ಬೊಮ್ಮಾಯಿಗೆ ಹೈಕಮಾಂಡ್ ಫುಲ್ ಮಾರ್ಕ್ಸ್: ಬಿಎಸ್​ವೈ, ಶೆಟ್ಟರ್​ಗೆ ಟೆನ್ಷನ್..!

ಬೊಮ್ಮಾಯಿಗೆ ಹೈಕಮಾಂಡ್ ಫುಲ್ ಮಾರ್ಕ್ಸ್: ಬಿಎಸ್​ವೈ, ಶೆಟ್ಟರ್​ಗೆ ಟೆನ್ಷನ್..!

ಬೆಂಗಳೂರು: ಕಮಲ ಪಾಳಯದ ಪಡಸಾಲೆಯಲ್ಲಿ ಮತ್ತೆ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಒಂದೆಡೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಡಗಿಗೆ ಸಿಎಂ ಬೊಮ್ಮಾಯಿಯೇ ಕ್ಯಾಪ್ಟನ್ ಅಂತಾ ಕೇಂದ್ರ ಸಚಿವ ಅಮಿತ್​ ಶಾ ಹೇಳಿದ್ರೆ ಮತ್ತೊಂದೆಡೆ ರಾಜ್ಯ ಪ್ರವಾಸ ಕೈಗೊಂಡಿದ್ದ ಉಸ್ತುವಾರಿ ಅರುಣ್ ಸಿಂಗ್ ಸಹ ಬೊಮ್ಮಾಯಿಗೆ ಫುಲ್​ ಮಾರ್ಕ್ಸ್​ ನೀಡಿರೋದು ಕೇಸರಿ ಪಾಳಯದಲ್ಲಿ ಟಾಕ್‌ ಸೃಷ್ಟಿಯಾಗಿದೆ.

ಕೋಟೆಯಲ್ಲಿ ಮತ್ತೆ ರಾಜಕೀಯದ ಕಂಪನ ಆರಂಭವಾಗಿದೆ. ಬಿಎಸ್​ವೈ ಪದತ್ಯಾಗದ ಬಳಿಕ ಸಿಎಂ ಗದ್ದುಗೆ ಏರಿರೋ ಬಸವರಾಜ್ ಬೊಮ್ಮಾಯಿ ಬೆನ್ನಿಗೆ ಹೈಕಮಾಂಡ್​ ನಾಯಕರು ಗಟ್ಟಿಯಾಗಿ ನಿಂತಿರೋದು ಕೇಸರಿ ನಾಯಕರಲ್ಲಿ ತಳಮಳ ಉಂಟುಮಾಡಿದೆ. ಮೊನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮುಂದಿನ ಚುನಾವಣೆಯಲ್ಲಿ ಕಮಲದ ರಥಕ್ಕೆ ಬೊಮ್ಮಾಯಿಯೇ ಸಾರಥಿ ಅಂತಾ ಹೇಳಿರೋದು ಭವಿಷ್ಯದಲ್ಲಿ ಮುಖ್ಯಮಂತ್ರಿ ಪಟ್ಟದ ಕನಸು ಕಾಣ್ತಿದ್ದ ನಾಯಕರಿಗೆ ಶಾಕ್​ ನೀಡಿದೆ. ಅರವಿಂದ ಬೆಲ್ಲದ್, ಕೆ.ಎಸ್.ಈಶ್ವರಪ್ಪ, ಮುರುಗೇಶ್ ನಿರಾಣಿ, ಆರ್​.ಅಶೋಕ್ ಸೇರಿ ಹಲವು ನಾಯಕರಿಗೆ ಭವಿಷ್ಯದ ಚಿಂತೆ ಶುರುವಾಗಿದೆ ಎನ್ನಲಾಗಿದೆ.

blank

ಅಮಿತ್ ಶಾ ನೀಡಿರೋ ಶಾಕ್​ನಿಂದಲೇ ಇನ್ನು ಚೇತರಿಸಿಕೊಳ್ಳದ ಕಮಲ ನಾಯಕರಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ಅರುಣ್ ಸಿಂಗ್ ತಮ್ಮ ಪ್ರವಾಸದ ವರದಿಯಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿರೋದು ಸಂಚಲನ ಸೃಷ್ಟಿಸಿದೆ. ಜೆಪಿ ನಡ್ಡಾಗೆ ಸಲ್ಲಿಕೆ ಮಾಡಲಿರೋ 3 ಪುಟಗಳ ವರದಿಯಲ್ಲಿ ಬೊಮ್ಮಾಯಿ ಸರ್ಕಾರದ ಬಗ್ಗೆ ಅರುಣ್ ಸಿಂಗ್ ಹಲವು ಪಾಸಿಟಿವ್ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಬೊಮ್ಮಾಯಿಗೆ ಫುಲ್‌ಮಾರ್ಕ್ಸ್‌
ಪ್ರಶಂಸೆ‌ 1: ಬೊಮ್ಮಾಯಿ ಯಾವುದೇ ಗೊಂದಲವಿಲ್ಲದೆ ಆಡಳಿತ ನಡೆಸುತ್ತಿದ್ದಾರೆ
ಪ್ರಶಂಸೆ‌ 2: ಸುಖಾಸುಮ್ಮನೆ ಯಾವುದಕ್ಕೂ ಗೊಂದಲಕ್ಕೆ ಎಡೆಮಾಡಿಕೊಡಲ್ಲ
ಪ್ರಶಂಸೆ‌ 3: ಸರ್ಕಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆಯೂ ಪಾಸಿಟಿವ್
ಪ್ರಶಂಸೆ‌ 4: ಆಡಳಿತಾತ್ಮಕವಾಗಿಯೂ ರಾಜ್ಯ ಸರ್ಕಾರವು ಚುರುಕುಗೊಂಡಿದೆ

