41 ದಿನದಲ್ಲಿ ಬೊಮ್ಮಾಯಿ ನಾಲ್ಕು ಬಾರಿ ದೆಹಲಿ ಯಾತ್ರೆ -ಪದೇ ಪದೇ ದೆಹಲಿ ಯಾತ್ರೆ ಕೈಗೊಳ್ತಿರುವ ಗುಟ್ಟೇನು?

41 ದಿನದಲ್ಲಿ ಬೊಮ್ಮಾಯಿ ನಾಲ್ಕು ಬಾರಿ ದೆಹಲಿ ಯಾತ್ರೆ -ಪದೇ ಪದೇ ದೆಹಲಿ ಯಾತ್ರೆ ಕೈಗೊಳ್ತಿರುವ ಗುಟ್ಟೇನು?

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರ ನೆರಳಿನಲ್ಲಿ ಅದೃಷ್ಟದ ಸಿಎಂ ಆಗಿ ಅರಳಿದ ಬಸವರಾಜ ಬೊಮ್ಮಾಯಿ ಪಟ್ಟಕ್ಕೇರಿದ 41 ದಿನದಲ್ಲಿ 4ನೇ ಬಾರಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಪದೇ ಪದೇ ದೆಹಲಿಗೆ ಹೋಗುವ ಮೂಲಕ ವರಿಷ್ಠರ ಜೊತೆ ಗಟ್ಟಿ ಸಂಬಂಧಕ್ಕೆ ಬೊಮ್ಮಾಯಿ ತಂತ್ರ ಹೆಣೆದಿದ್ದಾರೆ. ಆ ಮೂಲಕ ಸ್ಥಳೀಯ ನಾಯಕರಿಗೂ ಸಂದೇಶ ರವಾನಿಸಲು ಮುಂದಾಗಿದ್ದಾರೆ.

ಯಾವುದೇ ಲಾಬಿಗಳಿಲ್ಲದೇ ಹೈಕಮಾಂಡ್​​ ಮನ ಗೆದ್ದು ಗದ್ದುಗೆ ಹಿಡಿದ ಬಸವರಾಜ ಬೊಮ್ಮಾಯಿ ಮೇಲಿಂದ ಮೇಲೆ ದೆಹಲಿ ಯಾತ್ರೆ ಕೈಗೊಳ್ತಿದ್ದಾರೆ. ಸದ್ಯ ಪಟ್ಟ ಕಟ್ಟಿಸಿಕೊಂಡ ಬಳಿಕ ಬೊಮ್ಮಾಯಿ ಕೇವಲ 40 ದಿನದಲ್ಲಿ ನಾಲ್ಕು ಬಾರಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ಈ ಸಾಲು ಸಾಲು ಯಾತ್ರೆ ಹಿಂದೆ ಸಿಎಂ ಬೊಮ್ಮಾಯಿ ಹೊಂದಿರುವ ಲೆಕ್ಕಾಚಾರಗಳು ವಿಭಿನ್ನವಾಗಿವೆ.

blank

41 ದಿನ.. 4ನೇ ಬಾರಿ ದೆಹಲಿ ಯಾತ್ರೆ.. ಹತ್ತಾರು ಲೆಕ್ಕಾಚಾರ!
ಜುಲೈ 28. ಬಿಎಸ್​​ವೈ ಅಧಿಪತ್ಯ ಅಂತ್ಯವಾಗಿ ಬೊಮ್ಮಾಯಿ ಅಧಿಕಾರ ಅವಧಿ ಆರಂಭವಾಯಿತು. ತಮ್ಮ ಪಟ್ಟ ಶಿಷ್ಯನಿಗೆ ಪಟ್ಟ ಕಟ್ಟಿದ ಬಿಎಸ್​​​ ಯಡಿಯೂರಪ್ಪ ಕೆಲವು ಪಟ್ಟುಗಳನ್ನೂ ಹೇಳಿಕೊಟ್ಟಂತಿದೆ. ಇದಕ್ಕೆ ಸಾಕ್ಷಿ ಎಂಬಂತಿದೆ ಬೊಮ್ಮಾಯಿ ಕೈಗೊಳ್ಳುತ್ತಿರುವ ಈ ದೆಹಲಿ ದಂಡಯಾತ್ರೆ.

ಬೊಮ್ಮಾಯಿ ಮೇಲೆ ವರಿಷ್ಠರು ವಿಶ್ವಾಸ, ನಂಬಿಕೆಗಳ ಮೂಟೆಯನ್ನು ಇಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಬೊಮ್ಮಾಯಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಆಡಳಿತ ಮಾಡಿ ತೋರಿಸಿದ್ದಾರೆ. ಬೊಮ್ಮಾಯಿಯ ಚಾಕಚಕ್ಯತೆ ಕಂಡು ಅಮಿತ್ ಶಾ ಕೂಡ ದಾವಣಗೆರೆಯಲ್ಲಿ ಮನಬಿಚ್ಚಿ ಹೊಗಳಿಸಿದ್ದರು. 2023ರ ಚುನಾವಣೆಯ ಸಾರಥ್ಯ ಕೂಡ ವಹಿಸಿ ಪಕ್ಷದೊಳಗಿನ ವಿರೋಧಿ ಪಡೆಗಳು ಹುಬ್ಬೇರಿಸುವಂತೆ ಮಾಡಿದ್ದರು. ಈ ಹೇಳಿಕೆ ಬಳಿಕ ಪಕ್ಷದಲ್ಲಿ ಮೌನ ಕುದಿ ಆವರಿಸಿದೆ. ಈ ಮಧ್ಯೆ ಬೊಮ್ಮಾಯಿ ದೆಹಲಿ ದಂಡಯಾತ್ರೆ ಸಾಕಷ್ಟೂ ಕುತೂಹಲ ಕೆರಳಿಸಿದೆ.

