ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಶ್ರೀಲಂಕನ್ನರು

ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಶ್ರೀಲಂಕನ್ನರು

ಕೊರೊನಾ ಬಂದ ಮೇಲೆ ಇವತ್ತು ಅಭಿವೃದ್ದಿ ಹೊಂದಿರುವ ರಾಷ್ಟ್ರಗಳೇ ಪತರುಗುಟ್ಟಿ ಹೋಗಿವೆ. ಅಂಥದ್ರಲ್ಲಿ ಇನ್ನು ಅಭಿವೃದ್ಧಿ ಹಾದಿಯನ್ನ ಎದುರು ನೋಡುತ್ತಿರೋ ರಾಷ್ಟ್ರಗಳ ಪರಿಸ್ಥಿತಿ ಕೇಳಬೇಕಾ? ಯಾಕೆ ಈ ಮಾತನ್ನ ಹೇಳ್ತಾಯಿದ್ದೀವಿ ಅನ್ನೋದಕ್ಕೆ ಅದೊಂದು ದ್ವೀಪ ರಾಷ್ಟ್ರದ ಇವತ್ತಿನ ಪರಿಸ್ಥಿತಿ.. ಹಾಗಾದ್ರೆ ಆ ದ್ವೀಪ ರಾಷ್ಟ್ರದಲ್ಲಿ ಕೊರೊನಾ ಬಂದ ಮೇಲೆ ಏನಾಗಿದೆ ಗೊತ್ತಾ?

ಕೊರೊನಾ ಬಂದ ಮೇಲೆ ಜೀವ ಉಳಿಯೋದಲ್ಲ ಜೀವನ ನಡೆಯೋದು ಕುಡ ತುಂಬಾ ಕಷ್ಟ ಕರ ವಾಗಿ ಬಿಟ್ಟಿದೆ. ಜಗತ್ತೆ ಬರೋಬ್ಬರಿ ಒಂದು ವರ್ಷಗಳ ಕಾಲ ತಲ್ಲಣಗೊಂಡಿತ್ತು. ಈಗಲೂ ಕೆಲ ರಾಷ್ಟ್ರಗಳಲ್ಲಿ ಕೊರೊನಾ ರಣಕೇಕೆ ಹಾಕೋದನ್ನ ನಿಲ್ಲಿಸಿಲ್ಲ. ಅಲ್ಲದೇ ಕೊರೊನಾ ತನ್ನ ರೂಪವನ್ನ ಬದಲಿಸುತ್ತಾ ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿದೆ. ಒಂದೊಂದು ರೂಪಾಂತರ ತಳಿಯೂ ಭಯನಾಕವಾಗಿ ನಾಗರಿಕರನ್ನ ಕಾಡುತ್ತಿದೆ. ಈ ಹೆಮ್ಮಾರಿ ಕೇವಲ ನಾಗರಿಕರನ್ನ ಮಾತ್ರವಲ್ಲ ರಾಷ್ಟ್ರ ರಾಷ್ಟ್ರಗಳನ್ನೆ ಅದೋಗತಿಗೆ ದೂಡುತ್ತಿದೆ. ಅದಕ್ಕೆ ಒಂದು ತಾಜಾ ಉದಾಹರಣೆಯೇ ಶ್ರೀಲಂಕಾ.

blank

ಹೌದು… ಶ್ರೀಲಂಕಾದಲ್ಲಿ ಇಂದು ಏನಾಗ್ತಿದೆ ಅಂದರೆ ಅಯ್ಯೋ ಹೀಗೂ ಆಗ್ತಾಯಿದ್ಯಾ ಎನ್ನುವಂತಾಗಿದೆ. ಅದಕ್ಕೆಲ್ಲಾ ಕಾರಣ ಕೋವಿಡ್ ನೀಡಿದ ಆರ್ಥಿಕ ಶಾಕ್​. ಆ ಶಾಕ್​ ನಿಂದ ಇನ್ನೂ ಚೇತರಿಸಿಕೊಳ್ಳದ ನಮ್ಮ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿರೋದು… ಅದ್ಯಾವ ಮಟ್ಟಿಗೆ ಅಂದ್ರೆ ಅಲ್ಲಿನ ಸಾಮಾನ್ಯ ಜನರು ಮುಂದಿನ ದಿನಗಳಲ್ಲಿ ಉಪವಾಸದಿಂದ ಬಳಲುವ ಎಚ್ಚರಿಕೆಯನ್ನ ಕೊಡಲಾಗುತ್ತಿದೆ.

