ದೊಡ್ಡಣ್ಣನಿಗೆ ಒಂದರ ಮೇಲೊಂದು ಸಂಕಷ್ಟ; ಇಡಾ ಚಂಡಮಾರುತಕ್ಕೆ ಅಮೆರಿಕ ತತ್ತರ

ದೊಡ್ಡಣ್ಣನಿಗೆ ಒಂದರ ಮೇಲೊಂದು ಸಂಕಷ್ಟ; ಇಡಾ ಚಂಡಮಾರುತಕ್ಕೆ ಅಮೆರಿಕ ತತ್ತರ

ವಿಶ್ವದ ದೊಡ್ಡಣ್ಣನಿಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಒಮ್ಮೆ ಕೊರೊನಾ ಹೆಮ್ಮಾರಿ, ನಂತರ ಪ್ರಾಕೃತಿಕ ವಿಕೋಪಗಳು ಹೀಗೆ ಒಂದರ ಮೇಲೊಂದು ಸದ್ದು ಮಾಡ್ತಿದೆ. ಈಗ ಮತ್ತೊಮ್ಮೆ ಅಮೆರಿಕ ಭೀಕರ ಚಂಡಮಾರುತಕ್ಕೆ ಸಾಕ್ಷಿಯಾಗಿದೆ. ಆ ಚಂಡಮಾರುತ ಇಂದು ಜನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಹಾಗಾದ್ರೆ ಚಂಡಮಾರುತದ ವೀರಾವೇಷ ಹೇಗಿದೆ ಗೊತ್ತಾ?

ಇದನ್ನೂ ಓದಿ: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಶ್ರೀಲಂಕನ್ನರು

ಅಬ್ಬಾ ಅದೆಂತಹ ಮಳೆ. ಕೇವಲ ಮಳೆಯಲ್ಲ.. ರಾಕ್ಷಸ ಬಿರುಗಾಳಿ. ಇಡಿ ಭೂಮಿಯನ್ನು ಹೊತ್ತು ಹೋಗುತ್ತದೆಯೇನೋ ಅನ್ನೋ ಹಾಗೆ ಎಲ್ಲವನ್ನು ಎತ್ತೆತ್ತಿ ಒಗೆಯುತ್ತಿರುವ ಸುಂಟರಗಾಳಿ. ಯವಾಗಲೂ ಟ್ರಾಫಿಕ್ ಜ್ಯಾಮ್ ಆಗುತ್ತಿದ್ದ ರಸ್ತೆಗಳಲ್ಲಿ, ಇಂದು ಅದೇ ರಸ್ತೆಗಳಲ್ಲಿ ಕಾರುಗಳು ತೇಲಿ ಹೋಗುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಆಗಿದ್ದು ಅಮೆರಿಕಾದಲ್ಲಿ ಆದ ಚಂಡಮಾರುತ. ಅದೇ ಇಡಾ ಚಂಡಮಾರುತ.. ಸದ್ಯ ಅಮೆರಿಕಾದಲ್ಲಿ ವರುಣನ ರಾಕ್ಷಸ ಅವತಾರದಿಂದಾಗಿ ಮಳೆ ನೀರಿನಲ್ಲಿ ಮಿಂದು, ಕಣ್ಣು ಮಿಟುಕಿಸುತ್ತಾ, ಉಫ್ ! ಎಂದು ಉಸಿರುಬಿಡುವುದಷ್ಟೇ ಬಾಕಿ ಉಳಿದಿರೋದು.

ಹೀಗೊಂದು ಮಳೆ ಅಮೆರಿಕ ಪಾಲಿಗೆ ಇರುತ್ತೆ ಅನ್ನೋದು ಯಾರೂ ಊಹೆ ಮಾಡಿರಲಿಲ್ಲ. ಸದ್ಯಕ್ಕಂತೂ ಕೆಲವು ನಗರಗಳು ಸಂಪೂರ್ಣ ನೀರು ಪಾಲಾಗಿ, ಅಲ್ಲಿನ ಜನರೆಲ್ಲ ಬೇರೆ ದಾರಿ ಇಲ್ಲದೆ ನೀರಿನ ಮಧ್ಯೆ ಜೀವನ ಸಾಗಿಸುವ ಪರಿಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಪಂಜ್‌ಶೀರ್​​ನಲ್ಲಿ ‘ಚಕ್ರವ್ಯೂಹ’ -ಕಾಬೂಲ್​ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