ಕೇಂದ್ರ ಸಚಿವ ಅಮಿತ್ ಶಾ, ಉಸ್ತುವಾರಿ ಅರುಣ್ ಸಿಂಗ್ ಹೀಗೆ ಸಾಲು ಸಾಲು ಹೈಕಮಾಂಡ್ ನಾಯಕರು ಸಿಎಂ ಬೊಮ್ಮಾಯಿಗೆ ಬಹುಪರಾಕ್ ಹೇಳ್ತಿರೋದು ಬಿಜೆಪಿ ಹಿರಿಯ ನಾಯಕರು ನಿದ್ದೆಗೆಡುವಂತೆ ಮಾಡಿದೆ. ಅದ್ರಲ್ಲೂ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ಅನ್ನೋ ಅಮಿತ್ ಶಾ ಹೇಳಿಕೆ ಕಮಲ ಪಾಳಯದ ಘಟಾನುಘಟಿ ನಾಯಕರ ಟೆನ್ಷನ್ ಹೆಚ್ಚಿಸಿದ್ದು, ಮಾಜಿ ಸಚಿವ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಾ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಿಎಸ್​ವೈ, ಶೆಟ್ಟರ್​ಗೆ ‘ಅಮಿತ’ ಟೆನ್ಷನ್
ಬಸವರಾಜ್ ಬೊಮ್ಮಾಯಿ ಜಗದೀಶ್ ಶೆಟ್ಟರ್​ಗಿಂತ ಕಿರಿಯರಾಗಿರೋದ್ರಿಂದ ಬೊಮ್ಮಾಯಿ ಸಂಪುಟದಿಂದ ಬಿಎಸ್​ವೈ ಹಿಂದೆ ಸರಿದಿದ್ರು. ಹೀಗಾಗಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಶೆಟ್ಟರ್​ಗೆ ಮನಸ್ಸಿಲ್ಲ. ನಾಳೆ ಗೆದ್ದು ಮತ್ತೆ ಕಿರಿಯನ ಎದುರು ಸಚಿವನಾಗಬೇಕಾಗುತ್ತೆ ಅನ್ನೋ ಬೇಸರ ಶೆಟ್ಟರ್​ರನ್ನು ಕಾಡ್ತಿದೆ. ಇತ್ತ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಅಂತಾ ಬಿಎಸ್​ ಯಡಿಯೂರಪ್ಪ ಭಾವಿಸಿದ್ರು. ಮುಂದಿನ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರನನ್ನು ಕಣಕ್ಕಿಳಿಸಲು ಬಿಎಸ್​ವೈ ಪ್ರಯತ್ನಿಸುತ್ತಿದ್ದಾರೆ. ಆದರೆ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಪುತ್ರನಿಗಾಗಿ ಬಿಎಸ್​ವೈ ಬೊಮ್ಮಾಯಿ ಬಳಿಯೇ ಟಿಕೆಟ್ ಕೇಳಬೇಕಾದ ಪರಿಸ್ಥಿತಿ ಎದುರಾಗಬಹುದು.

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 20 ತಿಂಗಳು ಬಾಕಿಯಿರುವಂತೆಯೇ ಬಿಜೆಪಿ ಹೈಕಮಾಂಡ್ ಸಿದ್ಧತೆ ಆರಂಭಿಸಿದಂತಿದೆ. ಹೈಕಮಾಂಡ್​ ನಾಯಕರು ಈಗಿನಿಂದಲೇ ಬೊಮ್ಮಾಯಿ ಬೆನ್ನು ತಟ್ಟುತ್ತಿದ್ದು ಕೇಸರಿ ಕೋಟೆಗೆ ಬೊಮ್ಮಾಯಿಯೇ ಚಕ್ರಾಧಿಪತಿಯಾಗಿ ಮುಂದುವರಿಯಲಿದ್ದಾರೆ ಅನ್ನೋ ಸಂದೇಶ ನೀಡುತ್ತಿದ್ದಾರೆ. ಆದ್ರೆ ಹೈಕಮಾಂಡ್​ನ ಈ ನಡೆಗೆ ರಾಜ್ಯ ನಾಯಕರ ರಿಯಾಕ್ಷನ್ ಏನಾಗಿರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

Source: newsfirstlive.com Source link