ಕ್ರಿಕೆಟ್ ಆಡಲು ತಾಲಿಬಾನಿಗಳು ಗ್ರೀನ್​ಸಿಗ್ನಲ್; ಭಾರತ-ಅಫ್ಘಾನ್ ಕ್ರಿಕೆಟ್ ಸಂಬಂಧ ಹೇಗಿತ್ತು ಗೊತ್ತಾ?

ಕ್ರಿಕೆಟ್ ಆಡಲು ತಾಲಿಬಾನಿಗಳು ಗ್ರೀನ್​ಸಿಗ್ನಲ್; ಭಾರತ-ಅಫ್ಘಾನ್ ಕ್ರಿಕೆಟ್ ಸಂಬಂಧ ಹೇಗಿತ್ತು ಗೊತ್ತಾ?

ಅಫ್ಘಾನ್ ತಾಲಿಬಾನಿಗಳ ವಶವಾದ ಮೇಲೆ, ಇನ್ನೇನು? ಅಲ್ಲಿದ್ದ ಜನ ತಾಲಿಬಾನಿಗಳ ನಿರ್ಧಾರಗಳಿಗೆ ಬದ್ಧರಬೇಕು. ಇಲ್ಲದಿದ್ದರೆ ಏನಾಗುತ್ತೆ ನಿಮಗೆ ತಿಳಿದೇಯಿದೆ. ಹಾಗಾದ್ರೆ ನಿಧಾನವಾಗಿ ತನ್ನ ತಾಕತ್ತನ್ನು ತೋರಿಸುತ್ತ, ಬೆಳೆಯುತ್ತಿದ್ದ ಅಫ್ಘಾನ್ ಕ್ರಿಕೆಟ್ ಟೀಂ ಈಗ ಏನ್ಮಾಡ್ತಾ ಇದೆ ಗೊತ್ತಾ ? ಇಷ್ಟೆಲ್ಲಾ ಆದ ಮೇಲೂ ಅಲ್ಲಿ ಆಟಗಾರರಿಗೆ ಅವಕಾಶ ಇದ್ಯಾ? ಒಳ್ಳೆ ಫಾರ್ಮ್​ನಲ್ಲಿದ್ದ ಮಹಿಳಾ ಕ್ರೀಡಾ ಪಟುಗಳ ಕತೆ ಏನು?

ಅಫ್ಘಾನಿಸ್ತಾನ ಈಗ ಬಹುತೇಕ ತಾಲಿಬಾನಿಗಳ ಪಾಲಾಗಿದೆ. ತಾಲಿಬಾನಿಗಳ ಸರ್ಕಾರ ರಚನೆ ಆದ ಮೇಲೆ, ಹೊಸ ನಿಯಮಗಳೂ ಜಾರಿಯಲ್ಲಿದೆ. ಇನ್ನೇನಿದ್ದರು ಅವರು ಹೇರುವ ನಿರ್ಬಂಧಗಳಿಗೆ ತಲೆ ಭಾಗಿ ಅಫ್ಘಾನ್ ಜನತೆ ನಡೆದುಕೊಳ್ಳಬೇಕು. ಏನಾದರು ತಪ್ಪು ಎಂದು ಧ್ವನಿ ಎತ್ತಿದರೆ ಅಥವಾ ಅವರ ನಿರ್ಧಾರವನ್ನೇನಾದರೂ ವಿರೋಧಿಸಿದ್ರೆ, ಅವರ ಉತ್ತರ ಏನಿದ್ದರೂ ಗನ್ನಿನ ಸದ್ದಿನಿಂದ ಹೊರ ಬರುತ್ತದೆ. ಅಂದ್ರೆ ಪ್ರಾಣವನ್ನೆ ಅಡುವಿಟ್ಟು ಮಾತನಾಡಬೇಕು. ಈ ನಿರ್ಧಾರಗಳು ಯಾರಿಗೆ ಲಾಭದಾಯಕವೋ, ಅಥವಾ ನಷ್ಟವೋ ಯೋಚಿಸುವ ಹಾಗೇ ಇಲ್ಲ. ಕೇವಲ ಅವರು ಹೇಳುತ್ತಿರುವುದನ್ನು ಕೇಳುವುದು, ಅದರಂತೆ ನಡೆದುಕೊಳ್ಳುವುದ ಒಂದೇ ಅಫ್ಘಾನ್ ಜನರ ಪಾಲಿಗೆ ಉಳಿದಿರೋದು.