ಇಲ್ಲಿನ ರಸ್ತೆಗಳೆಲ್ಲವೂ ನದಿಗಳಾಗಿ ಹೋಗಿದೆ, ಮರಗಿಡಗಳು, ಭಾರವಾದ ವಸ್ತುಗಳು ಎಲ್ಲವೂ ಹಾಳೆಗಳಂತೆ ಗಾಳಿಗೆ ತೂರಿ ಹಾರಾಡುತ್ತೀವಿ. ವಾಸಕ್ಕೆಂದು ಕಟ್ಟಿದ ಮನೆಗಳು ಬುಡ ಸಮೇತ ಮೇಲಕ್ಕೆ ಬಂದು ಛಿದ್ರ ಛಿದ್ರವಾಗಿ ಎಲ್ಲವೂ ಧ್ವಂಸವಾಗಿದೆ. ಈ ಭೀಕರ ಪರಿಸ್ಥಿತಿಗೆ ತುತ್ತಾಗಲು ಕಾರಣವಾಗಿರೋದೇ ಇಡಾ ಚಂಡ ಮಾರುತ.

ಇಡಾ ಚಂಡಮಾರುತಕ್ಕೆ ತತ್ತರಿಸಿ ಹೋದ ಅಮೆರಿಕ
ಸುಂಟರಗಾಳಿಗೆ ನಲುಗಿ ಹೋದ ನ್ಯೂಯಾರ್ಕ್ ಸಿಟಿ

ಅಮೆರಿಕ ಎಂದ ಕೂಡಲೇ ನಮಗೆ ನೆನಪಾಗೋದು ಆಕಾಶ ಮುಟ್ಟುವ ಬಾನೆತ್ತರದ ಕಟ್ಟಡಗಳು, ಸುಸಜ್ಜಿತವಾದ ರಸ್ತೆಗಳು, ಯಾವಾಗಲೂ ಬ್ಯುಸಿಯಾಗಿ ಸುತ್ತಾಡುವ ಜನರು. ಆದರೆ ಕಳೆದ ಮೂರು ದಿನದಿಂದ ಈ ದೃಶ್ಯಗಳೆಲ್ಲವೂ ಕಣ್ಮರೆಯಾಗಿ ಹೋಗಿದೆ. ಅಷ್ಟೂ ನೀರು, ಇಷ್ಟು ದಿನ ಎಲ್ಲಿತ್ತು ಎನ್ನುವ ಪ್ರಶ್ನೆ ಕೇಳುವಂತಾಗಿದೆ. ಸಮುದ್ರದ ಮಧ್ಯೆದಿಂದ ಎದ್ದ ಈ ಚಂಡಮಾರುತ ಅಮೆರಿಕದ ಹಲವು ಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಂಪೂರ್ಣ ಜಲಾವೃತವಾಗಿ ಹೋಗಿದೆ. ಅದರಲ್ಲೂ ಕಣ್ಮನ ಸೆಳೆಯುವ ನ್ಯೂಯಾರ್ಕ್ ಸಿಟಿ ಸುಂಟರಗಾಳಿ ರಭಸಕ್ಕೆ ಅಲ್ಲೋಲ ಕಲ್ಲೋಲವಾಗಿ, ಇಲ್ಲೊಂದು ನಗರವಿತ್ತು ಎನ್ನುವ ಸುಳಿವೂ ನೀಡದಂತೆ ನೀರಿನಲ್ಲಿ ಮುಳುಗಿ ಹೋಗಿದೆ.

ಇದನ್ನೂ ಓದಿ: ಯಾರಿಗೂ ಸುಖವಲ್ಲ ತಾಲಿಬಾನ್ ಗೆಲುವು; ಭಾರತ-ಚೀನಾ-ಪಾಕ್​ ಎಲ್ಲರಿಗೂ ಇದು ಚಾಲೆಂಜ್ ಯಾಕೆ?

