‘ದೇಶ ತೊರೆಯಲ್ಲ, ಶರಣಾಗಲ್ಲ, ಹೋರಾಟ ನಿಲ್ಲಲ್ಲ’.. ತಾಲಿಬಾನ್ ತಂತ್ರಕ್ಕೆ ಡೋಂಟ್​​ಕೇರ್​​​ ಎಂದ ಸಲೇಹ್​​

‘ದೇಶ ತೊರೆಯಲ್ಲ, ಶರಣಾಗಲ್ಲ, ಹೋರಾಟ ನಿಲ್ಲಲ್ಲ’.. ತಾಲಿಬಾನ್ ತಂತ್ರಕ್ಕೆ ಡೋಂಟ್​​ಕೇರ್​​​ ಎಂದ ಸಲೇಹ್​​

ತಾಲಿಬಾನ್​​​​​ಗೆ ಪಂಜ್​​ಶೀರ್​​ ಸಿಂಹಸ್ವಪ್ನವಾಗಿ ಕಾಡುತ್ತಿದೆ. ರಣೋತ್ಸಾಹದಲ್ಲಿರುವ ಪಂಜ್​ಶೀರ್​​ ಶೇರ್​​​​ಗಳ ಮಾರಕ ದಾಳಿಗೆ ತಾಲಿಬಾನ್​​​​ ಪತರುಗುಟ್ಟುತ್ತಿದೆ. ಹೀಗಾಗಿ ಪಂಜ್​​ಶೀರ್​​​​​​ ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ತಾಲಿಬಾನ್ ಕೈಹಾಕಿದೆ. ಆದ್ರೆ ಎಂತಹ ಪರಿಸ್ಥಿತಿ ಬಂದರೂ ಶರಣಾಗುವ ಮಾತೇ ಇಲ್ಲ ಅಂತಿರುವ ಪಂಜ್​ಶೀರ್​​​​ ಪಡೆ ತಾಲಿಬಾನ್​​​ಗೆ ಯುದ್ಧಾಹ್ವಾನ ಕೊಟ್ಟಿದೆ.

ಪಂಜ್​​ಶೀರ್​​​ ಮಿತ್ರ ಪಡೆಯ ಆತ್ಮಸ್ಥೈರ್ಯ ಕುಗ್ಗಿಸಲು ತಾಲಿಬಾನ್​​ ತಂತ್ರ
ಹೆದರಲ್ಲ, ಶರಣಾಗಲ್ಲ, ಹೋರಾಟ ನಿಲ್ಲಲ್ಲ ಎಂದ ಅಮರುಲ್ಲಾ ಸಲೇಹ್

ಪಂಜ್​​ಶೀರ್​ ಪ್ರಾಂತ್ಯ ಸುತ್ತುವರೆದಿರುವ ತಾಲಿಬಾನ್​​​ಗೆ ಪಂಜ್​​ಶೀರ್​ ಶೇರ್​​ಗಳು ತಲೆಬಾಗುತ್ತಿಲ್ಲ. ಶಾಂತಿಯ ಮಾತುಕತೆಗೂ ಒಪ್ಪುತ್ತಿಲ್ಲ. ಪಂಜ್​​ಶೀರ್​ ವಶಕ್ಕೆ ಹೋದ ತಾಲಿಬಾನ್​​​ಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ಕೊಟ್ಟಿರುವ ಪಂಜ್​​ಶೀರ್ ಉತ್ತರ ಮಿತ್ರ ಪಡೆ ರಣೋತ್ಸಾಹದಲ್ಲಿದೆ. ಹೀಗಾಗಿ ಪಂಜ್​​ಶೀರ್​ ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ತಂತ್ರಕ್ಕೆ ತಾಲಿಬಾನ್​ ಕೈಹಾಕಿದೆ.

ಇದನ್ನೂ ಓದಿ: ‘ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತಲಿದ್ದೇವೆ’ ಎಂದು ಭಾರತವನ್ನೇ ಕೆಣಕಿದ ತಾಲಿಬಾನ್​​…

