ಗಣೇಶ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ! -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

ಗಣೇಶ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ! -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ಸೆ.13ರಂದು ಶಾಸಕಾಂಗ ಸಭೆ ಕರೆದ ಸಿಎಂ

blank

ಸಿಎಂ ಬಸವರಾಜ ಬೊಮ್ಮಾಯಿ‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸೆಪ್ಟೆಂಬರ್​​ 13ರಂದು ಶಾಸಕಾಂಗ ಸಭೆ ನಡೆಯಲಿದ್ದು, ಅಧಿವೇಶನ ಹಿನ್ನೆಲೆ ಸಿಎಂ ಬೊಮ್ಮಾಯಿ ಶಾಸಕಾಂಗದ ಸಭೆಯನ್ನ ಕರೆದಿದ್ದಾರೆ. ಇನ್ನು ಈ ಸಭೆ ಖಾಸಗಿ ಹೋಟೆಲ್‌ ಕ್ಯಾಪಿಟಲ್​ನಲ್ಲಿ ನಡೆಯಲಿದ್ದು, ಅಧಿವೇಶನದಲ್ಲಿ ಚರ್ಚಿಸಿಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಮೀಟಿಂಗ್​ನಲ್ಲಿ ಚರ್ಚಿಸಿದ ವಿಚಾರಗಳ ಆಧಾರದಲ್ಲಿ ಸಿಎಂ ಬೊಮ್ಮಾಯಿ, ಶಾಸಕರ ಅಭಿಪ್ರಾಯಗಳನ್ನ ಸಂಗ್ರಹಿಸಲಿದ್ದಾರೆ.

2. ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ?

blank

ಚಳಿಗಾಲದ ಅಧಿವೇಶನವನ್ನ ಬೆಳಗಾವಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ ಅಂತಾ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹಿಂದಿನ ಸಿಎಂ ಇದ್ದಾಗಲೂ ನಾನು ಬೆಳಗಾವಿಯಲ್ಲಿ ಅಧಿವೇಶ ನಡೆಸುವ ಬಗ್ಗೆ ಪತ್ರ ಬರೆದಿದ್ದೆ . ಅಧಿಕಾರಿಗಳು ಮತ್ತು ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಬಹಳ ಜನ ಆಗುತ್ತಾರೆ, ಹೀಗಾಗಿ ಈಗಿನ ಅಧಿವೇಶನ ಬೆಂಗಳೂರಿನಲ್ಲೆ ನಡೆಯುತ್ತದೆ. ಸಿಎಂ ನಮ್ಮ ಕಡೆಯವರೆ ಇರೋದ್ರಿಂದ, ನವೆಂಬರ್, ಡಿಸೆಂಬರ್‌ನಲ್ಲಿ ಸಂಪೂರ್ಣ ಬೆಳಗಾವಿಯಲ್ಲೇ ಅಧಿವೇಶನ ನಡೆಸಲಾಗುತ್ತೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

3. ಒಂದೇ ಗ್ರಾಮದ 51 ಜನರಿಗೆ ಕೊರೊನಾ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 51 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಅಂಜನಗೇರಿಯಲ್ಲಿ 25ಕ್ಕೂ ಹೆಚ್ಚು ಕುಟುಂಬಗಳ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಗ್ರಾಮದ ಬಹುತೇಕ ಜನರು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತೋಟ ಬಿಟ್ಟು ಎಲ್ಲೂ ಹೊರ ಹೋಗದೆ, ಎಸ್ಟೇಟ್​​​ನಲ್ಲಿ ಕೆಲಸ ಮಾಡಿಕೊಂಡಿದ್ರು. ಇದೀಗ ಜನರಿಗೆ ಸೋಂಕು ಹೇಗೆ ಹರಡಿದೆ ಎಂಬುದು ಚರ್ಚೆಗೆ ಕಾರಣವಾಗಿದೆ. ಗ್ರಾಮದ ಕೆಲವರಿಗೆ ಸೋಂಕಿನ ಲಕ್ಷಣಗಳಿದ್ದರೂ ಇತ್ತೀಚೆಗೆ ಮೃತಪಟ್ಟಿದ್ದ ವೃದ್ದರೊಬ್ಬರ ಸಾವಿನ ಸಂಸ್ಕಾರಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆ 300ಕ್ಕೂ ಹೆಚ್ಚು ಜನರಿಗೆ ಕೋವಿಡ್ ತಪಾಸಣೆ ಮಾಡಿದ ವೇಳೆ 51 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಇಡೀ ಗ್ರಾಮವನ್ನೇ ಸೀಲ್​ಡೌನ್​ ಮಾಡಲಾಗಿದೆ.

