ಪುಂಡಾಟಿಕೆ ಮೆರೆದು ಸೆರೆ ಸಿಕ್ಕ 4 ವರ್ಷದಲ್ಲೇ ದಸರಾಗೆ ಆಯ್ಕೆಯಾದ ‘ಅಶ್ವತ್ಥಾಮ’ -ಅಚ್ಚರಿಯ ಆಯ್ಕೆ ವಿಶೇಷವೇನು?

ಪುಂಡಾಟಿಕೆ ಮೆರೆದು ಸೆರೆ ಸಿಕ್ಕ 4 ವರ್ಷದಲ್ಲೇ ದಸರಾಗೆ ಆಯ್ಕೆಯಾದ ‘ಅಶ್ವತ್ಥಾಮ’ -ಅಚ್ಚರಿಯ ಆಯ್ಕೆ ವಿಶೇಷವೇನು?

ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಗಜಪಡೆಯೇ ಪ್ರಮುಖ ಆಕರ್ಷಣೆ. ಅಂಬಾರಿ ಹೊರುವ ಆನೆಯ ಜೊತೆ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆ ಸೇರುವುದು ಸುಲಭದ ಮಾತಲ್ಲ. ಆದ್ರೆ ಈ ಬಾರಿಯ ದಸರೆಗೆ ‘ಅಶ್ವತ್ಥಾಮ’ನ ಆಯ್ಕೆ ಮಾತ್ರ ಅಚ್ಚರಿ. ಭವಿಷ್ಯದ ನಾಯಕನಾಗಲು ಹೊರಟಿರುವ ಅಶ್ವತ್ಥಾಮ ಇದೇ ಮೊದಲ ಬಾರಿಗೆ ನಾಡ ಹಬ್ಬದಲ್ಲಿ ಪಾಲ್ಗೊಳ್ತಿದ್ದಾನೆ.

blank

ಮೊದಲ ಬಾರಿಗೆ ನಾಡ ಹಬ್ಬದಲ್ಲಿ ಪಾಲ್ಗೊಳ್ತಿದ್ದಾನೆ ‘ಅಶ್ವತ್ಥಾಮ’

‘ಅಶ್ವತ್ಥಾಮ’… ಹೆಸರು ಕೇಳಿದ್ರೆ, ಮೈಸೂರು ಹಾಸನ, ಚಿಕ್ಕಮಗಳೂರು ಜಿಲ್ಲೆಯ ಜನ ಒಂದು ಕ್ಷಣ ನಾಲ್ಕು ವರ್ಷದ ಹಿಂದಿನ ಘಟನೆಗಳನ್ನು ನೆನೆಸಿಕೊಂಡು ಭಯ ಬೀಳ್ತಾರೆ. ಯಾಕಂದ್ರೆ ಇದೇ ಅಶ್ವತ್ಥಾಮ ನಾಲ್ಕು ವರ್ಷದ ಹಿಂದೆ ಕೊಟ್ಟ ಕಾಟ, ಮೆರೆದ ಪುಂಡಾಟ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ 30 ವರ್ಷದ ಈ ಪುಂಡನನ್ನು 2017ರಲ್ಲಿ ಸಕಲೇಶಪುರ ವಿಭಾಗದಲ್ಲಿ ಸೆರೆಹಿಡಿಯಲಾಗಿತ್ತು.

ಬಳಿಕ ದೊಡ್ಡಹರವೆ ಆನೆ ಕ್ಯಾಂಪ್‌ನಲ್ಲಿ ಕ್ರಾಲ್‌ನಲ್ಲಿಟ್ಟು ತರಬೇತಿ ನೀಡಿ ‘ಅಶ್ವತ್ಥಾಮ’ ಎಂದು ನಾಮಕರಣ ಮಾಡಲಾಗಿತ್ತು. ತರಬೇತಿ ವೇಳೆ ಮಾವುತ, ಕಾವಾಡಿಗಳ ಮಾತು ಕೇಳುವ ಮೂಲಕ ಕಾಡಾನೆಗಿದ್ದ ಉಗ್ರ ಸ್ವಭಾವ ಕಳೆದುಕೊಂಡು ಸೌಮ್ಯ ಸ್ವರೂಪಿಯಾಗಿ ಅಶ್ವತ್ಥಾಮ ಬದಲಾಗಿದ್ದ. ಶಿಬಿರದ ಏಕೈಕ ಗಂಡಾನೆಯಾಗಿ ಅಶ್ವತ್ಥಾಮ, ಹೆಣ್ಣಾನೆಗಳಾದ ಲಕ್ಷ್ಮೀ, ಕುಮಾರಿ, ರೂಪ, ಅನಸೂಯ ಆನೆಗಳೊಂದಿಗೆ ನೆಲೆಸಿದ್ದಾನೆ. ಇದೀಗ ಸೆರೆ ಸಿಕ್ಕ 4 ವರ್ಷದಲ್ಲೇ ನಾಡಹಬ್ಬ ಮೈಸೂರು ದಸರಾಗೆ ಅಶ್ವತ್ಥಾಮ ಆಯ್ಕೆಯಾಗಿದ್ದಾನೆ.

blank

‘ಅಶ್ವತ್ಥಾಮ’ನಿಗೆ ಭವಿಷ್ಯದ ಅಂಬಾರಿ ಆನೆ ಜವಾಬ್ದಾರಿ?

