(GUDI SIR)

(GUDI SIR)

ತಮಾಷೆ ಮಾಡೋಕೂ ಮಿತಿ ಇರಬೇಕು.. ಅತಿಯಾದರೆ ಅದು ವಿಷ! ಹಾಂಗಂತ ಕಾಮಿಡಿ ಎಲ್ಲಿ ನಡೆಯಲ್ಲ ಹೇಳಿ? ಮನಸ್ಸಿನ ಗಲ್ಲಿ ಗಲ್ಲಿಯಲ್ಲೂ ಬೇರೂರಿರುವ ತಮಾಷೆ ಅರ್ಥೈಸಿಕೊಳ್ಳವವರ ಮನಸಿನಾಲಪನೆಯಲ್ಲಿ ಇರುತ್ತೆ.. ಈ ಸ್ಟೋರಿ ಓದಿದ್ಮೇಲೆ ‘ವಾಟ್​ ಏ ಕಾಮಿಡಿ’! ಎಂದು ಉದ್ಘರಿಸ್ಬಹುದು.

‘ಒಂದು ಪಂಚಾಯತಿ ಮಾಡೇ ಬಿಡುವಾ’
ಆದರೆ ಇಲ್ಲಿ ಮೂರು ಹೆಣ್ಣಿನ ಭವಿಷ್ಯ ಹಾಗೂ ಒಂದು ಗಂಡಿನ ಬದುಕು ಇದೆ. ನೋಡೋರಿಕೆ, ಕೇಳೋರಿಗೆ ಇಂಟರೆಸ್ಟಿಂಗ್ ಆಗಿದ್ದರೂ ನಮ್ಮ-ನಿಮ್ಮ ಮಧ್ಯದಲ್ಲಿ ಇಂಥವ್ರೂ ಇರ್ತಾರಾ? ಹೀಗೆಲ್ಲಾ ಆಗುತ್ತಿರುತ್ತಾ ಎಂಬ ಪ್ರಶ್ನೆ ನಿಮ್ಮನ್ನ ಕಾಡದೇ ಇರಲ್ಲ. ನಡೆದಿದ್ದೂ ಬೇರೆ ಎಲ್ಲೂ ಅಲ್ಲ. ನಮ್ಮದೇ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ!

‘ಬಿದ್ದೆ ಬಿದ್ದೆ ಲವ್ವಿನಲ್ಲಿ ಬಿದ್ದೆ’
ಕಿಲಾಡಿ ಹುಡುಗನೊಬ್ಬ ಯೌವನದ ಕನಸುಗಳನ್ನ ಬಚ್ಚಿಟ್ಕೊಂಡು ಬರೋಬ್ಬರಿ 27 ವರ್ಷಗಳ ಕಾಲ ಕಳೆದಿದ್ದಾನೆ. ‘ನಂಗೆ ಎಲ್ಲಿ ಹುಡ್ಗೀರ್ ಬೀಳ್ತಾರೆ ಗುರೂ’ ಎನ್ನುತ್ತಲೇ ಇದ್ದ, ಪುಣ್ಯಾತ್ಮನಿಗೆ ಒಂದೂವರೆ ವರ್ಷದ ಹಿಂದೆ ಒಂದು ಹುಡುಗಿ ಜೊತೆ ಪರಿಚಯ ಆಗುತ್ತೆ. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ‘ಬಿದ್ದೆ ಬಿದ್ದೆ ಲವ್ವಿನಲ್ಲಿ ಬಿದ್ದೆ’ ಎಂದು ತೇಲಾಡಿದ್ದಾರೆ. ಹೀಗೆ ದಿನಗಳು ಉರುಳುತ್ತಿರುವಷ್ಟರಲ್ಲೇ, ಅಂದರೆ ಆರು ತಿಂಗಳಷ್ಟರಲ್ಲೇ ಇನ್ನೊಂದು ಹುಡುಗಿ ಮೇಲೆ ಈತನ ಕಣ್ಣು ಬೀಳುತ್ತೆ. ಆರಂಭದಲ್ಲಿ ‘ಸ್ನೇಹಿತೆ’ ಅಂದ್ಕೊಂಡು ಶುರುವಾದ ಸ್ನೇಹಲೋಕ, ಕೊನೆಗೆ ‘ಪ್ರೇಮಲೋಕ’ವಾಗಿ ತಿರುಗುತ್ತೆ!

