ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

ಗದಗ: ಕೆಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ ಚಾಲಕ/ನಿರ್ವಾಹಕರಿಗೆ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್‌ನನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

ರೋಣ ಬಸ್ ಡಿಪೋ ಮ್ಯಾನೇಜರ್ ಬಿ.ಎಂ. ಗೆನ್ನೂರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಯಾಗಿದ್ದಾರೆ. ಸಂಸ್ಥೆಯ ನಿರ್ವಾಹಕರೊಬ್ಬರು, ತಾಯಿಗೆ ಹುಷಾರಿಲ್ಲದ ಕಾರಣ ರಜೆ ಕೇಳಿದ್ದರು. 20 ದಿನ ರಜೆ ಮಂಜೂರು ಮಾಡಲು 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಹಣ ಕೊಡುವಾಗ ದಾಳಿ ನಡೆಸಿದ ಅಧಿಕಾರಿಗಳು, ಡಿಪೋ ಮ್ಯಾನೇಜರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕರ ಹುಟ್ಟುಹಬ್ಬ – ಹೂಮಳೆಗೆರೆದು ಸಂಭ್ರಮಿಸಿದ ಪೊಲೀಸರು

ಯಾವುದೇ ಸಿಬ್ಬಂದಿ ರಜೆ ಕೇಳಿದ್ರೆ ಈ ಡಿಪೋ ಮ್ಯಾನೇಜರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೆಳಿಬಂದಿದೆ. ಎಸಿಬಿ ಡಿವೈಎಸ್‌ಪಿ ಎಂ.ವಿ. ಮಲ್ಲಾಪುರ ಮಾರ್ಗದರ್ಶನದಲ್ಲಿ ಗದಗ ಇನ್‍ಸ್ಪೆಕ್ಟರ್ ಆರ್. ದೇಸಾಯಿ, ಈರಣ್ಣ ಹಳ್ಳಿ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ವೀರೇಶ್ ಜೋಳದ, ಎನ್.ಎಸ್. ತಾಯಣ್ಣವರ, ವೀರೇಶ್ ಬಿಸನಳ್ಳಿ, ಐ.ಸಿ. ಜಾಲಿಹಾಳ, ಮಂಜು ಮುಳಗುಂದ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ಅರೋಪಿ ಅಧಿಕಾರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗದಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link