ತಾಲಿಬಾನ್‌ ಸರ್ಕಾರ ರಚನೆ ತಡವಾಗಿದ್ದೇಕೆ? ಹಕ್ಕಾನಿ ನೆಟ್ವರ್ಕ್‌ನ ಸೂತ್ರಧಾರ ಯಾರು?

ತಾಲಿಬಾನ್‌ ಸರ್ಕಾರ ರಚನೆ ತಡವಾಗಿದ್ದೇಕೆ? ಹಕ್ಕಾನಿ ನೆಟ್ವರ್ಕ್‌ನ ಸೂತ್ರಧಾರ ಯಾರು?

ಸರ್ಕಾರ ರಚನೆಗೆ ಸಿದ್ಧರಾಗಿದ್ದ ತಾಲಿಬಾನ್‌ ಉಗ್ರರಿಗೆ ಖಾತೆ ಹಂಚಿಕೆ ಅನ್ನೋದು ಅಕ್ಷರಶಃ ಉರುಳಾಗುತ್ತಿದೆ. ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಬೆಂಕಿ ಜ್ವಾಲೆಯಂತೆ ಪ್ರಜ್ವಲಿಸುತ್ತಿದೆ. ಮುಂದೊಂದು ದಿನ ಅದು ಧಗಧಗ ಉರಿದು ಭಸ್ಮವಾದ್ರೂ ಅಚ್ಚರಿಯಿಲ್ಲ. ಏನದು ಖಾತೆ ಸ್ಫೋಟ? ಅದರ ಹಿಂದಿನ ಸೂತ್ರಧಾರ ಯಾರು?

ಆಗಸ್ಟ್‌ 15ಕ್ಕೆ ಅಫ್ಘಾನ್‌ ರಾಜಧಾನಿ ಕಾಬೂಲ್‌ಗೆ ನುಗ್ಗಿದ್ದ ತಾಲಿಬಾನ್‌ ಉಗ್ರರು ಆಡಳಿತ ಸರ್ಕಾರವನ್ನೇ ಕೆಡುವುತ್ತಾರೆ. ಅಂದೇ ತಾಲಿಬಾನ್‌ ಉಗ್ರರು ಸರ್ಕಾರ ರಚನೆಯ ಮಾತನ್ನು ಆಡಿದ್ರು. ಅನಂತರ ಮಾತನಾಡಿದ ತಾಲಿಬಾನ್‌ ವಕ್ತಾರರು, ಅಮೆರಿಕ ಸೇನೆ ಆಗಸ್ಟ್‌ 31ಕ್ಕೆ ಕಾಬೂಲ್‌ ವಿಮಾನ ನಿಲ್ದಾಣ ಬಿಟ್ಟು ಹೊರಡಲಿದೆ. ಅವರು ಸಂಪೂರ್ಣ ವಾಪಸ್‌ ಹೋದ ಮೇಲೆ ಸರ್ಕಾರ ರಚಿಸುತ್ತೇವೆ ಅಂತ ಹೇಳುತ್ತಾರೆ. ಅಮೆರಿಕ ಸೇನೆ ನಿಗದಿಗಿಂತ ಒಂದು ದಿನ ಮೊದಲೇ ಅಂದ್ರೆ ಆಗಸ್ಟ್‌ 30ಕ್ಕೆ ಕಾಬೂಲ್‌ ವಿಮಾನ ನಿಲ್ದಾಣ ತೊರೆದಿದೆ. ಇದೀಗ ಅಮೆರಿಕ ಸೇನೆ ವಾಪಸ್‌ ಹೋಗಿ ಮೂರು ದಿನವಾಯ್ತು. ಹಾಗಂತ ತಾಲಿಬಾನ್‌ ಸರ್ಕಾರ ರಚನೆ ಆಯ್ತಾ? ಇಲ್ಲ, ತಾಲಿಬಾನ್‌ಗಳಿಗೆ ಸರ್ಕಾರ ರಚನೆ ಅಷ್ಟು ಸುಲಭವಿಲ್ಲ. ಅದು ಯಾಕೆ ಅಂತ ಹೇಳ್ತೀವಿ. ಅದಕ್ಕೂ ಮುನ್ನ ತಾಲಿಬಾನ್‌ ಅಂದ್ರೆ ಏನು ಅನ್ನೋದನ್ನು ನೋಡೋಣ ಬನ್ನಿ.

