ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ; ನೆಲ ಕಚ್ಚಿದ ಬೆಳೆ.. ಅನ್ನದಾತ ಕಂಗಾಲು

ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ; ನೆಲ ಕಚ್ಚಿದ ಬೆಳೆ.. ಅನ್ನದಾತ ಕಂಗಾಲು

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದೆ. ಕಲಬುರಗಿ, ಯಾದಗಿರಿ, ಬೀದರ್​ನಲ್ಲಿ ಭಾರೀ ಮಳೆಯಾಗ್ತಿದೆ. ಮಳೆ ಆರ್ಭಟಕ್ಕೆ ಬೆಳೆದ ಬೆಳೆಗಳು ನೀರು ಪಾಲಾಗ್ತಿದೆ. ರೈತರ ಕಂಗಾಲಾದ್ದಾರೆ. ಜೊತೆಗೆ ನಗರ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ್ರಿಂದ ಜನ ಪರದಾಡುವಂತಾಗಿದೆ.

ತುಂಬಿದ ಭೀಮಾ ನದಿ
ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ಭೀಮಾ ನದಿಯ ಹರಿವು ಹೆಚ್ಚಾಗಿದೆ. ಸೋಲಾಪುರದ ಸೀನಾ ನದಿಯಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಬರುತ್ತಿದ್ದು, ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.

blank

ಒಳಹರಿವು ಕ್ರಮೇಣ ಹೆಚ್ಚಳ ಹಿನ್ನೆಲೆಯಲ್ಲಿ ಸೊನ್ನ ಬ್ಯಾರೇಜ್​ನಿಂದ 35 ಸಾವಿರಕ್ಕೂ ಹೆಚ್ಚು ಕ್ಯೂಸೆಕ್​​ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಘಾಣಗಾಪುರ, ಘತ್ತರಗಿ, ಚಿನ್ಮಳ್ಳಿ ಬಳಿಯ ಸೇತುವೆ ಮೇಲೆ ನೀರು ಉಕ್ಕಿದೆ.

ಹೈದ್ರಾಬಾದ್-ಕರ್ನಾಟಕ ಜನರ ಕಷ್ಟಗಳು ಒಂದಾ ಎರೆಡಾ.. ಮೂಲ ಸೌಕರ್ಯಗಳ ಕೊರತೆ ಈ ಭಾಗದಲ್ಲಿ ಹೆಚ್ಚಿದೆ. ರಸ್ತೆಗಳು ಹಾಳಾಗಿವೆ, ವಿದ್ಯುತ್ ಸಂಪರ್ಕ ಸರಿಯಾಗಿಯಾಗಿಲ್ಲ. ಇಷ್ಟೇ ಯಾಕೆ ಮಳೆ ಬಂದ್ರೂ ಕಷ್ಟ, ಬರದೇ ಇದ್ರೂ ಕಷ್ಟ.. ಅಲ್ಲಿನ ರೈತರ ಸಂಕಷ್ಟ ಹೇಳತೀರದಾಗಿದೆ. ಅದರಲ್ಲೂ ಕಳೆದ 2-3 ದಿನಗಳಿಂದ ಸುರಿಯುತ್ತಿರೋ ಮಹಾ ಮಳೆಗೆ ಅಲ್ಲಿನ ಜನ ಪರದಾಡ್ತಿದ್ದಾರೆ. ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

blank

ಯಾದಗಿರಿ, ಬೀದರ್​ನಲ್ಲಿ ‘ಮಹಾ’ ಮಳೆಯ ಆರ್ಭಟ
ರಕ್ಕಸ ಮಳೆಗೆ ಕೊಚ್ಚಿ ಹೋಯ್ತು ಲಕ್ಷಾಂತರ ಬೆಳೆಗಳು!

