ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಲಾ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ: ಸಿದ್ದರಾಮಯ್ಯ

ಬೆಂಗಳೂರು: ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನಗೆ ಪ್ರೊ.ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರಣಕ್ಕೂ ಬರುತ್ತಿರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು ಅಂತೇಳಿದ್ರು.

ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ ನಡುವೆ ಆತ್ಮೀಯತೆ ಬೆಳೆಯಿತು ಅಂತಾ ನೆನಪು ಮೆಲಕು ಹಾಕಿದ್ರು ಸಿದ್ದರಾಮಯ್ಯ. ಇದನ್ನೂ ಓದಿ: ಮೇಯರ್ ಸ್ಥಾನ ಕೊಟ್ಟವರ ಜೊತೆ ಮೈತ್ರಿ – ಕಲಬುರಗಿ ಜೆಡಿಎಸ್ ಸದಸ್ಯರು 

ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್ ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ. ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ ಅಂತಾ ನೆನಪಿಸಿಕೊಂಡ್ರು.

blank

ರಾಜಕಾರಣದ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನವಿತ್ತು. ಇಂಥವರ ಸಂಪರ್ಕದಿಂದ ನಾನು ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಹಾಯವಾಯಿತು. ತೇಜಸ್ವಿಯವರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪುಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

ಪ್ರತೀ ಸೋಮವಾರ ಸಂಜೆ 5 ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೊಟೇಲ್ ಒಂದರಲ್ಲಿ ಸೇರುತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಳೆಯ ದಿನಗಳನ್ನು ನೆನಪಿಸಿಕೊಂಡರು.

Source: publictv.in Source link