ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?

ಕಲಬುರಗಿ: ಮೂರು ಮಹಾನಗರ ಪಾಲಿಕೆ ಚುನಾವಣೆಗಳ ಪೈಕಿ ಎಲ್ಲಕ್ಕಿಂತ ಹೆಚ್ಚು ಕುತೂಹಲ ಕೆರಳಿಸಿದ್ದು ಕಲಬುರಗಿ ಫಲಿತಾಂಶ. ಒಂದು ಕಾಲದಲ್ಲಿ ಕಲಬುರಗಿ ಕಾಂಗ್ರೆಸ್ ಭದ್ರಕೋಟೆ. ಆದರೆ ಅದು ಇನ್ನಷ್ಟು ಶಿಥಿಲವಾಗಿದೆ ಎಂಬುದನ್ನು ಮಹಾನಗರ ಪಾಲಿಕೆ ಚುನಾವಣೆ ಋಜುವಾತು ಮಾಡಿದೆ.

ಕಲಬುರಗಿ ಮತಪ್ರಭುಗಳು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ನಿರೀಕ್ಷೆ ಮೀರಿ ಕಾಂಗ್ರೆಸ್‍ಗೆ ಬಿಜೆಪಿ ಬಿಗ್ ಫೈಟ್ ನೀಡಿದೆ. ಒಂದು ಹಂತದಲ್ಲಿ ಎರಡು ಪಕ್ಷಗಳ ಸ್ಥಾನ ಗಳಿಕೆ ಸಮಬಲವಾಗಿತ್ತು. ಕೊನೆಗೆ, ಕಾಂಗ್ರೆಸ್ ಮುನ್ನಡೆ ಸಾಧಿಸಿತು. ಆದ್ರೆ, ಸ್ಪಷ್ಟಬಹುಮತ ಗಿಟ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಯ್ತು. ಹೀಗಾಗಿ ಈಗ ಮೈತ್ರಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

ರಾಜ್ಯ ಸರ್ಕಾರದ ಲೆಕ್ಕಾಚಾರಗಳು ಫಲಕೊಟ್ಟಲ್ಲಿ ಕಲಬುರಗಿ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಮಲ ಅರಳಬಹುದು. ಇದಕ್ಕೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿರುವ ಜೆಡಿಎಸ್ ಸಹಕರಿಸಬೇಕಷ್ಟೇ. ಒಂದೊಮ್ಮೆ ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದಲ್ಲಿ ಮತ್ತೆ ಹಸ್ತಪಡೆ ಗದ್ದುಗೆ ಏರಬಹುದು. ಇದನ್ನೂ ಓದಿ: ನಾಡದ್ರೋಹಿ ಎಂಇಎಸ್‍ಗೆ ಸೋಲು – ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಯಾರಿಗೆ ಎಷ್ಟು ಸ್ಥಾನ?
ಒಟ್ಟು 63 ಸ್ಥಾನಗಳಿದ್ದು ಬಹುಮತಕ್ಕೆ 32 ಮತಗಳು ಬೇಕಿದೆ. ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 04, ಒಬ್ಬರು ಪಕ್ಷೇತರ (ಬಿಜೆಪಿ ಬಂಡಾಯ ಅಭ್ಯರ್ಥಿ) ಸದಸ್ಯರು ಗೆದ್ದುಕೊಂಡಿದ್ದಾರೆ. 1 ಎಂಎಲ್‍ಎ, 1 ರಾಜ್ಯಸಭಾ ಸದಸ್ಯರಿಂದಾಗಿ ಕಾಂಗ್ರೆಸ್ ಮತಗಳ ಸಂಖ್ಯೆ 29ಕ್ಕೆ ಏರಿಕೆಯಾದರೆ, 2 ಶಾಸಕರು, 1 ಸಂಸದರು, 3 ಎಂಎಲ್‍ಸಿಗಳು ಸೇರಿ 6 ಮತ ಸಿಗುವ ಕಾರಣ ಬಿಜೆಪಿಗೂ 29 ಮತಗಳು ಸಿಗಲಿದೆ. ಜೆಡಿಎಸ್ ಕಿಂಗ್ ಮೇಕರ್ ಆಗಿರುವ ಕಾರಣ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ. ಇದನ್ನೂ ಓದಿ: ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ

ಕಾಂಗ್ರೆಸ್ ಹಿನ್ನೆಡೆಗೆ ಕಾರಣ:
20 ವಾರ್ಡ್‍ಗಳಲ್ಲಿ ಎಂಐಎಂ ಸ್ಪರ್ಧೆ ಮಾಡಿದ್ದರೆ ಅಲ್ಪಸಂಖ್ಯಾತರಿಗೆ ಎಎಪಿ ಹೆಚ್ಚಿನ ಮಣೆ ಹಾಕಿತ್ತು. ಪರಿಣಾಮ ಕಾಂಗ್ರೆಸ್ಸಿಗೆ ಬರಬೇಕಿದ್ದ ಮತಗಳು ವಿಭಜನೆಯಾದವು. 8ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಂಟಕವಾಗಿದ್ದು, ಬಿಜೆಪಿಗೆ ನೇರ ಲಾಭವಾಗಿದೆ. ಇದರ ಜೊತೆ ಬಿಜೆಪಿ ಶಾಸಕ ರೇವೂರ್, ಮುಖಂಡ ಚಂದು ಪಾಟೀಲ್ ಶ್ರಮವಹಿಸಿದ್ದು ನೆರವಾಗಿದೆ.

Source: publictv.in Source link