ಡೆಲ್ಲಿಯಿಂದ ವಾಪಸ್ಸಾದ ಸಿಎಂಗೆ ಸಜ್ಜಾಗ್ತಿದೆ ಅಧಿವೇಶನದ ವೇದಿಕೆ.. ವಿಪಕ್ಷಗಳ ಅಸ್ತ್ರಗಳೇನು..?

ಡೆಲ್ಲಿಯಿಂದ ವಾಪಸ್ಸಾದ ಸಿಎಂಗೆ ಸಜ್ಜಾಗ್ತಿದೆ ಅಧಿವೇಶನದ ವೇದಿಕೆ.. ವಿಪಕ್ಷಗಳ ಅಸ್ತ್ರಗಳೇನು..?

ಸಿಎಂ ಬೊಮ್ಮಾಯಿ ಏನೋ ಜಮ್ ಅಂತಾ ಡೆಲ್ಲಿ ಟೂರ್ ಮುಗಿಸ್ಕೊಂಡು ಬಂದಿದ್ದಾರೆ. ಹೈ ಕಮಾಂಡ್‌ನ ಭೇಟಿಯಾಗಿ ಹೈ ಕ್ಲಾಸ್ ಆಗಿ ವಾಪಸ್ ಆಗಿದ್ದಾರೆ. ಆದ್ರೆ, ಸಿಎಂ ಸದ್ಯ ಎದುರಾಗಿದೆ ಸವಾಲು. ಅದೇ ವಿಧಾನಮಂಡಲ ಅಧಿವೇಶನ. ಇಲ್ಲಿ ವಿಪಕ್ಷಗಳು ಸರ್ಕಾರವನ್ನ ಹಣಿಯಲು ಎಲ್ಲಾ ರೀತಿಯ ಅಸ್ತ್ರಗಳನ್ನ ಈಗಿನಿಂದಲೇ ಮಸೆಯುತ್ತಿವೆ. ಹೀಗಾಗಿ ಸಿಎಂಗೆ ಕಠಿಣ ಸವಾಲುಗಳು ಎದುರಾಗೋದು ಪಕ್ಕಾ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಸೆಪ್ಟಂಬರ್ 13ರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಈ ವೇಳೆ ವಿಪಕ್ಷ ನಾಯಕರು ಸಿಎಂ ಮತ್ತು ಸಚಿವರನ್ನ ಇಕ್ಕಟ್ಟಿಗೆ ಸಿಲುಕಿಸಲು ಭಾರೀ ರಣತಂತ್ರಗಳನ್ನ ಹೆಣೆಯುತ್ತಿವೆ. ಬೊಮ್ಮಾಯಿ ಸಿಎಂ ಆದ ಬಳಿಕ ಎದುರಾದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲು ಸಜ್ಜಾಗಿವೆ. ಹೀಗಾಗಿ ಅಧಿವೇಶನದತ್ತ ನಿಗಾವಹಿಸಲು ಸಿಎಂ ಬೊಮ್ಮಾಯಿ ಸಜ್ಜಾಗ್ತಿದ್ದಾರೆ.

ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ವಿಚಾರವೇ ಸಿಎಂಗೆ ಮೊದಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಜೊತೆಗೆ ಸಂಪುಟ ರಚನೆಯ ಸಂದರ್ಭದಲ್ಲಾದ ಗೊಂದಲಗಳು. ಖಾತೆ ಹಂಚಿಕೆಯ ವೇಳೆ ಕೆಲ ಸಚಿವರ ಬಂಡಾಯ ಇದು ಮತ್ತೊಂದು ಬಗೆಯ ಸವಾಲಾಗಿ ಸಿಎಂಗೆ ಎದುರಾಗಲಿದೆ. ಇನ್ನು ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದಿದ್ದ ಶೆಟ್ಟರ್ ವಿಚಾರ​ ಕೂಡಾ ಸದನದಲ್ಲಿ ಸಿಡಿದೇಳುವ ಸಾಧ್ಯತೆ ಇದೆ. ಇದೆಲ್ಲದ ಮಧ್ಯೆ ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಮಾಜಿ‌ ಸಿಎಂ ಯಡಿಯೂರಪ್ಪ ನಡೆಯನ್ನೂ ಕೂಡಾ ವಿಪಕ್ಷಗಳು ಸದನದಲ್ಲಿ ಎಳೆದು ತರುವ ಸಾಧ್ಯತೆ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಆರೋಪ, ಕಳಂಕಿತ ಸಚಿವೆಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಕೂಡಾ ಭಾರೀ ಸದ್ದು ಮಾಡೋದು ಪಕ್ಕಾ ಎನ್ನುವಂತಾಗಿದೆ. ಜೊತೆಗೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನೇ ಇಟ್ಟುಕೊಂಡು ವಿಪಕ್ಷಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಇಲ್ಲದೇ ಇರುವ ಆರೋಪವನ್ನು ಮಾಡೋದು ಗ್ಯಾರಂಟಿ ಎನ್ನಲಾಗಿದೆ.

ಒಟ್ಟಾರೆ ಇಷ್ಟೆಲ್ಲಾ ಸವಾಲುಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಮೊದಲ ಬಾರಿ ಎದುರಾಗಲಿವೆ. ಹೀಗಾಗಿ ವಿಪಕ್ಷಗಳ ಈ ಎಲ್ಲಾ ಏಟುಗಳಿಗೆ ಸಿಎಂ ಯಾವ ರೀತಿ ಉತ್ತರಿಸುತ್ತಾರೆ. ಬಿಎಸ್‌ವೈ ರೀತಿ ಸೇರಿಗೆ ಸವ್ವಾ ಸೇರು ಅಂತಾ ತಿರುಗೇಟು ನೀಡ್ತಾರಾ? ಅಥವಾ ಅವರದ್ದೇ ಸ್ಟೈಲ್‌ನಲ್ಲಿ ಎಲ್ಲಾ ಚಾಲೆಂಜ್‌ಗಳನ್ನ ಸ್ವೀಕರಿಸಿ ಬಗೆಹರಿಸಲು ಮುಂದಾಗ್ತಾರಾ? ಇದಕ್ಕೆಲ್ಲಾ ಸದನದಲ್ಲೇ ಉತ್ತರ ಸಿಗಲಿದೆ.

Source: newsfirstlive.com Source link