ತಾಲಿಬಾನಿಗಳು ಸರ್ಕಾರ ಸ್ಥಾಪಿಸಿದ ಮೇಲೆ ವಿಶ್ವದ ಹಲವು ಯೋಜನೆಗಳು ಅಫ್ಘಾನರ ಕೈತಪ್ಪಿ ಹೋಯ್ತು. ಬಲಿಷ್ಟ ರಾಷ್ಟ್ರಗಳು ಅಫ್ಘಾನ್ ಜೊತೆ ಮಾಡಿಕೊಂಡಿದ್ದ ಒಪ್ಪಂದಗಳೆನ್ನೆಲ್ಲ ಹಿಂದಕ್ಕೆ ತೆಗೆದುಕೊಳ್ತು. ಇಷ್ಟೆಲ್ಲಾ ಬೆಳವಣಿಗೆಗಳಾದರೂ, ತಾಲಿಬಾನಿಗಳು ಮಾತ್ರ ತಮ್ಮ ಮಾರ್ಗದಲ್ಲಿ ಬದಲಾವಣೆಗಳನ್ನು ತೋರಿಸುತ್ತಿಲ್ಲ. ಅಲ್ಲಿನ ಹಲವು ಉಧ್ಯಮಗಳು ನಿಂತು ಹೋಗಿದೆ, ಧರ್ಮದ ಹೆಸರಲ್ಲಿ ಸಾಕಷ್ಟು ಕಲೆಗೆ ಬ್ರೇಕ್ ಹಾಕಿದ್ದು ಆಗಿದೆ. ಹೀಗಿದ್ದ ಮೇಲೆ ಅಫ್ಘಾನ್ ಜನರ ನೆಚ್ಚಿನ ಆಟವಾಗಿರುವ ಕ್ರಿಕೆಟ್ ಕಥೆ ಏನು ? ಇನ್ಮುಂದೆ ಅಫ್ಘಾನ್ ಕ್ರಿಕೆಟ್ ಟೀಂ ಮುಂಚಿನಂತೆ ಆಟವಾಡುತ್ತಾ ? ಹೇಳ್ತಿವಿ ನೋಡಿ

ಅಫ್ಘಾನ್ ಕ್ರಿಕೆಟ್ ಟೀಂ ಶುರುವಾಗಿದ್ದೇ 2001ರಲ್ಲಿ
ತಾಲಿಬಾನಿಗಳ ಕೈಯಲ್ಲಿದ್ದಾಗ ಕ್ರಿಕೆಟ್​ಗೂ ನಿರ್ಬಂಧ

ಅಫ್ಘಾನ್ ಕ್ರಿಕೆಟ್ ತಂಡ ಮೊದಲ ಭಾರಿ ಅಖಾಡಕ್ಕೆ ಇಳಿದಿದ್ದೆ, ಅಮೆರಿಕ, ಅಫ್ಘಾನ್ ಅನ್ನು ತನ್ನ ನಿಯಂತ್ರಣದಲ್ಲಿ ಇರಿಸಿದಾಗ. ಅಂದ್ರೆ 2001 ರಲ್ಲಿ ತಾಲಿಬಾನಿಗಳ ಮೇಲೆ ಆಕ್ರಮಣ ಮಾಡಿದ ಅಮೆರಿಕ ಹೊಸ ಸರ್ಕಾರ ರಚಿಸಲು ಸಹಾಯ ಮಾಡಿತ್ತು. ಇದಾದ ಬಳಿಕ ಅಫ್ಘಾನ್ ಕ್ರಿಕೆಟ್ ಬೋರ್ಡ್ ಅನ್ನು ಸ್ಥಾಪಿಸಿ, ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಲ್ಲಿ ತನ್ನ ಹೆಸರನ್ನು ದಾಖಲಿಸಿತು. ಅಲ್ಲಿಯವರೆಗೂ ತಾಲಿಬಾನಿಗಳು ಪ್ರಕಾರ ಕ್ರಿಕೆಟ್ ಸೇರಿ ಯಾವುದೇ ಅಂತಾರಾಷ್ಟ್ರಿಯ ಆಟಗಳನ್ನು ಆಡುವ ಹಾಗಿರಲಿಲ್ಲ. ಅಂದ್ರೆ ಅಫ್ಘಾನ್‌ನಲ್ಲಿ ಕ್ರಿಕೆಟ್ ಅನ್ನೋದು ಶುರುವಾಗಿ ಕೇವಲ 20 ವರ್ಷಗಳಾಗಿದೆ ಅಷ್ಟೆ. ಈಗ ಮತ್ತೆ ತಾಲಿಬಾನ್ ಪಾಲಾಗಿರುವ ಅಫ್ಘಾನ್​ನಲ್ಲಿ ಕ್ರಿಕೆಟ್ ಆಡಲು ಅವಕಾಶ ಇದ್ಯಾ ? ಅಥವಾ ಮತ್ತದೆ ಪದ್ಧತಿ ಮುಂದುವರೆಯಲಿದ್ಯಾ ಅನ್ನೋದೆ ಪ್ರಶ್ನೆ.

