ಅಮೆರಿಕಾದಲ್ಲಿ ಇಡಾ ಚಂಡಮಾರುತ; 45ಕ್ಕೂ ಹೆಚ್ಚು ಮಂದಿ ದುರ್ಮರಣ

ಅಮೆರಿಕಾದಲ್ಲಿ ಇಡಾ ಚಂಡಮಾರುತ; 45ಕ್ಕೂ ಹೆಚ್ಚು ಮಂದಿ ದುರ್ಮರಣ

ಈಶಾನ್ಯ ಅಮೆರಿಕದಲ್ಲಿ ಅಬ್ಬರಿಸುತ್ತಿರೋ ಇಡಾ ಚಂಡಮಾರುತ ದೊಡ್ಡಣ್ಣನನ್ನ ಹೈರಾಣು ಮಾಡಿದೆ.. ಅಮೆರಿಕದ 6 ರಾಜ್ಯಗಳನ್ನೂ ಸುತ್ತುವರಿದಿರೋ ಇಡಾ ಅಬ್ಬರಕ್ಕೆ ನ್ಯೂಯಾರ್ಕ್​​, ನ್ಯೂಜೆರ್ಸಿಯಲ್ಲಿ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿದೆ. 45ಕ್ಕೂ ಹೆಚ್ಚು ಜನ ಜೀವವನ್ನೂ ಕಳೆದುಕೊಂಡಿದ್ದಾರೆ. 

ಈಶಾನ್ಯ ಅಮೆರಿಕ’ದಲ್ಲಿ ಧುತ್ತೆಂದು ಎರಗಿ ‘ಅಬ್ಬರಿಸಿದ ಇಡಾ’
ರಕ್ಕಸ ಚಂಡಮಾರುತಕ್ಕೆ ‘ದೊಡ್ಡಣ್ಣ’ನ 6 ರಾಜ್ಯಗಳು ‘ಗಢ ಗಢ’!

ಹೌದು, ಶರವೇಗದಲ್ಲಿ ಎರಗಿ ಅಬ್ಬರಿಸಿದ ರಕ್ಕಸ ಇಡಾ ಚಂಡಮಾರುತಕ್ಕೆ ಇಡೀ ಈಶಾನ್ಯ ಅಮೆರಿಕ ತತ್ತರಿಸಿ ಹೋಗಿದೆ. ಪ್ರಬಲ ಚಂಡಮಾರುತ ವಿಶ್ವದ ದೊಡ್ಡಣ್ಣನನ್ನ ಗಢ.. ಗಡ.. ನಡುಗಿಸಿಬಿಟ್ಟಿದೆ. ಭೀಕರ ಇಡಾ ಚಂಡಮಾರುತ ದೊಡ್ಡಣ್ಣನ 6 ರಾಜ್ಯಗಳಲ್ಲಿ ರುದ್ರ ನರ್ತನ ಮಾಡಿಬಿಟ್ಟಿದೆ. ನ್ಯೂಯಾರ್ಕ್​​, ನ್ಯೂಜೆರ್ಸಿ, ಮೇರಿಲ್ಯಾಂಡ್​, ಪೆನ್ಸಿಲ್ವೇನಿಯಾ, ವರ್ಜಿನಿಯಾ, ರಾಜ್ಯಗಳು ಪೂರ್ತಿ ಅಸ್ತವ್ಯಸ್ತವಾಗಿವೆ.

ಭಾರೀ ಮಳೆ, ಗಾಳಿಯೊಂದಿಗೆ ‘ಇಡಾ ಆರ್ಭಟ’
ಜಲಾವೃತ ರಸ್ತೆ, ಕುಸಿದು ಬಿದ್ದ ಮನೆ, ‘ಸ್ಥಿತಿ ಅಸ್ತವ್ಯಸ್ತ’

ದೊಡ್ಡಣ್ಣನ ಕೋಟೆ ಒಳಗೆ ನುಗ್ಗಿ ರಣ ಕೇಕೆ ಹಾಕುತ್ತಿರೋ ರಕ್ಕಸ ಇಡಾ ಭಾರೀ ಮಳೆ, ಗಾಳಿಯೊಂದಿಗೆ ಅಬ್ಬರಿಸಿದೆ. ಪರಿಣಾಮ ನ್ಯೂಯಾರ್ಕ್​ನ ರಸ್ತೆಗಳು ಜಲಾವೃಗೊಂಡಿವೆ. ಕೆರೆ, ನದಿ, ಸರೋವರ ಸದೃಶವಾವಾಗಿವೆ. ಪರಿಣಾಮ ರಸ್ತೆ ಸಂಪರ್ಕ, ಮೆಟ್ರೋ ಸಂಪರ್ಕ ಸ್ಥಗಿತವಾಗಿದೆ. ವಾಹನಗಳು ಜಲಾವೃತ ರಸ್ತೆಯಲ್ಲಿ ದೋಣಿಯಲ್ಲಿ ತೇಲಾಡುತ್ತಿವೆ. ಇನ್ನು ನಿರಂತರ ಭಾರೀ ಗಾಳಿ ಮಳೆಯಿಂದಾಗಿ ವಿಮಾನ ಸೇವೆಯನ್ನೂ ನಿಲ್ಲಿಸಲಾಗಿದೆ ಹಾಗೇ ವಿದ್ಯುತ್​ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ.

