ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ

– ಪೊಲೀಸರು ಯಾವುದೇ ಟೆಸ್ಟ್ ಮಾಡಿಲ್ಲ, ನಾನು ಮಾಡಬೇಡಿ ಅಂದಿಲ್ಲ
– ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ
– ಎಲ್ಲೂ ಓಡಿ ಹೋಗಲ್ಲ, ಇನ್ನೂ ವಿಚಾರಣೆ ಎದುರಿಸಲು ನಾನು ಸಿದ್ಧ

ಬೆಂಗಳೂರು: ಕಳೆದ ವರ್ಷ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಾಗ ಡ್ರಗ್ಸ್ ತೆಗೆದುಕೊಂಡಿರುವುದು, ಮಾರಾಟ ಮಾಡಿರುವುದರ ಬಗ್ಗೆ ಕೇಳಿಲ್ಲ. ಇದನ್ನು ಕಳೆದ ಬಾರಿಯೂ ಸ್ಪಷ್ಟಪಡಿಸಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಏನೇನು ಕೇಳಬೇಕು, ನಾನು ಏನೇನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಕಾನೂನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ, ಮುಂದೆಯು ಕೊಡುತ್ತೇನೆ. ನನಗೆ ಬೆಂಗಳೂರಲ್ಲಿ ಮನೆ ಇಲ್ಲ, ಆರೋಪಗಳೆಲ್ಲವೂ ಸುಳ್ಳು ಎಂದು ನಟಿ, ನಿರೂಪಕಿ ಅನುಶ್ರೀ ಸ್ಪಷ್ಟಪಡಿಸಿದರು.

ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಮಾಜಿ ಮುಖ್ಯಮಂತ್ರಿ ಸಹಾಯ ಮಾಡಿಲ್ಲ, ಯಾರ ಸಹಾಯವೂ ನನಗೆ ಬೇಕಿಲ್ಲ. ನಾನು ಒಬ್ಬಳೇ ಬೆಂಗಳೂರಿಗೆ ಬಂದಿದ್ದೇನೆ, ಈಗಲೂ ನಿಮ್ಮ ಮುಂದೆ ಒಬ್ಬಳೇ ಬಂದು ನಿಂತಿದ್ದೇನೆ. ಅಲ್ಲದೆ ನಾನು ಭಯಪಟ್ಟುಕೊಂಡು ತಲೆಮರೆಸಿಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ. ನಾನು ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದೆ. ಸೋಮವಾರ ನಾನು ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದೆ. ವಾಪಸ್ ಬರಲು ಸಹ ಅದೇ ದಿನ ಬುಕ್ ಮಾಡಿದ್ದೇನೆ. ನಾನು ಎಲ್ಲೂ ಹಾರಿ ಹೋಗಿಲ್ಲ, ಭಯಪಟ್ಟುಕೊಂಡು ಹೋಗಿಲ್ಲ. ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದೆ. ನೀವೆಲ್ಲ ಆರೋಪ ಮಾಡುವ 2 ದಿನ ಮುಂಚೆಯೇ ನಾನು ಮುಂಬೈಗೆ ಹೋಗಿದ್ದೆ. ಇದು ನನ್ನ ನೆಲ, ನಾನು ಇಲ್ಲೇ ಇರುತ್ತೇನೆ, ಎಲ್ಲೂ ಓಡಿ ಹೋಗುವುದಿಲ್ಲ. ಏನೇ ಬಂದರೂ ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಮುಂಬೈನಿಂದಲೇ ವಕೀಲರಿಗೆ ಕರೆ ಮಾಡಿ ಅನುಶ್ರೀ ಮಾತುಕತೆ!

ಅನುಶ್ರೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ರೂಮ್‍ಗೆ ಬರುತ್ತಿದ್ದರು, ಡ್ರಗ್ಸ್ ತರುತ್ತಿದ್ದರು. ಎಲ್ಲರೂ ಜೊತೆಯಲ್ಲಿ ಡ್ರಗ್ಸ್ ಸೇವಿಸುತ್ತಿದ್ದೆವು ಎಂದು ಆರೋಪಿ ಹೇಳಿದ್ದಾನೆ. ಆರೋಪಿಗಳು ಸಾವಿರ ಹೇಳುತ್ತಾರೆ. ಏನುಬೇಕಾದರೂ ಹೇಳಿಕೆ ನೀಡಬಹುದು. ಪೊಲೀಸರು ಹಾಗೂ ಕಾನೂನು ಸರಿ, ತಪ್ಪನ್ನು ಪರಿಶೀಲನೆ ಮಾಡುತ್ತಾರೆ. 2007ರ ಶೋನಲ್ಲಿ ನಾನು ಭಾಗವಹಿಸಿದಾಗ ಡ್ಯಾನ್ಸರ್ ಕೋರಿಯೋಗ್ರಫರ್ ಆಗಿ ಬಂದಿದ್ದರು. ಆ ಶೋನ ಫಿನಾಲೆಯಲ್ಲಿ ನಾನು ಗೆದ್ದಿದ್ದೆ. ಆಗ ಎಲ್ಲರಿಗೂ ಊಟ ಕೊಡಿಸಿದ್ದೇನೆ. ಅದನ್ನೇ ನೀವು ಡ್ರಗ್ಸ್ ಸೇವಿಸಿದ್ದಾರೆ ಎಂದು ಹೇಳುತ್ತಿರುವುದು ತಪ್ಪು ಎಂದು ತಿಳಿಸಿದರು.