ತಾಲಿಬಾನ್‌ ಅಂದ್ರೆ ಏನು ಗೊತ್ತಾ?
ತಾಲಿಬ್​ ಅಂದ್ರೆ ವಿದ್ಯಾರ್ಥಿ, ಮೊದಲಿಗೆ ಇದು ವಿದ್ಯಾರ್ಥಿ ಸಂಘಟನೆಯಾಗಿತ್ತು. ಕ್ರಮೇಣ ತಮ್ಮ ಅಮಾನುಷ ಕೃತ್ಯಗಳಿಂದಾಗಿ ಇಂತಹ ಕೃತ್ಯ ಮಾಡುವವರೆಲ್ಲರನ್ನೂ ತಾಲಿಬಾನಿ ಎನ್ನಲಾಗುತ್ತಿತ್ತು. ಸದ್ಯ ಅಫ್ಗಾನ್​ನಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ತಾಲಿಬಾನಿಗಳಲ್ಲಿ ಇಂತಹ ಹಲವು ಸಂಘಟನೆಗಳಿವೆ. ಇದು ಸ್ಥಾಪನೆಯಾಗಿದ್ದು 1994 ರಲ್ಲಿ. ಅನಂತರ 1996 ರಿಂದ 2001ರ ವರೆಗೆ ಇದೇ ಸಂಘಟನೆ ಅಫ್ಘಾನಿಸ್ತಾನ್‌ನಲ್ಲಿ ಆಡಳಿತ ನಡೆಸಿದೆ. ಈ ಸಂಘಟನೆಯಲ್ಲಿ ಪ್ರಮುಖವಾಗಿ ಹಕ್ಕಾನಿ ನೆಟ್ವರ್ಕ್‌, ಅಲ್‌ಕೈದಾ, ತೆಹ್ರಿಕ್‌ ಇ ತಾಲಿಬಾನ್‌, ಹಜಬ್‌ ಇ ಇಸ್ಲಾಮಿ ಗುಲ್ಬುದ್ದಿನ್‌, ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಉಜ್ಬೇಕಿಸ್ತಾನ್‌… ಸಂಘಟನೆಗಳು ಇವೆ. ಇದೀಗ ಇವೇ ಸಂಘಟನೆಗಳ ನಡುವೆ ಏನಾಗಿದೆ ಗೊತ್ತಾ?

blank

ತಾಲಿಬಾನ್‌, ಹಕ್ಕಾನಿ ನೆಟ್ವರ್ಕ್‌ ನಡುವೆ ಭಿನ್ನಾಭಿಪ್ರಾಯ
ಕಂದಹಾರ್‌, ಕಾಬೂಲ್‌ನಲ್ಲಿ ನಡೆದಿದೆ ಮಾತುಕತೆ
ತಾಲಿಬಾನ್‌ ಮುಖ್ಯಸ್ಥ ಹೈಬತುಲ್ಲಾ ಅಖುಂಜಾದಾ ನೇತೃತ್ವದಲ್ಲಿ ಮಾತುಕತೆ

