ಪ್ಯಾರಾ ಒಲಿಂಪಿಕ್​ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಕನ್ನಡಿಗ; ‘ದ್ರಾವಿಡ್​​​ ನನಗೆ ಪ್ರೇರಣೆ’ ಅಂದ್ರು IAS ಅಧಿಕಾರಿ

ಪ್ಯಾರಾ ಒಲಿಂಪಿಕ್​ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಕನ್ನಡಿಗ; ‘ದ್ರಾವಿಡ್​​​ ನನಗೆ ಪ್ರೇರಣೆ’ ಅಂದ್ರು IAS ಅಧಿಕಾರಿ

ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಭರ್ಜರಿಯಾಗಿ ಪದಕಗಳನ್ನ ಬೇಟೆಯಾಡಿದ್ದಾರೆ. ಅದರಲ್ಲೂ ಉತ್ತರಪ್ರದೇಶದ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿ ಆಗಿರೋ ಸುಹಾಸ್​ ಬೆಳ್ಳಿ ಪದಕ ಗೆಲ್ಲೋ ಮೂಲಕ ಭಾರತವನ್ನೂ ಪದಕ ಬೇಟೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಿಶೇಷ ಅಂದ್ರೆ ಸುಹಾಸ್​ ಕನ್ನಡಿಗ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕ ಸೇರಿದಂತೆ 7 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಕ್ರೀಡಾಪಟುಗಳ ಸಾಧನೆಗೆ ಇಡೀ ದೇಶವೇ ಸಂಭ್ರಮಿಸಿತ್ತು. ಇದೀಗ ದೇಶ ಮತ್ತೆ ಸಂಭ್ರಮಿಸುತ್ತಿದೆ. ಅದಕ್ಕೆ ಕಾರಣವಾಗಿದ್ದು, ಟೋಕಿಯೋ ಪ್ಯಾರಾಲಿಂಪಿಕ್ಸ್‌. ಅದರಲ್ಲಿಯೂ ಕನ್ನಡಿಗರಾಗಿರೋ ಐಎಎಸ್‌ ಅಧಿಕಾರಿ ಸುಹಾಸ್‌ ಯತಿರಾಜ್‌ ಸಾಧನೆ ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿದಾಯಕವಾಗಿದೆ. ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದಾರೆ. ಸಾಧಿಸಬೇಕು ಅಂತ ಛಲ ಹೊತ್ತವರಿಗೆ ಆದರ್ಶವಾಗಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ

ಇದು ಟೋಕಿಯೋದಲ್ಲಿ ನಡೆಯುತ್ತಿರೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ. ಬ್ಯಾಡ್ಮಿಂಟನ್‌ ಎಸ್‌ಎಲ್‌-4 ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತೀಯರಾದ ನಮ್ಮ ಹೆಮ್ಮೆಯ ಕನ್ನಡಿಗ ಸುಹಾಸ್‌ ಯತಿರಾಜ್‌ ಆಡುತ್ತಿದ್ದಾರೆ. ಎದುರಾಳಿಯಾಗಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಕಣದಲ್ಲಿ ಇದ್ರು. ಮೊದಲ ಸೆಟ್‌ನಲ್ಲಿ ಸುಹಾಸ್‌ 21-15 ರಿಂದ ಗೆದ್ದು ಮುನ್ನಡೆ ಸಾಧಿಸುತ್ತಾರೆ. ಈ ಹಂತದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಗ್ಯಾರಂಟಿ ಅನ್ನೋದು ಪಕ್ಕಾ ಆಗಿರುತ್ತದೆ. ಆದ್ರೆ, ನಂತರ ನಡೆದ ಸೆಟ್‌ನಲ್ಲಿ ಸುಹಾಸ್‌ 17-21 ರಿಂದ ಕಳೆದುಕೊಳ್ಳುತ್ತಾರೆ. ಹೀಗಾಗಿ ಪಂದ್ಯ ಮೂರನೇ ಸೆಟ್‌ಗೆ ಹೋಗುತ್ತದೆ. ಇಬ್ಬರ ಜಿದ್ದಾಜಿದ್ದಿನ ಹೋರಾಟದಲ್ಲಿ ಫ್ರಾನ್ಸ್‌ ಆಟಗಾರ ಮೇಲುಗೈ ಸಾಧಿಸುತ್ತಾರೆ. ಸುಹಾಸ್‌ ಬೆಳ್ಳಿ ಪದಕಕ್ಕೆ ತೃಪ್ತರಾಗುತ್ತಾರೆ. ಆದ್ರೆ, ಇದೇನು ಕಮ್ಮಿ ಸಾಧನೆಯಲ್ಲ. ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿಯೇ ಪದಕ ಗೆದ್ದ ಭಾರತದ ಮೊದಲ ಐಎಎಸ್‌ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಯನ್ನು ನೋಡಿ ಇಡೀ ದೇಶವೇ ಖುಷಿಪಡುತ್ತಿದೆ.

