ರಾತ್ರೋ ರಾತ್ರಿ ಡಿಸಿ ಭೇಟಿಯಾದ ಸೋತ ಎಂಇಎಸ್ ಅಭ್ಯರ್ಥಿಗಳು

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದೆ.

ಬೆಳಗಾವಿ ಪಾಲಿಕೆ ಇತಿಹಾಸದಲ್ಲಿಯೇ ಎಂಇಎಸ್ ತೀರಾ ಹೀನಾಯ ಸೋಲು ಕಂಡಿದೆ. ಹೀಗಾಗಿ ವಿವಿ ಪ್ಯಾಟ್ ಬಳಸದೇ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ 40ಕ್ಕೂ ಹೆಚ್ಚು ಸೋತ ಎಂಇಎಸ್ ಅಭ್ಯರ್ಥಿಗಳು ರಾತ್ರೋ ರಾತ್ರಿ ಡಿಸಿ ಮಹಾಂತೇಶ ಹಿರೇಮಠ ಅವರ ನಿವಾಸಕ್ಕೆ ತೆರಳಿ ಮರು ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ

ಮನವಿ ಪತ್ರದಲ್ಲಿ ಕೆಲ ಕನ್ನಡ, ಉರ್ದು ಸೋತ ಅಭ್ಯರ್ಥಿಗಳು ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀನಾಯ ಸೋಲಿನಿಂದಾಗಿ ಕಂಗೆಟ್ಟಿರುವ ಎಂಇಎಸ್ ಅಭ್ಯರ್ಥಿಗಳು ರಾತ್ರಿಯೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾರೆ.

ಬಿಜೆಪಿ ಭರ್ಜರಿ ಗೆಲುವು
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಬಿಜೆಪಿ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದೆ.ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡ್ ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಈ ಮೂಲಕ ಎಂಇಎಸ್ ಪುಂಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಂತಾಗಿದೆ.

ಬಿಜೆಪಿ 36, ಕಾಂಗ್ರೆಸ್ 10, ಎಂಇಎಸ್ 2, ಪಕ್ಷೇತರ 10 ಹಾಗೂ ಎಐಎಂಐಎಂ 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಬಿಜೆಪಿ ವಿಜಯೋತ್ಸವದ ವೇಳೆ ನೂಕು ನುಗ್ಗಲು ಹೆಚ್ಚಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಸಹ ಮಾಡಿದ್ದರು.

Source: publictv.in Source link