ಶ್ರೀಲಂಕಾದಲ್ಲಿ ಅಹಾರ ಬಿಕ್ಕಟ್ಟು, ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ
ಕೊರೊನಾದಿಂದಾಗಿ ಇಂದು ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನ ಘೋಷಣೆಯನ್ನ ಮಾಡಲಾಗಿದೆ. ಆ ಮೂಲಕ ಶ್ರೀಲಂಕಾದಲ್ಲಿ ಆಹಾರ ಬಿಕ್ಕಟ್ಟು ಉಲ್ಬಣಗೊಂಡಿದೆ ಅನ್ನೋದು ವಿಶ್ವಕ್ಕೆ ತಿಳಿಯುವಂತಾಗಿದೆ. ಇನ್ನು ಕೊರೊನಾದಿಂದಾಗಿ ಶ್ರೀಲಂಕಾ ಆರ್ಥಿಕ ಶಾಕ್​​​ಗೆ ಒಳಗಾಗಿ ಅಧ್ಯಕ್ಷ ರಾಜಪಕ್ಸೆ ಪರಿಸ್ಥಿತಿ ಸರಿ ದೂಗಿಸಲು ಒಂದು ಕಠಿಣ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಅದೇ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.

blank

ಕೊರೊನಾ ಬಂದ ಮೇಲೆ ಶ್ರೀಲಂಕಾದಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಂಡಿತ್ತು ಅನ್ನೋದು ಇಲ್ಲಿ ಅಲ್ಲಗೆಳೆಯುವಂತಿಲ್ಲ. ಅದಕ್ಕೆಲ್ಲಾ ಕಾರಣ ಆಗದ್ದೆ ದ್ವೀಪ ರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಬ್ರೇಕ್​ ಬಿದ್ದಿದ್ದು. ಒಂದು ವಿಚಾರವನ್ನ ನಾವೆಲ್ಲ ಗಮನಿಸಿಲೇಬೇಕು. ಅದು ಏನಂದ್ರೆ ಕೆಲ ರಾಷ್ಟ್ರಗಳು ಪ್ರವಾಸೋಧ್ಯಮವನ್ನೆ ಅವಲಂಬಿತವಾಗಿರುವಂತೆ ಶ್ರೀಲಂಕಾ ಕೂಡ ಆರಂಭದಿಂದಲೂ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರೋದು. 2019 ರ ಕೊನೆಯಲ್ಲಿ ಈ ಕೊರೊನಾ ಆರಂಭಗೊಂಡು, ವಿಶ್ವದಾದ್ಯಂತ ಪಸರಿಸೋದಕ್ಕೆ ಶುರು ಆಗಿದ್ದು ಮಾತ್ರ 2020 ರ ಫೆಬ್ರವರಿ ಮಾರ್ಚ್​ ತಿಂಗಳಲ್ಲಿ. ಅದಾದ ಮೇಲೆ ಹಂತ ಹಂತವಾಗಿ ವಿಶ್ವದಾದ್ಯಂತ ಕೊರೊನಾ ಆರ್ಭಟಿಸೋಕೆ ಶುರು ಆಗಿತ್ತು. ಆಗ ವಿಶ್ವ ಆರೋಗ್ಯ ಸಂಸ್ಥೆಯೇ ಲಾಕ್​ಡೌನ್​​​ ಬಿಟ್ಟರೆ ಬೇರೆ ಯಾವುದೆ ಮಾರ್ಗವಿಲ್ಲ ಎಂದು ಹೇಳಿತ್ತು. ಆಗಲೇ ನೋಡಿ ಲಾಕ್​ಡೌನ್​​ ಅನ್ನ ಹಲವು ದೇಶಗಳು ಜಾರಿಗೆ ತಂದು ಅಂತರಾಷ್ಟ್ರೀಯ ವಿಮಾನ ಹಾರಟಕ್ಕೆ ಬ್ರೇಕ್ ಹಾಕಿದ್ದು. ಆಗಿನಿದಂಲೇ ನೋಡಿ ಶ್ರೀಲಂಕಾಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು. ಅಂದು ಆರಂಭಗೊಂಡಿದ್ದು ಇಲ್ಲಿಯವರೆಗೂ ಚೇತರಿಸಿಕೊಳ್ಳಲು ಆಗದೇ ಇರೋ ಕಾರಣದಿಂದ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿರೋದು.

