ಹು-ಧಾ ಭದ್ರಕೋಟೆಯಲ್ಲಿ ಅಲ್ಪಮತ: ಬಿಜೆಪಿ 39 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು ಏಕೆ..?

ಹು-ಧಾ ಭದ್ರಕೋಟೆಯಲ್ಲಿ ಅಲ್ಪಮತ: ಬಿಜೆಪಿ 39 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು ಏಕೆ..?

ಹುಬ್ಬಳ್ಳಿ: ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಎಂಎಲ್ಎ ಎಂಪಿ ಹಾಗೂ ಎಂಎಲ್ ಸಿ ಗಳ ಮತಗಳಿಂದ ಅಧಿಕಾರದ ಚಿಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಆದರೆ ಬಿಜೆಪಿಯ ಈ ಗೆಲುವು ಗೆಲುವೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಏಕೆಂದರೆ ಭದ್ರಕೋಟೆಯಲ್ಲಿ ಬಿಜೆಪಿ ಅಲ್ಪ ಮತದೊಂದಿಗೆ ಗೆಲವು ಸಾಧಿಸಿದೆ. ಬಿಜೆಪಿಯ ಅಲ್ಪ ಮತದ ಗೆಲುವಿಗೆ ಕಾರಣವೇನು ಕಾಂಗ್ರೆಸ್ ನ ರೋಚಕ ಸೋಲಿಗೆ ಕಾರಣವೇನು..?

ಬಿಜೆಪಿ ಪಾಳೆಯದಲ್ಲಿ ಘಟಾನುಘಟಿ ನಾಯಕರೇ ಮಹಾನಗರದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಶಾಸಕ ಅರವಿಂದ ಬೆಲ್ಲದ್ ಈ ಚುನಾವಣೆಯಲ್ಲಿ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು.

ಶಾಸಕ ಅರವಿಂದ ಬೆಲ್ಲದ್ ಹಾಗೂ ಜಗದೀಶ್ ಶೆಟ್ಟರ್ ನಡುವಿನ ಶೀತಲ ಸಮರದಿಂದ ಬೆಲ್ಲದ್ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದರೂ ಸ್ವಕೇತ್ರ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮುಖ ಭಂಗವಾಗಬಾರದು ಅನ್ನೋ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಿದ್ದರು. ಇನ್ನೊಂದಡೆ ಶ್ರೀರಾಮುಲು , ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. ಬಂಡಾಯದ ಬೇಗುದಿ ಅಷ್ಟೇನೂ ಬಿಜೆಪಿಗೆ ಕಾಡದಿದ್ದರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದವರು ಹಾಗೂ ಅವರನ್ನು ಬೆಂಬಲಿಸಿದವರನ್ನು ಒಟ್ಟು 23 ಜನರನ್ನು ಪಕ್ಷ ವಿರೋಧಿ ಚುಟುವಟಿಕೆ ಮೇಲೆ ಉಚ್ಚಾಟಿಸಲಾಗಿತ್ತು. ಇವರಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳಾಗಿ ಜಯ ಸಾಧಿಸಿದ್ದಾರೆ.

ಬಿಜೆಪಿ 60 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿ ಜನರಿಗೆ ಆಶ್ವಾಸನೆಗಳ ಸುರಿಮಳೆಯನ್ನೇ ಗರೆದಿತ್ತು. ಆದರೆ ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆಗೆ ಏರಿದ್ದರೂ ಸುಧಾರಣೆಯಾಗದ ರಸ್ತೆಗಳು, ಎಲ್ಲೆಂದರಲ್ಲಿ ಕಣ್ಣಿಗೆ ರಾಚುವ ಕಸ, ಸೂಕ್ತ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು. ಹಾಗೂ ಬೆಲೆ ಏರಿಕೆಯಂಥಹ ಜ್ವಲಂತ ಸಮಸ್ಯೆಗಳಿಂದಾಗಿ ಜನ ರೋಸಿಹೋಗಿ ಶೇಕಡಾ 7 ಕ್ಕಿಂತಲೂ ಹೆಚ್ಚು ಜನ ಮತದಾನದಿಂದಲೇ ದೂರ ಉಳಿದುಬಿಟ್ಟರು. ಇದೇ ಕಾರಣಕ್ಕೆ 60 ರ ಗುರಿ ಹೊಂದಿದ್ದ ಬಿಜೆಪಿ ಕೇವಲ 39 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಸ್ಥಿತಿ ಬಂದಿದೆ.

