ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದೇನು?

ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದೇನು?

ಲಕ್ನೋ : ವಿಲಕ್ಷಣ ಪ್ರಕರಣವೊಂದರಲ್ಲಿ, ಲಕ್ನೋದ ಬಲರಾಂಪುರದಲ್ಲಿ ಅಪ್ರಾಪ್ತ ಬಾಲಕಿಯೊರ್ವಳು ಕೂದಲು ತಿಂದ ಪರಿಣಾಮ ಹೊಟ್ಟೆಯಲ್ಲಿ 2 ಕೆಜಿ ತೂಕದ ಕೂದಲಿನ ಗಡ್ಡೆ ಪತ್ತೆಯಾಗಿದ್ದು ವೈದ್ಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕಳೆದ ಎರಡು ವರ್ಷಗಳಿಂದ 17 ವರ್ಷದ ಅಪ್ರಾಪ್ತ ಬಾಲಕಿಯ ಕೂದಲುಗಳು ಉದುರುತ್ತಿದ್ದವು ಎನ್ನಲಾಗಿದ್ದು, ಸುಮಾರು 10 ದಿನಗಳ ಹಿಂದೆ, ಬಾಲಕಿ ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಗಾಬರಿಗೊಂಡ ಪೋಷಕರು ಆಕೆಯನ್ನು ಬಲರಾಂಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿಯ ಶಸ್ತ್ರಚಿಕಿತ್ಸೆ ವಿಭಾಗದ ಡಾ.ಎಸ್.ಆರ್. ಸಮ್ದರ್ ಬಾಲಕಿಯನ್ನು ಪರೀಕ್ಷಿಸಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದಾರೆ. ಬಳಿಕ CT ಸ್ಕ್ಯಾನ್ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಂಡಿದೆ. ನಂತರ ಬಾಲಕಿಗೆ ಎಂಡೊಸ್ಕೋಪ್ ಪರೀಕ್ಷೆಗೆ ಒಳಪಡಿಸಿದ್ದು ಅವಳ ಹೊಟ್ಟೆಯಲ್ಲಿ ಕೂದಲಿನ ಗಂಟು ಗೋಚರಿಸಿದೆ. ಆಕೆಯ ಹೊಟ್ಟೆಯಲ್ಲಿ 20 ಸೆಂ.ಮೀ ಅಗಲದ ಕೂದಲಿನ ಗಡ್ಡೆಯನ್ನು ಕಂಡ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.

ಬಾಲಕಿ ಹುಟ್ಟಿದಾಗಿನಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎಂದು ವೈದ್ಯರು ತಿಳಿಸಿದ್ದು, ಸುಮಾರು 1.5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ, ಬಾಲಕಿಯ ಹೊಟ್ಟೆಯಲ್ಲಿದ್ದ ಕೂದಲಿನ ಗಂಟನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಬಾಲಕಿ ಯಾವುದೇ ನೋವುಗಳಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: 22 ಮಕ್ಕಳ ಈ ಮಹಾತಾಯಿಯ ಐಶಾರಾಮಿ ಜೀವನ ದಂಗುಬಡಿಸೋದು ಪಕ್ಕಾ..!

ಬಾಲಕಿಯ ಹೊಟ್ಟೆಯಲ್ಲಿ ಬೆಳೆದ ಕೂದಲಿನ ಗಡ್ಡೆಯ ಪರಿಣಾಮ ಹೊಟ್ಟೆಯಿಂದ ಸಣ್ಣ ಕರುಳಿಗೆ ಹೋಗುವ ಮಾರ್ಗವು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಪರಿಣಾಮವಾಗಿ, ಆಹಾರವು ಹಾದುಹೋಗಲು ಸಾಧ್ಯವಾಗಲಿಲ್ಲ, ಇದು ಸುಮಾರು 32 ಕೆಜಿ ತೂಕವನ್ನು ಕಳೆದುಕೊಳ್ಳಲು ಕಾರಣವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೊಳಗಾದ 17 ವರ್ಷದ ಬಾಲಕಿಯು ಅಪರೂಪದ ‘ಟ್ರೈಕೊಬೆಜೋವರ್’ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಇದರಲ್ಲಿ ರೋಗಿಯು ತಮ್ಮ ಕೂದಲನ್ನು ಕಿತ್ತು ತಿನ್ನುವ ಹವ್ಯಾಸ ಬೆಳೆಸಿಕೊಂಡಿರುತ್ತಾನೆ ಎಂದು ವೈದ್ಯರು ತಿಳಿಸಿದ್ದಾರೆ.

Source: newsfirstlive.com Source link