ಅಕ್ಷರಸಃ ರೈತರ ಜೀವನ ನೀರಿನಲ್ಲಿ ಕೊಚ್ಚಿ ಹೋಗ್ತಿದೆ. ಮೊದಲೇ ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗಲ್ಲ. ಸಿಕ್ರೂ ಸರಿಯಾದ ಸಮಯಕ್ಕೆ ಮಳೆ ಬರಲ್ಲ. ಮಳೆ ಬಂದು ಬೆಳೆಯನ್ನೇ ಸರ್ವನಾಶ ಮಾಡುತ್ತೆ. ಇದರ ನಡುವೆ ಕೊರೊನಾ ಸಂಕಷ್ಟ ಬೇರೆ.. ಹೀಗಾಗಿದ್ದ ಲಾಭದ ನಿರೀಕ್ಷೆಯಲ್ಲಿದ್ದ ಯಾದಗಿರಿ, ಬೀದರ್​ ರೈತರಿಗೆ ‘ಮಹಾ’ ಮಳೆ ದೊಡ್ಡ ಪೆಟ್ಟು ಕೊಟ್ಟಿದೆ. ಲಕ್ಷಾಂತರ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಯಾದಗಿರಿಯಲ್ಲಿ ಮನೆಗಳಿಗೆ ನುಗ್ಗಿದ ನೀರು, ಜನ ಕಂಗಾಲು!
ಯಾದಗಿರಿಯಲ್ಲಿ ಸುರಿದ ಮಳೆ ಅಬ್ಬರಕ್ಕೆ ಜನವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಜಮೀನುಗಳಲ್ಲಿ ನೀರು ನಿಂತಿದೆ. ಗ್ರಾಮೀಣ ಭಾಗದಲ್ಲಿ ಮನೆಗಳು ಕುಸಿಯುತ್ತಿವೆ. ಗುರುಮಠಕಲ್ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹೊಲದಲ್ಲಿ ನೀರು ನಿಂತಿದ್ರಿಂದ ಹತ್ತಿ, ಶೇಂಗಾ, ಮೆಕ್ಕೆಜೋಳ ಹಾಗೂ ಹೆಸರು ಬೆಳೆ ಸರ್ವನಾಶವಾಗಿದೆ.

blank

ಇನ್ನೊಂದ್ಕೆಡೆ ಗುರುಮಠಕಲ್ ತಾಲೂಕಿನ ಗುಡ್ಲಾಗುಂಟಾ ಗ್ರಾಮದ ರಸ್ತೆ ಬಿರುಕು ಬಿಟ್ಟಿದೆ. ಜನರು ಓಡಾಡಲು ಪರದಾಡುವಂತಾಗಿದೆ. ಯಡ್ಡಳ್ಳಿ ಸೇತುವೆ ಕೂಡ ಹಾಳಾಗಿದೆ. ಪರಿಣಾಮ ಓರುಂಚಾ, ಚಾಮನಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಭೀಮಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗ್ತಿದ್ದು, ನದಿಯ ದಡದಲ್ಲಿರುವ ದೇವಸ್ಥಾನಗಳು ಮುಳುಗಡೆಯಾಗಿವೆ..

ಬೀದರ್​ನಲ್ಲಿ ಭಯಾನಕ ಮಳೆ, ಬೆಳೆಗಳು ನೀರು ಪಾಲು!
ಇನ್ನು ಬೀದರ್​ನಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ಭಾಲ್ಕಿ, ಔರಾದ್, ಹುಮನಾಬಾದ್ ತಾಲೂಕುಗಳಲ್ಲಿ ತೊಗರಿ, ಸೋಯಾ, ಹೆಸರು ಬೆಳೆಗಳು ನೀರು ಪಾಲಾಗಿದೆ. ರೈತರು ಕಂಗಾಲಾಗಿದ್ದಾರೆ. ಮೊದಲೇ ಆರ್ಥಿಕ ಸಂಕಷ್ಟದ ನಡುವೆ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ..

blank

ಕಾರಂಜಾ ಜಲಾಶಯ ಭರ್ತಿ, ನದಿ ದಡದಲ್ಲಿ ಆತಂಕ!
ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾರಂಜಾ ಜಲಾಶಯ ತುಂಬಿ ತುಳುಕುತ್ತಿದೆ. ಶೇ. 95 ಜಲಾಶಯ ಭರ್ತಿಯಾಗಿದೆ. ಪರಿಣಾಮ 8,500 ಕ್ಯೂಸೆಕ್​​ ನೀರು ಹೊರ ಬೀಡಲಾಗಿದೆ. ಇಷ್ಟೇ ಅಲ್ಲದೇ ನದಿ ದಡದಲ್ಲಿ ಬರುವ ನೂರಾರು ಹಳ್ಳಿಗಳಿಗೆ ಈಗ ಪ್ರವಾಹದ ಭೀತಿ ಎದುರಾಗಿದೆ.. ರಕ್ಕಸ ಮಳೆಯಿಂದ ಬೀದರ್, ಯಾದಗಿರಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳು ನೀರು ಪಾಲಾಗಿದೆ. ರೈತರು ಕಂಗಾಲಾಗಿದ್ದಾರೆ. ಸಿಟಿಯಲ್ಲೂ ಕೂಡ ನಿರಂತರವಾಗಿ ಮಳೆಯಾಗ್ತಿದ್ದು, ನದಿ ತೀರದ ಜನ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

Source: newsfirstlive.com Source link