20 ವರ್ಷದಲ್ಲಿ ಅಫ್ಘಾನ್ ಕ್ರಿಕೆಟಿಗರ ಅಭೂತಪೂರ್ವ ಸಾಧನೆ
ಐಸಿಸಿ ಱಂಕಿಂಗ್​ನಲ್ಲಿ 8ನೇ ಸ್ಥಾನದಲ್ಲಿದೆ ಅಫ್ಘಾನಿಸ್ತಾನ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಫ್ಘಾನ್ ಜೊತೆ ಭಾರತ ಪಂದ್ಯವಾಡುವಾಗ, ರೋಚಕತೆ ಸಹಜವಾಗಿ ಕಡಿಮೆ, ಅಫ್ಘನ್ನರು ಇನ್ನೂ ಹೊಸಬ್ಬರು ಎನ್ನುವ ಕಾರಣಕ್ಕೆ ಉದಾಸೀನದ ಪ್ರದರ್ಶನ ಕೊಟ್ಟಿ ಬಿಡ್ತಾರೆ. ಕೆಲವೊಂದು ಪಂದ್ಯದಲ್ಲಿ ಇದೇ ನಿರ್ಲಕ್ಷ್ಯದಿಂದ ಭಾರತೀಯ ತಂಡ ಕೂಡ ಸೋತ ಉದಾಹರಣೆಗಳಿವೆ. ಆದರೆ ಅಫ್ಘಾನ್​ನಲ್ಲಿ ಸಿದ್ಧವಾದ ತಂಡ ಯಾವ ಟೀಂಗೂ ಕಡಿಮೆ ಇಲ್ಲದಂತೆ, ಉತ್ತಮ ಪ್ರಾಕ್ಟೀಸ್​ನಿಂದ ಈಗ ಐಸಿಸಿ ಏಕದಿನ ಱಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಹಾಗೆ ಐಸಿಸಿ ಟಿ-20 ಱಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ ಅಫ್ಘಾನ್ ತಂಡ. ಇದನೆಲ್ಲ ನೋಡಿದರೆ ತಂಡದ ಆಟಗಾರರ ಶ್ರಮ ಕೇವಲ 20 ವರ್ಷವಾಗಿದ್ದರೂ ಅಗ್ರಸ್ಥಾನ ಮುಟ್ಟುವ ಹಾದಿಯಲ್ಲಿತ್ತು ಅಫ್ಘಾನ್ ಟೀಂ.

ಅಫ್ಘಾನ್ ಜನರಿಗೂ ಕ್ರಿಕೆಟ್ ಅನ್ನೋದು ನೆಚ್ಚಿನ ಕ್ರೀಡೆ
ಕ್ರೀಡಾಪಟುಗಳಿಗೂ ಇತ್ತು ಬಹು ದೊಡ್ಡ ಅಭಿಮಾನಿ ಪಡೆ

