ಸಿದ್ದರಾಮಯ್ಯರ ‘ಗಣತಿ ಅಸ್ತ್ರ’ಕ್ಕೆ ಆರಂಭದಲ್ಲೇ ವಿಘ್ನ; ದೊಡ್ಡ ಸವಾಲ್ ಆಯ್ತು ಲಿಂಗಾಯತ ಮುಖಂಡರ ಅಂತರ..!

ಸಿದ್ದರಾಮಯ್ಯರ ‘ಗಣತಿ ಅಸ್ತ್ರ’ಕ್ಕೆ ಆರಂಭದಲ್ಲೇ ವಿಘ್ನ; ದೊಡ್ಡ ಸವಾಲ್ ಆಯ್ತು ಲಿಂಗಾಯತ ಮುಖಂಡರ ಅಂತರ..!

ಬೆಂಗಳೂರು: ಜಾತಿ ಗಣತಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ. ಸಿಎಂ ಆಗಿದ್ದ ಅವಧಿಯಲ್ಲಿ ಜಾತಿ ಗಣತಿಗೆ ಸಿದ್ದರಾಮಯ್ಯ ಅವರೇ ಚಾಲನೆಯನ್ನೂ ನೀಡಿದ್ರು. ಆದ್ರೆ ಅದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗ ಜಾತಿ ಗಣತಿ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಹೋರಾಟಕ್ಕೆ ಸಿದ್ಧರಾಗ್ತಿದ್ದಾರೆ. ಆದ್ರೆ ಈ ನಿರ್ಧಾರಕ್ಕೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದೆ.

ಕಾಂಗ್ರೆಸ್​ ಪಕ್ಷ ನಿನ್ನೆ ಮಹತ್ವದ ಶಾಸಕಾಂಗ ಸಭೆ ಕರೆದಿತ್ತು. ಮುಂಬರೋ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾಗಿರೋ ವಿಷಯಗಳು, ಸದನದಲ್ಲಿ ಯಾವೆಲ್ಲಾ ವಿಚಾರಗಳಿಗೆ ಹೋರಾಟ ಮಾಡಬೇಕು. ಹೀಗೆ ಸಾಕಷ್ಟು ಮಹತ್ವದ ವಿಚಾರಗಳನ್ನು ಚರ್ಚಿಸಲು ನಿನ್ನೆಯ ಶಾಸಕಾಂಗ ಸಭೆ ಕರೆಯಲಾಗಿತ್ತು. ಆದ್ರೆ ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆಗೆ ಪ್ರಮುಖ ಲಿಂಗಾಯತ ನಾಯಕರು ಗೈರಾಗಿದ್ದರು. ಲಿಂಗಾಯತ ನಾಯಕರ ಅನುಪಸ್ಥಿತಿಗೆ ಕಾರಣವಾಗಿದ್ದು ಜಾತಿ ಗಣತಿ ಅನುಷ್ಠಾನದ ವಿಚಾರ.

blank

ಜಾತಿ ಗಣತಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ. ಸಿಎಂ ಆಗಿದ್ದ ಅವಧಿಯಲ್ಲಿ ಖುದ್ದು ತಾವೇ ಜಾತಿ ಗಣತಿಗೆ ಚಾಲನೆಯನ್ನು ನೀಡಿದ್ರು. ಆದ್ರೆ ಗಣತಿ ಮುಗಿಯೋದು ತಡವಾದ್ರಿಂದ ಸಿದ್ದರಾಮಯ್ಯ ಅವಧಿಯಲ್ಲಿ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇದೇ ವಿಚಾರವನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ದರಾಮಯ್ಯ ಸಜ್ಜಾಗುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಹೋರಾಟದ ದಾರಿಯಲ್ಲಿ ಹೆಜ್ಜೆ ಹಾಕಲು ಲಿಂಗಾಯತ ಶಾಸಕರು ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ಶಾಸಕಂಗ ಸಭೆಗೂ ಗೈರಾಗಿದ್ದಾರೆ.