ಜನಸಾಮಾನ್ಯರನ್ನ ರಕ್ಷಿಸುವ ಸಲುವಾಗಿ ತುರ್ತು ಪರಿಸ್ಥಿತಿ ಘೋಷಣೆ
ಹೌದು.. ಶ್ರೀಲಂಕಾದಲ್ಲಿ ಇದೀಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನ ಸಾಮಾನ್ಯರ ಕೈಗೆ ಆಹಾರ ಪದಾರ್ಥಗಳ ಬೆಲೆ ಎಟಕದಂತೆ ಗಗನಕ್ಕೆರಿದೆ. ಹಾಗಾಗಿ ಶ್ರೀಲಂಕಾದಲ್ಲಿ ಬೇರೆ ದಾರಿ ಕಾಣದ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸುವ ಸಲುವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಅಕ್ಕಿ ಸಕ್ಕರೆ ಸೇರಿ ಜೀವನಾವಶ್ಯಕ ವಸ್ತುಗಳನ್ನು ಸರ್ಕಾರವೇ ಪಡಿತರ ವ್ಯವಸ್ಥೆಯ ಮೂಲಕ ಅಗ್ಗದ ದರದಲ್ಲಿ ಮಾರಾಟ ಮಾಡಲಿದೆ ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ಇನ್ನು ನಮ್ಮಲ್ಲಿ ಪ್ರಶ್ನೆ ಮೂಡಬಹುದು ಈ ಆರ್ಥಿಕ ತುರ್ತು ಸ್ಥಿತಿ ಅಂದ್ರೆ ಏನು? ಇದರ ಪರಿಣಾಮ ಏನಾಗುತ್ತೇ?

ಇನ್ನು ಇಂದು ಶ್ರೀಲಂಕಾದಲ್ಲಿ ಏರಿರೋ ಆರ್ಥಿಕ ತುರ್ತು ಪರಿಸ್ಥಿತಿ ಅಂದ್ರೆ, ಆರ್ಥಿಕ ಬಿಕ್ಕಟ್ಟು ಸೃಷ್ಟಿ ಆದಾಗ ಆ ರಾಷ್ಟ್ರದ ಅಧ್ಯಕ್ಷ ಇದನ್ನು ಘೋಷಿಸಬಹುದು. ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ರಾಷ್ಟ್ರದಲ್ಲಿ ಯಾವುದೇ ಒಬ್ಬ ವ್ಯಾಪಾರಿ ಹೊಂದಿರುವ ಆಹಾರ ಪದಾರ್ಥವನ್ನು ಸರ್ಕಾರ ನೇರವಾಗಿ ಜಪ್ತಿ ಮಾಡಬಹುದು. ಅಲ್ಲದೇ ಯಾರಾದ್ರು ಅಕ್ರಮವಾಗಿ ಆಹಾರದ ಸಾಮಾಗ್ರಿಗಳನ್ನು ದಾಸ್ತಾನು ಮಾಡಿದ್ದರೆ ಅಂತಾ ದಾಸ್ತಾನುಗಾರನನ್ನ ಬಂಧಿಸುವ ಅಧಿಕಾರ ಇರುತ್ತದೆ. ಆದ್ದರಿಂದ ಯಾವುದೇ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಯಾರು ಕೂಡ ಆಹಾರದ ಸಾಮಾಗ್ರಿಗಳನ್ನ ದಾಸ್ತಾನು ಮಾಡಿಕೊಳ್ಳುವುದಿಲ್ಲ. ಎಲ್ಲವನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತೆ.