Image

ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
ಕರ್ನಾಟಕದ ಬಗ್ಗೆ ಹೇಳಿಕೊಂಡ ಸುಹಾಸ್‌

ಉತ್ತರ ಪ್ರದೇಶ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿ, ಕನ್ನಡಿಗ ಸುಹಾಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಲೇ ಪ್ರಧಾನಿ ಮೋದಿ ಕರೆ ಮಾಡಿದ್ದಾರೆ. ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸುಹುಸ್‌, ತಾವು ಕರ್ನಾಟಕ ಮೂಲದವರಾಗಿರುವ ಬಗ್ಗೆ, ಗುಜರಾತ್‌ನಲ್ಲಿರೋ ಸ್ನೇಹಿತರ ಬಗ್ಗೆ, ಉತ್ತರ ಪ್ರದೇಶದಲ್ಲಿ ತಾವು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌತಮ ಬುದ್ಧ ನಗರದ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಅದೇ ರೀತಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು, ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ರಾತ್ರಿ 10 ಗಂಟೆಯ ವರೆಗೆ ಜಿಲ್ಲಾಧಿಕಾರಿಯಾಗಿ ಕೆಲಸ
ಅನಂತರ ಬ್ಯಾಡ್ಮಿಂಟನ್‌ ಅಭ್ಯಾಸ
ಒಂದೂವರೆ ವರ್ಷದಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಣೆ

ಕಳೆದ ಒಂದೂವರೆ ವರ್ಷದಿಂದ ಸುಹಾಸ್‌ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕು ನಿರ್ವಹಣೆ, ಅಭಿವೃದ್ಧಿ ಕೆಲಸಗಳು, ಸಭೆ ಸಮಾರಂಭಗಳ ಜವಾಬ್ದಾರಿ ಸೇರಿದಂತೆ ಪ್ರತಿ ನಿತ್ಯ ಹತ್ತಾರು ಕೆಲಸಗಳು ಜಿಲ್ಲಾಧಿಕಾರಿಗಳಿಗೆ ಇರುತ್ತವೆ. ಅಂತಹ ಎಲ್ಲಾ ಕೆಲಸವನ್ನು ಸುಹಾಸ್‌ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದ್ರೆ, ಕರ್ತವ್ಯದ ನಡುವೆ ಅಭ್ಯಾಸ ನಡೆಸಿದ್ದು ಹೇಗೆ? ಅನ್ನೋ ಪ್ರಶ್ನೆ ಎಲ್ಲರಿಗೂ ಬರುತ್ತೆ. ಆದ್ರೆ, ಸುಹಾಸ್‌ಗೆ ದೃಢ ಮನಸ್ಸಿತ್ತು. ತಾನು ಸಾಧನೆ ಮಾಡಿಯೇ ಮಾಡುತ್ತೇನೆ ಅಂತ ಛಲ ಇತ್ತು. ಕರ್ತವ್ಯದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಹೀಗಾಗಿಯ ಬಿಡುವಿಲ್ಲದ ಕೆಲಸದ ನಡುವೆ ಟೈಮ್‌ ಟೇಬಲ್‌ ಹಾಕಿಕೊಳ್ಳುತ್ತಾರೆ. ಆ ಪ್ರಕಾರ ರಾತ್ರಿ 10 ಗಂಟೆಯ ವರೆಗೂ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿ 10 ಗಂಟೆಯ ನಂತರ ಬ್ಯಾಡ್ಮಿಂಟನ್‌ ಅಭ್ಯಾಸ ನಡೆಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ತುರ್ತು ಕರೆಗಳು ಬಂದಾಗ ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಒಂದೇ ಮಾತದಲ್ಲಿ ಹೇಳ್ಬೇಕು ಅಂದ್ರೆ, ಕರ್ತವ್ಯ ಮತ್ತು ಕ್ರೀಡೆ ಎರಡನ್ನೂ ಸಮಾನವಾಗಿ ಪ್ರೀತಿ ಮಾಡಿದವರು ಸುಹಾಸ್‌ ಆಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಭಾರೀ ಫೇಮಸ್‌ ಜಿಲ್ಲಾಧಿಕಾರಿ
ಅತಿಕ್ರಮಣ ತೆರೆವು ಮಾಡಿಸುವಲ್ಲಿ ಎತ್ತಿದ ಕೈ