ಅಫ್ಘಾನಿಸ್ತಾನದ ಕ್ರಿಕೆಟ್ ತಂಡ ರೂಪುಗೊಳ್ಳುವ ಮುಂಚೆ ಪಾಕಿಸ್ತಾದ ತಂಡದಿಂದ ನಿವೃತ್ತಿ ಪಡೆದವರೂ, ಅಥವಾ ಪಾಕ್​ನಿಂದ ತಿರಸ್ಕಾರಕ್ಕೆ ಒಳಗಾದವರೂ ಜೊತೆಗೂಡಿ ಅಫ್ಘಾನ್ ತಂಡಕ್ಕಾಗಿ ಆಡುತ್ತಿದ್ದರು. ಆದರೆ ಐಸಿಸಿಯಲ್ಲಿ ಅಫ್ಘಾನ್ ನೆಲದ ಆಟಗಾರನ್ನು ಗುರುತಿಸಿದಾಗ, ಅಘ್ಘಾನಿಸ್ತಾನದಲ್ಲಿ ಹೊಸ ಹುರುಪು ಹುಟ್ಟಿತ್ತು. ಆ ಕ್ರಿಕೆಟಿಗರ ಆಟವನ್ನು ನೋಡಲು ದೇಶದ ಜನರು ಉತ್ಸಾಹದಿಂದ, ಸೋತರು ಗೆದ್ದರು ಪ್ರೋತ್ಸಾಹಿಸಿ, ಒಂದು ಪ್ರತ್ಯೇಕ ಹಾಗೂ ಬಲಿಷ್ಟ ಟೀಂ ಅನ್ನು ಅಫ್ಘಾನಿಸ್ತಾನ ಪಡೆದಿತ್ತು. ಈ ತಂಡ ಕ್ರಿಕೆಟ್ ಆಡೋದನ್ನು ನೋಡೋದು ಅಫ್ಘನ್ನರಿಗೆ ಅಚ್ಚುಮೆಚ್ಚು. ಆ ನೆಲದ ಎಲ್ಲ ವರ್ಗವನ್ನು ನೋಡಿದಾಗ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರು ಕ್ರಿಕೆಟ್ ಪಟುಗಳೆ. ಈ ಆಟಗಾರರಿಗೆ ಮುಂದೆ ಆಡಲು ಅವಕಾಶ ಇದ್ಯಾ? ತಾಲಿಬಾನಿಗಳ ಪ್ರವೇಶ ಆಗುತ್ತಿದ್ದಂತೆ, ಅಫ್ಘಾನ್ ಕ್ರಿಕೆಟ್ ತಂಡದ ನಾಯಕ ಏನು ಹೇಳಿದ್ದರು ಗೊತ್ತಾ?

ಆತ್ಮೀಯ ವಿಶ್ವ ನಾಯಕರೇ..!
ನನ್ನ ದೇಶವು ಗೊಂದಲದಲ್ಲಿದೆ, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಮುಗ್ಧ ಜನರು ಪ್ರತಿದಿನ ಹುತಾತ್ಮರಾಗುತ್ತಾರೆ, ಮನೆಗಳು ಮತ್ತು ಆಸ್ತಿಗಳು ನಾಶವಾಗುತ್ತಿವೆ. ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿವೆ. ನಮ್ಮನ್ನು ಗೊಂದಲದಲ್ಲಿ ಬಿಡಬೇಡಿ. ಆಫ್ಘನ್ನರನ್ನು ಕೊಲ್ಲುವುದನ್ನು ಮತ್ತು ಅಫ್ಘಾನಿಸ್ತಾನವನ್ನು ನಾಶ ಮಾಡುವುದನ್ನು ನಿಲ್ಲಿಸಿ. ನಾವು ಶಾಂತಿಯನ್ನು ಬಯಸುತ್ತೇವೆ.
ರಶೀದ್ ಖಾನ್, ಅಫ್ಘಾನಿಸ್ತಾನ್ ಟಿ-20 ಕ್ರಿಕೆಟ್ ನಾಯಕ

ಅಫ್ಘಾನ್ ಟಿ-20 ತಂಡದ ನಾಯಕ ರಶೀದ್ ತಾಲಿಬಾನಿಗಳು ದಾಳಿ ಮಾಡಿದಾಗ ಹೀಗೆ ವಿಶ್ವ ನಾಯಕರಲ್ಲಿ ಕೊರಿಕೆ ಇಟ್ಟು ಟ್ವೀಟ್ ಮಾಡಿದ್ದರು, ಇವರಷ್ಟೆ ಅಲ್ಲ, ಹಲವು ಕ್ರಿಕೆಟ್ ಪಟುಗಳು ತಾಲಿಬಾನ್ ವಿರುದ್ಧ ಮಾತನಾಡಿದ್ದರು. ಇದರ ಅರ್ಥ, ಆ ಕ್ರೀಡಾ ಪಟುಗಳಿಗೂ ಸಹ ತಾಲಿಬಾನಿಗಳ ಆಗಮನದ ಬೇಸರ ತಂದಿತ್ತು. ಇನ್ನು ಆ ಆಟಗಾರರು ಕ್ರೀಡೆಯಲ್ಲಿ ಭಾಗವಹಿಸುವ ಹಾಗಿಲ್ಲ ಎಂದು ತಿಳಿದಿದ್ದರು. ಆದರೆ ಈಗ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವುದೇ ಬೇರೆ.