ಯಾವುದೇ ಒಂದು ರಾಷ್ಟ್ರದಲ್ಲಿ ಆರ್ಥಿಕ ಪರಿಸ್ಥಿತಿ ಘೋಷಣೆ ಮಾಡಿದಾಗ ಕೆಲವೊಂದು ಪರಿಣಾಮಗಳು ಸಹ ಆಗುತ್ತದೆ. ಅದು ಯಾವುದೇ ಒಂದು ಪದಾರ್ಥದ ಮೂಲ ಬೆಲೆಯನ್ನ ಬದಿಗಿಟ್ಟು ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಅಥವಾ ಆಮದು ದರಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತೆ. ಈ ವಸ್ತುಗಳನ್ನ ಯಾರು ಕೂಡ ದಾಸ್ತಾನು ಮಾಡಲು ಆಗುವುದಿಲ್ಲ. ಅಲ್ಲದೇ ಈ ವಸ್ತುಗಳನ್ನ ದಾಸ್ತಾನು ಮಾಡೋದಕ್ಕೆ ನಿಷೇಧವನ್ನ ಏರಲಾಗಿರುತ್ತದೆ. ಅಲ್ಲದೆ ಇದರ ಮೇಲೆ ಗಮನ ಇಡೋದಕ್ಕೆ ಒಬ್ಬ ಉನ್ನತ ಮಟ್ಟದ ಅಧಿಕಾರಿಯನ್ನು ಸಹ ನೇಮಕ ಮಾಡಲಾಗುತ್ತೆ. ಅವರು ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸ ಮಾಡುತ್ತಾರೆ.

ಇನ್ನು ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡೋದಕ್ಕೆ ಕೆಲವು ಪ್ರಮುಖವಾದ ಕಾರಣಗಳು ಇದೆ. ಅದ್ರಲ್ಲಿ ಬಹು ಮೂಖ್ಯವಾದ್ದದ್ದು ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಆರ್ಥಿಕತೆಯ ಪ್ರಮುಖ ಮೂಲ. 30 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರವಾಸೋದ್ಯಮ ಉದ್ಯೋಗವನ್ನ ಕಲ್ಪಿಸಿದೆ. ಆದ್ರೆ 2019 ರಲ್ಲಿ ಈಸ್ಟರ್​​​ ದಿನ ಚರ್ಚ್​ ಮೇಲೆ ನಡೆದ ಬಾಂಬ್ ದಾಳಿಯ ಬಳಿಕ ಪ್ರವಾಸಿಗರ ಆಗಮನ ಕುಂಠಿತವಾಗಿತ್ತು. ಆದರ ಬೆನ್ನಲ್ಲೆ ಒಂದೂವರೆ ವರ್ಷದಿಂದ ಕೋವಿಡ್ ಕಾರಣ ಪ್ರವಾಸಿಗರ ಆಗಮನ ಕೂಡ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿತ್ತು. ಹೀಗಾಗಿ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಸಂಗ್ರಹ ಮತ್ತಷ್ಟು ಕುಸಿದಿತ್ತು.

blank

ಸಾಲದ ಪ್ರಮಾಣದಲ್ಲಿಯೂ ಬಾರಿ ಏರಿಕೆ ಕಂಡಿತ್ತು
ಹೌದು.. ಶ್ರೀಲಂಕಾ ಈ ಹಿಂದೆ ಇದೇ ರೀತಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದಾಗಲು ಬೇರೆ ಬೇರೆ ದೇಶಗಳಿಂದ ಸಾಲವನ್ನ ಪಡೆದುಕೊಂಡಿತ್ತು. ಅಲ್ಲದೇ ಪ್ರತಿ ವರ್ಷದಂತೆ ಈ ವರ್ಷದಲ್ಲಿ 75 ಸಾವಿರ ಕೋಟಿ ಸಾಲವನ್ನ ಮರುಪಾವತಿ ಶ್ರೀಲಂಕಾ ಮಾಡಬೇಕಿತ್ತು. ಅದ್ರಲ್ಲಿ ಅಂದಾಜು ಮೂವತ್ತು ಸಾವಿರ ಕೋಟಿ ವಿದೇಶಿ ಸಾಲವನ್ನ ಮರು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ ದೇಶೀಯ ಸಾಲ ಕೂಡ ಇದೆ ಅಂತಾ ಹೇಳಲಾಗುತ್ತಿದೆ. ಇನ್ನು ಶ್ರೀಲಂಕಾ ಈ ಹಿಂದೆ ಅಂದ್ರೆ ಹಲವು ವರ್ಷಗಳ ಹಿಂದೆಯೇ ಚೀನಾದ ಬಳಿ ನೂರಾರು ಕೋಟಿ ಸಾಲವನ್ನ ಮಾಡಿತ್ತು. ಆ ಸಾಲವನ್ನ ಇಂದಿಗೂ ಶ್ರೀಲಂಕಾ ತೀರಿಸುತ್ತಲೆ ಇದೆ. ಇಲ್ಲಿ ಚೀನಾದ ನರಿ ಬುದ್ದಿ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಬಹಳ ವರ್ಷಗಳಿಂದ ಭಾರತ ವಿರುದ್ದ ಕತ್ತಿ ಮಸಿಯುತ್ತಿರುವ ಚೀನಾ, ಭಾರತದ ಸುತ್ತ ಮುತ್ತಲಿನ ದೇಶಗಳನ್ನ ತನ್ನತ್ತ ಸೆಳೆಯಲು ಸಾಕಷ್ಟು ಪ್ಲಾನ್ ಗಳನ್ನ ಮಾಡಿಕೊಂಡು ಆ ಮೂಲಕ ಪಾಕಿಸ್ತಾನಕ್ಕೆ ದುಡ್ಡನ್ನ ಕೊಟ್ಟು ಕೊಟ್ಟು ತನ್ನತ್ತ ಸೆಳೆದುಕೊಂಡಿದೆ.

