ಬಿಎಸ್​ವೈ ‘ಏಕಾಂಗಿ ಪ್ರವಾಸ’ಕ್ಕೆ ನಿರಾಸೆ- ನಾಲ್ಕು ದಿಕ್ಕಿನಲ್ಲಿ ನಾಲ್ವರ ಪ್ರವಾಸ..!

ಬಿಎಸ್​ವೈ ‘ಏಕಾಂಗಿ ಪ್ರವಾಸ’ಕ್ಕೆ ನಿರಾಸೆ- ನಾಲ್ಕು ದಿಕ್ಕಿನಲ್ಲಿ ನಾಲ್ವರ ಪ್ರವಾಸ..!

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು, ‘ನನ್ನ ಪಕ್ಷ ಸಂಘಟನೆ, ಸಾರ್ವಜನಿಕ ಬುದುಕಿನ ಹೋರಾಟ ಇಲ್ಲಿಗೆ ನಿಲ್ಲಲ್ಲ, ಮುಂದಿನ ದಿನಗಳಲ್ಲಿ ಮತ್ತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿ ಕೊಳ್ಳಲಿದ್ದೇನೆ’ ಅಂತಾ ವಾಗ್ದಾನ ನೀಡಿದ್ದರು. ತಮ್ಮ ಮಾತಿನ ಮುಂದುವರಿದ ಭಾಗವಾಗಿ ರಾಜ್ಯ ಪ್ರವಾಸಕ್ಕೆಂದೇ ಹೊಸ ಕಾರು ಕೂಡ ಖರೀದಿ ಮಾಡಿದ್ದರು. ಆದರೆ ಇದೀಗ ಮಾಜಿ ಸಿಎಂ ಅವರ ಏಕಾಂಗಿ ಪ್ರವಾಸಕ್ಕೆ ಬ್ರೇಕ್ ಬೀಳಲಿದೆ ಅನ್ನೋ ಅನುಮಾನ ಶುರುವಾಗಿದೆ.

ಯಾಕೆ, ಏನಾಯ್ತು..?
ಕೆಲವು ಮೂಲಗಳ ಪ್ರಕಾರ ‘ಮತ್ತೊಂದು ಶಕ್ತಿ ಕೇಂದ್ರ’ದ ಸೃಷ್ಟಿಗೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ಬಿಎಸ್‌ವೈ ಪ್ರವಾಸಕ್ಕೆ ಕಡಿವಾಣ ಬೀಳಲಿದೆ ಎನ್ನಲಾಗಿದೆ. ಇದರ ಮಧ್ಯೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಹುಮ್ಮಸ್ಸಿನಲ್ಲಿ ಇದ್ದಾರೆ. ಅದರಂತೆ ಅಕ್ಟೋಬರ್​​ನಲ್ಲಿ ಪ್ರವಾಸ ಆರಂಭಿಸಲು ಎಲ್ಲಾ ತಯಾರಿ ಕೂಡ ನಡೆಸಿದ್ದಾರೆ. ಆದರೆ, ಬಿಎಸ್‌ವೈ ಏಕಾಂಗಿ ಪ್ರವಾಸದ ಬದಲಿಗೆ ಮತ್ತೆ ಮೂವರು ಪ್ರಮುಖರು ಪ್ರವಾಸ ಮಾಡಲು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆ ಟಾರ್ಗೆಟ್; ಕಾಂಗ್ರೆಸ್​ನಲ್ಲೀಗ ಈಗ ಹೊಸ ವಿವಾದದ ಕಿಡಿ!

ರಾಜ್ಯ ಬಿಜೆಪಿ ವೇದಿಕೆಯಲ್ಲಿ ನಾಲ್ವರು ಪ್ರಮುಖರ ನೇತೃತ್ವದಲ್ಲಿ ಪ್ರವಾಸ ಆರಂಭಿಸುವ ಕುರಿತು ಚರ್ಚೆ ಶುರುವಾಗಿದೆ. ನಾಲ್ಕು ದಿಕ್ಕುಗಳಲ್ಲಿ ಪ್ರವಾಸ ನಡೆಸಲು ನಾಯಕರ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೊಂದು ದಿಕ್ಕಿನಲ್ಲಿ ಒಬ್ಬೊಬ್ಬ ನಾಯಕರ ನೇತೃತ್ವದಲ್ಲಿ ಪ್ರವಾಸ ಸಂಬಂಧ ಬಗ್ಗೆ ಚರ್ಚೆ ಶುರುವಾಗಿದೆ.

ಯಾರು ಯಾವ ದಿಕ್ಕಿಗೆ..?
ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷಾಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ನಡೆಸಲು ಬಿಜೆಪಿ ಚಿಂತನೆ ನಡೆಸಿದ್ಯಂತೆ. ಬಿ.ಎಸ್.ಯಡಿಯೂರಪ್ಪ ಮತ್ತಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವಾಸ ಆರಂಭವಾಗಲಿದೆ ಎನ್ನಲಾಗಿದೆ.

ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ

Source: newsfirstlive.com Source link