ಅರ್ಕಾವತಿ ಹಗರಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​​​

ಅರ್ಕಾವತಿ ಹಗರಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​​​

ಬೆಂಗಳೂರು:  ಅರ್ಕಾವತಿ ಲೇಔಟ್ ಭೂ ಅವ್ಯವಹಾರ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್​ ಶಂಕರ್​ ಮಗದುಮ್ ನೇತೃತ್ವದ ವಿಭಾಗೀಯ ಪೀಠದಿಂದ ನೊಟೀಸ್ ಜಾರಿ ಮಾಡಲಾಗಿದ್ದು, ಈ ಮನವಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಆಕ್ಷೇಪಣೆ ಬಳಿಕ ನವೆಂಬರ್ 15ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ವಿಭಾಗೀಯ ಪೀಠ ತಿಳಿಸಿದೆ.

ನಿವೃತ್ತ ನ್ಯಾ. ಎಚ್‌ ಎಸ್‌ ಕೆಂಪಣ್ಣ ನೇತೃತ್ವದ ಏಕ ಸದಸ್ಯ ಆಯೋಗ, ಹಿಂದಿನ ಕಾಂಗ್ರೆಸ್​ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಭಾರಿ ಸದ್ದು ಮಾಡಿದ್ದ ಈ ಕೇಸ್ ಆದರೆ ಆ ವರದಿಯನ್ನ ಇಲ್ಲಿ ತನಕ ಚರ್ಚೆ ನಡೆಸಿಲ್ಲ ಎಂಬ  ಆರೋಪ ಕೇಳಿ ಬಂದಿತ್ತು. ಈ ಕುರಿತು ಬೆಂಗಳೂರಿನ ಸಾರ್ವಜನಿಕ ಹೊಣೆಗಾರಿಕೆ ಸಮಿತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದು,  ಸದ್ಯ ಆ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಕೋರಿಕೆ ಸಲ್ಲಿಸಲಾಗಿದೆ.

ತನಿಖಾ ಆಯೋಗದ ಕಾಯಿದೆ 1952ರ ಸೆಕ್ಷನ್‌ 3 (4)ರ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿದ್ದು, ನಿಯಮದ ಪ್ರಕಾರ ಆರು ತಿಂಗಳ ಒಳಗೆ ವರದಿಯನ್ನ ಮಂಡಿಸಬೇಕು. ಸರ್ಕಾರ ವರದಿ ಮತ್ತು  ಆ ಬಗ್ಗೆ ಕೈಗೊಂಡಿರುವ ಕ್ರಮ ಕುರಿತ ಸಂಪೂರ್ಣ ಮಾಹಿತಿಯನ್ನು ವಿಧಾನ ಮಂಡಲದಲ್ಲಿ  ಮಂಡಿಸಬೇಕು ಆದರೆ, ಈ ಪ್ರಕರಣದಲ್ಲಿ ಹಿಂದಿನ ಸರ್ಕಾರ ಮತ್ತು  ಹಾಲಿ ಸರ್ಕಾರ  ಈ ಕೆಲಸ ಮಾಡಿಲ್ಲ. ಆಯೋಗವು ವರದಿ ಸಲ್ಲಿಸಿ ನಾಲ್ಕು ವರ್ಷಗಳಾದರೂ ಮಂಡನೆಯಾಗಿಲ್ಲ, ಜೊತೆಗೆ ಆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ವಿಧಾನ ಮಂಡಲದಲ್ಲಿ ವರದಿ ಮಂಡನೆ ನಿರ್ದೇಶನ ಅಸಾಧ್ಯವಾದ್ರೆ. ಪ್ರಕರಣದ ತನಿಖೆಯನ್ನು ಕೇಂದ್ರಿಯ ತನಿಖಾ ಸಂಸ್ಥೆಗೆ ವಹಿಸಿ, ಸಿಬಿಐಗೆ ಪ್ರಕರಣದ ತನಿಖೆ ಮಾಡಲು ನಿರ್ದೇಶನ  ಮಾಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ವರದಿ (ಪಿಐಎಲ್​) ಯಲ್ಲಿ ಕೋರಲಾಗಿದೆ.

ಪ್ರಕರಣದ ಹಿನ್ನೆಲೆ:

2015 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲಂಘನೆ ಮಾಡಿ, 541 ಎಕರೆ ಡಿನೋಟಿಫೈ ಮಾಡಿದ ಆರೋಪ  ಕೇಳಿ ಬಂದಿತ್ತು. ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫೈ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಆಗ ವಿರೋಧ ಪಕ್ಷಗಳು ಮತ್ತು ಇತರೆ  ಸಂಘಟನೆಗಳು ಸರ್ಕಾರ ಮೇಲೆ ಮುಗಿಬಿದ್ದದ್ದವು. ಅದಕ್ಕೆ ಅಂದಿನ ಸರ್ಕಾರ ತನಿಖಾ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿತ್ತು. ನಿವೃತ್ತ ನ್ಯಾ. ಎಚ್‌ ಎಸ್‌ ಕೆಂಪಣ್ಣ ಅವರ ನೇತೃತ್ವದಲ್ಲಿ ಆಯೋಗವನ್ನು ನೇಮಿಸಲಾಗಿತ್ತು. ಆದರೆ 4 ವರ್ಷಗಳು ಕಳೆದ್ರೂ ಆಯೋಗ ತನಿಖೆ ಮಾಡಿದ ವರದಿಯನ್ನು ಇನ್ನೂ ಮಂಡಿಸಿಲ್ಲ.

ಇದನ್ನೂ ಓದಿ: ಕೋರಮಂಗಲ ಅಪಘಾತ ಕೇಸ್: ಅಚ್ಚರಿಗೆ ಕಾರಣವಾಯ್ತು ಅಂದು ನಡೆದ ಎರಡು ವಿಚಿತ್ರ ಘಟನೆಗಳು..!

Source: newsfirstlive.com Source link