4. ಗಣೇಶ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ!

ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 60 ವರ್ಷಗಳಿಂದ ಪ್ರತಿ ವರ್ಷ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ. ಅಲ್ಲಾಭಕ್ಷ ಜಮಾದಾರ್ ಎಂಬುವವರು ಮೂರ್ತಿ ತಯಾರಿಸುತ್ತಿದ್ದು, ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಹೆಡ್ ಮಾಸ್ಟರ್ ಆಗಿಯೂ ಕೂಡ ಕಾರ್ಯನಿರ್ವಹಿಸ್ತಾ ಇದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿ ಬಂದಾಗ ತಮ್ಮ ಸಹೋದರ ಮೊಹಮ್ಮದ್​ ಜೊತೆಗೂಡಿ ಗಣಪತಿ ವಿಗ್ರಹ ತಯಾರು ಮಾಡ್ತಾರೆ. ಇದು ಪೂರ್ವಜನರು ಕಲಿಸಿದ ವಿದ್ಯೆ, ಜನ ನಿಮ್ಮ ಜಾತಿ-ಧರ್ಮ ಬೇರೆ ಅಂತ ಹೇಳಿದ್ರೂ ನಾವು ಗಣಪನ ಮೂರ್ತಿ ತಯಾರಿಸ್ತೇವೆ ಅಂತ ಜಮಾದಾರ್ ತಿಳಿಸಿದ್ದಾರೆ.

5. ‘ರಾಹುಲ್​​ ಜ್ಞಾನವಿಲ್ಲದ ಹುಸಿ ತಜ್ಞ’

ನೀಟ್ ಪರೀಕ್ಷೆಗಳನ್ನ ಮುಂದೂಡಬೇಕು ಅಂತ ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವ್ಯಂಗ್ಯವಾಡಿದ್ದಾರೆ. ರಾಹುಲ್​ ಗಾಂಧಿಗೆ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನವೇ ಇಲ್ಲದಿರುವ ಹುಸಿ ತಜ್ಞ ಅಂತ ಹೇಳಿದ್ದಾರೆ. ನೀಟ್‌ ವೇಳಾಪಟ್ಟಿಗೆ ಸಂಬಂಧಿಸಿದಂತೆ ತಜ್ಞರು ಮತ್ತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನೇ ರಾಹುಲ್ ಪ್ರಶ್ನಿಸಿದ್ದಾರೆ. ತಿಳಿವಳಿಕೆಯೇ ಇಲ್ಲದ ವಿಷಯಗಳ ಬಗ್ಗೆ ತಜ್ಞರಂತೆ ಹೇಳಿಕೆ ನೀಡುವ ಬದಲು, ತಾವು ಪರಿಣತಿ ಹೊಂದಿರುವ ವಿಷಯ ಅಂದ್ರೆ ಸುಳ್ಳು ಹೇಳುವುದನ್ನೇ ಮುಂದುವರೆಸುವುದು ಉತ್ತಮ ಅಂತ ಧರ್ಮೇಂದ್ರ ಪ್ರಧಾನ್​ ಕುಹಕವಾಡಿದ್ದಾರೆ.