ಒಂದೇ ಪಕ್ಷ ಆಡಳಿತಕ್ಕೆ ಬಂದಾಗಲೂ ಭಿನ್ನಾಪ್ರಾಯಗಳನ್ನು ನೋಡಿದ್ದೇವೆ. ಅದೇ ಭಿನ್ನಾಭಿಪ್ರಾಯದಿಂದ ಆಡಳಿತ ಸರ್ಕಾರವೇ ಉರುಳಿದ್ದನ್ನು ನಾವು ಪ್ರಜಾಪ್ರಭುತ್ವ ಸರ್ಕಾರಗಳಲ್ಲಿ ನೋಡಿದ್ದೇವೆ…..ಇದು ಒಂದು ದೇಶದ ಕಥೆಯಲ್ಲ. ಎಲ್ಲಾ ದೇಶದ ರಾಜಕೀಯದಲ್ಲಿಯೂ ಇದ್ದದ್ದೆ. ಇನ್ನು ಉಗ್ರರ ಸಮೂಹವನ್ನೇ ಹೊಂದಿರೋ ತಾಲಿಬಾನ್‌ನಲ್ಲಿ ಭಿನ್ನಾಭಿಪ್ರಾಯ ಸ್ಫೋಟವಾಗದೇ ಇರುತ್ತದಾ? ಹೌದು, 20 ವರ್ಷಗಳ ಕಾಲ ಅಮೆರಿಕ ಸೇನೆ ವಿರುದ್ಧ ಇದೇ ತಾಲಿಬಾನ್‌ ಹೋರಾಡಿದೆ. ಅಂತೂ ಅಮೆರಿಕ ಸೇನೆ ವಾಪಸ್‌ ಆಗುತ್ತಲೇ ಅಫ್ಘಾನ್‌ ವಶಪಡಿಸಿಕೊಂಡಿದ್ದಾರೆ. ಆದ್ರೆ, ಸರ್ಕಾರ ರಚನೆಗೆ ಮಾತ್ರ ಬಿಕ್ಕಟ್ಟು ಎದುರಿಸುವಂತಾಗಿ ಬಿಟ್ಟಿದೆ. ಅದಕ್ಕೆ ಪ್ರಮುಖ ಕಾರಣ ತಾಲಿಬಾನ್‌ ಮತ್ತು ಹಕ್ಕಾನಿ ನೆಟ್ವರ್ಕ್‌ ನಡುವಿನ ಹಗ್ಗಜಗ್ಗಾಟವಾಗಿದೆ. ಇದೇ ಉದ್ದೇಶಕ್ಕೆ ತಾಲಿಬಾನ್‌ ಮುಖಂಡರು, ಹಕ್ಕಾನಿ ನೆಟ್ವರ್ಕ್‌ ಮುಖಂಡರು ಕಂದಹಾರ್‌ ಮತ್ತು ಕಾಬೂಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ತಾಲಿಬಾನ್‌ ಮುಖ್ಯಸ್ಥ ಹೈಬತುಲ್ಲಾ ಅಖುಂಜಾದಾ ಮಾತುಕತೆಯ ನೇತೃತ್ವ ವಹಿಸಿದ್ದ. ಹಾಗಾದ್ರೆ ಅವರು ಮಾತುಕತೆ ನಡೆಸಿದ್ದು ಯಾಕೆ ಗೊತ್ತಾ?

blank

ಪ್ರಮುಖ ಖಾತೆಗೆ ಪಟ್ಟು ಹಿಡಿದ ಹಕ್ಕಾನಿ ನೆಟ್ವರ್ಕ್‌
ತಾಲಿಬಾನ್‌ನ ಇತರೆ ಬಣಗಳಿಂದ ವಿರೋಧ ವ್ಯಕ್ತ

ಹಕ್ಕಾನಿ ನೆಟ್ವರ್ಕ್‌ ಎಂಬ ಉಗ್ರಗಾಮಿ ಸಂಘಟನೆ ಪಾಕಿಸ್ತಾನ ಮೂಲದ್ದಾಗಿದೆ. ತಾಲಿಬಾನ್‌ ಇತರೆ ಸಂಘಟನೆಗಳ ಜೊತೆ ಸೇರಿ ಅಮೆರಿಕ ಸೇನೆಯ ವಿರುದ್ಧ ಇದು ಕೂಡ ಹೋರಾಟ ನಡೆಸಿದೆ. ಆದ್ರೆ, ಯಾವಾಗ ಅಫ್ಘಾನ್‌ ಅನ್ನು ತಾಲಿಬಾನ್‌ ವಶಪಡಿಸಿಕೊಂಡಿತೋ ಅವಾಗಲೇ ನೋಡಿ ಹಕ್ಕಾನಿ ನೆಟ್ವರ್ಕ್‌ ಪ್ರಮುಖ ಖಾತೆಗೆ ಬೇಡಿಕೆ ಇಡ್ತು. ಸರ್ಕಾರ ರಚನೆಯಲ್ಲಿ ತಮ್ಮ ಮುಖಂಡರಿಗೆ ಪ್ರಮುಖ ಖಾತೆಯನ್ನು ನೀಡಬೇಕು ಅಂತ ಒತ್ತಡ ಆರಂಭಿಸಿತ್ತು. ಆದ್ರೆ, ತಾಲಿಬಾನ್‌ನಲ್ಲಿ ಇತರೆ ಸಂಘಟನೆಗಳಿಗೆ ಇದು ಒಪ್ಪಿಗೆಯಾಗಿಲ್ಲ. ಇದೇ ಕಾರಣಕ್ಕೆ ತಾಲಿಬಾನ್‌ ಇತರೆ ಬಣಗಳು ಮತ್ತು ಹಕ್ಕಾನಿ ನೆಟ್ವರ್ಕ್‌ ಬಣಗಳ ನಡುವೆ ಮಾತುಕತೆ ನಡೆದಿದೆ. ಆದ್ರೆ, ಒಮ್ಮತದ ಅಭಿಪ್ರಾಯ ಹೊರಬಂದಿಲ್ಲ.