ಸಿಸಿಬಿ ಪೊಲೀಸರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅವರ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ನಾನು ಯಾವುದೇ ಪ್ರಭಾವಶಾಲಿಗಳಿಗೆ ಕರೆ ಮಾಡಿಲ್ಲ. ಯಾರ ಸಹಾಯವೂ ನನಗೆ ಅಗತ್ಯವಿಲ್ಲ. ಒಬ್ಬಳೇ ಬೆಂಗಳೂರಿಗೆ ಬಂದಿದ್ದೇನೆ. ಒಬ್ಬಳೇ ದುಡಿಯುತ್ತೇನೆ, ಒಬ್ಬಳೇ ಹೋರಾಟ ಮಾಡುತ್ತೇನೆ. ಯಾವುದೇ ಪ್ರಭಾವಶಾಲಿಗಳ ಸಹಾಯ ನನಗೆ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

12 ಕೋಟಿ ಮನೆಗಳನ್ನು ಹೊಂದಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಒರಾಯನ್ ಮಾಲ್ ಎದುರು ನಾನು ವಾಸವಿರುವುದು ನಿಜ. ಆದರೆ ಇದು ಬಾಡಿಗೆ ಮನೆ, ನಾನು ಎಷ್ಟು ವರ್ಷದಿಂದ ಬಾಡಿಗೆ ಕಟ್ಟಿಕೊಂಡು ಈ ಮನೆಯಲ್ಲಿ ವಾಸವಿದ್ದೇನೆ ಎಂದು ಮನೆ ಮಾಲೀಕರನ್ನು ಕೇಳಬಹುದು. ಕಳೆದ ಮೂರು ವರ್ಷದಿಂದ ಬಾಡಿಗೆಗೆ ಇದ್ದೇನೆ. ಮಂಗಳೂರಿನಲ್ಲಿ ಮನೆ ಇರುವುದು ಸತ್ಯ, ಅದರ ಮೇಲೆ ಇನ್ನೂ ಸ್ವಲ್ಪ ಲೋನ್ ಇದೆ. ಆ ಮನೆ ಸಹ ಎಷ್ಟು ಕೋಟಿ ಬೆಲೆ ಬಾಳುತ್ತದೆ ಎಂಬುದನ್ನು ಪರಿಶೀಲನೆ ನಡೆಸಬಹುದು ಎಂದರು.

ನಾನು ಡ್ರಗ್ಸ್ ಸೇವಿಸಿಲ್ಲ, ಖರೀದಿಸಿಲ್ಲ ಆರೋಪಿ ಹೇಳಿಕೆ ನೀಡಿರುವುದು ಸುಳ್ಳು. ನನ್ನನ್ನು ಯಾವುದೇ ಪರೀಕ್ಷೆಗೆ ಕರೆದಿಲ್ಲ. ಕೇಳಿದ್ದರೆ ನಾನು ಖಂಡಿತವಾಗಿಯೂ ಹೋಗುತ್ತಿದ್ದೆ. ಅಲ್ಲದೆ ನಾನು ಡ್ರಗ್ಸ್ ಸೇವಿಸಿದ್ದೇನೆ, ಡ್ರಗ್ಸ್ ಪೆಡ್ಲರ್ ಎಂದು ವಿಚಾರಣೆಗೆ ಕರೆದಿಲ್ಲ. ಆರೋಪಿಗಳು ನನಗೆ ಪರಿಚಯ ಇದ್ದಿದ್ದರ ಕುರಿತು ಮಾತ್ರ ಅಧಿಕಾರಿಗಳು ಕೇಳಿದ್ದಾರೆ. ಈಗಲೂ ವಿಚಾರಣೆಗೆ ಕರೆದರೆ ಹೀಗುತ್ತೇನೆ. ನನಗೆ ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.

Source: publictv.in Source link