ಜಾತಿ ಗಣತಿ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಲು ನಾಯಕರ ನಿರ್ಧಾರ
ಕಾಂಗ್ರೆಸ್​ ಸಿಎಲ್​ಪಿ ಸಭೆಗೆ ಲಿಂಗಾಯತ ಪ್ರಮುಖ ನಾಯಕರೇ ಗೈರಾಗಿದ್ದರು. ಮಾಜಿ ಸಚಿವ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಶಾಮನೂರೂ ಶಿವಶಂಕರಪ್ಪ ಸಭೆಗೆ ಗೈರಾಗಿದ್ರು. ಬೆಂಗಳೂರಿನಲ್ಲಿದ್ದ ಎಂ.ಬಿ ಪಾಟೀಲ್ ಸಭೆಗೆ ಗೈರಾಗಿ ವಿಜಯಪುರಕ್ಕೆ ಪ್ರಯಾಣ ಬೆಳೆಸಿದ್ರು. ಶಾಸಕಾಂಗ ಸಭೆಯಲ್ಲಿ ಜಾತಿ ಗಣತಿ ಅನುಷ್ಠಾನದ ವಿಚಾರ ಚರ್ಚಿಸಲು ನಿರ್ಧರಿಸಲಾಗಿತ್ತು. ಆದ್ರೆ ಜಾತಿ ಗಣತಿ ವಿಚಾರದಿಂದ ಅಂತರ ಕಾಯ್ದುಕೊಳ್ಳಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ.

blank

ಇನ್ನು ಶಾಸಕಾಂಗ ಸಭೆಗೆ ಗೈರಾಗುವ ಮೂಲಕ ಜಾತಿ ಗಣತಿ ವಿಷಯದಿಂದ ಲಿಂಗಾಯಿತ ನಾಯಕರು ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರೋದೇಕೆ ಅನ್ನೋದನ್ನ ನೋಡೋದಾದ್ರೆ..

ಸಭೆಗೆ ಚಕ್ಕರ್​​ ಹಾಕಿದ್ದೇಕೆ?
ಲಿಂಗಾಯತ ಪ್ರತ್ಯೇಕ ವಿಚಾರದಲ್ಲಿ ಪಕ್ಷಕ್ಕೆ ಈಗಾಗಲೇ ಸಾಕಷ್ಟು ಪೆಟ್ಟು ಬಿದ್ದಿದೆ. ಲಿಂಗಾಯತ ಸಮುದಾಯದಲ್ಲಿ ಬೇರೆ ಬೇರೆ ಹೋರಾಟಗಳು ನಡೆಯುತ್ತಿವೆ. ಒಂದು ವೇಳೆ ಜಾತಿ ಗಣತಿ ಪರವಾಗಿ ನಿಂತುಕೊಂಡ್ರೆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ಜೊತೆಗೆ ಜಾತಿ ಗಣತಿ ಅನುಷ್ಠಾನಕ್ಕೆ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ವಿವಾದದ ಸುಳಿಯಲ್ಲಿ ಸಿಲುಕದಿರಲು ಲಿಂಗಾಯತ ನಾಯಕರು ತೀರ್ಮಾನಿಸಿದ್ದಾರೆ.

blank

ಕಳೆದ ಬಾರಿಯ ಚುನಾವಣೆ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾಂಗ್ರೆಸ್​ ಪಕ್ಷಕ್ಕೆ ಸಾಕಷ್ಟು ಪೆಟ್ಟು ನೀಡಿತ್ತು. ಹೀಗಾಗಿ ಜಾತಿ ಗಣತಿ ವಿಚಾರದಲ್ಲಿ ಮಧ್ಯಪ್ರವೇಶಿಸದಿರೋದೇ ಒಳ್ಳೆಯದು ಅನ್ನೋ ತೀರ್ಮಾನಕ್ಕೆ ಲಿಂಗಾಯತ ಸಮುದಾಯದ ನಾಯಕರು ಬಂದಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯರ ಹೋರಾಟದಿಂದ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರೋ ಲಿಂಗಾಯತ ಸಮುದಾಯದ ನಾಯಕರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ದೂರ ಉಳಿದಿದ್ದಾರೆ.

ಒಟ್ಟಿನಲ್ಲಿ ಜಾತಿ ಗಣತಿ ಅನ್ನೋ ಅಸ್ತ್ರದ ಮೂಲಕ ಬಿಜೆಪಿಯನ್ನು ಕಟ್ಟಿಹಾಕೋಕೆ ಮುಂದಾಗಿದ್ದ ಸಿದ್ದರಾಮಯ್ಯಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಅವರ ಹೋರಾಟಕ್ಕೆ ಪಕ್ಷದಲ್ಲೇ ಅಪಸ್ವರದ ಅಲೆ ಅಪ್ಪಳಿಸಿದೆ. ಈ ಮಧ್ಯೆ ಸಿದ್ದರಾಮಯ್ಯ ಜಾತಿ ಗಣತಿಯ ಹಡಗಿನಲ್ಲಿ ರಾಜಕೀಯ ಪ್ರಯಾಣ ಹೇಗೆ ಮುಂದುವರಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಬರಹ: ವಿರೇಂದ್ರ ಉಪ್ಪುಂದ, ನ್ಯೂಸ್​ಫಸ್ಟ್, ಬೆಂಗಳೂರು

Source: newsfirstlive.com Source link