2023ರ ವಿಧಾನಸಭೆ ಚುನಾವಣೆ ಟಾರ್ಗೆಟ್; ಕಾಂಗ್ರೆಸ್​ನಲ್ಲೀಗ ಈಗ ಹೊಸ ವಿವಾದದ ಕಿಡಿ!

2023ರ ವಿಧಾನಸಭೆ ಚುನಾವಣೆ ಟಾರ್ಗೆಟ್; ಕಾಂಗ್ರೆಸ್​ನಲ್ಲೀಗ ಈಗ ಹೊಸ ವಿವಾದದ ಕಿಡಿ!

ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅವರ ಹೇಳಿಕೆ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಅದೇ ಮಾತನ್ನ ಪುನರುಚ್ಚರಿಸಿದ್ದಾರೆ. ಜೊತೆಗೆ ರಾಜ್ಯ ಬೆಜೆಪಿಯ ಕೆಲವು ನಾಯಕರೂ ಕೂಡ ಘೋಷಣೆ ಮಾಡಿಬಿಟ್ಟಿದ್ದಾರೆ. ಬಿಜೆಪಿಯಲ್ಲಿನ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್​ನಲ್ಲೂ ನಾಯಕತ್ವದ ಪ್ರಶ್ನೆ ಎದ್ದಿದೆ!

‘2023ರ ಚುನಾವಣೆಯ ನೇತೃತ್ವ ಯಾರ ಹೆಗಲಿಗೆ’ ಅನ್ನೋ ಪ್ರಶ್ನೆ ಶುರುವಾಗಿದೆ. ಈಗಾಗಲೇ ‘ಮುಂದಿನ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್’ ಅನ್ನೋ ವಿವಾದ ಇರುವಾಗಲೇ ರಾಜ್ಯ ಕಾಂಗ್ರೆಸ್​ನಲ್ಲೀಗ ನಾಯಕತ್ವದ ಕಿಡಿ ಹೊತ್ತಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತರು, ಈ ವಿಚಾರದಲ್ಲಿ ತುಪ್ಪ ಸುರಿದಿದ್ದಾರೆ.

blank

ತುಪ್ಪ ಸುರಿದ ಸಿದ್ದರಾಯಮ್ಮ ಆಪ್ತ..!
ಇತ್ತೀಚೆಗೆ ಮಾತನಾಡಿರುವ ಸಿದ್ದರಾಮಯ್ಯರ ಆಪ್ತ, ಹೆಬ್ಬಾಳ ಶಾಸಕ ಭೈರತಿ ಸುರೇಶ್, 2023ಕ್ಕೆ ಮತ್ತೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಅಧಿಕಾರಕ್ಕೆ ಬರೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ ಅನ್ನೋ ಮೂಲಕ ‘ಕೆಪಿಸಿಸಿ ಅಧ್ಯಕ್ಷರನ್ನ ಮಾರ್ಗದರ್ಶಕ‌ ಮಂಡಳಿಗೆ’ ಭೈರತಿ ಸುರೇಶ್ ಸೇರಿಸಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್​ನಲ್ಲಿ ‘ನಾಯಕತ್ವ’ದ ಕೂಗು ಜೋರಾಗೋದು ಬಹುತೇಕ ಪಕ್ಕವಾಗಿದೆ.

ಈ ಮೊದಲು ‘ಮುಂದಿನ ಸಿಎಂ ಸಿದ್ದರಾಮಯ್ಯ’ ಅವರ ಆಪ್ತ ಬಳಗ ಸಾರ್ವಜನಿಕವಾಗಿ ಹೇಳಿದ್ದರು. ಜಮೀರ್ ಅಹಮ್ಮದ್, ಅಖಂಡ ಶ್ರೀನಿವಾಸ್ ಮೂರ್ತಿ, ರಾಘವೇಂದ್ರ ಹಿಟ್ನಾಳ್, ಕೆ.ಎನ್.ರಾಜಣ್ಣ ಸೇರಿದಂತೆ ಹಲವರು ಸಿದ್ದರಾಮಯ್ಯರ ಪರ ಮಾತನಾಡಿದ್ದರು. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಜಮೀರ್ ಅಹಮ್ಮದ್ ಖಾನ್, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿ ಡಿಕೆ ಶಿವಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ..?
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಡಿ.ಕೆ.ಶಿವಕುಮಾರ್ ಎಚ್ಚರಿಕೆಗೂ ಮಣಿಯದೆ ಬಹಿರಂಗ ಹೇಳಿಕೆ ನೀಡಿದ್ದ ಜಮೀರ್, ವಿರುದ್ಧ ಕಾಂಗ್ರೆಸ್​ನ ಕೆಲವು ನಾಯಕರು ಸೇರಿದಂತೆ ಕಾರ್ಯಕರ್ತರು ಕೂಡ ಗರಂ ಆಗಿದ್ದರು. ಇದೀಗ 2023ರ ಚುನಾವಣೆಯಲ್ಲಿ ಯಾರ ನಾಯಕತ್ವ ಅನ್ನೋ ಪ್ರಶ್ನೆ ಕಾಂಗ್ರೆಸ್​ನಲ್ಲಿ ಶುರುವಾಗಿದೆ. ಕೆಲವು ಸಿದ್ದರಾಮಯ್ಯರ ಪರ ಮಾತನಾಡಿದ್ರೆ, ಇನ್ನು ಕೆಲವರು ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ. ಈ ಗೊಂದಲಗಳ ಮಧ್ಯೆ ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್​ ಚುನಾವಣೆಯನ್ನ ಎದುರಿಸಿದರೂ ಯಾವುದೇ ಅಚ್ಚರಿ ಇಲ್ಲ.

ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ

Source: newsfirstlive.com Source link