ಪ್ರಧಾನಿ ಮೋದಿ ಶಹಬ್ಬಾಶ್​ಗಿರಿ.. ಹಿಮಾಚಲ ಪ್ರದೇಶದಲ್ಲಿ ಶೇ.100 ವ್ಯಾಕ್ಸಿನೇಷನ್​ ಸಾಧನೆ ಆಗಿದ್ದು ಹೇಗೆ..?

ಪ್ರಧಾನಿ ಮೋದಿ ಶಹಬ್ಬಾಶ್​ಗಿರಿ.. ಹಿಮಾಚಲ ಪ್ರದೇಶದಲ್ಲಿ ಶೇ.100 ವ್ಯಾಕ್ಸಿನೇಷನ್​ ಸಾಧನೆ ಆಗಿದ್ದು ಹೇಗೆ..?

ಹಿಮಾಚಲ ಪ್ರದೇಶ ಗುಡ್ಡಗಾಡು, ಪರ್ವತಗಳಿಂದ ಕೂಡಿರೋ ರಾಜ್ಯ. ಇಂತಹ ರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಹೋರಾಟದ ಚಾಂಪಿಯನ್‌ ಅಂದಿದ್ದಾರೆ. ಅದನ್ನು ಕೇಳಿ ಇಡೀ ದೇಶವೇ ಹೆಮ್ಮೆಪಡುತ್ತಿದೆ.

ಹಿಮಾಚಲ ಪ್ರದೇಶ ಅಂದ ತಕ್ಷಣ ನೆನಪಾಗುವುದು ಅಲ್ಲಿಯ ಸುಂದರ ಪ್ರವಾಸಿ ತಾಣಗಳು, ದೊಡ್ಡ ದೊಡ್ಡ ಪರ್ವತ ಶ್ರೇಣಿಗಳು, ಶಿಖರಗಳು, ಗುಡ್ಡಗಾಡು ಪ್ರದೇಶಗಳು. ಅಲ್ಲಿಯ ಪರಿಸರವೇನೋ ನೋಡಲು ಸುಂದರವಾಗಿದೆ. ಆದ್ರೆ, ಅಲ್ಲಿ ರಸ್ತೆ, ನೀರು, ಸಾರಿಗೆ, ವಿದ್ಯುತ್‌ ಸಲಭ್ಯ ಕಲ್ಪಿಸುವುದೇ ದೊಡ್ಡ ಸವಾಲು. ಕೇಂದ್ರ, ರಾಜ್ಯ ಸರ್ಕಾರಗಳು ಅದೆಷ್ಟೇ ಪ್ರಯತ್ನಿಸುತ್ತಿದ್ರೂ ಇಂದಿಗೂ ಕೂಡ ಅದೆಷ್ಟೋ ಹಳ್ಳಿಗಳಿಗೆ ರಸ್ತೆ, ನೀರು, ವಿದ್ಯುತ್‌, ಸಾರಿಗೆ ಸೌಲಭ್ಯವಿಲ್ಲ. ಆದ್ರೆ, ಇಂತಹ ಕೊರತೆಗಳ ನಡುವೆಯೇ ಹಿಮಾಚಲ ಪ್ರದೇಶ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. ಆ ಸಾಧನೆ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಪ್ರತಿಯೊಂದು ರಾಜ್ಯಕ್ಕೂ ಮೇಲ್ಪಂಕ್ತಿ ಹಾಕಿದೆ.