ತಾಲಿಬಾನ್‌ಗೆ ಸಹಾಯ ನೀಡಿದ್ದೇ ಪಾಕಿಸ್ತಾನ
ಸೂತ್ರಧಾನನಾಗಿ ಕಾಣಿಸಿಕೊಳ್ಳುತ್ತಿದೆ ಪಾಕ್‌

ಹಕ್ಕಾನಿ ನೆಟ್ವರ್ಕ್‌ಗೆ ಪ್ರಮುಖ ಖಾತೆ ಸಿಕ್ಕರೇ ಪಾಕಿಸ್ತಾನಕ್ಕೆ ಹಬ್ಬವಾಗಿ ಬಿಡಲಿದೆ. ಯಾಕಂದ್ರೆ ಈ ಸಂಘಟನೆಯ ಮೂಲವೇ ಪಾಕಿಸ್ತಾನವಾಗಿದೆ. ಹಕ್ಕಾನಿ ನೆಟ್ವರ್ಕ್‌ ಸಂಘಟನೆಯವರಿಗೂ ಪಾಕಿಸ್ತಾನ ಸರ್ಕಾರಕ್ಕೂ ಅವಿನಾಭಾವ ಸಂಬಂಧವಿದೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. 20 ವರ್ಷಗಳ ಕಾಲ ಪಾಕಿಸ್ತಾನ ಸರ್ಕಾರ ಹಕ್ಕಾನಿ ನೆಟ್ವರ್ಕ್‌ ಮೂಲಕವೇ ತಾಲಿಬಾನ್‌ಗೆ ನೆರವು ನೀಡಿದೆ. ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಗುಪ್ತ ಮಾಹಿತಿಯನ್ನು ನೀಡಿದೆ. ಇದೇ ಕಾರಣಕ್ಕೆ ಹಕ್ಕಾನಿ ನೆಟ್ವರ್ಕ್‌ ಮುಖಂಡರು ಪ್ರಮುಖ ಖಾತೆ ಪಡೆಯಲು ಒತ್ತಡ ತಂತ್ರ ಹಾಕುತ್ತಿದ್ದಾರೆ. ಒಮ್ಮೆ ಹಕ್ಕಾನಿ ನೆಟ್ವರ್ಕ್‌ಗೆ ಪ್ರಮುಖ ಖಾತೆ ಸಿಕ್ಕರೇ ಅದರಿಂದ ನೇರವಾಗಿ ಪಾಕಿಸ್ತಾನಕ್ಕೆ ಉಪಯೋಗ ಸಿಗಲಿದೆ. ತಾಲಿಬಾನ್‌ ಸರ್ಕಾರದ ಮೇಲೆ ಪಾಕಿಸ್ತಾನ ಸಂಪೂರ್ಣ ಹಿಡಿತ ಸಾಧಿಸಲಿದೆ. ಆದ್ರೆ, ತಾಲಿಬಾನ್‌ ಸಂಘಟನೆಯಲ್ಲಿರೋ ಅಫ್ಘಾನ್‌ ಮುಖಂಡರಿಗೆ ಮಾತ್ರ ಹಕ್ಕಾನಿ ನೆಟ್ವರ್ಕ್‌ನವರಿಗೆ ಪ್ರಮುಖ ಖಾತೆ ನೀಡಲು ಮನಸ್ಸಿಲ್ಲ.