ಕ್ರಿಕೆಟ್ ಆಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ತಾಲಿಬಾನಿಗಳು
ಮುಂಬರುವ ದಿನಗಳಲ್ಲಿ ಕ್ರೀಡೆಯಲ್ಲಿ ಭಾಗಿಯಾಗಲು ಅನುಮತಿ

ಹೌದು, ತಾಲಿಬಾನಿಗಳು ಹೀಗೊಂದು ಹೇಳಿಕೆಯನ್ನು ನೀಡಿದ್ದಾರೆ. ಅಫ್ಘಾನ್ ನೆಲದಲ್ಲಿ ಇಷ್ಟು ವರ್ಷ ತಾಲೀಮು ನಡೆಸಿದ ಕ್ರಿಕೆಟ್ ಪಟುಗಳು ಮುಂದೆ ಇರುವ ಎಲ್ಲ ಪಂದ್ಯಗಳನ್ನು ಆಡಲಿ ಎಂದು, ಕ್ರಿಕೆಟಿಗರಿಗೆ ಒಪ್ಪಿಗೆಯನ್ನು ನೀಡಿದ್ದಾರೆ. ದುಬೈ ಹಾಗೂ ಒಮನ್ ನಲ್ಲಿ ನಡೆಯುತ್ತಿರುವ ಮುಂದಿನ ಸಾಲಿನ ಐಸಿಸಿ ವರ್ಡ್ ಟಿ-20 ಯಲ್ಲಿ ಅಫ್ಘಾನ್ ಕ್ರಿಕೆಟ್ ಟೀಂ ಭಾಗವಹಿಸಲು ಸೂಚನೆ ನೀಡಾಗಿದೆ. ಅಷ್ಟೆ ಅಲ್ಲದೆ ಆಸ್ಟ್ರೇಲಿಯ ಜೊತೆಗಿನ ಹೋಬಾರ್ಟ್​ನ ಟೆಸ್ಟ್ ಪಂದ್ಯಕ್ಕೆ ಅಫ್ಘಾನ್ ದೇಶದ ಅದೆ ಹಳೆ ತಂಡ ಪ್ರಾಕ್ಟೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅಂಡರ್ 19 ಅಫ್ಘಾನ್ ತಂಡ ಬಾಂಗ್ಲಾದೇಶದ ವಿರುದ್ಧ ಸೆಣೆಸಾಡಲು ಈಗಾಗಲೇ ಬಾಂಗ್ಲಾ ನೆಲದಲ್ಲಿ ಅಭ್ಯಾಸ ನಡೆಸುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಈ ಆಟಗಾರರ ಮುಂದೆ ಹಲವು ಗೊಂದಲಗಳಿವೆ.

ಆಟಗಾರರು ಯಾವ ಬಾವುಟ ಹಿಡಿದು ಆಡಬೇಕು?
ಅಫ್ಘಾನಿಸ್ತಾನದ ರಾಷ್ಟ್ರಗೀತೆಯಲ್ಲೂ ಗೊಂದಲ

ಹಾಗೆ ನೋಡಿದರೆ, ತಾಲಿಬಾನ್ ಎನ್ನುವುದು ಸರ್ಕಾರವಷ್ಟೇ. ಅಫ್ಘಾನಿಸ್ತಾನದಲ್ಲಿನ ಬಾವುಟ ಹಾಗೂ ರಾಷ್ಟ್ರೀಯ ಗೀತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನುವ ಹಾಗೆ ಇಲ್ಲ. ತಾಲಿಬಾನಿಗಳು, ಈಗಿರುವ ಬಾವುಟವನ್ನು ಹಾಗೂ ರಾಷ್ಟ್ರಗೀತೆಯನ್ನು ಬದಲಿಸುವ ಪ್ಲಾನ್ ನಲ್ಲಿದ್ದಾರೆ, ಈಗಾಗಲೆ ರಾಷ್ಟ್ರ ಗೀತೆಯ ರಚನೆ ಕೊನೆಯ ಹಂತದಲ್ಲಿದೆ ಎಂದು ತಾಲಿಬಾನಿ ಕಾರ್ಯದರ್ಶಿ ಜಬೀಹುಲ್ಲಾ ಹೇಳಿಕೆ ನೀಡಿದ್ದಾರೆ. ಇದೆ ಗೊಂದಲ ಬಾಂಗ್ಲಾದಲ್ಲಿರುವ ಅಫ್ಘಾನ್ ಅಂಡರ್ 19 ಆಟಗಾರರಿಗೂ ಸೇರಿದಂತೆ ಎಲ್ಲ ಕ್ರಿಕೆಟಿಗರಿಗೂ ಸಾಕಷ್ಟು ಗೊಂದಲ ಉಂಟು ಮಾಡಿದೆ.

