ಗಣೇಶ ಹಬ್ಬಕ್ಕೆ ಸ್ವಯಂ ಅನುಶಾಸನ ಅಗತ್ಯ: ಸುನಿಲ್ ಕುಮಾರ್

– ಶ್ರೀರಾಮ ಸೇನೆ ಎಚ್ಚರಿಕೆಗೆ ಸಚಿವರ ಪ್ರತಿಕ್ರಿಯೆ

ಉಡುಪಿ: ಗಣೇಶೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲು ನಮ್ಮ ಅಡ್ಡಿ ಇರಲಿಲ್ಲ. ಕೊರೊನಾ ಸಂದರ್ಭ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಹಬ್ಬ ಆಚರಿಸುವವರು ಸ್ವಯಂ ನಿಯಂತ್ರಣ ಹಾಕಿ ಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ನಾವು ಹಬ್ಬ ಆಚರಿಸುವಾಗ, ವಿಜೃಂಭಣೆ ಮಾಡುವಾಗ ನಮ್ಮ ಕಾರ್ಯಕ್ರಮಗಳಿಂದ ಯಾರಿಗೂ ಅಡ್ಡಿಯಾಗಬಾರದು. ಸಮಾರಂಭ ಮಾಡುವ ಮೂಲಕ ನಮ್ಮಿಂದ ಯಾರಿಗೂ ಕೊರೊನಾ ಬರಬಾರದು. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸ್ವಯಂ ಅನುಶಾಸನವನ್ನು ಹಾಕಿಕೊಳ್ಳುವ ಅನಿವಾರ್ಯಯತೆ ಇದೆ ಎಂದರು. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

ಸಾಂಕ್ರಾಮಿಕ ರೋಗ ಕೊರೊನಾದ ಭೀತಿ ನಡುವೆ ಹಲವಾರು ಕಠಿಣ ನಿಯಮಗಳನ್ನು ಹಾಕಿ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ. ವಿಜೃಂಭಣೆಯ ಆಚರಣೆಗೆ ಸರ್ಕಾರದ ಮಾರ್ಗಸೂಚಿಗಳು ಅಡ್ಡಿಯಾಗುತ್ತಿವೆ. ಗಣೇಶೋತ್ಸವ ಆಚರಣೆಗೆ ಅಡ್ಡ ಬಂದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

Source: publictv.in Source link