮಾನಗಳನ್ನು ತಾಂತ್ರಿಕವಾಗಿ ನಿಷ್ಕ್ರಿಯಗೊಳಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಅವುಗಳ ಮರುಬಳಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ರಾಕೆಟ್‌ ದಾಳಿ ತಡೆವ ವ್ಯವಸ್ಥೆ ಕೂಡ ನಿಷ್ಕ್ರಿಯ
ಐಸಿಸ್​​​-ಕೆ ರಾಕೆಟ್‌ ದಾಳಿ ತಡೆದಿದ್ದ ಅಮೆರಿಕ

ಅಮೆರಿಕ ಸೇನೆ ಕಾಬೂಲ್‌ನಿಂದ ತೆರಳುವಾಗ ಕೇವಲ ಯುದ್ಧ ವಿಮಾನಗಳನ್ನು, ಯುದ್ಧ ವಾಹನಗಳನ್ನು ನಾಶ ಮಾಡಿ ಹೋಗಿಲ್ಲ. ಆದರ ಜೊತೆ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ರಕ್ಷಣೆ ಒದಗಿಸಲು ಅಳವಡಿಸಲಾಗಿದ್ದ ಹೈಟೆಕ್‌ ರಾಕೆಟ್‌ ನಿರೋಧಕ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ. ಈ ವ್ಯವಸ್ಥೆಯಲ್ಲಿಯೇ ಐಸಿಸ್‌ ಉಗ್ರರು ನಡೆಸಿದ ರಾಕೆಟ್‌ ದಾಳಿಯನ್ನು ಅಮೆರಿಕ ಸೇನೆ ಹಿಮ್ಮೆಟ್ಟಿಸಿತ್ತು. ಹೀಗಾಗಿ ಇದು ಅಫ್ಘಾನ್‌ಗೆ ಯುವುದೇ ಪ್ರಯೋಜನಕ್ಕೆ ಬರದಂತಾಗಿದೆ.

ಅಮೆರಿಕದ ಅಣುಕು ಶವಯಾತ್ರೆ ಮಾಡಿದ ಉಗ್ರರು
ಅಮೆರಿಕ ಸೇನೆ ಅಫ್ಘಾನ್‌ನಿಂದ ವಾಪಸ್‌ ಹೋಗಿರುವುದು ತಾಲಿಬಾನ್‌ ಉಗ್ರರಲ್ಲಿ ಭಾರೀ ಖುಷಿ ತಂದು ಬಿಟ್ಟಿದೆ. ಹೀಗಾಗಿಯೇ ಆಗಷ್ಟು 31 ರೊಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ರು. ಇದೀಗ ಅಮೆರಿಕದ ಅಣುಕು ಶವಯಾತ್ರೆ ಮಾಡಿ ಸಂಭ್ರಮಿಸಿದ್ದಾರೆ. ಹೌದು, ಅಫ್ಘಾನ್‌ ಪೂರ್ವ ಪ್ರಾಂತ್ಯದ ಖೋಸ್ತ್‌ ನಗರದಲ್ಲಿ ಶವಪೆಟ್ಟಿಗೆ ಮೇಲೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ರಾಷ್ಟ್ರಧ್ವಜಗಳನ್ನು ಹಾಕಿ ಶವಯಾತ್ರೆ ಮಾಡಿದ್ದಾರೆ. ಅನಂತರ ಅದನ್ನು ಸುಟ್ಟು ಸಂಭ್ರಮಿಸಿದ್ದಾರೆ. ಇಷ್ಟೆಲ್ಲಾ ಸಂಭ್ರಮ ಪಡುತ್ತಿರೋ ತಾಲಿಬಾನಿಗೆ ಪಂಜ್​ಶೀರ್ ಪ್ರಾಂತ್ಯವನ್ನ ವಶ ಪಡೆಸಿಕೊಳ್ಳುವುದೇ ದೊಡ್ಡ ತಲೆ ನೋವಾಗಿದೆ. ತಾಲಿಬಾನ್‌ ಉಗ್ರರು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇರಬಹುದು, ಆದ್ರೆ, ಎಲ್ಲವೂ ಅವರು ಅಂದುಕೊಂಡಂತೆ ಆಗುತ್ತಿಲ್ಲ. ಒಂದೊಂದೆ ಆಘಾತಗಳು ತಾಲಿಬಾನಿಗಳಿಗೆ ಎದುರಾಗುತ್ತಿದೆ.

ಇದನ್ನೂ ಓದಿ: ಅಮೆರಿಕಾ ಇಲ್ಲದ ಅಫ್ಘಾನಿಸ್ತಾನ -US ಸೇನೆ ತೊರೆದ ಕ್ಷಣದಲ್ಲೇ ಅಫ್ಘಾನ್​​ನಲ್ಲಿ ನಡೆದಿದ್ದೇನು?

Source: newsfirstlive.com Source link