ಪಂಜ್​​​ಶೀರ್​​​​​ ಪ್ರಾಂತ್ಯದ ದೂರವಾಣಿ, ಇಂಟರ್​​​ನೆಟ್, ವಿದ್ಯುತ್ ಮತ್ತು ಔಷಧಿಗೆ ತಡೆಯೊಡ್ಡಿರುವ ತಾಲಿಬಾನ್​​​​​, ಸಾಮಾಜಿಕ ಜಾಲತಾಣಕ್ಕೆ ತಡೆಯೊಡ್ಡಿ ಹೋರಾಟಗಾರರನ್ನು ಕಟ್ಟಿಹಾಕುವ ತಂತ್ರಕ್ಕೆ ಮುಂದಾಗಿದೆ. ಅಲ್ಲದೆ ಪಂಜ್​​ಶೀರ್​ಗೆ ಹೊರಜಗತ್ತಿನ ಸಂಪರ್ಕ ಸಿಗದಂತೆ ಮಾಡಿದೆ. ಅಲ್ಲದೆ ಆಫ್ಘಾನ್​​​​ನ ಸ್ವಯಂಘೋಷಿತ ಅಧ್ಯಕ್ಷ ಅಮರುಲ್ಲಾ ಸಲೇಹ್, ಪಂಜ್​​​ಶೀರ್​​​ ಕಮಾಂಡರ್​​ಗಳ ಜೊತೆ ಪಲಾಯನ ಮಾಡಿದ್ದಾರೆ ಅಂತ ತಾಲಿಬಾನ್ ಹೇಳಿದೆ. ಸೆಪ್ಟೆಂಬರ್ 2 ರಾತ್ರಿ ಸಲೇಹ್ ಆಫ್ಘಾನಿಸ್ತಾನ ತೊರೆದಿದ್ದಾರೆ. ತಜಕಿಸ್ತಾನಕ್ಕೆ ಸಲೇಹ್​​​​​ ಅಂಡ್ ಟೀಮ್ ಪರಾರಿಯಾಗಿದೆ ಎಂದಿರುವ ತಾಲಿಬಾನ್​​​, ಪಂಜ್​​ಶೀರ್​ ಪ್ರತಿರೋಧ ಪಡೆ ತಾಲಿಬಾನ್​​ಗೆ ಶರಣಾಗಿದೆ ಅಂತ ಹೇಳಿದೆ. ಹೀಗೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಪಂಜ್​​ಶೀರ್​​​​ ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ತಂತ್ರಕ್ಕೆ ತಾಲಿಬಾನ್ ಮುಂದಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ ಕರಾಳ ಮುಖ! ಸೆಕ್ಸ್​ ವರ್ಕರ್​ ಹತ್ಯೆಗೆ ಪಟ್ಟಿ ರೆಡಿ, ಅಡಲ್ಟ್​ ಸೈಟ್​ ಟಾರ್ಗೆಟ್​​ಗೆ ಸ್ಕೆಚ್​..?

ಪಂಜ್​​ಶೀರ್​ ಶರಣಾಗಿದೆ ಹಾಗೂ ಆಫ್ಘಾನ್​​​​ನ ಸ್ವಯಂಘೋಷಿತ ಅಧ್ಯಕ್ಷ ಅಮರುಲ್ಲಾ ಸಲೇಹ್ ದೇಶ ತೊರೆದಿದ್ದಾರೆ ಅಂತ ಅಂತ ಹೇಳ್ತಿರುವ ತಾಲಿಬಾನ್​​​ಗೆ ಸಲೇಹ್, ವಿಡಿಯೋ ಹರಿಬಿಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ನಾನು ದೇಶ ತೊರೆದಿಲ್ಲ, ತೊರೆಯುವುದು ಇಲ್ಲ. ಶರಣಾಗುವ ಮಾತಂತೂ ಇಲ್ಲವೇ ಇಲ್ಲ, ಹೋರಾಟ ಮುಂದುವರೆಯುತ್ತೆ ಅಂತ ಸಲೇಹ್ ಘೋಷಿಸಿದ್ದಾರೆ.

ನಾನು ಅಫ್ಘಾನಿಸ್ತಾನದಿಂದ ಪಲಾಯನಗೈದಿದ್ದೇನೆ ಎಂಬ ವರದಿಗಳು ಸತ್ಯಕ್ಕೆ ದೂರವಾದುದು. ನಾನು ಪಂಜ್​​ಶೀರ್​ ವ್ಯಾಲಿಯಲ್ಲೇ ಇದ್ದು, ಅಲ್ಲಿಂದಲೇ ಮಾತನಾಡುತ್ತಿದ್ದೇನೆ. ನಮ್ಮ ಕಮಾಂಡರ್​​ಗಳು ಹಾಗೂ ರಾಜಕೀಯ ನಾಯಕರ ಜೊತೆ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದೇನೆ. ಪಾಕಿಸ್ತಾನ ಸೇರಿದಂತೆ ಅಲ್​​-ಖೈದಾ ಹಾಗೂ ಇತರ ಉಗ್ರ ಸಂಘಟನೆಗಳು ತಾಲಿಬಾನ್​​​​​​​ಗೆ ಕೈಜೋಡಿಸಿವೆ. ತಾಲಿಬಾನ್​​​ಗೆ ಪ್ರತಿರೋಧ ಒಡ್ಡುವಾಗ ಎರಡೂ ಕಡೆಯಲ್ಲೂ ಸಾವು-ನೋವು ಸಂಭವಿಸಿರುವುದು ನಿಜ. ನಾವು ಎಸ್ಕೇಪ್ ಆಗುವುದಿಲ್ಲ, ಶರಣಾಗುವುದೂ ಇಲ್ಲ. ಅಫ್ಘಾನಿಸ್ತಾನಕ್ಕಾಗಿ ನಾವು ಹೋರಾಡುತ್ತೇವೆ. ನಮ್ಮ ಹೋರಾಟ ಮುಂದುವರೆಯುತ್ತದೆ. – ಅಮರುಲ್ಲಾ ಸಲೇಹ್, ಆಫ್ಘಾನಿಸ್ತಾನ ಸ್ವಯಂಘೋಷಿತ ಅಧ್ಯಕ್ಷ

