ನಾಡದ್ರೋಹಿ ಎಂಇಎಸ್‍ಗೆ ಸೋಲು – ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಬೆಂಗಳೂರು/ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕ್ವಾರ್ಟರ್ ಫೈನಲ್ ಎಂದು ಪರಿಗಣಿಸಲಾಗಿದ್ದ ಮೂರು ಮಹಾನಗರ ಪಾಲಿಕೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಂದಿದೆ. ಬಿಎಸ್‍ವೈ ಪದತ್ಯಾಗದ ನಂತರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ.

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಷ್ಟಪಟ್ಟು ಪಟ್ಟ ಉಳಿಸಿಕೊಂಡಿದೆ. ಕಲಬುರಗಿ ಮಹಾನಗರ ಪಾಲಿಕೆ ಅತಂತ್ರ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದರೂ, ಇಲ್ಲಿಯೂ ಕಮಲ ಅರಳುವುದು ನಿಚ್ಚಳವಾಗಿದೆ. ಎಂದಿನಂತೆ ಕಾಂಗ್ರೆಸ್ ಹೋರಾಟವನ್ನೇ ನಡೆಸದೇ ಶರಣಾಗಿದೆ.

ಪಾಲಿಕೆ ಫೈಟ್ ಫಲಿತಾಂಶ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬೇಕಾಗುತ್ತದೆ. ಈಗ ಮಾಡ್ಕೊಂಡಿರೋ ಯಡವಟ್ಟುಗಳನ್ನು ಸರಿಪಡಿಕೊಂಡು ಡಿಸೆಂಬರಿನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ತಯಾರಿ ಮಾಡಿಕೊಳ್ಳಬೇಕಿದೆ. ಜೆಡಿಎಸ್ ಪಕ್ಷ ತನ್ನ ಅಸ್ತಿತ್ವ ಇನ್ನೂ ಇದೆ ಎಂದು ತೋರಿಸಿಕೊಂಡಿದೆ. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ

ಬೆಳಗಾವಿಯಲ್ಲಿ ಬಿಜೆಪಿಗೆ `ಕುಂದಾ’
ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ವಾಶ್‍ಔಟ್ ಆಗಿದೆ. 1984ರಲ್ಲಿ ಬೆಳಗಾವಿ ಪಾಲಿಕೆ ಅಸ್ತಿತ್ವಕ್ಕೆ ಬಂದ ದಿನದಿಂದ ಹಿಡಿತ ಸಾಧಿಸುತ್ತಾ ಬಂದಿದ್ದ ಎಂಇಎಸ್‍ಗೆ ಇದೇ ಮೊದಲ ಬಾರಿಗೆ ಭಾರೀ ಮುಖಭಂಗ ಆಗಿದೆ. ಪದೇ ಪದೇ ಭಾಷೆ, ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದು ಎಂಇಎಸ್ ಪುಂಡರಿಗೆ ಇಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.

 

ಇಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಾರಮ್ಯ ಮೆರೆಯುತ್ತಿದ್ದ ಬಿಜೆಪಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ನೆರವಿನಿಂದ ಈಗ ಮಹಾನಗರ ಪಾಲಿಕೆಯಲ್ಲೂ ಗದ್ದುಗೆಗೆ ಏರುತ್ತಿದೆ. ಸ್ಪಷ್ಟ ಬಹುಮತ ಗಳಿಸಿದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಎಂದಿನಂತೆ ವಿಪಕ್ಷ ಇಲ್ಲಿ ಕಾಂಗ್ರೆಸ್ ಹೋರಾಟವನ್ನೇ ತೋರದೇ ಸೋಲೊಪ್ಪಿಕ್ಕೊಂಡಿದೆ.

ಯಾರಿಗೆ ಎಷ್ಟು ಸ್ಥಾನ?
ಒಟ್ಟು ಸ್ಥಾನ 58 ಆಗಿದ್ದು, ಬಹುಮತಕ್ಕೆ 30 ಸ್ಥಾನ ಬೇಕು. ಬಿಜೆಪಿ 35, ಕಾಂಗ್ರೆಸ್ 10, ಎಂಐಎಂ 01, ಎಂಇಎಸ್ 02, ಇತರೆ 10 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್

ಬಿಜೆಪಿ ಗೆಲುವಿಗೆ ಕಾರಣ ಏನು?
ಸಂಘ ಪರಿವಾರದ ಬೆಂಬಲ ನಾಯಕರ ಒಗ್ಗಟ್ಟು ಪ್ರದರ್ಶನದ ಜೊತೆ ಮರಾಠ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿತ್ತು. ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರು ಶ್ರಮಪಟ್ಟು ಕೆಲಸ ಮಾಡಿದ್ದರು. ಎಂಇಎಸ್‍ನಲ್ಲಿ ನಾಯಕತ್ವ ಕೊರತೆ, ಭಿನ್ನಮತ, ಬಂಡಾಯ ಜೋರಿತ್ತು. ಮಹಾ `ಸಂಪನ್ಮೂಲ’ ಕೊರತೆಯ ಜೊತೆ ಪ್ರಚಾರ ಕೊರತೆ ಇತ್ತು. ಕಡೆ ಕ್ಷಣದಲ್ಲಿ ಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿತ್ತು.

Source: publictv.in Source link