ಮತ್ತೊಂದು ಶ್ರೀಲಂಕಾಗೂ ಅಭೃವೃದ್ಧಿ ಕಾಮಾಗರಿಗಳ ಹೆಸರಿನಲ್ಲಿ ನೂರಾರು ಕೋಟಿ ಸಾಲ ಕೊಟ್ಟಿದೆ. ಇನ್ನೊಂದು ವಿಚಾರ ಏನಂದ್ರೆ ಇಲ್ಲಿ ಚೀನಾ ಸಾಲ ಕೊಡುವಾಗ ಅಗ್ರಿಮೆಂಟ್ ಮಾಡಿಕೊಳ್ಳುತ್ತೆ. ಅದೇನೆಂದ್ರೆ ಸಾಲ ಕೊಡ್ತಿವಿ ಆದ್ರೆ ಅಭಿವೃದ್ಧಿ ಕಾಮಾಗಾರಿಗೆ ಚೀನಾ ಮೂಲದ ಕಂಪನಿಗಳಿಗೆ ಕೊಡಬೇಕು, ಚೀನಾದವರನ್ನೆ ಕಾಮಾಗಾರಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು. ಆ ಕ್ಷಣಕ್ಕೆ ಹಣದ ಅವಶ್ಯಕತೆ ಇರೋ ರಾಷ್ಟ್ರ ಹಣವನ್ನ ಪಡೆದುಕೊಂಡು ಬಿಡುತ್ತೆ. ಆದ್ರೆ ಇಲ್ಲಿ ಸಾಲವನ್ನು ಕೊಟ್ಟು ಅದನ್ನ ಆ ಮೂಲಕ ವಾಪಸ್ ಪಡೆದುಕೊಂಡು ಬಿಡುತ್ತೆ ಅನ್ನೋದು ಅಂದ್ರೆ ಚೀನಾದ ನರಿ ಬುದ್ದಿ ಗೊತ್ತಾಗೋದಿಲ್ಲಾ. ಆದ್ರೆ ಈಗ ಶ್ರೀಲಂಕಾ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳೋದಕ್ಕೆ ಚೀನಾ ಕೂಡ ಒಂದು ಕಾರಣ ಅಂತಾ ಹೇಳಲಾಗುತ್ತಿದೆ.

ಏನಿಲ್ಲ ಅಂದ್ರು ಶ್ರೀಲಂಕಾ ಇವತ್ತು ಅನೇಕ ದಿನ ಬಳಕೆ ವಸ್ತುಗಳನ್ನ ವಿದೇಶದ ಮೇಲೆಯೆ ಅವಲಂಬಿತರಾಗಿದ್ದು, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಇಂದು ದುಪ್ಪಟ್ಟಾಗಿದೆ. ಮತ್ತೊಂದು ಕಡೆ ವಿದೇಶಿ ವಿನಿಮಯ ಉಳಿಸಲು ಲಂಕಾ ಸರ್ಕಾರವು ಟೂತ್​ ಬ್ರಷ್​​​​, ಕಾರು, ರಸಗೊಬ್ಬರ, ಸಕ್ಕರೆ ಮೊದಲಾದ ವಸ್ತುಗಳ ಆಮದಿಗೆ ನಿಷೇಧ ಹೇರಿದ ಕಾರಣ ದೇಶಿಯವಾಗಿ ಅವುಗಳ ಲಭ್ಯತೆ ಇಳಿಕೆಯಾಗಿದೆ. ಇದು ಕೂಡ ಇಂದು ಅಲ್ಲಿ ದರ ಏರಿಕೆಗೆ ಕಾರಣ ಅಂತಾ ಹೇಳಲಾಗುತ್ತಿದೆ.