ನ್ಯೂಯಾರ್ಕ್​ನಲ್ಲಿ ಜನ ಎಂದೂ ಕಂಡು ಕೇಳದ ಭೀಕರ ಮಳೆಗೆ ಸಾಕ್ಷಿಯಾಗಿದ್ದಾರೆ. ಮೂರು ದಿನಗಳಾದರೂ ಬಿಡದೆ ಬೋರ್ಗರೆದು ಮಳೆ ಸುರಿಯುತ್ತಲೇ ಇದೆ. ತಮ್ಮನ್ನು ತಮ್ಮವರನ್ನು ರಕ್ಷಿಸಿಕೊಳ್ಳಲು ಅಲ್ಲಿನ ಜನ ಪರದಾಡುವಂತಾಗಿದೆ. ಎಲ್ಲಿ ಕಾಲಿಟ್ಟರಲ್ಲಿ ಮುಂಡಿ ಮುಟ್ಟುವ ನೀರು, ನಡೆದಾಡಲು ಆಗದಂತೆ ರಭಸದಿಂದ ಮುಖಕ್ಕೆ ಬಂದು ಅಪ್ಪಳಿಸುವ ಮಳೆ ಹನಿಗಳು. ಆ ಎತ್ತರದ ಕಟ್ಟಡದ ಸುತ್ತಾ ಮುತ್ತಾ ನಿಂತಿರುವ ನೀರು ನೋಡಿದರೆ.. ಇದು ನಗರವೋ ಅಥವಾ ನದಿ ಮಧ್ಯೆ ಕಟ್ಟಿರುವ ಕಟ್ಟಡವೋ ಅನ್ನೋ ಹಾಗಿದೆ.

ರಸ್ತೆಗಳಲ್ಲಿ ತುಂಬುತ್ತಿರುವ ನೀರು ಮನೆಗೆ ಬರಬಹುದು ಎನ್ನುವ ಯೋಚನೆಯಲ್ಲಿ ಬಾಗಿಲನ್ನು ಲಾಕ್ ಮಾಡಿದ್ದರೂ ಸಹ, ಬಾಗಿಲನ್ನೇ ಮುರಿದು ಮನೆಯ ಅಂಗಳಕ್ಕೆ ಎಂಟ್ರಿ ಕೊಡ್ತಾ ಇದ್ದಾನೆ ವರುಣ. ಅವನ ಆಗಮನದಿಂದ ಮನೆಯ ಸಾಮಗ್ರಿಗಳೆಲ್ಲ, ನೆಲ ಬಿಟ್ಟು ತೇಲಾಡಲು ಶುರು ಮಾಡಿದೆ. ಇನ್ನು ಭೀಕರ ಮಳೆಯಲ್ಲೂ ಓಡಾಡುತ್ತಿರುವ ಟ್ರೈನ್ ಗಳು ನಿಂತ ನೀರನ್ನು ಲೆಕ್ಕಿಸದೇ ಫ್ಲಾಟ್ ಫಾರ್ಮ್ ಗಳನ್ನು ಸೇರ್ತಾ ಇವೆ. ಇನ್ನು ಮೆಟ್ರೋ ಸ್ಟೇಷನ್ ಗಳಲ್ಲಿ ಜಲಪಾತದಂತೆ ಭೂಮಿಗೆ ಇಳಿಯುತ್ತಿದೆ.

ರೈಲ್ವೆ ನಿಲ್ದಾಣದ ಬಾಗಿಲಲ್ಲಿ ನೀರಿ ಉಕ್ಕಿ ಹರಿದು ಬರ್ತಾ ಇದ್ರೆ ನೋಡಲು ಮೈ ಜುಮ್ ಎನ್ನುತ್ತದೆ. ಕಳೆದ ತಿಂಗಳು ಚೀನಾದಲ್ಲಿ ಅಪ್ಪಳಿಸಿದ ಪ್ರವಾಹ ನೆನಪಿರಬಹುದು, ಅಲ್ಲಿಯೂ ಸಹ ಮೆಟ್ರೋ ರೈಲಿನಲ್ಲಿ ಜನ ಏನೂ ಮಾಡಲು ತೋಚದೆ ನೀರಿನ ಮಧ್ಯೆ ನಿಂತು ಕಾಲಕಳೆದಿದ್ದರು. ಈಗ ಅದಕ್ಕಿಂತ ಭೀಕರ ಪರಿಸ್ಥಿತಿ ಅಮೆರಿಕಕ್ಕೆ ಬಂದು ತಟ್ಟಿದೆ. ಮಳೆರಾಯನನ್ನು ನಿಯಂತ್ರಿಸಲು ಸಾಧ್ಯವಾಗದೆ, ಅದರಿಂದ ಆಗಿರುವ ಅನಾಹುತವನ್ನು ಸರಿ ಪಡಿಸಲು ರಕ್ಷಣಾ ತಂಡ ಶ್ರಮಿಸುತ್ತಿದ್ದಾರೆ.

