ಮನ ಮಿಡಿಯುವ ಕಥೆ; 3 ದಿನ ಅರಣ್ಯದಲ್ಲಿ ಕೇವಲ ನೀರು ಕುಡಿದೇ ಬದುಕಿದ ಬಾಲಕ

ಮನ ಮಿಡಿಯುವ ಕಥೆ; 3 ದಿನ ಅರಣ್ಯದಲ್ಲಿ ಕೇವಲ ನೀರು ಕುಡಿದೇ ಬದುಕಿದ ಬಾಲಕ

ಇದೊಂದು ರೋಮಾಂಚಕಾರಿ ಕಾರ್ಯಾಚರಣೆಯ ಕಥೆ. ಇದೊಂದು ಮನ ಮಿಡಿಯುವ ಕಥೆ. ಮೂರು ದಿನ ಯಾರಿಗೂ ಹೇಳಲಾಗದ ಯಾತನೆ ಅನುಭವಿಸಿದ ಕಥೆ. ಮೂರು ದಿನ ಹಲವು ತಿರುವುಗಳನ್ನ ಪಡೆದುಕೊಂಡ ರೋಚಕ ಕ್ಷಣಗಳ ಕಥೆ ಈಗ ನಿಮ್ಮ ಮುಂದೆ.
ಆಸ್ಕರ್‌ ಪ್ರಶಸ್ತಿ ವಿಜೇತ “ಲೈಫ್‌ ಆಫ್‌ ಪೈ” ಎಂಬ ಹಾಲಿವುಡ್‌ ಸಿನಿಮಾನದ ದೃಶ್ಯ ಇದು. ತಂದೆ ನಡೆಸಿಕೊಂಡು ಹೋಗುತ್ತಿರೋ ಮೃಗಾಲಯದ ಪ್ರಾಣಿಗಳ ಜೊತೆ ಬಾಲಕನೊಬ್ಬ ಆತ್ಮೀಯತೆ ಬೆಳೆಸಿಕೊಳ್ಳುತ್ತಾನೆ. ಆದ್ರೆ, ಒಮ್ಮೆ ಹಡಗಿನಲ್ಲಿ ಪ್ರಾಣಿಗಳ ಜೊತೆ ಕುಟುಂಬ ಸಮೇತರಾಗಿ ಹೋಗುವಾಗ ಚಂಡಮಾರುತ ಮತ್ತು ಸಮುದ್ರದ ದೊಡ್ಡ ದೊಡ್ಡ ಅಲೆಗಳಿಗೆ ಹಡಗು ಸಿಕ್ಕಿ ಪಲ್ಟಿ ಹೊಡೆಯುತ್ತದೆ. ಹಡಗಿನಲ್ಲಿದ್ದ ಎಲ್ಲಾ ಸದಸ್ಯರು ನೀರುಪಾಲಾಗುತ್ತಾರೆ. ಆದ್ರೆ, ಬಾಲಕ ಲೈಫ್‌ ಬೋಟ್‌ನಲ್ಲಿ ಪ್ರಾಣ ಉಳಿಸಿಕೊಳ್ಳುತ್ತಾನೆ. ಆತನ ಜೊತೆಗೊಂದು ಹುಲಿಯೂ ಇರುತ್ತೆ. ಸಮುದ್ರದ ನೀರಿನ ಅಲೆಗಳ ಮೇಲೆ ಈಜುತ್ತಾ, ಎದುರಾಗುವ ಪ್ರಕೃತಿದತ್ತ ಸವಾಲುಗಳನ್ನು ಎದುರಿಸುತ್ತ ಬಾಲಕ ಬದುಕಿ ಬರುವ ರೋಚಕ ಕಥೆ ಅದು. ಈ ಕಥೆ ಯಾಕೆ ಹೇಳಿದ್ವಿ ಅಂದ್ರೆ, ಪಕ್ಕಾ ಇದೇ ರೀತಿ ಅಲ್ಲದೇ ಇದ್ರೂ ಇದೇ ಸೀನ್‌ ನೆನಪು ಮಾಡಿಕೊಡೋ ಒಂದು ರೋಚಕ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಇವನೇ ಇವತ್ತಿನ ನಮ್ಮ ಕಥಾ ನಾಯಕ.. ಮುದ್ದಾದ ಹುಡುಗ.. ಮೃತ್ಯುಂಜಯ ಅಂದ್ರೆ ನಿಜವಾಗ್ಲೂ ತಪ್ಪಾಗಲ್ವೇನೋ.. ಬಹುಶಃ ಇವನಿಗಿಂತ ಅದೃಷ್ಟವಂತ ಮತ್ತೊಬ್ಬ ಇಲ್ವೇನೋ.. ಈ ಬಾಲಕನ ಹೆಸರು ಎಜೆ ಎಲ್ಫಲಕ್‌. ಇನ್ನೂ ಮೂರು ವರ್ಷ ಮಾತ್ರ. ಮಾತು ಬಾರದ ಮೂಕ ಮಗುವಿದು. ಆದ್ರೆ, ತಂದೆ ತಾಯಿಯ ಮುದ್ದಿನ ಕಂದಮ್ಮ. ಒಂದೇ ಒಂದು ದಿನ ಕೂಡ ಈ ಬಾಲಕನನ್ನು ಪೊಷಕರು ಬಿಟ್ಟು ಇದ್ದವರಲ್ಲ. ಎಲ್ಲಿಗೇ ಹೋಗ್ಲೀ.. ಪ್ರವಾಸಕ್ಕೆ ಹೋಗಲಿ, ಸಂಬಂಧಿಕರ ಮನೆಗೆ ಹೋಗಲಿ ಜೊತೆಗೆ ಮಗುವನ್ನ ಕರೆದುಕೊಂಡು ಹೋಗ್ತಿದ್ರು. ಆದ್ರೆ, ಕಳೆದ ಶುಕ್ರವಾರ ಈ ಹೆತ್ತವರಿಗೆ ಆಗಿದ್ದು ಆಘಾತ. ಅಷ್ಟೊಂದು ಮುದ್ದಾಗಿ ಸಾಕಿದ ಕಂದಮ್ಮ ಕಳೆದ ಶುಕ್ರವಾರ ಏಕಾಏಕಿ ಕಾಣೆಯಾಗಿತ್ತು. ಕರುಳ ಕುಡಿಯನ್ನ ಕಾಣದೆ ಹೆತ್ತವರು ಆಘಾತಗೊಂಡಿದ್ರು. ಸಿಕ್ಕಸಿಕ್ಕಲ್ಲಿ ಹುಡುಕಾಟ ನಡೆಸಿದ್ರು. ಗಲ್ಲಿಗಲ್ಲಿ ಅಲೆದ್ರು. ಆದ್ರೆ ಎಲ್ಲೂ ಪತ್ತೆಯಿಲ್ಲ. ಆತಂಕಕ್ಕೆ ಒಳಾಗಾಗಿದ್ರು ಪೋಷಕರು. ಕಣ್ಣೀರು ಹಾಕಿದ್ರು. ಗ್ರಾಮದವರೆಲ್ಲಾ ಸೇರಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ರೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಪೊಲೀಸರೂ ಎಂಟ್ರಿಯಾಗ್ತಾರೆ.. ಬಟ್‌ ನೋ ಯೂಸ್‌.. ಮೂಕ ಮಗುವಿನ ಪತ್ತೆಯೇ ಇಲ್ಲ..