ಇನ್ನು ಯಾವುದಕ್ಕೆಲ್ಲಾ ಬೆಲೆ ಹೆಚ್ಚಾಗಿತ್ತು ಅನ್ನೋದನ್ನ ನೋಡ್ತಾ ಹೋಗೋದಾದ್ರೆ, ಸಕ್ಕರೆ ಬೆಲೆ ಕೆಜಿಗೆ 150 ರೂಪಾಯಿ, ಅಕ್ಕಿ ಬೆಲೆ 100- 130 ರೂಪಾಯಿ, ಪೆಟ್ರೋಲ್‌ ಲೀಟರ್‌ಗೆ 157 ರೂಪಾಯಿ, ಡೀಸೆಲ್‌ 111 ರು., ಸೀಮೆಎಣ್ಣೆ 77 ರು. ತಲುಪಿದ್ದು ಜನರ ಜೀವನ ಹೈರಾಣಾಗಿಸಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿರುವ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ. ಈ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರವೇ ಪಡಿತರ ವ್ಯವಸ್ಥೆ ಮೂಲಕ ಅಕ್ಕಿ, ಸಕ್ಕರೆ, ಹಾಲಿನಪುಡಿ, ಈರುಳ್ಳಿ, ಆಲೂಗಡ್ಡೆ, ಸೀಮೆಎಣ್ಣೆ ಮೊದಲಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಶ್ರೀಲಂಕಾದಲ್ಲಿ ಇಂದು ಮಿಲಿಟರಿ ಅಧಿಕಾರಿಯೊಬ್ಬರಿಗೆ ಇದರ ಜವಾಬ್ದಾರಿಯನ್ನ ನೀಡಿರೋ ಸರ್ಕಾರ ಯಾರಾದ್ರು ಅಕ್ರಮವಾಗಿ ದಾಸ್ತಾನು ಮಾಡಿದ್ದು ಬೆಳಕಿಗೆ ಬಂದರೆ ಅವರನ್ನ ಬಂಧಿಸುವ ಅಧಿಕಾರವನ್ನ ಸಹ ಕೊಟ್ಟಿದ್ದಾರೆ. ಅಲ್ಲದೇ ಇಡೀ ರಾಷ್ಟ್ರದಲ್ಲಿ ಸೇನೆಯನ್ನ ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತಾನೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ಕೊರೊನಾ ಬಂದ ಮೇಲೆ ಎಲ್ಲವು ಅಂದುಕೊಂಡಿದ್ದಕ್ಕಿಂತ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸದ್ಯ ಎಲ್ಲವು ದುಬಾರಿ ಆಗಿದ್ದು, ಜನ ಸಾಮಾನ್ಯರು ಪರದಾಡುವಂತಾ ಸ್ಥಿತಿಗೆ ಬಂದು ತಲುಪಿದ್ದಾರೆ. ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಅಂತಾನೂ ಹೇಳಲಾಗುತ್ತಿದೆ. ಸದ್ಯ ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ. ಅದರಿಂದ ಕೊಂಚ ಪರಿಸ್ಥಿತಿ ನಿಯಂತ್ರಣಕ್ಕೆ ಬರಬೋದು, ಆದ್ರೆ ಸಂಪನ್ಮೂಲ ಖಾಲಿ ಆದ ಮೇಲೆ ಏನ್ ಗತಿ ಅನ್ನೋ ಪ್ರಶ್ನೆಗೆ ಈ ಕ್ಷಣಕ್ಕೆ ಯವುದೇ ಉತ್ತರವಿಲ್ಲ.

Source: newsfirstlive.com Source link