ಅಮೆರಿಕ ಪಾಲಿಗೆ ಬಂದೊದಗಿರೋದು ಕೇವಲ ಮಳೆಯಲ್ಲ, ಅಲ್ಲಿ ಬಿರುಗಾಳಿ, ಸುಂಟರಗಾಳಿಯ ಆರ್ಭಟವೂ ಹೆಚ್ಚಾಗಿದೆ. ಒಬ್ಬ ಸಾಮಾನ್ಯ ಮನುಷ್ಯನೇ ಆಗಿರಬಹುದು, ಆದರೆ ಅವನು ತನ್ನ ಕಾಲಿಗೆ ಬಲ ನೀಡಿ ನಿಲ್ಲದೆ ಇದ್ದರೆ, ಅವನು ಸಹ ಗಾಳಿಯ ಜೊತೆಗೆ ಹಾರಿ ಬಿಡಬಹುದು ಎನ್ನುವ ಹಾಗಿದೆ ಅಲ್ಲಿನ ಸುಂಟರಗಾಳಿ. ಇನ್ನು ಮನೆಯ ರೂಫ್​ಗಳನ್ನು ಗಾಳಿ ತಾನಾಗೆಯೇ ಹೊತ್ತು ಅಲ್ಲಿಂದ ಬೇರೆಡೆಗೆ ತಲುಪಿಸುತ್ತಿದೆ. ಇನ್ನು ಬೀದಿ ಬದಿಯ ಲೈಟ್ ಕಂಬಗಳು ಮುರಿದು, ಎಲ್ಲಂದರಲ್ಲಿ ಬೀಳುತ್ತಿದೆ. ಇಷ್ಟೆಲ್ಲಾ ನಲುಗಿ ಹೋಗುತ್ತಿರುವಾಗ, ಅಲ್ಲಿನ ಮರಗಳು ಸುಮ್ಮನೆ ನಿಲ್ಲಲು ಸಾಧ್ಯಾನಾ ? ಮರಗಳು ಬುಡಸಮೇತ ಎದ್ದು, ಆಕಾಶಕ್ಕೆ ಬೇರನ್ನು ಹೊಕ್ಕಿಸುತ್ತಿದೆ. ಕಣ್ಣೆದುರಲ್ಲೇ ಮುಳುಗುತ್ತಿರುವ ಮನೆ, ಕಾರುಗಳು.. ರಸ್ತೆ ಮಧ್ಯೆದಲ್ಲಿ ಜೀವಕ್ಕಾಗಿ ಮೀನುಗಳ ಪರದಾಟ ಎಲ್ಲವನ್ನು ಕಣ್ಣಾರೆ ಕಂಡು ಏನು ಮಾಡಲೂ ಅಸಹಾಯಕರಾಗಿದ್ದಾರೆ ಅಮೆರಿಕನ್ನರು.