6. ಮೋದಿ ನೇತೃತ್ವದಲ್ಲಿ ಬ್ರಿಕ್ಸ್​ ಶೃಂಗಸಭೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು 13ನೇ ಬ್ರಿಕ್ಸ್​ ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಆನ್​ಲೈನ್​ ಮೂಲಕ ಸಭೆ ನಡೆಯಲಿದ್ದು, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಹೆಚ್ಚು ಕೇಂದ್ರಿಕರಣ ಮಾಡಿ ಸಭೆಯಲ್ಲಿ ಮಾತುಕತೆ ನಡೆಸಲಾಗುತ್ತೆ ಅಂತ ಪ್ರಧಾನಿಗಳ ಕಚೇರಿ ಮಾಹಿತಿ ನೀಡಿದೆ. ಇನ್ನು ಬ್ರೆಜಿಲ್​, ರಷ್ಯಾ, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾದ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

7. ‘ನನ್ನ ಅಂತ್ಯ ನಾನೇ ಮಾಡಿಕೊಂಡೆ’

blank

ತಾಲಿಬಾನಿಗಳು ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಅಂದ್ರೆ ದೇಶದಿಂದ ಪಲಾಯನವಾಗಿದ್ದು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಅಂದು ಈ ನಿರ್ಧಾರ ಮಾಡದೇ ಇದ್ದಿದ್ರೆ ಕಾಬೂಲ್​ ಉಳಿಸಲು ಸಾಧ್ಯವಾಗ್ತಾ ಇರಲಿಲ್ಲ, 6 ಮಿಲಿಯನ್​ ಅಫ್ಘಾನ್​ ನಾಗರೀಕರನ್ನು ಉಳಿಸಲು ಸಾಧ್ಯವಾಗ್ತಾ ಇರಲಿಲ್ಲ. ನನ್ನ ದೇಶದ ಜನರನ್ನ ಸುಮಾರು 20 ವರ್ಷಗಳಿಂದ ಆರಾಧಿಸಿದೆ, ಭ್ರಾತೃತ್ವವನ್ನ ಕಾಪಾಡಿದೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದೆ, ಆದ್ರೆ ಒಂದು ನಿರ್ಧಾರದಿಂದ ನನ್ನ ಜೀವನದ ಅಂತ್ಯವನ್ನ ನಾನೇ ಮಾಡಿಕೊಂಡೆ ಅಂತ ಅಶ್ರಫ್​ ಘನಿ ಮರುಗಿದ್ದಾರೆ.

8. ಅಫ್ಘಾನ್​ ಮೇಲೆ ಚೀನಾಗಣ್ಣು

ತಾಲಿಬಾನಿಗಳಿಗೆ ಚೀನಾ 31 ಮಿಲಿಯನ್ ಡಾಲರ್​ಗಳನ್ನ ನೆರವಾಗಿ ಘೋಷಿಸಿದೆ. ತಾಲಿಬಾನ್​ ನಾಯಕ ಮುಲ್ಲಾ ಅಬ್ದುಲ್​ ಘನಿ ಬರಾದಾರ್​ ಭೇಟಿ ಮಾಡಿದ ಚೀನಾ ವಿದೇಶಾಂಗ ಸಚಿವ ವಾಂಗ್​ ಯೀ ಹಲವು ಮಹತ್ತರ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ರು. ನಂತರ ಮಾತನಾಡಿದ ವಾಂಗ್​ ಯೀ, ಅಫ್ಘಾನ್​ಗೆ ಬೇಕಾಗಿರುವ ಕೊರೊನಾ ಲಸಿಕೆಗಳು, ಔಷಧಗಳು, ಆಹಾರ ವಸ್ತುಗಳು ಹಾಗೂ ದಿನನಿತ್ಯ ಬಳಕೆ ವಸ್ತುಗಳನ್ನ ಸರಬರಾಜು ಮಾಡುವ ಸಲುವಾಗಿ ಸಹಾಯದ ರೂಪದಲ್ಲಿ 31 ಮಿಲಿಯನ್​ ಡಾಲರ್​ಗಳನ್ನ ನೀಡಲಾಗುವುದು ಅಂತ ತಿಳಿಸಿದ್ರು. ಜೊತೆಗೆ ತಾಲಿಬಾನಿಗಳು ದೇಶ ಕಟ್ಟಲು ನಾವು ಎಲ್ಲಾ ರೀತಿಯ ಸಹಾಯ ಮಾಡ್ತೀವಿ ಅಂತ ವಿದೇಶಾಂಗ ಸಚಿವ ಭರವಸೆ ನೀಡಿದ್ರು.