ಸುಹಾಸ್‌ ಅವರು, 2007ರ ಉತ್ತರ ಪ್ರದೇಶದ ಕೇಡರ್‌ ಐಎಎಸ್ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ಆಜಂಗಡ, ಜೋನ್‌ಪುರ್‌, ಪ್ರಯಾಗ್‌ ರಾಜ್‌ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಹಾಸ್‌ ಹೇಗೆ ಒಬ್ಬ ಯಶಸ್ವಿ ಕ್ರೀಡಾಪಟುವೋ ಅದೇ ರೀತಿ ಒಬ್ಬ ದಕ್ಷ ಐಎಎಸ್‌ ಅಧಿಕಾರಿ ಕೂಡ ಹೌದು. ಇವರ ಕರ್ತವ್ಯದ ಸಮಯದಲ್ಲಿ ಆಯಾ ಜಿಲ್ಲೆಯಲ್ಲಿ ಆದಂತಹ ಒತ್ತುವರಿಯನ್ನು ದೊಡ್ಡ ಪ್ರಮಾಣದಲ್ಲಿ ತೆರವು ಮಾಡಿಸಿದ್ದಾರೆ. ಅದರಲ್ಲಿಯೂ ಅಲಹಾಬಾದ್‌ನಲ್ಲಿ ಜಿಲ್ಲಾಧಿಕಾರಿಯಾಗಿದಾಗ ಇವರು ಮಾಡಿದ ಕೆಲಸವನ್ನು ಅಲ್ಲಿಯ ಜನ ಈಗಲೂ ನೆನೆಯುತ್ತಾರೆ. ಯಾವ ಒತ್ತಡಕ್ಕೂ ಒಳಗಾಗದೇ ಅತಿಕ್ರಮವಾಗಿ ನಿರ್ಮಾಣವಾಗಿದ್ದ 400 ಕ್ಕೂ ಹೆಚ್ಚು ಮಸೀದಿ, ಮಂದಿರಗಳನ್ನು ತೆರವು ಮಾಡಿದ್ದರು. ಸಾವಿರಾರು ಅಂಗಡಿಗಳನ್ನು ತೆರವು ಮಾಡಿಸಿದ್ದರು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಸುಮಾರು 700 ಜನ ಇವರ ಕಚೇರಿ ಬಳಿ ಬಂದು ಪ್ರತಿಭಟನೆ ಮಾಡಿದ್ರು. ಅಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವೊಲೈಸುವಲ್ಲಿ ಸುಹಾಸ್‌ ಯಶಸ್ವಿಯಾಗಿದ್ದರು. ಸುವಾಸ್‌ ಚಾಣಾಕ್ಷತನ ನೋಡಿ ಇತರೆ ಅಧಿಕಾರಿಗಳು ಮೂಕವಿಸ್ಮಿತರಾಗಿದ್ರು. ಇಷ್ಟೇ ಅಲ್ಲ, ಕುಂಭಮೇಳದ ಯಶಸ್ಸಿನಲ್ಲಿಯೂ ಸುಹಾಸ್‌ ಪಾತ್ರ ದೊಡ್ಡದಾಗಿತ್ತು.