ಇಡಾ ತೀವ್ರತೆ ಹಿನ್ನಲೆ ಅಮೆರಿಕದಲ್ಲಿ ಹೈ ಅಲರ್ಟ್
ಹಲವು ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಜುಲೈ ತಿಂಗಳಲ್ಲಿ ಅಮೆರಿಕ ಕಾಡ್ಗಿಚ್ಚಿಗೆ ತುತ್ತಾಗಿತ್ತು. ಈ ಕಾರಣದಿಂದಾಗಿ, ಹವಮಾನದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು. ಅದರಂತೆ ಅಮೆರಿಕಗೆ ಇಡಾ ಒಕ್ಕರಿಸಿ ಬಿಟ್ಟಿದೆ. ಈಗಾಗಲೇ ನಲುಗಿ ಹೋಗಿರುವ ದೇಶಕ್ಕೆ ಇನ್ನು ಹೆಚ್ಚು ಆತಂಕ ಎದುರಾಗಲಿದೆ ಎಂದು ತಜ್ಞರು ತಿಳಿಸುತ್ತಿದ್ದಾರೆ. ಇದರಿಂದ ಅಮೆರಿಕ ಹವಮಾನ ಬಿಕ್ಕಟ್ಟು ಎಂದು ತೀರ್ಮಾನಿಸಿ ಹೈ ಅಲರ್ಟ್ ಘೋಷಿಸಿದ್ದಾರೆ. ಇನ್ನು ಈಗಾಗಲೇ ಚಂಡಮಾರುತನ ಆರ್ಭಟಕ್ಕೆ ನೀರಿನಲ್ಲಿ ಮುಳುಗಿ ಹೋಗಿರುವ ನ್ಯೂಯಾರ್ಕ್, ನ್ಯೂ ಜರ್ಸಿ ಹಾಗೂ ಪ್ಯಾನ್ಸಲ್ವೇನಿಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಎಲ್ಲಿಂದ ಶುರುವಾಯ್ತು ಇಡಾ ಆರ್ಭಟ ?
ತ್ರೀವತೆಯನ್ನು ಹೊತ್ತು ಮುನ್ನುಗಿತ್ತಿರುವ ಇಡಾ

ಇದನ್ನೂ ಓದಿ: ಕೇವಲ 40 ವರ್ಷಕ್ಕೆ ಬಿಟ್ಟು ಹೋದರು.. ಹುಡುಗಿಯರ ಹೃದಯದಲ್ಲಿದ್ದ ರಾಜಕುಮಾರ ಸಿದ್ಧಾರ್ಥ್​​ ಬದುಕಿನ ಜರ್ನಿ

ಸಹಜವಾಗಿ ಬಿಸಿ ಗಾಳಿಯ ಏರುಪೇರು ಉಂಟಾದಾಗ ಸಮುದ್ರ ಮಟ್ಟದಲ್ಲಿ ಆವಿಗಳು ಹೆಚ್ಚಾಗುತ್ತದೆ, ಈ ಆವಿಗಳು ಬಿರುಗಾಳಿಯ ಜೊತೆ ಸೇರಿ ಸಮುದ್ರದಲ್ಲಿ ಸುಳಿಗಳು ನಿರ್ಮಿಸಿಕೊಳ್ಳುತ್ತವೆ. ಇದೆ ಚಂಡಮಾರುತ ಏಳುವ ಮೊದಲ ಹಂತ.. ಈ ಸುಳಿಗಳು ಕೆಲವೊಮ್ಮೆ ಗಾಳಿಯ ತೀವ್ರತೆ ಸಿಗದಿದ್ದರೆ ಮಾಯವಾಗುವುದೂ ಉಂಟು. ಆದರೆ ಕೆಲವು ಬಾರಿ ಆ ಸುಳಿ ವೇಗದಿಂದ ಭೂಕುಸಿತಗಳು ಉಂಟಾಗಿ ಭೀಕರವಾಗಿರುವ ಚಂಡಮಾರುತಗಳು ಏಳಲು ಪ್ರಾರಂಭವಾಗುತ್ತದೆ.. ಇದು 4ನೇ ಹಂತ. ಕಳೆದ ಭಾನುವಾರ ಮೆಕ್ಸಿಕೋ ಬಳಿಯ ಗಲ್ಫ್​ನಲ್ಲಿ ಮೊದಲ ಹಂತದ ಚಂಡಮಾರುತದ ಸುಳಿವು ಕಾಣಿಸಿತ್ತು. ಆದರೆ ಅದರ ತೀವ್ರತೆ ಹೇಗಿತ್ತು ಎಂದರೆ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಬಿರುಗಾಳಿ, ಮರುದಿನದ ಹೊತ್ತಿಗಾಗಲೇ ಗಂಟೆಗೆ 300 ಕಿಲೋ ಮೀಟರ್ ವೇಗಕ್ಕೆ ಬದಲಾಗಿತ್ತು. ಇದನ್ನು ಕಂಡ ಅಮೆರಿಕದ ರಾಷ್ಟ್ರೀಯ ಚಂಡಮಾರುತ ಕೇಂದ್ರವು ದೇಶಕ್ಕೆ ಇಡಾ ಅಪ್ಪಳಿಸುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಆದರೆ ಪ್ರಕೃತಿಯ ಆಟವನ್ನು ನೋಡುವುದನ್ನು ಬಿಟ್ಟರೆ ಅಮೆರಿಕ ಪಾಲಿಗೆ ಬೇರೇನೂ ಉಳಿದಿರಲಿಲ್ಲ.