ಓವೈಸಿ ಒಂದೇ ದಿನ ಪ್ರಚಾರ ಕೈಗೊಂಡು ಕಾಂಗ್ರೆಸ್ ನ ಎರಡು ಸ್ಥಾನಗಳನ್ನು ಕಸಿದುಕೊಂಡಿದ್ದಾರೆ

ಇನ್ನೊಂದೆಡೆ ಕಾಂಗ್ರೆಸ್ ಬಿಜೆಪಿ ವಿರೋಧಿ ಅಲೆಯ ಲಾಭ ಪಡೆದು ಮತಗಳಿಕೆಯಲ್ಲಿ ಮುನ್ನಡೆ ಸಾಧಿಸಿದರೂ ಬಿಜೆಪಿ ಭದ್ರಕೋಟೆಯನ್ನು ಬೇಧಿಸಲಾಗದೇ ಸೋಲನ್ನಪ್ಪಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಗೆ ಬಿಜೆಪಿ ಗಿಂತಲೂ ಹೆಚ್ಚಾಗಿ ಕಾಡಿದ್ದು ಬಂಡಾಯ. ಬಂಡಾಯವೆದ್ದ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಕಾಂಗ್ರೆಸ್ ಉಚ್ಚಾಟಿಸಿದೆ. ಕಾಂಗ್ರೆಸ್ ಬಂಡಾಯ 4 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇನ್ನೊಂದೆಡೆ ಎಐಎಂಐಎಂ ನ ಅಸಾದುದ್ದೀನ್ ಓವೈಸಿ ಒಂದೇ ದಿನ ಪ್ರಚಾರ ಕೈಗೊಂಡು ಕಾಂಗ್ರೆಸ್ ನ ಎರಡು ಸ್ಥಾನಗಳನ್ನು ಕಸಿದುಕೊಂಡಿದ್ದಾರೆ. ಗೆಲುವು ಸಾಧಿಸಬೇಕಾದ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲುಂಡಿರೋದು ಬಂಡಾಯದ ಬಿಸಿಯಿಂದಾನೆ ಎಂಬುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಬಿಜೆಪಿಯನ್ನು ಹಿಂದಕ್ಕಬಹುದಿತ್ತು
ಇದರ ಜೊತೆಗೆ ಕಾಂಗ್ರೆಸ್​ಗೆ ಕಾಡಿದ್ದು ನಾಯಕರ ಕೊರತೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಸುವ ಯಾವೊಬ್ಬ ದೊಡ್ಡ ನಾಯಕರೂ ಇಲ್ಲ. ವಿನಯ್ ಕುಲಕರ್ಣಿ ನ್ಯಾಯಾಲಯದ ಆದೇಶದಿಂದಾಗಿ ಜಿಲ್ಲೆಯಿಂದ ಹೊರಗುಳಿದಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಹೋದ್ರು. ಇನ್ನುಳಿದಂತೆ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಯಕರಿಲ್ಲದ್ದರಿಂದ ಜವಾಬ್ದಾರಿ ತೆಗೆದುಕೊಳ್ಳುವವರೂ ಯಾರೂ ಇಲ್ಲದಂತಾಗಿ ಹೋಗಿತ್ತು. ಇದಲ್ಲದೇ ರಾಜ್ಯ ನಾಯಕರಲ್ಲಿ ಡಿ. ಕೆ. ಶಿವಕುಮಾರ್ ಒಂದು ದಿನ ಮಾತ್ರ ಜಿಲ್ಲೆಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದು ಸಾಕಾಗಲಿಲ್ಲ. ಇವೆಲ್ಲವನ್ನೂ ಸರಿದೂಗಿಸಿಕೊಂಡಿದ್ದರೆ ಕಾಂಗ್ರೆಸ್ ಬಿಜೆಪಿಯನ್ನು ಹಿಂದಕ್ಕಬಹುದಿತ್ತು.

ಓರ್ವ ಸದಸ್ಯನ ಸಂಖ್ಯೆ ಸರಿದೂಗಿಸಿಕೊಳ್ಳುವ ಸ್ಥಿತಿ ನಿರ್ಮಾಣ
82 ಸದಸ್ಯತ್ವ ಬಲದ ಪಾಳಿಕೆಯಲ್ಲಿ ಮ್ಯಾಜಿಕ್ ನಂಬರ್ 42 ಆದ್ರೂ ಕೂಡಾ ಮೇಯರ್ ಉಪ ಮೇಯರ್ ಆಯ್ಕೆ ಸಂದರ್ಭದಲ್ಲಿ ಶಾಸಕರು ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳೂ ಗಣನೆಗೆ ಬರುವದರಿಂದ ಸಹಜವಾಗಿಯೇ ಬಿಜೆಪಿಯ ಸಂಖ್ಯಾ ಬಲ ಹೆಚ್ಚಾಗಲಿದೆ. ಮೇಯರ್ ಆಯ್ಕೆ ಸಂದರ್ಭದಲ್ಲಿ 91 ಸಂಖ್ಯಾ ಬಲ ಸೃಷ್ಠಿಯಾಗಿ ಮ್ಯಾಜಿಕ್ ನಂಬರ್ 46 ಆಗಲಿದೆ. ಆಗ ಬಿಜೆಪಿ 39 ಮತ್ತು 6 ಜನ ಶಾಸಕರು ಸಂಸದರು ಹಾಗೂ ವಿ.ಪ ಸದಸ್ಯರು ಸಂಖ್ಯೆ ಸೇರುವುದರಿಂದ 45 ಸಂಖ್ಯಾ ಬಲವಾಗಲಿದೆ ಆದ್ರೂ ಓರ್ವ ಸದಸ್ಯನ ಸಂಖ್ಯೆ ಸರಿದೂಗಿಸಿಕೊಳ್ಳುವ ಸ್ಥಿತಿ ಬಿಜೆಪಿಗೆ ನಿರ್ಮಾಣವಾಗಲಿದೆ. ವಿರೋಧಪಕ್ಷದ ಯಾರಾದ್ರೂ ಇಬ್ಬರು ಅಥವಾ ಇಬ್ಬರಿಗಿಂತಾ ಹೆಚ್ಚು ಸದಸ್ಯರು ಮೇಯರ್ ಚುನಾವಣೆ ವೇಳೆ ಗೈರು ಹಾಜರಾದ್ರೆ ಅಥವಾ ಆಪರೇಷನ್ ಸಿದ್ಧಹಸ್ತ ಮಾಡಿಕೊಂಡಿರುವ ಬಿಜೆಪಿ ಓರ್ವ ಸದಸ್ಯನನ್ನು ಬುಟ್ಟಿಗೆ ಹಾಕಿಕೊಂಡರೆ ಮೂರನೇ ಬಾರಿಗೆ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಬಹುದು.

ವಿಶೇಷ ವರದಿ: ಪ್ರಕಾಶ್ ನೂಲ್ವಿ, ನ್ಯೂಸ್​ಫಸ್ಟ್

Source: newsfirstlive.com Source link