blank

ಹಕ್ಕಾನಿ ನೆಟ್ವರ್ಕ್‌ ಹಿಂದಿದೆ ಪಾಕ್‌ ತಂತ್ರಗಾರಿಕೆ

ತಾಲಿಬಾನ್‌ ವಿಚಾರದಲ್ಲಿ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಲೇ ಬರುತ್ತಿದೆ. ಆಗಸ್ಟ್‌ 15 ರಂದು ತಾಲಿಬಾನ್‌ ಉಗ್ರರು ಅಫ್ಘಾನ್‌ ವಶಪಡಿಸಿಕೊಂಡು ಆಡಳಿತ ಸರ್ಕಾರ ಕೆಡುವಿದ್ದಾಗ ಪಾಕಿಸ್ತಾನ ಸಂಭ್ರಮಿಸಿತ್ತು. ಬಹಿರಂಗವಾಗಿಯೇ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ಮಾತನಾಡಿತ್ತು. ಆದ್ರೆ, ತದನಂತರದಲ್ಲಿ ಮಾನ್ಯತೆ ನೀಡುವ ಬಗ್ಗೆ ಸ್ವತಃ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅನುಮಾನ ವ್ಯಕ್ತಪಡಿಸಿದ್ರು. ಆಗಲೇ ನೋಡಿ, ಹಕ್ಕಾನಿ ನೆಟ್ವರ್ಕ್‌ ಬಗ್ಗೆ ವಿಷಯ ಸ್ಫೋಟವಾಗಿತ್ತು. ಈ ಮೂಲಕ ಪಾಕಿಸ್ತಾನ ತನ್ನ ನೆಲದ ಮೂಲ ಹೊಂದಿರೋ ಹಕ್ಕಾನಿ ನೆಟ್ವರ್ಕ್‌ ಮುಖಂಡರಿಗೆ ಪ್ರಮುಖ ಖಾತೆ ಕೊಡಿಸಲು ಈ ತಂತ್ರ ಹೆಣೆಯುತ್ತಿದೆ ಅನ್ನೋದು ಬಹಿರಂಗವಾಗಿತ್ತು. ಈಗ ಆ ಸುದ್ದಿಗೆ ಮತ್ತಷ್ಟು ಪುಷ್ಟಿಸಿಕ್ಕಿದೆ.