ಭಾರತ ಹಾಗೂ ಅಫ್ಘಾನ್ ಕ್ರಿಕೆಟ್ ಸಂಬಂಧ ಹೇಗಿತ್ತು ?
ಕಾಬೂಲ್​ ಕ್ರಿಕೆಟ್ ಮೈದಾನಕ್ಕೂ ಭಾರತಕ್ಕೂ ಇದೆ ನಂಟು

ಇಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಆ ಸ್ಥಾನಕ್ಕೆ ತಲುಪಲು ಭಾರತದ ಪಾಲು ಬಹಳಷ್ಟಿದೆ. ಕಾಬೂಲ್​ನಲ್ಲಿರುವ ಅಫ್ಘಾನ್ ಕ್ರಿಕೆಟ್ ಬೋರ್ಡ್​ನ ಮೈದಾನವನ್ನು ಭಾರತೀಯರೇ ಸ್ಥಾಪಿಸಿದ್ದು. ಇಂದು ಸಹ ಆಟಗಾರರು ಅಭ್ಯಾಸ ಮಾಡುತ್ತಿರುವ ಮೈದಾನ ಭಾರತದ ಕೊಡುಗೆ ಅನ್ನೋದನ್ನು ಆಟಗಾರರು ಮರೆಯುವ ಹಾಗೇ ಇಲ್ಲ. ಅಲ್ಲದೆ 2001ರಲ್ಲಿ ಬಾಂಗ್ಲಾ ವಿರುದ್ಧ ನಡೆದ ಅಫ್ಘಾನ್ ಮೊದಲ ಪಂದ್ಯಕ್ಕೆ ಭಾರತ ನವದೆಹಲಿಯ ಮೈದಾನವನ್ನು ಅವರಿಗಾಗಿ ಬಿಟ್ಟುಕೊಟ್ಟಿತ್ತು. ಇದರಿಂದ ಅಂದಿನಿಂದಲೂ, ಅಫ್ಘಾನಿಸ್ತಾನದ ಕ್ರಿಕೆಟ್ ಜಗತ್ತಿಗೆ ಭಾರತದ ಕೊಡುಗೆ ಬಹಳಷ್ಟಿದೆ. ಇದು ಮುಂದುವರೆಯುವುದಾ ಎನ್ನುವುದು ಮಾತ್ರ ಇನ್ನು ಪ್ರಶ್ನೆಯಾಗೆ ಉಳಿದಿದೆ.

ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಕತೆ ಏನು ?
ಈ ಪ್ರಶ್ನೆಗೆ ಉತ್ತರ ನಿಮಗೀಗಾಲೇ ತಿಳಿದಿರಬೇಕು. ಹೌದು, ಕಳೆದ ಬಾರಿ ವರ್ಡ್ ಕಪ್ ನಲ್ಲಿ ಒಳ್ಳೆಯ ಪ್ರದರ್ಶನ ತೋರಿದ್ದ ಮಹಿಳಾ ಅಫ್ಘಾನ್ ತಂಡ ಇನ್ನೆಂದೂ ಕ್ರಿಕೆಟ್ ಆಡುವ ಹಾಗಿಲ್ಲ. ಅಫ್ಘಾನ್ ಬಳಿ 25 ಜನ ಮಹಿಳ ಆಟಗಾರರಿದ್ದರು, ಅವರೆಲ್ಲರೂ ಈಗ ಅಫ್ಘಾನ್ ಪಂಜರಕ್ಕೆ ಸಿಲುಕಿದ್ದಾರೆ. ಕ್ರಿಕೆಟ್ ಅಷ್ಟೆ ಅಲ್ಲ ಇನ್ಯಾವ ಕ್ರೀಡೆಯಲ್ಲೂ ಮಹಿಳೆಯರು ಭಾಗವಹಿಸುವ ಹಾಗಿಲ್ಲ. ಇದುವರೆಗೂ ಮಹಿಳೆಯರು ಗೆದ್ದ ಟ್ರೋಫಿಗಳು, ಅವರು ಆಟವಾಡುತ್ತಿರುವ ಫೋಟೋಗಳನ್ನು ಸುಟ್ಟು ಹಾಕಿಬಿಡಿ ಎಂದು ತಾಲಿಬಾನಿಗಳು ಹೇಳಿದ್ದಾರೆ.