ಇದನ್ನೂ ಓದಿ: ಜೂ. ಚಿರು ಇನ್ಮೇಲೆ ರಾಯನ್ ರಾಜ್​ ಸರ್ಜಾ.. ಹೇಗಿತ್ತು ಗೊತ್ತಾ ನಾಮಕರಣದ ಸಂಭ್ರಮ..?

ದುಬಾರಿ ಚಂಡಮಾರುತದ ಪಟ್ಟಿಯಲ್ಲಿ ಇಡಾಗೆ 5ನೇ ಸ್ಥಾನ
50 ಬಿಲಿಯನ್ ಡಾಲರ್​ಗಳಷ್ಟು ಹಾನಿ ಸಂಭವ

ಹೀಗೆ ಬಂದು ಹಾಗೆ ಹೋಗಿಬಿಡುವ ಚಂಡಮಾರುತಗಳಿಂದ ಹಾನಿ ಆಗೋದು ಸಹಜ. ಅದನ್ನು ಪಟ್ಟಿ ಮಾಡಿದರೆ ಅಮೆರಿಕಗೆ ಅಪ್ಪಳಿಸಿ ಅದೆಷ್ಟೋ ಹಾನಿ ಮಾಡಿದ ಚಂಡಮಾರುತದಲ್ಲಿ ಇಡಾ 5ನೇ ಸ್ಥಾನವನ್ನು ಪಡೆದಿದೆ. ಮೂರುದಿನಗಳಲ್ಲಿ ಇದೆ ಇಡಾ ಸಾಕಷ್ಟು ಹಾನಿ ಮಾಡಿರುವುದು ನಾವು ಈಗಾಗಲೇ ನೋಡಿದ್ದೆವೆ. ಇನ್ನು ಮೂರು ದಿನವಾದ್ರೂ ಈ ಮಳೆ ಮುಂದುವರೆಯ ಬಹುದು ಎನ್ನುತ್ತಿದ್ದಾರೆ ಹವಮಾನ ತಜ್ಞರು. ಇಷ್ಟು ದಿನದಲ್ಲಿ ಇಡಾದಿಂದ ಆಗಿರುವ ಹಾನಿ ಬರೋಬರಿ 50ಬಿಲಿಯನ್ ಡಾಲರ್ ಗಳಷ್ಟು. ಆದ್ದರಿಂದ ದುಬಾರಿ ಚಂಡಮಾರುತ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೂ ಮುಂಚೆ ಅಪ್ಪಳಿಸಿದ ಚಂಡಮಾರುತಗಳನ್ನು ನೋಡೋದಾದ್ರೆ..

ಅಮೆರಿಕ ಕಂಡ ದುಬಾರಿ ಚಂಡಮಾರುತಗಳು

  • ಚಂಡಮಾರುತ: ಕಟ್ರೀನಾ -2005-125ಬಿಲಿಯನ್
  • ಚಂಡಮಾರುತ: ಹಾರ್ವೇ-2017-125ಬಿಲಿಯನ್
  • ಚಂಡಮಾರುತ: ಮರಿಯಾ-2017-90 ಬಿಲಿಯನ್
  • ಚಂಡಮಾರುತ: ಸ್ಯಾಂಡಿ -2012-65ಬಿಲಿಯನ್
  • ಚಂಡಮಾರುತ: ಇಡಾ-2021-50ಬಿಲಿಯನ್