ವಿಡಿಯೋ ಜೊತೆಗೆ ಸರಣಿ ಟ್ವೀಟ್ ಮಾಡಿರುವ ಅಮರುಲ್ಲಾ ಸಲೇಹ್, ತಾಲಿಬಾನ್‌ ವಿರುದ್ಧ ಕಿಡಿಕಾರಿದ್ದು, ಉಗ್ರರ ಭಯೋತ್ಪಾದಕ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ವಿಶ್ವಸಂಸ್ಥೆ ಹಾಗೂ ವಿಶ್ವದ ನಾಯಕರಿಗೆ ಕರೆ ನೀಡಿದ್ದಾರೆ.

ಕಳೆದ 23 ವರ್ಷದಲ್ಲಿ ಆಫ್ಘಾನ್‌ನಲ್ಲಿ ತುರ್ತು ಆಸ್ಪತ್ರೆ ಆರಂಭವಾದ ಬಳಿಕ ಇದುವರೆಗೂ ತಾಲಿಬಾನ್‌ಗೆ ಅಫ್ಘಾನ್ ಸರ್ಕಾರ ಪ್ರವೇಶ ನಿರಾಕರಿಸಿಲ್ಲ. ಆದರೆ ತಾಲಿಬಾನ್‌ಗಳು ಪಂಜ್​​ಶೀರ್​​ ಪ್ರಾಂತ್ಯಕ್ಕೆ ದೂರವಾಣಿ, ಇಂಟರ್​​​ನೆಟ್, ವಿದ್ಯುತ್ ಮತ್ತು ಔಷಧಿಗಳನ್ನು ತಡೆಹಿಡಿದಿದ್ದಾರೆ. ಯುದ್ಧಕ್ಕೆ ಸನ್ನದ್ದರಾಗಿದ್ದಾರೆ ಹಾಗೂ ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಗೌರವ ನೀಡುತ್ತಿಲ್ಲ. ತಾಲಿಬಾನ್‌ಗಳ ಈ ಕ್ರಿಮಿನಲ್ ಹಾಗೂ ಭಯೋತ್ಪಾದಕ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ವಿಶ್ವಸಂಸ್ಥೆ ಹಾಗೂ ವಿಶ್ವದ ನಾಯಕರಿಗೆ ಕರೆ ನೀಡುತ್ತೇನೆ.- ಅಮರುಲ್ಲಾ ಸಲೇಹ್, ಆಫ್ಘಾನಿಸ್ತಾನ ಸ್ವಯಂಘೋಷಿತ ಅಧ್ಯಕ್ಷ

ಇನ್ನು ಪಂಜ್​ಶೀರ್ ವಶಕ್ಕೆ ಮುಂದಾಗಿರುವ ತಾಲಿಬಾನ್​​ಗೆ ಅಲ್​​-ಖೈದಾ ಹಾಗೂ ಇತರ ಉಗ್ರ ಸಂಘಟನೆಗಳು ಕೈಜೋಡಿಸಿವೆ. ಇತ್ತ ಅಫ್ಘಾನ್ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯ್, ತಾಲಿಬಾನ್ ಹಾಗೂ ಪಂಜ್​​ಶೀರ್ ಶಾಂತಿ ಮಾತುಕತೆ ಮೂಲಕ ಸಂಘರ್ಷ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ತಾಲಿಬಾನ್ ಕೂಡ ಶಾಂತಿ ಮಾತುಕತೆಯ ಮಾತಾಡ್ತಿದೆ. ಆದ್ರೆ ಪಂಜ್​​ಶೀರ್ ಮಾತ್ರ ಇದಕ್ಕೆ ರೆಡಿ ಇಲ್ಲ.

ಒಟ್ನಲ್ಲಿ ಅಫ್ಘಾನ್​​ಗಾಗಿ ಹೋರಾಡಿಯೇ ತೀರುತ್ತೇವೆಯೇ ಹೊರತು ತಾಲಿಬಾನ್​​ಗೆ ಶರಣಾಗಲ್ಲ ಅಂತಿರುವ ಪಂಜ್​ಶೀರ್​​ ಉತ್ತರ ಮಿತ್ರ ಪಡೆ, ಹೋರಾಟ ಮುಂದುವರೆಯುತ್ತೆ ಅಂತ ಘೋಷಿಸಿಬಿಟ್ಟಿದೆ. ಆದ್ರೆ ಇತ್ತ ಸರ್ಕಾರ ರಚನೆಗೂ ಮುನ್ನ ಪಂಜ್​ಶೀರ್ ವಶಕ್ಕೆ ಪಡೆಯಲೇಬೇಕು ಅಂತ ಹಾತೊರೆಯುತ್ತಿರುವ ತಾಲಿಬಾನ್​​ಗೆ ಇದು ದೊಡ್ಡ ಸವಾಲಾಗಿರೋದಂತೂ ಸುಳ್ಳಲ್ಲ.

Source: newsfirstlive.com Source link