34 ವರ್ಷ ಪ್ರಾಯದ ‘ಅಶ್ವತ್ಥಾಮ’ ಉತ್ತಮ ದೇಹಕಾಯ ಹೊಂದಿದ್ದಾನೆ. 2.85 ಮೀ. ಎತ್ತರ, 3.46 ಮೀ. ಉದ್ದ ಮತ್ತು 3,630 ಕೆಜಿ ತೂಕವಿರುವ ‘ಅಶ್ವತ್ಥಾಮ’ ಸಮತಟ್ಟಾದ ಬೆನ್ನು ಹೊಂದಿದ್ದು, ಸದೃಢವಾಗಿದ್ದಾನೆ. ಅಲ್ಲದೆ ದಂತ ನೀಳವಾಗಿರುವುದು ಇವನ ಲಕ್ಷಣ ಹೆಚ್ಚಲು ಕಾರಣವಾಗಿದೆ. ಹೀಗಾಗಿ ಭವಿಷ್ಯದ ಅಂಬಾರಿ ಆನೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ‘ಅಶ್ವತ್ಥಾಮ’ನಿಗಿದೆ. ಇದೇ ಕಾರಣಕ್ಕೆ ಮುಂದಿನ 5-6 ವರ್ಷ ದಸರಾ ಮಹೋತ್ಸವಕ್ಕೆ ಕರೆತಂದು ತರಬೇತಿ ನೀಡಲು ಮತ್ತು 15 ವರ್ಷದ ನಂತರ ಅಂಬಾರಿ ಹೊರಲು ‘ಅಶ್ವತ್ಥಾಮ’ನನ್ನು ಸಜ್ಜುಗೊಳಿಸಬಹುದು ಅನ್ನೋದು ಅರಣ್ಯ ಇಲಾಖೆಯ ಯೋಜನೆಯಾಗಿದೆ.

blank

ಉತ್ತಮ ದೇಹಕಾಯ, ನೀಳ ದಂತದಿಂದಲೇ ಆಕರ್ಷಣೆ

ಇದೇ ಕಾರಣಕ್ಕಾಗಿ ಸೆರೆ ಸಿಕ್ಕ 4 ನಾಲ್ಕು ವರ್ಷದಲ್ಲೇ ‘ಅಶ್ವತ್ಥಾಮ’ನಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಸದ್ಯ ಅಶ್ವತ್ಥಾಮನಿಗೆ ಮಾವುತನಾಗಿ ಶಿವು, ಕಾವಾಡಿಯಾಗಿ ಗಣೇಶ ಕರ್ತವ್ಯ ನಿರ್ವಹಿಸುತ್ತಿದ್ದು, ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಹಿನ್ನೆಲೆ ‘ಅಶ್ವತ್ಥಾಮ’ನನ್ನು ದೊಡ್ಡಹರವೆ ಶಿಬಿರದಿಂದ ಮತ್ತಿಗೂಡು ಆನೆ ಶಿಬಿರಕ್ಕೆ ಎರಡು ದಿನದ ಹಿಂದೆಯೇ ಕರೆಸಿಕೊಳ್ಳಲಾಗಿದೆ. ಈಗಾಗಲೇ ಜಂಬೂಸವಾರಿಗೆ ಆಯ್ಕೆಯಾದ ಎಲ್ಲಾ 8 ಆನೆಗಳಿಗೂ ಕ್ಯಾಂಪ್‌ಗಳಲ್ಲೇ ಪೌಷ್ಠಿಕ ಆಹಾರ ನೀಡುವ ಮೂಲಕ ತಯಾರಿ ಆರಂಭಿಸಲಾಗಿದೆ. ಸೆ.13ರಂದು ಗಜಪಯಣಕ್ಕೆ ಚಾಲನೆ ನೀಡುತ್ತಿದ್ದಂತೆ ವಿವಿಧ ಕ್ಯಾಂಪ್‌ಗಳಲ್ಲಿರುವ ಎಲ್ಲಾ 8 ಆನೆಗಳು ಒಂದೇ ತಂಡದಲ್ಲಿ ಮೈಸೂರಿನತ್ತ ಆಗಮಿಸಲಿವೆ.

ಒಟ್ಟಿನಲ್ಲಿ ಪುಂಡಾಟ ಮೆರೆದು ಸೆರೆ ಸಿಕ್ಕ ನಾಲ್ಕೇ ವರ್ಷದಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಮೂಲಕ ‘ಅಶ್ವತ್ಥಾಮ’ ಎಲ್ಲರ ಗಮನ ಸೆಳೆದಿದ್ದಾನೆ. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಥಾಮ ಈಗ ಭವಿಷ್ಯದ ಅಂಬಾರಿ ಹೊರುವ ಗಜಪಡೆಯ ನಾಯಕ ಅಂತ ಹೇಳಲಾಗ್ತಿದೆ.

ವಿಶೇಷ ಬರಹ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್‌ಫಸ್ಟ್‌, ಮೈಸೂರು

blank

Source: newsfirstlive.com Source link