ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಎಸ್ ಟಿ ಸೋಮಶೇಖರ್

ಚಾಮರಾಜನಗರ: ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ. ಈ ಬಗ್ಗೆ ಅಮಿತ್ ಶಾ ಅವರ ಮಾತೇ ಅಂತಿಮ ಎನ್ನುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸಹಮತ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ದಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತಾರೆ. ಬೊಮ್ಮಾಯಿ ಬುದ್ದಿವಂತರು, ಸಮರ್ಥರಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಿದ್ದಾರೆ ಎಂದು ಬೊಮ್ಮಾಯಿ ಪರ ಬ್ಯಾಟ್ ಬೀಸಿದರು.

ಇದೇ ವೇಳೆ ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರಕರಣದ ತನಿಖೆ ನಡೆಯುತ್ತಿದೆ. ಖಂಡಿತವಾಗಿಯೂ ವರದಿ ಬಂದ ನಂತರ ತಪ್ಪಿತ್ಥರ ವಿರುದ್ಧ ಕ್ರಮ ವಹಿಸಲಾಗುವುದು. ನ್ಯಾಯ ಮೂರ್ತಿಗಳು ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ನೂರಕ್ಕೆ ನೂರಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇದರಲ್ಲಿ ಶೇ 1ರಷ್ಟು ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ ಎಂದರು.

ಚಾಮರಾಜನಗರ ನೂತನ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಬಳಿ ನಾನು ಮತ್ತು ವೈದ್ಯಕೀಯ ಸಚಿವರು ಚರ್ಚೆ ನಡೆಸಿದ್ದೇವೆ. ವಾಸ್ತಾವಂಶವನ್ನ ಸಿಎಂ ಗಮನಕ್ಕೆ ತಂದಿದ್ದೇನೆ. ಅಧಿವೇಶನಕ್ಕೂ ಮೊದಲು ಅಥವಾ ಮುಗಿದ ಮೇಲೆ ಉದ್ಘಾಟನೆ ಮಾಡಲು ಸಿಎಂ ಹೇಳಿದ್ದಾರೆ. ಚಾಮರಾಜನಗರಕ್ಕೆ ಬರುವುದಿಲ್ಲ ಎಂಬುದನ್ನ ಅವರು ಹೇಳಿಲ್ಲಾ ಎಂದರು.

Source: publictv.in Source link