ನಂದು ‘ಎರಡನೇ ಸಲ’
ಮೊದಲ ಹುಡುಗಿ ಜೊತೆ ಲವ್ವಿ, ಡವ್ವಿ; ಎರಡನೇ ಪ್ರಿಯತಮೆ ಜೊತೆ ಪ್ರೇಮಲೋಕ ಸೃಷ್ಟಿಸಿದ ಮನ್ಮತ ಚೀಟಿಂಗ್ ಮಾಡ್ತಿದ್ದಾನೆಂದು ನಲ್ಲೆಯರಿಬ್ಬರ ಕನಸು, ಮನಸ್ಸಿನಲ್ಲಿಯೂ ಗೊತ್ತಾಗಲೇ ಇಲ್ಲ. ದಿನ ಸಾಗುತಲಿತ್ತು. ಒಂದಿನ ಮೊದಲ ಹುಡುಗಿಯನ್ನ ಭೇಟಿಯಾದ್ರೆ, ಮತ್ತೊಂದು ದಿನ ಎರಡನೆಯ ಹುಡುಗಿ ಜೊತೆ ‘ಎರಡನೇ ಸಲ’ ಎಂದು ಲಲ್ಲೆ ಹೊಡೆಯಲು ಹೋಗುತ್ತಿದ್ದ.

blank

ಒಂದಿನ ಏನಾಯ್ತು ಅಂದ್ರೆ.. ರಸಿಕ ಹುಡುಗಿ ಜೊತೆ ಇರುವಾಗ ಸಂಬಂಧಿಯೊಬ್ಬರು ನೋಡಿಬಿಟ್ಟಿದ್ದಾರೆ. ಹೊಟ್ಟೆ ಉರ್ಕೊಂಡ ಸಂಬಂಧಿ, ಆತನ ಮನೆಯವ್ರಿಗೆ ಹೋಗಿ ಪಿನ್ ಇಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮನೆಯವ್ರು ‘ಏನಪ್ಪ ನಿಂದ್ ಕಥೆ? ಅವಳ್ ಜೊತೆ ಏನ್ಮಾಡ್ತಿದ್ಯಾ?’ ಎಂದು ವಿಚಾರಿಸಿದ್ದಾರೆ. ‘ಇಲ್ಲ, ನಾನು ಆಕೆಯನ್ನ ಪ್ರೀತಿಸುತ್ತಿದ್ದೇನೆ, ಮದುವೆಯಾಗಲು ನಿರ್ಧರಿಸಿದ್ದೇನೆ’ ಎನ್ನುತ್ತಾನೆ.

ತ್ರಿಕೋನ ಸ್ಪರ್ಧೆ ಆಗಿದ್ದು ಇಲ್ಲಿ..!
ಮಗನ ಮಾತಿಗೆ ಸೊಪ್ಪು ಹಾಕದ ಹೆತ್ತವರು, ‘ನಿಂಗೆ ಬೇರೆ ವಧು ಹುಡುಕುತ್ತೇವೆ’ ಎಂದು ಗಂಟು ಬೀಳ್ತಾರೆ. ಈ ವಿಚಾರ ತಿಳ್ಕೊಂಡ ಮೊದಲನೇ ಹುಡುಗಿ, ಮನೆಯವ್ರ ಕರ್ಕೊಂಡು ಈತನ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಹುಡುಗನ ಮನೆಯಲ್ಲಿ ಹೈಡ್ರಾಮಾ ನಡೆಯುತ್ತಿರುವಾಗಲೇ, ಎರಡನೇ ಹುಡುಗಿಗೆ ಡೌಟ್ ಬರುತ್ತೆ.. ಏನೋ ನಡೆಯುತ್ತಿದೆ, ಆತನಿಂದ ನಂಗೆ ಮೋಸ ಆಗುತ್ತಿದೆಂಬ ಅನುಮಾನ ಮೂಡುತ್ತೆ.

