‘ಗಣೇಶ ಬಪ್ಪ ಮೋರೆಯಾ’ ಅನ್ನೋಕೂ ಮುಂಚೆ BBMP ಹೊರಡಿಸಿರೋ ಗೈಡ್​​ಲೈನ್ಸ್ ಓದಿರಿ..

‘ಗಣೇಶ ಬಪ್ಪ ಮೋರೆಯಾ’ ಅನ್ನೋಕೂ ಮುಂಚೆ BBMP ಹೊರಡಿಸಿರೋ ಗೈಡ್​​ಲೈನ್ಸ್ ಓದಿರಿ..

ಬೆಂಗಳೂರು: ರಾಜ್ಯ ಸರ್ಕಾರದಿಂದ ಗಣೇಶ ಚತುರ್ಥಿಗೆ ಅನುಮತಿ ಬೆನ್ನಲ್ಲೇ ಬೆಂಗಳೂರು ವ್ಯಾಪ್ತಿಯಲ್ಲಿ ಹಲವು ಷರತ್ತುಗಳನ್ನ ವಿಧಿಸಿ ಹಬ್ಬ ಆಚರಿಸಲು ಪಾಲಿಕೆ ಆದೇಶಿಸಿದೆ. ಕೊರೊನಾ ಮೂರನೇ ಅಲೆ ತಡೆಗೆ ಪಾಲಿಕೆ ಹೊರಡಿಸಿರೊ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸುವಂತೆ ಬಿಬಿಎಂಪಿ ಮನವಿ ಮಾಡಿದೆ.

2021ನೇ ಸಾಲಿನ ಗಣೇಶ ಚತುರ್ಥಿ ಹಬ್ಬವನ್ನ ಅತ್ಯಂತ ಸರಳವಾಗಿ, ಕೋವಿಡ್​ ನಿಯಮಾನುಸಾರಿ ಆಚರಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಜತೆಗೆ ಸೋಂಕು ತಡೆಗೆ ಬಿಬಿಎಂಪಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

ಗಣೇಶ ಹಬ್ಬದ ಆಚರಣೆ ಹೇಗಿರಬೇಕು..
– ಮನೆಗಳಲ್ಲಿ ಅಥವಾ ಸರ್ಕಾರಿ/ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಬೇಕು.
– ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರಬಾರದು.
– ಮನೆಯೊಳಗೆ 2 ಅಡಿ ಎತ್ತರ ಮೀರದಂತೆ ಪ್ರತಿಷ್ಠಾಪಿಸಬೇಕು.
– ಪಾಲಿಕೆಯ 198 ವಾರ್ಡ್ಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮಾತ್ರ ಅನುಮತಿ.
– ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಂದ ಸಾರ್ವಜನಿಕ ಗಣೇಶ ಇಡಲು ಅನುಮತಿ ಕಡ್ಡಾಯ.
– ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ ಸ್ಥಳಗಳ ಪಟ್ಟಿಯನ್ನು ವಲಯ ಆಯುಕ್ತರು/ಜಂಟಿ ಆಯುಕ್ತರಿಗೆ ಸಲ್ಲಿಸಬೇಕು.
– ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪಿಸಬೇಕು.
– ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಂಚಾರಿ ಪೊಲೀಸ್ ವಿಭಾಗವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
– ಪ್ರತಿಷ್ಠಾಪನ ಸ್ಥಳದಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸಬೇಕು.
– ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡಬೇಕು.
– ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕೋವಿಡ್ ನಿಯಮಗಳ ಅನುಸರಣೆ ಮಾಡುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೋಂ ಗಾರ್ಡ್ಗಳನ್ನು ನಿಯೋಜಿಸುವುದು.
– ಪಾಲಿಕೆ ವತಿಯಿಂದ ಮಾರ್ಷಲ್‌ಗಳನ್ನು ನಿಯೋಜಿಸಿ ಕೋವಿಡ್ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ದಂಡ ವಿಧಿಸಬೇಕು.
– ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇರೀತಿಯ ಸಾಂಸ್ಕೃತಿಕ/ಸಂಗೀತ/ನೃತ್ಯ/ಡಿ.ಜೆ ಸೆಟ್ ಹಾಗೂ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ.
– ಡಿ.ಜೆ ಸೆಟ್/ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
– ಆಯೋಜಕರು ಕೊವಿಡ್-19ರ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ.
– ಗಣೇಶ ಆಚರಣೆಯ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮವನ್ನು ನಡೆಸಬೇಕು.
– ಬೆಂಗಳೂರು ನಗರದಲ್ಲಿ ಗರಿಷ್ಠ 3 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲು ಅನುಮತಿಸಿಲಾಗಿದೆ.
– ಗಣೇಶ ಮೂರ್ತಿಗಳನ್ನು ತರುವಾಗ, ಪೂಜೆ ಮಾಡುವ ಸಮಯ ಹಾಗೂ ವಿಸರ್ಜಿಸುವಾಗ ಮೆರವಣಿಗೆಗೆ ಅವಕಾಶವಿಲ್ಲ.
– ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
– ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ನಿಮ್ಮ ಮನೆಗಳಲ್ಲಿ ಅಥವಾ ಪಾಲಿಕೆಯ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು.
– ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಕನಿಷ್ಟ ಜನರು ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವುದು.
– ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ/ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು.
– ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಡ್ಡಾಯ.
– ದರ್ಶನಕ್ಕಾಗಿ ಬರುವ ಭಕ್ತಾಧಿಗಳಿಗೆ ಕನಿಷ್ಟ 06 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು.
– ಅರ್ಚಕರು/ದೇವಾಲಯದ ಸಿಬ್ಬಂದಿಗಳು/ ಆಯೋಜಕರು/ ಭಕ್ತಾಧಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಿರತಕ್ಕದ್ದು.

ಬಿಬಿಎಂಪಿ ಹೊರಡಿಸಿರೋ ಆದೇಶಗಳನ್ನ ಕಡ್ಡಾಯವಾಗಿ ಪಾಲನೆ ಮಾಡುವಂತೆ ಪಾಲಿಕೆ ಮನವಿ ಮಾಡಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತು ಜರುಗಿಸುವಂತೆ ಆಯಾ ವಲಯದ ಜಂಟಿ ಆಯುಕ್ತರು ಮತ್ತು ಪೊಲೀಸ್​ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.

Source: newsfirstlive.com Source link