100 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹುಡುಕಾಟ

ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಾರೆ. ಬಾಲಕನ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಜಾಲಾಡುತ್ತಾರೆ. ಹಾಗೇ ಒಂದು ದಿನ ಕಳೆಯುತ್ತೆ. ಎರಡನೇ ದಿನವೂ ತೀವ್ರ ಹುಡುಕಾಟ ನಡೆಯುತ್ತೆ. ಮನೆ ಸಮೀಪದಲ್ಲೇ ಇರೋ ಅರಣ್ಯದಲ್ಲಿಯೂ ಹುಡುಕಾಟ ನಡೆಸ್ತಾರೆ. ಪೊಲೀಸರ ಜೊತೆ ಸೇರಿ ಸ್ಥಳೀಯರು ಬಾಲಕನ ಹುಡುಕಾಟ ನಡೆಸುತ್ತಾರೆ. ಆದ್ರೆ, ಎರಡನೇ ದಿನವೂ ಆಗಿದ್ದು ನಿರಾಸೆ. ಹೆತ್ತವರಿಗೆ ಭೂಮಿಯೇ ಕುಸಿದ ಅನುಭವ. ಕರುಳ ಕುಡಿಯ ಕಾಣದೆ ಹೆತ್ತೊಡಲು ತತ್ತರಿಸಿ ಹೋಗಿತ್ತು. ಕಂದನನ್ನ ಕಾಣದೆ ಹಂಬಲಿಸಿತ್ತು. ಪೊಲೀಸರಿಗೂ ಬಾಲಕನನ್ನ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಬಾಲಕ ಕಾಣೆಯಾಗಿದ್ದಾನಾ? ಅಥವಾ ಕಿಡ್ನಾಪ್‌ ಆಗಿರಬಹುದಾ? ಅನ್ನೋ ಅನುಮಾನ. ಹೀಗಾಗಿ ನಾನಾ ಆಯಾಮದಲ್ಲಿ ತನಿಖೆ ಆರಂಭಿಸ್ತಾರೆ. ಬಾಲಕನ ಮನೆಯ ಸಮೀಪದ ಅರಣ್ಯದಲ್ಲಿ ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಾರೆ.