ಒಲಿಂಪಿಕ್​ನಲ್ಲೂ ಅಫ್ಘಾನಿಗಳ ಸುಳಿವು ಇರಲಿಲ್ಲ
ಹಲವು ಕಷ್ಟಗಳನ್ನು ಭೇದಿಸಿ ಆಡಿದ ಪ್ಯಾರ ಅಥ್ಲೀಟ್

ಈ ಭಾರಿಯ ಟೊಕಿಯೊ ಒಲಿಂಪಿಕ್ ನಲ್ಲಿ ಅಫ್ಘಾನಿಸ್ತಾನದಿಂದ ಒಬ್ಬ ಪಟುವು ಸಹ ಭಾಗಿಯಾಗಿರಲಿಲ್ಲ. ಕಾರಣ ಏನು ಅನ್ನೋದು ಗೊತ್ತಿರುವ ವಿಚಾರ. ಆದರೆ ಪ್ಯಾರ ಒಲಿಂಪಿಕ್ ನಲ್ಲಿ ಅಫ್ಘಾನಿಸ್ತಾನದಿಂದ ಹೊಸನ್ ರಸುಲಿ ಎನ್ನುವ ಆಟಗಾರ ಮಾತ್ರ, ಅಫ್ಘಾನ್ ನಲ್ಲಿರುವ ಅಷ್ಟು ಕಷ್ಟ ಕೋಟಲೆಯನ್ನು ಭೇದಿಸಿ ಟೋಕಿಯೋ ನೆಲದಲ್ಲಿ ಲಾಂಗ್ ಜಂಪ್ ಮಾಡಿದ್ದಾನೆ.

ಈಗ ಅಫ್ಘಾನಿಸ್ತಾನದ ಪುರುಷ ಆಟಗಾರರು ಒಳ್ಳೆ ಫಾರ್ಮ್​ನಲ್ಲಿದ್ದಾರೆ. ಈ ಸಮಯದಲ್ಲಿ ಅವರಿಗೆ ನಿರ್ಬಂಧ ಹೇರಿದರೆ ತಾಲಿಬಾನಿಗಳಿಗೆ ನಷ್ಟ. ಇದನ್ನು ಅರಿತ ತಾಲಿಬಾನಿಗಳು, ಪುರುಷರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಎಂದಿನಂತೆ ಮಹಿಳೆಯರಿಗೆ ಅನ್ಯಾಯವಾಗಿದೆ ಅನ್ನೋದು ಸುಳ್ಳಲ್ಲ. ಅಫ್ಘಾನಿಸ್ತಾನದಲ್ಲಿ ಕೈನಲ್ಲಿ ಬಂದೂಕನ್ನು ಹಿಡಿದು ಆಟವಾಡುತ್ತಿರುವ ಉಗ್ರರಿಗೆ, ನಿಜವಾದ ಪಂದ್ಯ ಆಟ ಎಂದರೆ ಏನು ಅನ್ನೋದರ ಅರಿವಾಗಬೇಕಿದೆ. ಸದ್ಯಕ್ಕೆ ಕ್ರಿಕೆಟ್​ಗೆ ಮಾತ್ರ ಅವಕಾಶ ಸಿಕ್ಕಿದೆ. ಇನ್ನುಳಿದಂತೆ ಯಾವ ಸ್ಪೋರ್ಟ್ಸ್​ಗಳಿಗೂ ತಾಲಿಬಾನ್ ಅವಕಾಶ ಕಲ್ಪಿಸಿಲ್ಲ. ಈ ವಿಚಾರವೂ ಮತ್ತೆ ಯಾವಾಗ ಬದಲಾಗುತ್ತೆ ಅನ್ನೋದು ಸಹ ಗೊತ್ತಿಲ್ಲ.

Source: newsfirstlive.com Source link