ಅಮೆರಿಕ ಕಂಡ ದುಬಾರಿ ಚಂಡಮಾರುತಗಳಲ್ಲಿ 2005ರಲ್ಲಿ ಅಪ್ಪಳಿಸಿದ ಕಟ್ರೀನಾ ಹಾಗೂ 2017 ರಲ್ಲಿ ಅಪ್ಪಳಿಸಿದ ಹಾರ್ವೆ 125 ಬಿಲಿಯನ್ ಡಾಲರ್ ಹಾನಿ ಮಾಡಿ ಮೊದಲ ಸ್ಥಾನದಲ್ಲಿದೆ. ಇದಾದ ಬಳಿಕ 2017ರ ಮರಿಯಾ ಚಂಡಮಾರುತ 90 ಬಿಲಿಯನ್ ಡಾಲರ್ ನಷ್ಟು ಹಾನಿ ಉಂಟು ಮಾಡಿದೆ. 2012ರಲ್ಲಿ ಅಪ್ಪಳಿಸಿದ ಸ್ಯಾಂಡಿ 65 ಬಿಲಿಯನ್ ನಷ್ಟ ಮಾಡಿದರೆ, 5 ನೇ ಸ್ಥಾನದಲ್ಲಿ ಇಡಾ ಈಗ 50 ಬಿಲಿಯನ್ ಡಾಲರ್ ಗಳ ನಷ್ಟವನ್ನು ಲೆಕ್ಕ ಕೊಡುತ್ತಿದೆ.

ಹೀಗೆ ತನ್ನ ಭೀಕರತೆಯನ್ನು ಕಡಿಮೆಗೊಳಿಸದೆ, ಒಂದೇ ಸಮನೆ ಜಲಪ್ರಳಯವನ್ನು ಬೀರುತ್ತಿರುವ ಇಡಾ ಚಂಡಮಾರುತ ಇನ್ನಷ್ಟು ನಷ್ಟ ತಂಡೊಡ್ಡುವ ಸಂಭವ ಹೆಚ್ಚಿದೆ. ನ್ಯಾಯಾರ್ಕ್​ನ ಮೇಯರ್ ಬಿಲ್ ಡಿ ಬ್ಲಾಸಿಯೊ ಅವರು ಇದು ಕ್ರೂರ ಪ್ರವಾಹ ಮತ್ತು ಅಪಾಯಕಾರಿಯಾಗಿದೆ, ಜನ ಎಚ್ಚರಿಕೆಯಿಂದ ಇರಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ.

ಇಡಾ ಚಂಡಮಾರುತಕ್ಕೆ ಬಲಿಯಾದ 46 ಅಮೆರಿಕನ್ನರು
ಕಾಣಿಯಾದ ಹಲವರಿಗಾಗಿ ರಕ್ಷಣಾ ಪಡೆ ತೀವ್ರ ಶೋಧ

ಚಂಡಮಾರುತದಿಂದ ಲೂಸಿಯಾನ, ನ್ಯೂಜೆರ್ಸಿ, ನ್ಯೂಯಾರ್ಕ್ ಮೊದಲಾದ ರಾಜ್ಯಗಳು ಜಲಾವೃತವಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಹಳಷ್ಟು ಕಡೆ ಪ್ರವಾಹಗಳು ಕಾಣಿಸುತ್ತಿದೆ. ಅಷ್ಟೆ ಅಲ್ಲದೆ ಪ್ರವಾಹದ ಮಧ್ಯೆ ನೀರು ಪಾಲಾಗಿ ಈಗಾಗಲೆ 46 ಮೃತ ದೇಹಗಳು ರಕ್ಷಣಾ ಪಡೆಗೆ ಸಿಕ್ಕಿದೆ. ಇನ್ನು ಅದೆಷ್ಟೋ ಜನ ಮಿಸ್ಸಿಂಗ್ ಎನ್ನುವ ಮಾಹಿತಿ ಹಿಡಿದು ಅವರನ್ನು ನೀರಿನಲ್ಲೆ ಹುಡುಕುವ ಶೋಧ ಕಾರ್ಯದಲ್ಲಿ ರಕ್ಷಣಪಡೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಂಡಮಾರುತದ ನಡುವೆ ಕೊರೊನಾ ಸಂಕಷ್ಟ
ಇಷ್ಟೆಲ್ಲಾ ದುರಂತಗಳ ನಡುವೆ ಅಮೆರಿಕದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲು ಏರುಗತಿ ಕಾಣಿಸುತ್ತಿದೆ. ದಿನ ಒಂದಕ್ಕೆ 1 ಲಕ್ಷ ಹೊಸ ಕೇಸ್​ಗಳು ವರದಿ ಆಗ್ತಾ ಇದೆ. ಇನ್ನು ನ್ಯೂ ಯಾರ್ಕ್ ನಲ್ಲಿಯೂ ಸಹ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ, ಆದರೆ ಮಳೆ ಏಕಾಏಕಿ ಆಸ್ಪತ್ರೆಗಳಿಗೆ ನುಗ್ಗಿರುವುದರಿಂದ ಸೋಂಕಿತರ ಪರಿಸ್ಥಿತಿಯೂ ಚಂಡಮಾರುತದಿಂದ ನೆಲೆ ಇಲ್ಲದಂತಾಗಿದೆ. ಒಬ್ಬ ಸೋಂಕಿತ ಆಕ್ಸಿಜನ್ ಸಿಲಿಂಡರ್ ಹಿಡಿದು ನೀರಿನಲ್ಲಿ ತೇಲುತ್ತ ಹೋಗುತ್ತಿರುವ ದೃಶ್ಯ ನಿಜಕ್ಕೂ ಅಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎತ್ತಿ ಹಿಡಿಯುವಂತಿದೆ.