ಪ್ರತಿಯೊಬ್ಬ ನಾಗರಿಕರಿಗೂ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡಿದ ಭಾರತದ ಮೊದಲ ರಾಜ್ಯ ಹಿಮಾಚಲ ಪ್ರದೇಶವಾಗಿದೆ. ಈ ಸಾಧನೆ ಮಾಡಿದ ಹಿಮಾಚಲ ಪ್ರದೇಶ ಕೊರೊನಾ ವಿರುದ್ಧದ ಹೋರಾಟದಲ್ಲಿ ಚಾಂಪಿಯನ್‌ ಪಟ್ಟ ಪಡೆದುಕೊಂಡಿದೆ. ರಾಜ್ಯವು ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿರುವುದನ್ನು ನಾನು ನೋಡಿದ್ದೇನೆ. ಇಂತಹ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ್ದೀರಿ. ನಾನು ಇಲ್ಲಿ ಸರ್ಕಾರ ಮತ್ತು ತಂಡಗಳನ್ನು ಅಭಿನಂದಿಸಲು ಮತ್ತು ಧನ್ಯವಾದ ಹೇಳಲು ಬಯಸುತ್ತೇನೆ
-ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯಕರ್ತರೊಂದಿಗೆ ಮತ್ತು ಲಸಿಕಾ ಫಲಾನುಭವಿಗಳೊಂದಿಗೆ ವರ್ಚುವಲ್‌ ಸಂವಾದ ಏರ್ಪಡಿಸಿದ್ರು. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶವನ್ನು ಕೊರೊನಾ ವಿರುದ್ಧದ ಹೋರಾಟದ ಚಾಂಪಿಯನ್‌ ಎಂದು ಹೊಳಿದ್ದಾರೆ. ವ್ಯಾಕ್ಸಿನೇಷನ್‌ನಲ್ಲಿ ಆ ರಾಜ್ಯ ಮಾಡಿರೋ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಯ ಮಾತನಾಡಿ ಅವರ ಕಾರ್ಯಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಕೋವಿಡ್‌ ಮೊದಲ ಡೋಸ್‌ ವಿತರಣೆಯಲ್ಲಿ ಶೇ.100 ರಷ್ಟು ಸಾಧನೆ
ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಹಿಮಾಚಲ ಪ್ರದೇಶ

18 ವರ್ಷ ಮೇಲ್ಪಟವರಿಗೆ ದೇಶಾದ್ಯಂತ ವ್ಯಾಕ್ಸಿನ್‌ ವಿತರಣೆ ನಡೆಯುತ್ತಿದೆ. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಕೂಡ ವ್ಯಾಕ್ಸಿನ್‌ ವಿತರಣೆ ಮಾಡಲಾಗುತ್ತಿದೆ. ಆದ್ರೆ, ಇಂದು ಹಿಮಾಚಲ ಪ್ರದೇಶ ಇಡೀ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿದೆ. ಅದೇನಂದ್ರೆ ರಾಜ್ಯದಲ್ಲಿ ಲಸಿಕೆ ಪಡೆಯಲು ಅರ್ಹತೆ ಪಡೆದ ಅಂದ್ರೆ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮೊದಲ ಡೋಸ್‌ ನೀಡಲಾಗಿದೆ. ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ರಾಜ್ಯವಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು, ಹಿಮಾಚಲ ಪ್ರದೇಶವನ್ನು ಕೊರೊನಾ ವಿರುದ್ಧ ಹೋರಾಟದ ಚಾಂಪಿಯನ್‌ ಎಂದು ಹೇಳಿದ್ದಾರೆ.

55,43,474 ಜನರಿಗೆ ಮೊದಲ ಡೋಸ್‌
18 ಲಕ್ಷಕ್ಕೂ ಅಧಿಕ ಮಂದಿಗೆ ಡಬಲ್‌ ಡೋಸ್‌

ಹಿಮಾಚಲ ಪ್ರದೇಶದ ಜನಸಂಖ್ಯೆ ಸುಮಾರು 75 ಲಕ್ಷ ಇದೆ. ಅದರಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ಪರ್ಮಿಷನ್‌ ನೀಡಲಾಗಿದೆ. ಹೀಗಾಗಿ 55 ಲಕ್ಷದ 43 ಸಾವಿರದ 474 ಜನರಿಗೆ ಮೊದಲ ಡೋಸ್‌ ನೀಡಲಾಗಿದೆ. ಇನ್ನು ಸುಮಾರು 18 ಲಕ್ಷಕ್ಕೂ ಅಧಿಕ ಮಂದಿಗೆ ಡಬಲ್‌ ಡೋಸ್‌ ನೀಡಲಾಗಿದೆ. ನವೆಂಬರ್‌ ಅಂತ್ಯಕ್ಕೂ ಮುನ್ನ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಡಬಲ್‌ ಡೋಸ್‌ ನೀಡಲಾಗುತ್ತದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ತಿಳಿಸಿದ್ದಾರೆ.

