ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ, ಇರೋದು ಹಳ್ಳಿಯ ಕಚ್ಚಾ ರಸ್ತೆಗಿಂತ ಕಡೆ

– ಮಂಚೇನಹಳ್ಳಿ ಬಂದ್ ಮಾಡಿ ಸಾರ್ವಜನಿಕರ ಆಕ್ರೋಶ

ಚಿಕ್ಕಬಳ್ಳಾಪುರ: ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ 234. ಆದರೆ ಅದರ ಸ್ಥಿತಿ ಹಳ್ಳಿಯ ಕಚ್ಚಾ ರಸ್ತೆಗಿಂದ ಕಡೆಯಾಗಿದೆ. ಐದಾರು ವರ್ಷದಿಂದಲೂ ಈ ರಸ್ತೆ ಹಾಗೇ ಇದೆ. ಇಲ್ಲಿ ಅಪಘಾತಗಳಿಗೆ ಲೆಕ್ಕವೇ ಇಲ್ಲ, ಜನರ ಜೀವಕ್ಕೆ ಬೆಲೆಯೇ ಇಲ್ಲ ಎನ್ನುವಂತಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದು, ಇದರಿಂದ ಸಿಟ್ಟಿಗೆದ್ದ ತಾಲೂಕಿನ ಮಂಚೇನಹಳ್ಳಿಯ ಜನ ಊರನ್ನೇ ಬಂದ್ ಮಾಡಿ, ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಯ ಜೀವ ಉಳಿಸಬೇಕಾದ ಅಂಬುಲೆನ್ಸ್ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಹರಸಹಾಸ ಪಟ್ಟು ಸಂಚಾರ ಮಾಡುವಂತಾಗಿದೆ. ಹಳ್ಳ-ಕೊಳ್ಳಗಳ ರಾಷ್ಟ್ರೀಯ ಹೆದ್ದಾರಿ-234 ರಲ್ಲಿ ವಾಹನಗಳಲ್ಲಿ ಸಂಚರಿಸಲು ಜನ ಹೈರಾಣಾಗಿದ್ದಾರೆ. ಇದು ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ 234, ಆದರೆ ಹಳ್ಳಿಯ ಕಚ್ಚಾ ರಸ್ತೆಗಿಂತ ಕಡೆಯಾಗಿದೆ. ಚಿಕ್ಕಬಳ್ಳಾಪುರ -ಗೌರಿಬಿದನೂರು ಮಾರ್ಗದಲ್ಲಿ ಚಿಕ್ಕಬಳ್ಳಾಪುರ-ಮಂಚೇನಹಳ್ಳಿಯ ಮಾರ್ಗ ಮಧ್ಯೆ ಕಣಿವೆ ಪ್ರದೇಶದಲ್ಲಿ ಚೆನ್ನಾಗಿದ್ದ ರಸ್ತೆಯನ್ನ ಅಗೆದು ರಾಷ್ಟ್ರೀಯ ಹೆದ್ದಾರಿ ಮಾಡುತ್ತೇವೆಂದು ಐದಾರು ವರ್ಷಗಳಿಂದ ಕಾಲಹರಣ ಮಾಡಲಾಗುತ್ತಿದೆ. ಸುಮಾರು 5-6 ಕಿ.ಮೀ. ದೂರದ ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹೈರಾಣಾಗಿದ್ದಾರೆ. ಪ್ರತಿದಿನ ಸಾವಿರಾರು ಮಂದಿ ಇದೇ ರಸ್ತೆ ಮೂಲಕ ಓಡಾಡುತ್ತಾರೆ. ವಿದ್ಯಾರ್ಥಿಗಳು, ರೋಗಿಗಳು, ರೈತರು, ಜನಸಾಮಾನ್ಯರು ಸಂಚಾರ ಮಾಡೋಕೆ ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ಗರ್ಭಿಣಿ ಮಹಿಳೆ ವಾಹನದಲ್ಲಿ ಈ ರಸ್ತೆಯಲ್ಲಿ ಸಂಚರಿಸಿದರೆ ಆಸ್ಪತ್ರೆಗೆ ಹೋಗುವ ಮುನ್ನ ಹೆರಿಗೆಯಾಗೋದು ಗ್ಯಾರಂಟಿ ಎಂದು ಹೋರಾಟಗಾರ್ತಿ ಪ್ರಭಾ ಹೇಳಿದ್ದಾರೆ. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು

ಮಂಚೇನಹಳ್ಳಿ ಬಂದ್ ಮಾಡಿ ಆಕ್ರೋಶ
ಐದಾರು ವರ್ಷಗಳಿಂದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ, ಪ್ರತಿಭಟನೆ, ಮಾಡಿ ರೋಸಿ ಹೋದ ಮಂಚೇನಹಳ್ಳಿ ಗ್ರಾಮಸ್ಥರು ಇಂದು ಮಂಚೇನಹಳ್ಳಿ ಹಿತರಕ್ಷಣಾ ಸಮಿತಿ ಹೆಸರಲ್ಲಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಧರಣಿ ಸ್ಥಳದಲ್ಲೇ ಆಡುಗೆ ಮಾಡಿ, ಊಟ ಮಾಡಿ, ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಹೆದ್ದಾರಿ ಕಾಮಗಾರಿ ಕಂಪ್ಲೀಟ್ ಮಾಡಿ ಕಣಿವೆಯಲ್ಲಿ ಅಂಕು ಡೊಂಕಿನ ರಸ್ತೆ ಬದಲು ಮೇಲ್ಸುತುವೆ ಮಾಡಿ. ಉತ್ತಮ ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್, ರೈತ ಸಂಘಟನೆ ಮುಖಂಡ ಲಕ್ಷ್ಮೀನಾರಾಯಣ್, ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೂಪರ್ ಮ್ಯಾನ್ ಆದ ರಾಯನ್

blank

ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ವೈಯಕ್ತಿಕ ಕಾರಣಗಳಿಂದ ಕಾಮಗಾರಿ ಪೂರ್ಣ ಮಾಡದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅಂದಿನಿಂದ ಈ ರಸ್ತೆ ಹಾಗೇ ಇದೆ. 5-6 ವರ್ಷಗಳಿಂದ ಜನ ಈ ರಸ್ತೆಯಲ್ಲಿ ಪ್ರಾಣ ಪಣಕ್ಕಿಟ್ಟು ಒಡಾಡುವಂತಾಗಿದೆ. ಸದ್ಯ ಒಂದೆರೆಡು ತಿಂಗಳಲ್ಲಿ ತಾತ್ಕಾಲಿಕವಾಗಿ ಹಳ್ಳ ಕೊಳ್ಳಗಳಿಗೆ ತೇಪೆ ಹಾಕಿ ಸರಿಪಡಿಸುತ್ತೇವೆ. ಬಳಿಕ ಶಾಶ್ವತ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source: publictv.in Source link