ಹೆಲಿಕಾಪ್ಟರ್‌ ಮೂಲಕ ಹುಡುಕಾಡ್ತಿದ್ದಾಗ ಕಾಣಿಸಿತ್ತು ಆ ದೃಶ್ಯ
ಕ್ಯಾಮರಾದಲ್ಲಿ ಸೆರೆಯಾಯ್ತು ನೀರು ಕುಡಿಯುತ್ತಿದ್ದ ಕಂದಮ್ಮ

ಇದೇ.. ಇದೇ ದೃಶ್ಯ.. ಹೆತ್ತೊಡಲಿಗೆ ಉಸಿರು ನೀಡಿದ್ದು.. ಹೋದ ಜೀವ ಬಂದಂತಾಗಿದ್ದು.. ಎರಡು ದಿನಗಳ ಕಾಲ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದ್ರೂ ಬಾಲಕ ಪತ್ತೆಯಾಗಿರ್ಲಿಲ್ಲ. ಕಾರ್ಯಾಚರಣೆಗಿದ್ದ ಮತ್ತೊಂದು ಸವಾಲೇನು ಅಂದ್ರೆ ಯಾರೆಷ್ಟೇ ಕೂಗಿದ್ರೂ ರಿಯಾಕ್ಟ್‌ ಮಾಡೋ ಸ್ಥಿತಿಯಲ್ಲಿ ಆ ಬಾಲಕ ಇರ್ಲಿಲ್ವಲ್ಲ. 2 ದಿನ ನಿರಾಸೆ ಅನುಭವಿಸಿದ ಪೊಲೀಸರು ಮೂರನೇ ದಿನ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ ಬಳಕೆ ಮಾಡಿಕೊಳ್ಳುತ್ತಾರೆ. ಹೆಲಿಕಾಪ್ಟರ್‌ನಲ್ಲಿ ಇಡೀ ಅರಣ್ಯದ ಮೇಲೆ ರೌಂಡ್‌ ಹಾಕುತ್ತಾರೆ. ಹೀಗೆ ರೌಂಡ್‌ ಹಾಕ್ತಾ ಅರಣ್ಯದಲ್ಲಿ ಹುಡುಕಾಡ್ತಿದ್ದಾಗ್ಲೇ ಆ ದೃಶ್ಯ ಕಾಣಿಸಿತ್ತು.

ಅರಣ್ಯದ ಮಧ್ಯದಲ್ಲಿ ಹಾದುಹೋಗಿರೋ ಚಿಕ್ಕ ಹಳ್ಳದಲ್ಲಿ ಬಾಲಕ ಬೊಗಸೆಯಲ್ಲಿ ನೀರು ಕುಡಿಯುತ್ತಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಸ್ಟ್ರೇಲಿಯಾದ ಉತ್ತರ ಸಿಡ್ನಿಯ ಪುಟ್ಟಿ ಎಂಬ ಗ್ರಾಮದ ಬಳಿ ಇರೋ ದಟ್ಟ ಅರಣ್ಯ ಇದು.. ಹೆಲಿಕಾಪ್ಟರ್‌ನಲ್ಲಿ ಬಾಲಕನಿಗಾಗಿ ಹುಡುಕಾಟ ನಡೀತಿದ್ದ ಸಂದರ್ಭದಲ್ಲೇ ಪೊಲೀಸರಿಗೆ ಅರಣ್ಯದ ಮಧ್ಯದಲ್ಲಿರೋ ಚಿಕ್ಕ ಹಳ್ಳದಲ್ಲಿ ಬಾಲಕನೊಬ್ಬ ಬೊಗಸೆಯಿಂದ ನೀರು ಕುಡಿಯುತ್ತಿದ್ದ ದೃಶ್ಯ ಕಾಣಿಸಿತ್ತು.