ಭಾರೀ ಚಂಡಮಾರುತಕ್ಕೆ ‘45ಕ್ಕೂ ಹೆಚ್ಚು ಜನ ದುರ್ಮರಣ’
6 ರಾಜ್ಯಗಳಲ್ಲಿ ಭಾರೀ ಗಾಳಿ, ಮಳೆಗೆ ‘ಮನೆಗಳೂ ನೆಲಸಮ’

ಇಡಾ ಚಂಡಮಾರುತ ಹೊಡೆತಕ್ಕೆ ಭಾರಿ ಗಾಳಿಯೊಂದಿಗೆ ಮಳೆ ಅಬ್ಬರಿಸಿ ಬೊಬ್ಬಿರಿದು ಬಿಟ್ಟಿದೆ. ಪರಿಣಾಮವಾಗಿ ನ್ಯೂಯಾರ್ಕ, ನ್ಯೂಜೆರ್ಸಿ, ಮೇರಿಲ್ಯಾಂಡ್​, ಪೆನ್ಸಿಲ್ವೇನಿಯಾ, ವರ್ಜಿನಿಯಾ, ಸೇರಿ ಈಶಾನ್ಯ ಅಮೆರಿಕದಲ್ಲಿ 45ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿರೋ ವರದಿಯಾಗಿದೆ. ಇನ್ನು ಅಧಿಕ ಪ್ರಮಾಣದ ಮಳೆಯಿಂದಾಗಿ ಮಳೆ ನೀರು ಮನೆಗಳಿಗೂ ನಿಗ್ಗಿದೆ. ಪರಿಣಾಮ ಎಷ್ಟೋ ಮನೆಗಳು ಕೂಡ ನೆಲಕಚ್ಚಿವೆ ಅನ್ನೋ ವರದಿಯಾಗಿದೆ.

ನೆರೆಯಲ್ಲಿ ಸಿಲುಕಿದವರ ಭರದ ರಕ್ಷಣಾ ಕಾರ್ಯ
ಭೀಕರ ಇಡಾ ಹೊಡೆತದಿಂದ ಈಶಾನ್ಯ ಅಮೆರಿಕ ಆರು ರಾಜ್ಯಗಳಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಈ ರಾಜ್ಯಗಳೆಲ್ಲ ಭಾರೀ ನೆರೆಗೆ ತುತ್ತಾಗಿದೆ. ಹೀಗಾಗಿ ಪ್ರವಾಹದಲ್ಲಿ ಸಿಲುಕಿರೋ ನಾಗರಿಕರನ್ನ ಅಮೆರಿಕ ಸರ್ಕಾರದ ರಕ್ಷಣಾ ಸಿಬ್ಬಂದಿ ಬೋಟ್​ಗಳ ಸಹಾಯದಿಂದ ರಕ್ಷಿಸೋ ಕಾರ್ಯ ಮಾಡಿದರು.

ಪ್ರವಾಹ ಪೀಡಿತರಿಗೆ ಧೈರ್ಯ ತುಂಬಿದ ಜೋ ಬೈಡನ್​​
ನ್ಯೂಯಾರ್ಕ್​, ನ್ಯೂಜೆರ್ಸಿಯಲ್ಲಿ ಎಮರ್ಜೆನ್ಸಿ ಘೋಷಣೆ

ಇನ್ನೂ ಭೀಕರ ಪ್ರವಾಹದಿಂದಾಗಿ ನಲುಗಿದ ನಾಗರಿಕರಿಗೆ ಅಮೆರಿಕ ಅಧ್ಯಕ್ಷ ಜೊ ಬೈಡನ್​ ಧೈರ್ಯ ತುಂಬು ಮಾತುಗಳನ್ನಾಡಿದರು. ವಾತಾವರಣ ತುಂಬ ಅಪಾಯದ ಸ್ಥಿತಿಯಲ್ಲಿದೆ. ಹೀಗಾಗಿ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಅಂತ ಧೈರ್ಯ ತುಂಬಿದ್ದಾರೆ. ಡೆಡ್ಲಿ ಇಡಾ ಹೊಡೆತದಿಂದ ತೀರ ಅಪಾಯದ ಸ್ಥಿತಿಯಲ್ಲಿರೋ ನ್ಯೂಯಾರ್ಕ್​​ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನೂ ಘೋಷಿಸಲಾಗಿದೆ. ಒಟ್ಟಿನಲ್ಲಿ ಭಾರೀ ಗಾಳಿ, ಮಳೆಯೊಂದಿಗೆ ವಿಶ್ವದ ದೊಡ್ಡಣ್ಣ ಅಂಗಳಕ್ಕೆ ನುಗ್ಗಿ ಅಬ್ಬರಿಸಿದ ಇಡಾ ಚಂಡಮಾರುತ ಅಮೆರಿಕಾದ ಇಡೀ ಈಶಾನ್ಯ ಭಾಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿಬಿಟ್ಟಿದೆ.

Source: newsfirstlive.com Source link