blank

ದೆಹಲಿಗೆ 4ನೇ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ
ಜುಲೈ 30ರಂದು ಮೊದಲ ಬಾರಿ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸಲು ಸಿಎಂ ದೆಹಲಿಗೆ ತೆರಳಿದ್ರು. ಆಗಸ್ಟ್​ 2ರಂದು 2ನೇ ಬಾರಿ ರಾಜ್ಯದ ಸಚಿವ ಸಂಪುಟ ರಚನೆ ಸಂಬಂಧ ಪ್ರವಾಸ ಕೈಗೊಂಡಿದ್ದ ಬೊಮ್ಮಾಯಿ, ಆಗಸ್ಟ್​​ 25ರಂದು 3ನೇ ಸಲ ರಾಜ್ಯದ ಕೆಲ ಯೋಜನೆಗಳ ಬಗ್ಗೆ ಚರ್ಚೆಗಾಗಿ ದೆಹಲಿಗೆ ತೆರಳಿದ್ರು. ಸದ್ಯ ಈಗ ಅಂದ್ರೆ ಸೆಪ್ಟೆಂಬರ್​​​​ 7ರಂದು 4ನೇ ಬಾರಿ ಕೇಂದ್ರ ಸಚಿವರ ಭೇಟಿಗಾಗಿ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಬಗ್ಗೆ ಏನೇ ಹೇಳಿದ್ರೂ ಕೂಡ ಕೆಲ ನಿಜಾಂಶಗಳು ಮಾತ್ರ ಬೇರೇನೇ ಇದೆ. ಅಷ್ಟಕ್ಕೂ ಸಿಎಂ ಮನದಲ್ಲಿರುವ ಗುಟ್ಟೇನು ಅನ್ನೋದನ್ನ ಹೇಳ್ತೀವಿ ಓದಿ….

blank

ದೆಹಲಿ ಯಾತ್ರೆ ಹಿಂದಿದೆಯೇ ರಾಜಕೀಯ ಲೆಕ್ಕಾಚಾರ?
ಯಾವುದೇ ಲಾಬಿ ಇಲ್ಲದೇ ಸಿಎಂ ಆಗಿ ಬೊಮ್ಮಾಯಿ ನೇಮಕವಾಗಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರ ಜೊತೆ ನಿಕಟ ಸಂಪರ್ಕದಲ್ಲಿರೋದು ಒಳಿತು. ಅಲ್ಲದೆ ಹೈಕಮಾಂಡ್ ಸಂಪರ್ಕದಿಂದ ಸ್ಥಳೀಯ ನಾಯಕರಿಗೆ ಸಂದೇಶ ಕೊಡಬಹುದು.

ಇನ್ನು 2023ರ ವಿಧಾನಸಭಾ ಚುನಾವಣೆಗೂ ತಮ್ಮದೇ ನಾಯಕತ್ವ ಇರೋದ್ರಿಂದ ಪಕ್ಷದ ಹೈಕಮಾಂಡ್​​ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಪ್ರಗತಿಯ ಬಗ್ಗೆ ವರಿಷ್ಠರಿಗೆ ನಿರಂತರ ಮಾಹಿತಿ ಕೊಡಬೇಕು. ಅಭಿವೃದ್ಧಿ ಸಂಬಂಧ ವರಿಷ್ಠರ ಸಲಹೆ – ಸೂಚನೆ ಪಡೆಯುವುದು ಸೇರಿದಂತೆ ರಾಜ್ಯದ ಯೋಜನೆಗಳಿಗೆ ಕೇಂದ್ರದ ಅನುಮೋದನೆ ಕೇಳಲು ದೆಹಲಿ ಯಾತ್ರೆ ಸಹಾಯವಾಗುತ್ತದೆ ಅನ್ನೋದು ಸಿಎಂ ಲೆಕ್ಕಾಚಾರವಾಗಿದೆ.

ಒಟ್ಟಾರೆ ಸಿಎಂ ದೆಹಲಿ ಪ್ರವಾಸ ಮಾತ್ರ ಸಾಕಷ್ಟೂ ಚರ್ಚೆಗೆ ಗ್ರಾಸವಾಗಿದೆ. 41 ದಿನದಲ್ಲಿ 4ನೇ ಬಾರಿ ದೆಹಲಿಗೆ ಆಗಮಿಸಿರುವ ಸಿಎಂ ಹೈಕಮಾಂಡ್​​​ ಬಳಿ ತಮ್ಮ ಇಮೇಜ್ ಮತ್ತಷ್ಟೂ ಗಟ್ಟಿಮಾಡಿಕೊಳ್ಳುವ ಲೆಕ್ಕ ಮಾಡ್ತಿರೋದು ಸುಳ್ಳಲ್ಲ. ಜೊತೆಗೆ ತಮ್ಮ ನಾಯಕತ್ವದ ವಿರುದ್ಧ ಪಕ್ಷದೊಳಗಿನ ಕೆಲ ನಾಯಕರು ಎತ್ತಿತ್ತಿರುವ ಅಪಸ್ವರಕ್ಕೆ ಪರೋಕ್ಷ ಸಂದೇಶ ರವಾನಿಸ್ತಿದ್ದಂತೆ ಕಾಣ್ತಿದೆ.

ವಿಶೇಷ ಬರಹ: ಮಧುಸೂದನ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​

Source: newsfirstlive.com Source link