ಬೂದಿ ಮುಚ್ಚಿದ ಕೆಂಡದಂತಿದೆ ಖಾತೆ ಕ್ಯಾತೆ; ನಾಳೆ ದೆಹಲಿ ಫ್ಲೈಟ್ ಹತ್ತಲಿದ್ದಾರೆ ಸಿಎಂ ಬೊಮ್ಮಾಯಿ

ಬೂದಿ ಮುಚ್ಚಿದ ಕೆಂಡದಂತಿದೆ ಖಾತೆ ಕ್ಯಾತೆ; ನಾಳೆ ದೆಹಲಿ ಫ್ಲೈಟ್ ಹತ್ತಲಿದ್ದಾರೆ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಖಾತೆ ಕ್ಯಾತೆಯೇನೋ ಬೂದಿ ಮುಚ್ಚಿದ ಕೆಂಡದಂತಿದೆ. ಜೊತೆಗೆ ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸ್ತಿದ್ದಾರೆ. ಈ ಮಧ್ಯೆ ಬಾಕಿ ಉಳಿದಿರುವ ಸ್ಥಾನಗಳನ್ನ ತುಂಬಲು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಸ್ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ರಾಷ್ಟ್ರ ರಾಜಧಾನಿಯ ಫ್ಲೈಟ್ ಹತ್ತಲಿದ್ದಾರೆ.

ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ದೆಹಲಿ ದಂಡಯಾತ್ರೆ ಮಾಡ್ತಾನೆ ಇದ್ದಾರೆ. ಎರಡ್ಮೂರು ಬಾರಿ ರಾಷ್ಟ್ರ ರಾಜಧಾನಿಗೆ ಬೊಮ್ಮಾಯಿ ಭೇಟಿ ನೀಡಿ ಬಂದಿದ್ದಾರೆ. ಸಂಪುಟ ವಿಸ್ತರಣೆ ಸಲುವಾಗಿ ಕಳೆದ ಬಾರಿ ಸಿಎಂ ದೆಹಲಿಗೆ ತೆರಳಿದ್ರು. ಆದ್ರೆ, ಅವ್ರು ಹೋಗಿದ್ದ ಉದ್ದೇಶ ಮಾತ್ರ ಈಡೇರಿರಲಿಲ್ಲ. ಹೀಗಾಗಿ ಬೊಮ್ಮಾಯಿ ಮತ್ತೆ ದೆಹಲಿಗೆ ದೌಡಾಯಿಸಲಿದ್ದಾರೆ.

ನಾಳೆ ಸಿಎಂ ಬಸವರಾಜ ಬೊಮ್ಮಾಯಿ‌ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಸಿಎಂ ಈ ಬಾರಿ ಸಂಪುಟ ವಿಸ್ತರಣೆ ವಿಚಾರವನ್ನೇ ಇಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ಅಲ್ಲಿ ತಮ್ಮ ವರಿಷ್ಠರನ್ನ ಭೇಟಿಯಾಗಿ, ಸಂಪುಟದಲ್ಲಿ ಬಾಕಿ ಉಳಿದಿರುವ 4 ಸ್ಥಾನಗಳನ್ನ ತುಂಬುವ ಬಗ್ಗೆ ಚರ್ಚಿಸಲಿದ್ದಾರೆ.

ಕ್ಯಾಬಿನೆಟ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನ ಭರ್ತಿ ಮಾಡಲು ಸಿಎಂ ಸರ್ಕಸ್ ನಡೆಸ್ತಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಮತ್ತೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ಬೆಳಗ್ಗೆ 11.30ಕ್ಕೆ ಸಿಎಂ ಬೊಮ್ಮಾಯಿ ದೆಹಲಿಗೆ ದೌಡಾಯಿಸಲಿದ್ದಾರೆ. ಕಳೆದ ಬಾರಿ ಸಿಎಂ ಪ್ರವಾಸದ ವೇಳೆ ನಡ್ಡಾರನ್ನ ಭೇಟಿಯಾಗಿರಲಿಲ್ಲ. ಹೀಗಾಗಿ 8ನೇ ತಾರೀಖಿನಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರ ಭೇಟಿಗೆ ಸಿಎಂ ಸಮಯವನ್ನ ಕೇಳಿದ್ದಾರೆ. ಇನ್ನು ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೇ ಖುಷಿ ಜೊತೆಗೆ ಸ್ಥಾನ ಸಿಗುತ್ತೋ ಇಲ್ವೋ ಎಂಬ ಆತಂಕವೂ ಅವರನ್ನ ಕಾಡುತ್ತಿದೆ.

ಒಟ್ಟಾರೆ, ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಲಾಬಿ ನಡೆಸ್ತಿದ್ದಾರೆ. ತಮ್ಮ ಪಕ್ಷದಲ್ಲೇ ಪ್ರಭಾವಿಗಳನ್ನ ಭೇಟಿಯಾಗಿ ಮಂತ್ರಿಗಿರಿಗಾಗಿ ಪೈಪೋಟಿ ಶುರುವಿಟ್ಟುಕೊಂಡಿದ್ದಾರೆ. ಅದೇನೆ ಇರ್ಲಿ ಸಿಎಂ ಹೋಗಿರೋ ಉದ್ದೇಶ ಈ ಬಾರಿಯಾದ್ರೂ ಫಲಿಸುತ್ತಾ? ಸಚಿವ ಸ್ಥಾನ ಆಕಾಂಕ್ಷಿಗಳ ಕನಸು ನನಸಾಗುತ್ತಾ.. ಕಾದು ನೋಡ್ಬೇಕಿದೆ.

Source: newsfirstlive.com Source link