ಬಾಲಕನನ್ನ ಪೋಷಕರ ಮಡಿಲಿಗೆ ಒಪ್ಪಿಸಿದ ಪೊಲೀಸರು
ಪವಾಡ ಅಂತ ಸಂತೋಷ ಪಟ್ಟ ಬಾಲಕನ ಪೋಷಕರು

ಇದೇ ದೃಶ್ಯ ನೋಡಿ ಹೆತ್ತವರಿಗೆ ಉಸಿರು ನೀಡಿದ್ದು. 2 ದಿನ ಮಗು ಪತ್ತೆಯಾಗಿರೋದಿಲ್ವಲ್ಲ. ಇದರಿಂದ ಬಾಲಕನ ಪೋಷಕರು ವಿಚಲಿತರಾಗಿ ಬಿಡ್ತಾರೆ. ಬಾಲಕ ಬದುಕಿದ್ದಾನೋ ಇಲ್ಲವೋ? ಬದುಕಿದ್ರೆ ಹೇಗಿರಬಹುದು? ಏನಾಗಿರಬಹುದು ಕಂಡೀಷನ್..? ಅಂತ ಯೋಚಿಸ್ತಾ ದುಃಖಿಸ್ತಿರ್ತಾರೆ. ಆದ್ರೆ ಹೆಲಿಕಾಪ್ಟರ್‌ನಲ್ಲಿ ಬಾಲಕನ ದೃಶ್ಯ ಕಂಡ ಪೊಲೀಸರು ಮಗುವನ್ನ ರಕ್ಷಣೆ ಮಾಡ್ತಾರೆ. ಅರಣ್ಯದಿಂದ ಎತ್ತಿಕೊಂಡು ಬಂದು ಪೋಷಕರ ಮಡಿಲಿಗೆ ಒಪ್ಪಿಸುತ್ತಾರೆ. ಆಗ್ಲೇ ನೋಡಿ.. ಇಷ್ಟೊಂದು ಸಂಭ್ರಮ.. ಇಷ್ಟೊಂದು ಖುಷಿ.. ಪೋಷಕರ ಮುಖದಲ್ಲಿ..

ಎಂಥಾ ಖುಷಿ ನೋಡಿ ಪೋಷಕರ ಮುಖದಲ್ಲಿ. ಇಡೀ ಜಗತ್ತನ್ನೆ ಗೆದ್ದ ಸಂಭ್ರಮ.. ಯಾಕಂದ್ರೆ ನಾಪತ್ತೆಯಾಗಿದ್ದ ಮಗ ಸುರಕ್ಷಿತವಾಗಿ ಹೆತ್ತೊಡಲು ಸೇರಿದ್ದಾನೆ. ಪಾಲಕರು ಕುಣಿದು ಕುಪ್ಪಳಿಸ್ತಿದ್ದಾರೆ. ಬಾಲಕನ ತಾಯಿ ಎತ್ತಿಕೊಂಡು ಮುದ್ದಾಡುತ್ತಾಳೆ. ಇದೊಂದು ಪವಾಡ ಅಂತ ಸಂತಸ ಪಡ್ತಾರೆ. ಆದ್ರೆ ಅಂತಹ ದಟ್ಟ ಅರಣ್ಯಕ್ಕೆ ಬಾಲಕ ಹೋಗಿದ್ದಾದ್ರೂ ಹೇಗೆ..? ಅರಣ್ಯದ ಮಧ್ಯದಲ್ಲಿ ಬಾಲಕ ಸಿಕ್ಕಿಹಾಕಿಕೊಂಡಿದ್ದು ಹೇಗೆ..? ಆ ಬಾಲಕ ಮೂರು ದಿನಗಳ ಕಾಲ ಅರಣ್ಯದಲ್ಲಿ ಕಾಲ ಕಳೆದಿದ್ದು ಹೇಗೆ? ಆಹಾರಕ್ಕಾಗಿ ಏನು ಮಾಡಿದ? ಕೊರೆಯುವ ಚಳಿಯಿಂದ ಆತ ರಕ್ಷಣೆ ಮಾಡಿಕೊಂಡಿದ್ದು ಹೇಗೆ?