ಕಾಬೂಲ್‌ ಹಿಡಿತ ಇರೋದೇ ಹಕ್ಕಾನಿ ನೆಟ್ವರ್ಕ್‌ಗೆ

ತಾಲಿಬಾನ್‌ ಸಂಘಟನೆಯ ಮುಖ್ಯ ಕಚೇರಿ ಇರುವುದೇ ಕಂದಹಾರ್‌ನಲ್ಲಿ. ಕಂದಹಾರ್‌ ಅನ್ನೋದು ಅಫ್ಘಾನಿಸ್ತಾನ್‌ನ ಎರಡನೇ ದೊಡ್ಡ ನಗರವಾಗಿದೆ. ಅಲ್ಲಿ ತಾಲಿಬಾನ್‌ ಸಂಘಟನೆಯಲ್ಲಿರೋ ಅಫ್ಘಾನ್‌ ಮುಖಂಡರು ಸಂಪೂರ್ಣ ನಿಯಂತ್ರಹೊಂದಿದ್ದಾರೆ. ಆದ್ರೆ, ಅಫ್ಘಾನ್‌ ರಾಜಧಾನಿ ಕಾಬೂಲ್‌ನಲ್ಲಿ ಹಕ್ಕಾನಿ ನೆಟ್ವರ್ಕ್‌ ನವರದ್ದೇ ಪ್ರಾಬಲ್ಯವಿದೆ. ಕಾಬೂಲ್‌ ವಶಪಡಿಸಿಕೊಳ್ಳುವಲ್ಲಿಯೂ ಹಕ್ಕಾನಿ ನೆಟ್ವರ್ಕ್‌ ಪ್ರಮುಖ ಪಾತ್ರವಹಿಸಿದೆ. ಹಕ್ಕಾನಿ ನೆಟ್ವರ್ಕ್‌ಗೆ ಇದೇ ಪ್ಲಸ್‌ ಪಾಯಿಂಟ್‌ ಆಗಿ ಬಿಟ್ಟಿದೆ. ಒಮ್ಮೆ ಪ್ರಮುಖ ಖಾತೆ ಕೊಡದಿದ್ರೆ ಭಿನ್ನಾಭಿಪ್ರಾಯವನ್ನು ಸ್ಫೋಟಿಸುವ ಸಾಧ್ಯತೆಯೂ ಇದೆ. ಅಷ್ಟೇ, ಅಲ್ಲ ಪಾಕಿಸ್ತಾನ ಜೊತೆ ಸೇರಿ ವಿಧ್ವಂಸಕ ಕೃತ್ಯ ನಡೆಸಿ ತಾಲಿಬಾನ್‌ ಸರ್ಕಾರ ಪತನಕ್ಕೆ ಶ್ರಮಿಸುವ ಸಾಧ್ಯತೆಯೂ ಇದೆ.

blank

ಪ್ರಮುಖ ಖಾತೆಗೆ ಎಲ್ಲಾ ಸಂಘಟನೆಗಳಿಂದಲೂ ಪಟ್ಟು
ಕೆಲವು ಸಂಘಟನೆಗಳ ಹಿಂದಿವೆ ನಾನಾ ರಾಷ್ಟ್ರಗಳು

ತಾಲಿಬಾನ್‌ ಸರ್ಕಾರದಲ್ಲಿ ಹಕ್ಕಾನಿ ನೆಟ್ವರ್ಕ್‌ ಮಾತ್ರ ಪ್ರಮುಖ ಖಾತೆಗೆ ಪಟ್ಟು ಹಿಡಿದಿಲ್ಲ. ಇತರೆ ಸಂಘಟನೆಗಳಾಗಿರೋ ಅಲ್‌ಕೈದಾ, ತೆಹ್ರಿಕ್‌ ಇ ತಾಲಿಬಾನ್‌, ಹಜಬ್‌ ಇ ಇಸ್ಲಾಮಿ ಗುಲ್ಬುದ್ದಿನ್‌, ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಉಜ್ಬೇಕಿಸ್ತಾನ್‌…..ಸಂಘಟನೆಗಳು ಕೂಡ ಪಟ್ಟು ಹಿಡಿವೆ. ಈ ಎಲ್ಲಾ ಸಂಘಟನೆಗಳ ಹಿಂದೆ ಕೆಲವು ರಾಷ್ಟ್ರಗಳ ತೆರೆಮರೆಯಲ್ಲಿಯೇ ಕೆಲಸ ನಿರ್ವಹಿಸುತ್ತಿವೆ. ಯಾವ ಸಂಘಟನೆಗೆ ಪ್ರಮುಖ ಖಾತೆ ಸಿಕ್ಕರೆ ತಮಗೆ ಏನು ಲಾಭ ಅನ್ನೋದನ್ನು ಅಳೆದು ತೂಗಿ ನೋಡುತ್ತಿದ್ದಾರೆ. ಹೀಗಾಗಿಯೇ ಆಯಾ ಸಂಘಟನೆಗಳಿಗೆ ಪ್ರಮುಖ ಖಾತೆ ಕೊಡಿಸಲು ಶ್ರಮಿಸುತ್ತಿವೆ. ಅದರಲ್ಲಿಯೂ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಮುಂಚೂಣಿಯಲ್ಲಿ ಕಂಡು ಬರುತ್ತಿರುವ ರಾಷ್ಟ್ರಗಳಾಗಿವೆ.