blank

ಒಟ್ಟಿನಲ್ಲಿ ಮಹಾ ಪ್ರಳಯ, ಭೀಕರ ಚಂಡಮಾರುತ, ರಾಕ್ಷಸ ಬಿರುಗಾಳಿಯ ಕೈಗೆ ಅಮೆರಿಕ ಸಿಕ್ಕಿ ಇಂದು ಸಂಪೂರ್ಣನೆಂದು ಹೋಗಿದೆ. ಹೀಗೆ ಮುಂದುವರೆದರೆ ಅಮೆರಿಕ ಎನ್ನುವ ರಾಷ್ಟ್ರವೇ ಇಲ್ಲದಂತಾಗಿ ಬಿಡುತ್ತದೆ. ಅಲ್ಲಿ ಚಂಡಮಾರುತ ಇನ್ನು ತಣ್ಣಗಾಗಿಲ್ಲ, ಆದರೆ ಅದರ ತೀವ್ರತೆ ಕಡಿಮೆ ಆದ ಕ್ಷಣದಿಂದ, ಅಮೆರಿಕ ಬೆನ್ನಿಗೆ ಸಾಕಷ್ಟು ಜವಾಬ್ದಾರಿಗಳಿದೆ. ಈ ನಷ್ಟವನ್ನೇ ಭರಿಸಲು ಅಮೆರಿಕ ಪಣ ತೊಡಬೇಕಿದೆ.

ಇದೇನೋ ಪ್ರಕೃತಿಯ ಕೋಪದ ಕೆಂಗಣ್ಣೋ, ಅಥವ ಮತ್ತೊಂದೋ ಗೊತ್ತಿಲ್ಲ. ಆದರೆ ದೊಡ್ಡಣ್ಣನಿಗೆ ಈ ದೊಡ್ಡ ಪ್ರಳಯ ಸಾಕಷ್ಟು ನಷ್ಟ ತಂದಾಗಿದೆ. ಒಂದಾದ ಮೇಲೊಂದರಂತೆ ಸಂಕಷ್ಟಗಳನ್ನ ಎದುರಿಸುತ್ತಿರುವ ದೊಡ್ಡಣ್ಣ ಅಮೇರಿಕಾ ಈಗ ಏಕಾಏಕಿ ಎದ್ದಿರುವ ಚಂಡಮಾರುತಕ್ಕೆ ನಲುಗಿದೆ. ಆದಷ್ಟು ಬೇಗಾ ಎಲ್ಲವು ಶಾಂತವಾಗಿ, ಅಮೆರಿಕ ಮತ್ತೆ ಅದರ ಹಿಂದಿನ ದಿನಗಳಿಗೆ ಮರುಳಲಿ ಅನ್ನೋದೆ ಎಲ್ಲರ ಆಶಯ.

Source: newsfirstlive.com Source link