ಅಧಿವೇಶನದ ನಂತರ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿಯೇ ಸಮಸ್ಯೆ ಪರಿಹಾರ: ಶಶಿಕಲಾ ಜೊಲ್ಲೆ

-ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನಗಳಲ್ಲಿ ರಾಜ್ಯದ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಸಚಿವರು ಹಾಗೂ ರಾಜ್ಯ ದಾರ್ಮಿಕ ಪರಿಷತ್ತಿನ ಅಧ್ಯಕ್ಷರಾಗಿರುವ ಶಶಿಕಲಾ ಜೊಲ್ಲೆಯವರು ಸೋಮವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿದರು. ಈ ಸಭೆಯಲ್ಲಿ ಮುಜರಾಯಿ ಇಲಾಖೆಯಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುವ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಇರುವ ಪ್ರಮುಖ ದೇವಸ್ಥಾನಗಳ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಇಲಾಖೆಯಲ್ಲಿ ನಾವು ಮಾಡಬೇಕಾದಂತಹ ಕೆಲಸ ಬಹಳ ಇದೆ. ಇಡೀ ಜಗತ್ತಿನಲ್ಲಿಯೇ ನಮ್ಮ ಸಂಸ್ಕೃತಿ, ಆದ್ಯಾತ್ಮಿಕತೆಗೆ ಹೆಸರುವಾಸಿಯಾಗಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸ ನಮ್ಮದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸಾಹಿತ್ಯ ಲೋಕದಲ್ಲಿ ಕ್ರಾಂತಿ – ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಿದ್ದಾರೆ ಸುನಿಲ್ ಕುಮಾರ್

ಮುಜರಾಯಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇಲಾಖೆಯ ಕಾರ್ಯದರ್ಶಿಯ ಜೊತೆಗೆ ಚರ್ಚೆ ನಡೆಸಿದ್ದು, ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಭರ್ತಿ ಮಾಡುವ ಕುರಿತು ಚಿಂತನೆ ನಡೆಸಲಾಗುವುದು. ಇಲಾಖೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚಿನ ಸಮಯ ಒಂದೆ ಕಡೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ, ಅಥವಾ ಇಲಾಖಾ ಹಂತದಲ್ಲಿ ಅವ್ಯವಹಾರ ನಡೆಯುತ್ತಿದ್ದರೆ, ಹಿರಿಯ ಅಧಿಕಾರಿಗಳು ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಬನಶಂಕರಿ ದೇವಸ್ಥಾನದ ಅವ್ಯವಹಾರದ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮುಜರಾಯಿ ಇಲಾಖೆಯ ಆಯುಕ್ತರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

blank

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕಮಿಟಿಗಳು ಇಲಾಖೆಯ ಮಾಹಿತಿಯನ್ನು ಧಾರ್ಮಿಕ ಪರಿಷತ್ ಸದಸ್ಯರಿಗೆ ನೀಡುವುದಿಲ್ಲ ಎಂಬ ಆರೋಪ ಇದೆ. ಆಯುಕ್ತರು ಸಂಬಂಧ ಪಟ್ಟವರನ್ನು ಸಂಪರ್ಕಿಸಿ ಸದಸ್ಯರಿಗೆ ಮಾಹಿತಿ ನೀಡುವಂತೆ ಸೂಚಿಸಬೇಕು. ಮುಜರಾಯಿ ಇಲಾಖೆಯಿಂದ ಸಾಮೂಹಿಕ ವಿವಾಹದ ಯೋಜನೆ ಜಾರಿಯಲ್ಲಿದ್ದು, ಅದನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ: ಆರಗ ಜ್ಞಾನೇಂದ್ರ

blank

ಗೋಪೂಜೆಗೆ ಆದ್ಯತೆ:
ಗೋವು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ತಾಯಿ ಸ್ಥಾನದಲ್ಲಿ ನೋಡುತ್ತೇವೆ. ಹೀಗಾಗಿ ಕೇವಲ ಪಶು ಸಂಗೋಪನೆ ಇಲಾಖೆ ಮಾತ್ರವಲ್ಲ. ಮುಜರಾಯಿ ಇಲಾಖೆಯ ಮೂಲಕವೂ ಗೋವಿನಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅರ್ಚಕರಿಗೆ ಜೀವ ವಿಮೆ ಮಾಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಅರ್ಚಕರಿಗೆ ವೇತನ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಮ್ಮ ರಾಜ್ಯದ ಜನರು ಬೇರೆ ರಾಜ್ಯದ ದೇವಸ್ಥಾನಗಳಿಗೆ ಪ್ರವಾಸ ಕೈಗೊಳ್ಳುವ, ಮಹಾರಾಷ್ಟ್ರದ ತುಳಜಾಭವಾನಿ, ಫಂಡರಾಪುರ, ಗುಡ್ಡಾಪುರ ದಾನಮ್ಮ, ಆಂಧ್ರಪ್ರದೇಶದ ತಿರುಪತಿ, ಶ್ರೀಶೈಲದಲ್ಲಿ ರಾಜ್ಯ ಸರ್ಕಾರದ ಜಾಗ ಇರುವ ಬಗ್ಗೆ ಪರಿಶೀಲಿಸಿ ಅಲ್ಲಿ ಯಾತ್ರಿ ನಿವಾಸಗಳ ನಿರ್ಮಾಣ ಮಾಡಲು ಶೀಘ್ರವೇ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಸಭೆಯಲ್ಲಿ ತಿಳಿಸಿದರು.

 

Source: publictv.in Source link