ಕೂಡಲೇ ಎಚ್ಚೆತ್ತ ಆಕೆ, ಪೋಷಕರನ್ನ ಪುಸಲಾಯಿಸಿ ಹುಡುಗನ ಮನೆಗೆ ಬರ್ತಾಳೆ. ಈಗಾಗಲೇ ಮೊದಲ ಹುಡುಗಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರಿಯತಮ, ಎರಡನೇ ಹುಡುಗಿಯೂ ಹೆತ್ತವರ ಜೊತೆ ಮನೆಗೆ ಬಂದಿದ್ದನ್ನ ಕಂಡು ದಂಗಾದ! ಪ್ರಕರಣ ಇಲ್ಲಿಗೆ ಬಂದ್ಮೇಲೆ ಮನೆಯವ್ರಿಗೆ ಒಂದು ನಿರ್ಧಾರಕ್ಕೆ ಬರೋದು ಕಷ್ಟವಾಗಿ ಬಿಡುತ್ತದೆ.

ಊರವರ ಎಂಟ್ರಿ; ಒಂದೊಳ್ಳೆ ಟಾಸ್ಕ್​..!
ಮದುವೆ ವಿಚಾರದಲ್ಲಿ ತ್ರಿಕೋನ ಮುಖಕಗಳು ಕಾಣಿಸಿಕೊಂಡಾಗ, ಊರವರ ಮುಂದೆ ಈ ವಿಚಾರ ಹೋಗುತ್ತೆ. ಈ ಎಲ್ಲಾ ಘಟನೆಗಳು ನಡೆದು ಒಂದು ತಿಂಗಳು ಕಳೆದ ಬಳಿಕ, ಊರೋವ್ರೆಲ್ಲಾ ಸೇರಿ ‘ಒಂದು ಪಂಚಾಯತಿ ಮಾಡೇ ಬಿಡುವಾ’ ಅಂತಾ ತೀರ್ಮಾನಿಸಿ ಮೂರು ಪಾರ್ಟಿಗೂ ಬರಲು ಹೇಳ್ತಾರೆ. ಪಂಚಾಯ್ತಿ ಆರಂಭವಾಗ್ತಿದ್ದಂತೆ, ಊರಿನ ಮುಖಂಡರು, ‘ನಿಮ್ಮಲ್ಲಿ ಯಾರು ಆತನನ್ನ ಮದುವೆ ಆಗ್ತೀರಿ’ ಎಂದು ಕೇಳ್ತಾರೆ. ಆಗ ಇಬ್ಬರೂ ‘ನಾನು’, ‘ನಾನು’ ಎಂದು ‘ಕೈಎತ್ತುತ್ತಾರೆ’. ಇಬ್ಬರು ಹೆಣ್ಮಕ್ಕಳು ತನ್ನನ್ನ ಮದುವೆ ಆಗಲು ಕ್ಯೂನಲ್ಲಿ ನಿಂತಿರೋದನ್ನ ನೋಡಿ, ಮಾಡಿದ ತಪ್ಪಿಗೆ ಆತನ ಉಭಯ ಸಂಕಷ್ಟಕ್ಕೆ ಸಲುಕಿ ಸುಮ್ಮನಾಗಿಬಿಡ್ತಾನೆ. ಇದ್ರಿಂದ ಕಂಗಾಲಾದ ಗ್ರಾಮಸ್ಥರು ಅಲ್ಲಿಗೆ ಪಂಚಾಯ್ತಿ ಮಾಡೋದನ್ನ ಬಿಟ್ಟು ಮನೆಗೆ ಹೋಗ್ತಾರೆ.