ಮಿಲಿಟರಿ ಆಡಳಿತದ ಬಗ್ಗೆಯೂ ನಡೆದಿತ್ತು ಚರ್ಚೆ

ಅಫ್ಘಾನ್‌ ಅನ್ನು ತಾಲಿಬಾನ್‌ ಮುಖಂಡರು ವಶಪಡಿಸಿಕೊಂಡಾಗಲೇ ಒಂದು ಮಾತು ಹೇಳಿದ್ರು. ಅದೇನಂದ್ರೆ, ಅಫ್ಘಾನ್‌ನಲ್ಲಿ ಇನ್ನು ಮುಂದೆ ಪ್ರಜಾಪ್ರಭುತ್ವ ಸರ್ಕಾರ ಇರುವುದಿಲ್ಲ ಅಂತ. ಹೀಗಾಗಿ ಅಲ್ಲಿಯ ಜನ ಪ್ರಜಾಪ್ರಭುತ್ವದ ಆಸೆಯನ್ನೇ ಬಿಟ್ಟು ಬಿಟ್ಟಿದ್ದಾರೆ. ಆದ್ರೆ, ತಾಲಿಬಾನ್‌ ಮುಖಂಡರು ಯಾವ ರೀತಿಯ ಸರ್ಕಾರ ರಚನೆ ಮಾಡಬೇಕು ಅನ್ನೋದನ್ನು ಚರ್ಚೆ ನಡೆಸಿದ್ದಾರೆ. ಅದರಲ್ಲಿ ಮುಲ್ಲಾ ಯಾಕೂಬ್‌ ಬಣ ಮಿಲಿಟರಿ ಸರ್ಕಾರ ರಚನೆ ಒತ್ತಡ ಹಾಕಿದೆ. ಆದ್ರೆ, ತಾಲಿಬಾನ್‌ನ ಇತರೆ ಮುಖಂಡರು ಅದಕ್ಕೆ ಒಪ್ಪಿಗೆ ನೀಡಿಲ್ಲ.

blank

ಸರ್ಕಾರ ರಚನೆಯಾದ್ರೂ ನಿಲ್ಲಲ್ಲ ಬಿಕ್ಕಟ್ಟು
ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತಡವಾಗುತ್ತಿದೆ ಸರ್ಕಾರದ ರಚನೆ

ಇನ್ನು ಒಂದೆರಡು ದಿನದಲ್ಲಿ ಸರ್ಕಾರ ರಚನೆಯಾಗಲಿದೆ ಅಂತ ತಾಲಿಬಾನ್‌ ಮುಖಂಡರು ಹೇಳುತ್ತಲೇ ಬರ್ತಾ ಇದ್ದಾರೆ. ಆದ್ರೆ, ಪ್ರಮುಖ ಖಾತೆಗಳಿಗಾಗಿ ಪೈಪೋಟಿ ಆರಂಭವಾಗಿದೆ. ಸಂಘಟನೆಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಇದೇ ಕಾರಣಕ್ಕೆ ಸರ್ಕಾರ ರಚನೆ ಮುಂದು ಹೋಗುತ್ತಿದೆ. ಒಮ್ಮೆ ಒಮ್ಮತಕ್ಕೆ ಬಂದು ಸರ್ಕಾರ ರಚಿಸಿದ್ರೂ ಕೂಡ ಅದು ಸುಗಮವಾಗಿ ನಡೆಯುವ ಸಾಧ್ಯತೆ ಇಲ್ಲ. ಯಾಕಂದ್ರೆ ತಾಲಿಬಾನ್‌ ಸರ್ಕಾರದಲ್ಲಿ ಪಾಕಿಸ್ತಾನ ಕೈ ಆಡಿಸಿಯೇ ಆಡಿಸುತ್ತದೆ. ಪಾಕಿಸ್ತಾನದ ಹಿಂದೆ ಚೀನಾ ತೆರೆಮರೆಯಲ್ಲಿ ಕೆಲಸ ಮಾಡುತ್ತದೆ. ಇದು ತಾಲಿಬಾನ್‌ನ ಇತರೆ ಮುಖಂಡರ ಕಣ್ಣು ಕೆಂಪಾಗಿಸಬಹುದು.

Source: newsfirstlive.com Source link