ಲಸಿಕೆ ವಿತರಣೆಗೆ ಹಿಮಾಚಲ ಪ್ರದೇಶದಲ್ಲಿ ಇತ್ತು ಸವಾಲು
ಸವಾಲು ಮೆಟ್ಟಿನಿಂತು ಸಾಧನೆ ಮಾಡಿದ ಆರೋಗ್ಯ ಕಾರ್ಯಕರ್ತರು

ಹಿಮಾಚಲ ಪ್ರದೇಶ ವಿಸ್ತೀರ್ಣತೆಯಲ್ಲಿ ಚಿಕ್ಕ ರಾಜ್ಯ ಇರಬಹುದು, ಅಲ್ಲಿಯ ಜನಸಂಖ್ಯೆ ಕೇವಲ 75 ಲಕ್ಷ ಇರಬಹುದು. ಆದ್ರೆ, ಲಸಿಕೆ ವಿತರಣೆಗೆ ಬೆಟ್ಟದಷ್ಟು ಸವಾಲು ಇತ್ತು. ಪ್ರತಿ ಕ್ಷಣವನ್ನು ಸವಾಲಾಗಿ ಸ್ವೀಕರಿಸಬೇಕಾಗಿತ್ತು. ಯಾಕಂದ್ರೆ, ಹಿಮಾಚಲ ಪ್ರದೇಶ ಉಳಿದ ರಾಜ್ಯಗಳಂತೆ ಅಲ್ಲ. ಅದು ದೊಡ್ಡ ದೊಡ್ಡ ಶಿಖರ, ಪರ್ವತಗಳಿಂದ ಕೂಡಿರೋ ರಾಜ್ಯ. ಶೇಕಡಾ 90 ರಷ್ಟು ಜನಸಂಖ್ಯೆ ಹಳ್ಳಿಗಳಲ್ಲಿಯೇ ವಾಸವಾಗಿದ್ದಾರೆ. ಎಷ್ಟೋ ಹಳ್ಳಿಹಳಿಗೆ ಇಂದಿಗೂ ರಸ್ತೆಗಳು ಇಲ್ಲ, ನೀರು ಇಲ್ಲ, ವಿದ್ಯುತ್‌ ಇಲ್ಲ, ಸಾರಿಗೆ ಸೌಲಭ್ಯವೂ ಇಲ್ಲ. ಹಾಗಾದ್ರೆ, ಅಲ್ಲಿಯ ಆರೋಗ್ಯ ಕಾರ್ಯಕರ್ತರು ಯಾವ ರೀತಿಯ ಸವಾಲನ್ನು ಎದುರಿಸಿರಬಹುದು ಅನ್ನೋದನ್ನು ಯೋಚಿಸಿ ನೋಡಿ. ಎಷ್ಟೋ ಹಳ್ಳಿಗಳಿಗೆ 10 ರಿಂದ 15 ಕಿಲೋ ಮೀಟರ್‌ ನಡೆದುಕೊಂಡು ಹೋಗಿಯೇ ವ್ಯಾಕ್ಸಿನ್‌ ನೀಡಿದ್ದಾರೆ.

ಕಾಲಿನ ಮೂಳೆ ಮುರಿದಿದ್ದರೂ ವ್ಯಾಕ್ಸಿನ್‌ ನೀಡಿದ ಆರೋಗ್ಯ ಕಾರ್ಯಕರ್ತೆ
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅಭಿನಂದನೆ ಹೇಳಿದ ನರೇಂದ್ರ ಮೋದಿ

ಆಕೆಯ ಹೆಸರು ಕಾರ್ಮೊದೇವಿ, ಇವರು ಹಿಮಾಚಲ ಪ್ರದೇಶದ ಉನಾ ಪಟ್ಟಣದ ಆರೋಗ್ಯ ಕಾರ್ಯಕರ್ತೆಯರಾಗಿದ್ದಾರೆ. ದುರಾದೃಷ್ಟವಶಾತ್‌ ಅಪಘಾತವೊಂದರಲ್ಲಿ ಕಾಲಿನ ಮೂಳೆ ಮುರಿದುಕೊಳ್ಳುತ್ತಾರೆ. ಆದ್ರೆ, ಆಕೆ ಕಾಲಿನ ಮೂಳೆ ಮುರಿದಿದೆ ಅಂತ ಎಂದೂ ಸುಮ್ಮನೇ ಕುಳಿತವರಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದ ಮರುದಿನವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಫಲಾನುಭವಿಗಳಿವೆ ವ್ಯಾಕ್ಸಿನ್‌ ಹಾಕಿದ್ದಾರೆ. ಇಲ್ಲಿಯವರೆಗೆ ಇವರು 22,500 ಡೋಸ್‌ ಲಸಿಕೆ ನೀಡಿದ್ದಾರೆ. ಇವರ ಕಾರ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಮಾತನಾಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

 

