ಪೊಲೀಸ್ ಜೇಬಿನಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನದ ಬಳೆಗಳು ಕಳವು

– ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಚಿಕ್ಕಬಳ್ಳಾಪುರ: ಕಳ್ಳನೊಬ್ಬ ಪೊಲೀಸ್ ಬಳಿಯಿಂದಲೇ 4 ಲಕ್ಷ ಮೌಲ್ಯದ ಚಿನ್ನದ ಬಳೆ ಕಳ್ಳತನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿಂತಾಮಣಿ ನಗರದ ವೈಷ್ಣವಿ ಜ್ಯುವೆಲ್ಲರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್‍ಎಸ್‍ಐ ರಾಮಕೃಷ್ಣಪ್ಪ ಎಂಬವರ ಜೇಬಿಗೆ ಕೈ ಹಾಕಿರುವ ಕಳ್ಳ 4 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಯ ಕೊಲೆ ಯತ್ನ ಪ್ರಕರಣ – ಪ್ರಮುಖ ಆರೋಪಿಯ ಬಂಧನ

ರಾಮಕೃಷ್ಣಪ್ಪ ಎಲ್‍ಐಸಿ ಪಾಲಿಸಿ ಮೂಲಕ ಬಂದ ಹಣದಲ್ಲಿ ಪತ್ನಿಗೆ ಚಿನ್ನದ ಬಳೆಗಳನ್ನು ಮಾಡಿಸಿದ್ದು, ಹಣ ನೀಡಿ ಚಿನ್ನದ ಬಳೆಗಳನ್ನು ತರಲು ಚಿನ್ನದಂಗಡಿಗೆ ಹೋಗಿದ್ದರು. ಈ ವೇಳೆ ಚಿನ್ನದಂಗಡಿಯಲ್ಲಿ ಸೈಲೆಂಟಾಗಿ ಗ್ರಾಹಕನ ಸೋಗಿನಲ್ಲಿ ಬಂದಿರೋ ಕಳ್ಳ, ರಾಮಕೃಷ್ಣಪ್ಪ ಅವರ ಜೇಬಿಗೆ ಕೈಹಾಕಿ ಜೇಬಿನಲ್ಲಿದ್ದ ಚಿನ್ನದ ಬಳೆಗಳನ್ನು ಎಗರಿಸಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು

ರಾಮಕೃಷ್ಣಪ್ಪ ಅವರ ಅರಿವಿಗೆ ಇದು ಬಂದಿಲ್ಲ. ಆದರೆ ಅಂಗಡಿಯಿಂದ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಚಿನ್ನದ ಬಳೆಗಳನ್ನು ನೋಡಿಕೊಂಡಿದ್ದು, ಅದು ಕಾಣಿಸದೆ ಇರುವುದರಿಂದ ಅನುಮಾನಗೊಂಡು ಮತ್ತೆ ಚಿನ್ನದಂಗಡಿಗೆ ವಾಪಸ್ ಬಂದಿದ್ದಾರೆ. ನಂತರ ಅಲ್ಲಿ ಇದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳನ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ರಾಮಕೃಷ್ಣಪ್ಪ ಅವರು ದೂರು ದಾಖಲಿಸಿದ್ದಾರೆ.

Source: publictv.in Source link