ಬರೀ ನೀರು ಕುಡಿದು ಬದುಕಿದ ಬಾಲಕ

ಮುದ್ದಾದ ಕಂದ.. ಮನೆಯಲ್ಲಿ ಆಟ ಆಡುವಾಡ್ತಿದ್ದ.. ಈ ಸಮಯದಲ್ಲೇ ದಾರಿ ತಪ್ಪಿ ಬಾಲಕ ಅರಣ್ಯ ಸೇರಿ ಬಿಟ್ಟಿದ್ದ. ಏನು ಮಾಡಬೇಕು ಅನ್ನೋದೇ ಆತನಿಗೆ ದಿಕ್ಕು ತೋಚುವುದಿಲ್ಲ. ಕೂಗಿ ಯಾರನ್ನಾದ್ರೂ ಕರೆಯೋಣ ಅಂದ್ರೆ ಅದು ಆತನಿಗೆ ಸಾಧ್ಯ ಇರಲಿಲ್ಲ. ಆಹಾರ ಅಂತ ಎಲ್ಲಿಯೂ ಇಲ್ಲ….ಇನ್ನು ಹೇಗೆ ಜೀವನ? ಅರಣ್ಯದಲ್ಲಿ ಇರೋ ಹಳ್ಳದಲ್ಲಿ ನೀರು ಕುಡಿಯುತ್ತಾನೆ. ಹಾಗೇ ನೀರು ಕುಡಿಯುತ್ತಲೇ ಮೂರು ದಿನ ಜೀವನ ಮಾಡುತ್ತಾರೆ. ಇನ್ನು ಕೊರೆಯುವ ಚಳಿ ಬೇರೆ ಇರುತ್ತದೆ. ಅದೇ ಚಳಿಯಲ್ಲಿಯೇ ರಾತ್ರಿ ವೇಳೆ ಅರಣ್ಯದಲ್ಲಿ ನಿದ್ದೆ ಮಾಡುತ್ತಾನೆ. ಪೊಲೀಸರ ಕೈಗೆ ಬಾಲಕ ಸಿಕ್ಕಾಗ ಬಾಲಕನಿಗೆ ತರಚಿದ ಗಾಯಗಳು, ಇರುವೆ ಕಚ್ಚಿರೋ ಗಾಯಗಳು ಕಂಡುಬಂದಿವೆ. ಬಾಲಕ ಸಿಕ್ಕ ಕೂಡಲೇ ವೈದ್ಯರೂ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ.

ಬಾಲಕ ನೀರು ಕುಡಿಯುತ್ತಿರೋ ದೃಶ್ಯ ಫುಲ್‌ ವೈರಲ್‌

ಆಸ್ಟ್ರೇಲಿಯಾ ಪೋಲಿಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಇಡೀ ಜಗತ್ತಿನಾದ್ಯಂತ ಆಸ್ಟ್ರೇಲಿಯಾ ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲಿಯೂ ಬಾಲಕ ಬೊಗಸೆಯಲ್ಲಿ ನೀರು ಕುಡಿಯುತಿರೋ ದೃಶ್ಯ ಹೆಲಿಕಾಪ್ಟರ್‌ನಲ್ಲಿ ಸೆರೆಯಾಗಿತ್ತಲ್ವ? ಆ ದೃಶ್ಯ ಸಾಮಾಜಿಕ ಚಾಲತಾಣದಲ್ಲಿ ಭಾರೀ ವೈರಲ್‌ ಆಗಿ ಬಿಟ್ಟಿದೆ. ಅದೆಷ್ಟೋ ಲಕ್ಷ ಲಕ್ಷ ಜನ ಸಂತೋಷ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಹ್ಯಾಟ್ಸ್‌ ಆಫ್‌ ಹೇಳಿದ್ದಾರೆ.

ಇದು ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲದ ಘಟನೆಯಾಗಿತ್ತು. ಮೂರು ದಿನಗಳ ಕಾಲ ಅರಣ್ಯದಲ್ಲಿ ರೋಚಕ ಕಾರ್ಯಾಚರಣೆ ನಡೆಯಿತು. ಅಂತಿಮವಾಗಿ ಬಾಲಕ ಪೋಷಕರ ಮಡಿಲು ಸೇರಿದ್ದಾನೆ ಅನ್ನೋದೇ ಖುಷಿಯ ವಿಚಾರ.

Source: newsfirstlive.com Source link