ಕರ್ನಾಟಕದ ಹೆಮ್ಮೆಯ ಪುತ್ರ ಸುಹಾಸ್‌
ಮಂಡ್ಯ, ಶಿವಮೊಗ್ಗ, ಸುರತ್ಕಲ್‌ನಲ್ಲಿ ಅಭ್ಯಾಸ
2007ರಿಂದ ಐಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಣೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು ಸುಹಾಸ್‌ ಆಗಿದ್ದಾರೆ. ಇವರು 1983 ರಲ್ಲಿ ಹಾಸನದ ಲಾಳನಕೆರೆಯಲ್ಲಿ ಜನಿಸಿರುತ್ತಾರೆ. ಇವರ ತಂದೆ ಯತಿರಾಜ್‌ ಎಲ್‌ಕೆ ನಿರಾವರಿ ಇಲಾಖೆಯಲ್ಲಿ ಎಇಇ ಆಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ತಂದೆ ಟಾರ್ನ್ಸರ್‌ ಆದಾಗೆಲ್ಲ ಅವರ ಜೊತೆ ಸುಹಾಸ್‌ ಓಡಾಡಿದ್ದಾರೆ. ಮಂಡ್ಯ ಸಮೀಪದ ದುದ್ದದಲ್ಲಿ ಪ್ರಾಥಮಿಕ ಶಿಕ್ಷಣ, ಶಿವಮೊಗ್ಗದಲ್ಲಿ ಪ್ರೌಢ ಶಿಕ್ಷಣ, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಎನ್ಐಟಿಕೆಯಲ್ಲಿ ಎಂಜಿನಿಯರ್‌ ಅಭ್ಯಾಸ ಪೂರೈಸಿದ್ದಾರೆ. ಹಾಗೇ ಎಂಜಿನಿಯರ್‌ ಕೋರ್ಸ್‌ ಕಂಪ್ಲಿಟ್‌ ಆದ ಬಳಿಕ 2005ರಲ್ಲಿ ಜರ್ಮನಿ ಮೂಲದ ಸ್ಯಾಪ್‌ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಾರೆ. ಆದ್ರೆ, ತಾನೊಬ್ಬ ಐಎಎಸ್‌ ಅಧಿಕಾರಿಯಾಗಬೇಕು ಅನ್ನೋ ಹಠ ಸುಹಾಸ್‌ಗೆ ಇರುತ್ತದೆ. ಹೀಗಾಗಿ ಸ್ವಲ್ಪ ಸಮಯ ಕೆಲಸ ಮಾಡುತ್ತಲೇ ಅಭ್ಯಾಸ ನಡೆಸುತ್ತಾರೆ. ಅನಂತರ ಕೆಲಸ ಬಿಟ್ಟು ಅಭ್ಯಾಸದಲ್ಲಿ ನಿರತರಾಗುತ್ತಾರೆ. 2007ರಲ್ಲಿ ನಡೆದ ಐಎಎಸ್‌ ಪರೀಕ್ಷೆಯಲ್ಲಿ 382ನೇ ಱಂಕ್‌ ಪಡೆದು ತೇರ್ಗಡೆಯಾಗುತ್ತಾರೆ. ಸುಹಾಸ್‌ಗೆ ಐಎಎಸ್‌ ಮಾಡಲು ಸ್ಫೂರ್ತಿಯಾಗಿದ್ದು ಯಾರು? ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು, ಹೆಸರು ಹಣದ ಹಿಂದೆ ಹೋಗಬಾರದು ಅಂತ ಪ್ರೇರಣೆಯಾಗಿದ್ದು ಯಾರು ಗೊತ್ತಾ?

ಸುಹಾಸ್‌ ಐಎಎಸ್‌ ಅಧಿಕಾರಿಯಾಗಲು ತಂದೆಯೇ ಸ್ಫೂರ್ತಿ
ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಮಾತು ಪ್ರೇರಣೆಯಾಗಿದ್ದು ಹೇಗೆ?