‘ಒಂದು ಪಂಚಾಯ್ತಿ ಮಾಡೇ ಬಿಡುವಾ’
ಮತ್ತೆ ಮಾರನೇ ದಿನ ಅಂದ್ರೆ ಕಳೆದ ಶುಕ್ರವಾರ ಮತ್ತೊಮ್ಮೆ ಪಂಚಾಯ್ತಿ ಕರೆಯುತ್ತಾರೆ. ಮೊದಲೇ ಒಂದು ನಿರ್ಧಾರಕ್ಕೆ ಬಂದಂತಿದ್ದ ಕುಟುಂಬಸ್ಥರು, ಮೂರು ಪಾರ್ಟಿಗಳಿಂದ ಸಹಿ ಹಾಕಿಸಿಕೊಳ್ತಾರೆ. ನಾವು ನೀಡುವ ತೀರ್ಪಿನಲ್ಲಿ ಬೇಸರ ಆದವರು ಯಾರೂ ಕೂಡ ಕೋರ್ಟ್​ ಅಥವಾ ಪೊಲೀಸ್ ಠಾಣೆಗೆ ಹೋಗಬಾರದು ಎಂದು ಅಗ್ರಿಮೆಂಟ್ ಮಾಡಿಕೊಳ್ತಾರೆ. ಅದರಂತೆ ಪಂಚಾಯ್ತಿ ಸದಸ್ಯರು, ನಾಣ್ಯದ ಮೂಲಕ ಟಾಸ್ ಮಾಡಿ, ಅದರಲ್ಲಿ ಯಾರು ಗೆಲ್ತಾರೆ ಅವರು ಆತನನ್ನ ಮದುವೆ ಆಗಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡ್ತಾರೆ.

ಹೇಗಿತ್ತು ಕ್ಲೈಮ್ಯಾಕ್ಸ್..?
ಅದ್ರಂತೆ ಕಾಯಿನ್ ಟಾಸ್ಕ್​ನಲ್ಲಿ ಮೊದಲ ಹುಡುಗಿ ಗೆಲ್ಲುತ್ತಾಳೆ. ಆಕೆ ಆತನನ್ನ ಮದುವೆ ಆಗುವ ಇಂಗಿತವನ್ನ ವ್ಯಕ್ತಪಡಿಸುತ್ತಾಳೆ. ಅದಕ್ಕೆ ಆತ ಕೂಡ ಒಪ್ಪಿಕೊಳ್ತಾನೆ. ಇದು ಎರಡನೇ ಹುಡುಗಿಗೆ ತುಂಬಾ ಬೇಸರ ಆಗುತ್ತದೆ. ಆದರೆ ಪ್ರೀತಿಯಿಂದ ಆಕೆಗೆ ವಿಶ್ ಮಾಡುತ್ತಾಳೆ.. ನನ್ನ ಇಷ್ಟದ ಹುಡುಗನನ್ನ ಮದುವೆ ಆಗು, ಆತನನ್ನ ಚೆನ್ನಾಗಿ ನೋಡಿಕೋ ಎಂದು ತುಂಬು ಹೃದಯದಿಂದ ಹಾರೈಸಿದ್ದಾಳೆ. ಆದರೆ ಹುಡುಗನ ಮೇಲಿದ್ದ ಕೋಪ ಮಾತ್ರ ಕಮ್ಮಿ ಆಗಿರಲಿಲ್ಲ.

ಅಲ್ಲೇ ಡ್ರಾ, ಅಲ್ಲೇ ಬಹುಮಾನ
ಕೊನೆಯ ಕ್ಲೈಮೆಕ್ಸ್​​​ನಲ್ಲಿ ಆತನ ಕೆನ್ನೆಗೆ ಬಾರಿಸುತ್ತಾಳೆ. ನೀನು ನನಗೆ ಮೋಸ ಮಾಡಿದೆ. ನನ್ನಿಂದ ದೂರ ಆಗುತ್ತಿದ್ದೀಯಾ.. ಬೇಜಾರಿಲ್ಲ. ಆದರೆ, ನೋಡುತ್ತಿರು ನಾನು ನಿನ್ಕಿಂತ ಚೆನ್ನಾಗಿ ಬದುಕಿ ತೋರಿಸುತ್ತೇನೆ ಎಂದು ಸವಾಲ್ ಹಾಕಿದ್ದಾಳೆ. ಇಷ್ಟೆಲ್ಲಾ ಆಗುತ್ತಿದ್ದಂತೆ, ಅಲ್ಲಿಯೇ ಗಟ್ಟಿಮೇಳ ನಡೆದಿದೆ. ಊರವರ ಸಮ್ಮುಖದಲ್ಲಿ ಮದುವೆ ಕೂಡ ನಡೆದು ಹೋಗಿದೆ!

ವಿಶೇಷ  ವರದಿ-ಗಣೇಶ್ ಕೆರೆಕುಳಿ, ಡಿಜಿಟಲ್ ಮೀಡಿಯಾ

Source: newsfirstlive.com Source link