ಉಳಿದ ರಾಜ್ಯಗಳಿಗೆ ಮೇಲ್ಪಂಕ್ತಿ ಹಾಕಿದ ಹಿಮಾಚಲ ಪ್ರದೇಶ
ಭಾರತದಲ್ಲಿ ಈಗಾಗಲೇ ಕೊರೊನಾ ಎರಡು ಅಲೆಗಳು ಬಂದು ಹೋಗಿವೆ. ಈ ನಡುವೆ ಮೂರನೇ ಅಲೆಯ ಭೀತಿ ಕೂಡ ಉಂಟಾಗಿದೆ. ಅದರಲ್ಲಿಯೂ ಕೇರಳದಲ್ಲಿ ಪ್ರತಿನಿತ್ಯ 25 ಸಾವಿರಕ್ಕೂ ಹೆಚ್ಚಿನ ಕೇಸ್‌ ದಾಖಲಾಗುತ್ತಿರುವುದು ಆತಂಕ ಹುಟ್ಟಿಸಿದೆ. ಮೂರನೇ ಅಲೆ ಆರಂಭವಾಗಿಯೇ ಬಿಡ್ತು ಅನಿಸುತ್ತಿದೆ. ಹೀಗಾಗಿಯೇ ಎಲ್ಲಾ ರಾಜ್ಯಗಳು ವ್ಯಾಕ್ಸಿನ್‌ ವಿತರಣೆಯ ವೇಗವನ್ನು ಹೆಚ್ಚಿಸಬೇಕಿತ್ತು. ಈಗಲೂ ಕೂಡ ಎಷ್ಟೋ ರಾಜ್ಯಗಳು ಶೇಕಡಾ 50 ರಷ್ಟು ಗುರಿ ಸಾಧಿಸಿಲ್ಲ. ಆ ಎಲ್ಲಾ ರಾಜ್ಯಗಳಿಗೂ ಹಿಮಾಚಲ ಪ್ರದೇಶ ಖಂಡಿತ ಮೇಲ್ಪಂಕ್ತಿ ಹಾಕಿದೆ.

68.5 ಕೋಟಿ ಜನರಿಗೆ ಡೋವಿಡ್‌ ವ್ಯಾಕ್ಸಿನ್‌
15.9 ಕೋಟಿ ಜನರಿಗೆ ಡಬಲ್‌ ವ್ಯಾಕ್ಸಿನ್‌

ಡಿಸೆಂಬರ್‌ ಅಂತ್ಯಕ್ಕೆ ಕೋವಿಡ್‌ ವ್ಯಾಕ್ಸಿನ್‌ ವಿತರಣೆ ಪೂರ್ಣಗೊಳಿಸಲು ದೇಶದಲ್ಲಿ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ ವ್ಯಾಕ್ಸಿನ್‌ ವಿತರಣೆಯ ವೇಗವನ್ನು ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 68.5 ಕೋಟಿ ಜನರಿಗೆ ಸಿಂಗಲ್‌ ಡೋಸ್‌ ಲಸಿಕೆ ನೀಡಲಾಗಿದೆ. ಇನ್ನು 15.9 ಕೋಟಿ ಜನರಿಗೆ ಡಬಲ್‌ ಡೋಸ್‌ ಲಸಿಕೆ ನೀಡಲಾಗಿದೆ. ಕೊರೊನಾ ಮೂರನೇ ಅಲೆ ಆರಂಭವಾಗೋ ಮುನ್ನವೇ ಸಂಪೂರ್ಣವಾಗಿ ವ್ಯಾಕ್ಸಿನ್ ವಿತರಣೆ ಮಾಡಬೇಕಾದ ಅಗತ್ಯವಿದೆ. ಹಿಮಾಚಲ ಪ್ರದೇಶವನ್ನೇ ಉಳಿದ ರಾಜ್ಯಗಳು ಪ್ರೇರಣೆಯಾಗಿ ತೆರೆದುಕೊಳ್ಳಬೇಕು. ಆ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು. ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ಹಿಮಾಚಲ ಪ್ರದೇಶ ವ್ಯಾಕ್ಸಿನ್‌ ವಿತರಣೆಯಲ್ಲಿ ಶೇ.100 ರಷ್ಟು ಗುರಿ ಸಾಧಿಸಿದೆ. ನಿಜಕ್ಕೂ ಇದು ಉಳಿದ ರಾಜ್ಯಗಳಿಗೆ ಪ್ರೇರಣೆಯಾಗಿದೆ. ಆದಷ್ಟು ಶೀಘ್ರದಲ್ಲಿಯೇ ಉಳಿದ ರಾಜ್ಯಗಳು ಶೇ.100 ರಷ್ಟು ಗುರಿ ಸಾಧಿಸುವಂತಾಗಲಿ.

Source: newsfirstlive.com Source link