9. ದೇವರನಾಡಲ್ಲಿ ‘ಪುಸ್ತಕ ಗ್ರಾಮ’

ಸಾಮಾನ್ಯವಾಗಿ ಹಕ್ಕಿಗಳನ್ನು ಸಾಕಲು ಮರದ ಗೂಡನ್ನ ಖರೀದಿ ಮಾಡ್ತೀವಿ. ಅದ್ರೆ ಆ ಗೂಡುಗಳಲ್ಲಿ ನಮ್ಮಿಷ್ಟಿದ ಪುಸ್ತಕಗಳನ್ನ ಸಂಗ್ರಹ ಕೂಡ ಮಾಡಬಹುದು. ಕೇರಳದ ಪ್ರವಾಸೋದ್ಯಮ ಇಲಾಖೆ ತನ್ನ ಟ್ವಿಟರ್​ ಖಾತೆಯಲ್ಲಿ ಇಂತದೊಂದು ವಿಡಿಯೋ ಹಂಚಿಕೊಳ್ಳಲಾಗಿದೆ, ರಾಜ್ಯದ ಪುಸ್ತಕ ಕೂಡು ಎಂಬ ಹಳ್ಳಿಯಲ್ಲಿ ಜನ ಈ ರೀತಿ ಪುಸ್ತಕಗಳನ್ನ ಸಂಗ್ರಹ ಮಾಡ್ತಿದ್ದಾರೆ. ಇನ್ನು ಈ ಪುಸ್ತಕ ಗ್ರಾಮದಲ್ಲಿರುವ ಎಲ್ಲಾ ಮನೆಗಳಲ್ಲೂ ಪುಸ್ತಕದ ಗೂಡು ಇದೆ. ಜನ ತಮಗಿಷ್ಟ ಬಂದ ಪುಸ್ತಕಗಳನ್ನ ಇಲ್ಲಿಂದ ತೆಗೆದುಕೊಂಡು ಓದುವ ಅವಕಾಶವೂ ಇದೆ. ಟೆಕ್ನಾಲಜಿ ಮಧ್ಯೆ ಜನ ಪುಸ್ತಕ ಓದುವ ಹವ್ಯಾಸವನ್ನ ಮರೆಯಬಾರದು ಅಂತ ಈ ಹಳ್ಳಿಯ ಜನ ವಿನೂತನ ಪ್ರಯತ್ನ ಮಾಡಿದ್ದಾರೆ.

10. ಹ್ಯಾಪಿ ಬರ್ತ್​​ಡೇ ಅಕ್ಷಯ್​ ಕುಮಾರ್​​

ಇಂದು ಬಾಲಿವುಡ್​​ ನಟ ಅಕ್ಷಯ್​ ಕುಮಾರ್​ ಅವರ ಹುಟ್ಟುಹಬ್ಬ. ಬಾಲಿವುಡ್​ನ ಆ್ಯಕ್ಷನ್​ ಕಿಂಗ್​ ಇಂದು 54ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸೌಗಂಧ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಅಕ್ಷಯ್​ ಈವರೆಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಕ್ಷೇತ್ರದಲ್ಲಿ ಅಕ್ಷಯ್​ ಕುಮಾರ್​ ಅವರ ಅಪಾರ ಸೇವೆ ಹಾಗೂ ಸಾಧನೆಗೆ ಪದ್ಮಶ್ರೀ ಪುರಸ್ಕಾರ ಲಭಿಸಿದ್ದು, ಇನ್ನೂ ಹತ್ತು ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ನಿನ್ನೆಯಷ್ಟೇ ಅಕ್ಷಯ್​ ಅವರ ತಾಯಿ ನಿಧನರಾಗಿದ್ದು, ಬಹಳ ದುಃಖದಲ್ಲಿರುವ ನಟ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎನ್ನಲಾಗಿದೆ.

Source: newsfirstlive.com Source link