ಪ್ರತಿಯೊಬ್ಬರ ಸಾಧನೆಯ ಹಿಂದೆ ಏನಾದ್ರೂ ಸ್ಫೂರ್ತಿ ಅನ್ನೋದು ಇದೇ ಇರುತ್ತದೆ. ಅದೇ ರೀತಿ ಸುಹಾಸ್‌ಗೆ ಐಎಎಸ್‌ ಮಾಡಬೇಕು ಅಂತ ಸ್ಫೂರ್ತಿಯಾದವರು ಅವರ ತಂದೆ ಯತಿರಾಜ್‌ ಆಗಿದ್ದಾರೆ. ತನ್ನ ಮಗ ಒಬ್ಬ ಐಎಎಸ್‌ ಅಧಿಕಾರಿಯಾಗಬೇಕು ಅಂತ ಕನಸು ಕಂಡಿರುತ್ತಾರೆ. ಅದನ್ನು ಮಗನ ಬಳಿ ಹೇಳಿಕೊಂಡಿರುತ್ತಾರೆ. ತಂದೆಯಿಂದ ಆ ಮಾತು ಕೇಳಿದಾಗಲೇ ಸುಹಾಸ್‌ ತಾನು ಐಎಎಸ್‌ ಅಧಿಕಾರಿಯಾಗಬೇಕು ಅಂತ ಕನಸು ಕಾಣುತ್ತಾರೆ, ಶ್ರಮವಹಿಸುತ್ತಾರೆ. ಅಂತಿಮವಾಗಿ ತಮ್ಮ ಗುರಿ ಸಾಧಿಸುತ್ತಾರೆ. ಅದೇ ರೀತಿ, ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಆಟ ಆಡುವುದು ನಿಮ್ಮ ಕೈಯಲ್ಲಿದೆ. ಹೆಸರು, ಹಣದ ಹಿಂದೆ ಹೋಗಬೇಡಿ, ಅದು ಯಾವಾಗ ಬರಬೇಕೋ ಆಗ ಬಂದೇ ಬರುತ್ತದೆ ಎಂದು ಹೇಳಿರುತ್ತಾರೆ. ಆ ಮಾತು ಸುಹಾಸ್‌ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಕರ್ತವ್ಯ ಮಾಡುವುದು ಅಷ್ಟೇ ತಮ್ಮ ಜವಾಬ್ದಾರಿ ಅಂತ ನುಗ್ಗುತ್ತಾರೆ.

2016ರ ಏಷ್ಯಾ ಪ್ಯಾರಾಲಿಂಪಿಯನ್‌ಶಿಪ್‌ನಲ್ಲಿ ಚಿನ್ನ
ಅಂತಾರಾಷ್ಟ್ರೀಯ ಕೂಟದಲ್ಲಿ 4 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕ ಗೆದ್ದಿದ್ದಾರೆ

ಸುಹಾಸ್‌ ಈ ಮುನ್ನ ಕೂಡ ಅನೇಕ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲಿ ನಾಲ್ಕು ಚಿನ್ನದ ಪದಕ, ಐದು ಬೆಳ್ಳಿ, ಎರಡು ಕಂಚಿನ ಪದಕಗಳು ಸೇರಿವೆ. ಅದರಲ್ಲಿಯೂ 2016ರಲ್ಲಿ ಬೀಜಿಂಗ್‌ನಲ್ಲಿ ನಡೆದ ಪ್ಯಾರಾಲಿಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದಾಗಲೇ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಹಾನ್‌ ಪದಕ ಗೆಲ್ಲುವ ಆಟಗಾರ ಅಂತಲೇ ಗುರುತಿಸಿಕೊಂಡಿದ್ರು. ಕೇಂದ್ರ ಸರ್ಕಾರ ಕೂಡ ತರಬೇತಿಗೆ ವ್ಯವಸ್ಥೆ ಮಾಡಿತ್ತು. ಜಿಲ್ಲಾಧಿಕಾರಿಯಾಗಿ ತಮ್ಮ ಕರ್ತವ್ಯದ ಜೊತೆ ಅಭ್ಯಾಸ ನಡೆಸಿ ಸಾಧನೆ ಮಾಡಿದ್ದಾರೆ. ಉಳಿದಂತೆ 2017 ಮತ್ತು 2019ರಲ್ಲಿ ಟರ್ಕಿಸ್‌ ಓಪನ್‌ ಪ್ಯಾರಾಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

blank

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸುಹಾನ್‌ ಹೆಮ್ಮೆ ತಂದಿದ್ದಾರೆ. ಕನ್ನಡಿಗ ಸುಹಾನ್‌ ಅವರು ಮುಂಬರುವ ಟೂರ್ನಿಗಳಲ್ಲಿ ಇನ್ನಷ್ಟು ಪದಕವನ್ನು ಗೆಲ್ಲುವಂತಾಗಲಿ, ಕರ್ನಾಟಕದ ಕೀತಿಯನ್ನು ಜಗತ್ತಿನಾದ್ಯಂತ ಬೆಳಗಲಿ ಎಂತ ಹಾರೈಸೋಣ.

Source: newsfirstlive.com Source link