ಅಫ್ಘಾನ್​ನಲ್ಲಿ ರಚನೆಯಾಗ್ತಾವಾ ಎರಡೆರಡು ಸರ್ಕಾರ.. ತಾಲಿಬಾನಿಗಳಿಗೆ ಶುರುವಾಯ್ತು ತಲೆನೋವು

ಅಫ್ಘಾನ್​ನಲ್ಲಿ ರಚನೆಯಾಗ್ತಾವಾ ಎರಡೆರಡು ಸರ್ಕಾರ.. ತಾಲಿಬಾನಿಗಳಿಗೆ ಶುರುವಾಯ್ತು ತಲೆನೋವು

ಎರಡು ದಶಕಗಳ ಕಾಲ ಅಡಗಿ ಕೂತು ತಾಲಿಬಾನಿಗಳು ಎರಡೇ ವಾರದಲ್ಲಿ ಅಂದುಕೊಂಡಂತೆ ಇಡೀ ಅಫ್ಗಾನ್​​​ ಅನ್ನ ಕಬ್ಜಾ ಮಾಡಿಕೊಂಡಿದ್ದರು. ಅಂದುಕೊಂಡಂತೆ ಸಾಧನೆ ಮಾಡೋದು ಸದ್ಯಕಂತೂ ತಾಲಿಬಾನಿಗಳಿಗೆ ಕನಸಿನ ಕೂಸು ಅಂದ್ರೆ ತಪ್ಪಾಗೋದಿಲ್ಲಾ.. ಯಾಕಂದ್ರೆ ಅವರು ಸದ್ಯಕ್ಕೆ ಸರ್ಕಾರ ರಚನೆ ಮಾಡಿರಬಹುದು ಆದ್ರೆ ಅದು ಅಲ್ಪಾವಧಿ ಅನ್ನೋ ಮಾತುಗಳ ಕೇಳಿ ಬರುತ್ತಿದೆ. ಸದ್ಯದ ಕುತೂಹಲ ಅಂದ್ರೆ ಒಂದೇ ರಾಷ್ಟ್ರದಲ್ಲಿ ಈಗ ಎರಡು ಸರ್ಕಾರ ರಚನೆ ಆಗೋ ಮಾತು ಕೇಳಿ ಬರ್ತಾಯಿದೆ..

ಕಳೆದ ಒಂದು ತಿಂಗಳಿನಿಂದ ವಿಶ್ವದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿರೋದು ಅಂದ್ರೆ ಅದು ಅಫ್ಘಾನ್​​​​.. 2001 ರಲ್ಲಿ ಅಮೆರಿಕಾ ಮತ್ತು ನ್ಯಾಟೋ ಪಡೆಗಳ ಎಂಟ್ರಿಯಿಂದ ಬಾಲ ಮುದುರಿಕೊಂಡು ಗೂಡು ಸೇರಿದ್ದ ತಾಲಿಬಾನಿಗಳು, ಇಪ್ಪತ್ತು ವರ್ಷಗಳ ಬಳಿಕ ಬಿಲದಿಂದ ಹೊರ ಬಂದಿದ್ದಾರೆ. ಆ ಮೂಲಕ ಸುಮಾರು ಒಂದು ತಿಂಗಳ ಕಾಲ ಸಂಪೂರ್ಣ ಅಫ್ಗಾನ್​​ನನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕೊನೆಗೂ ತಾಲಿಬಾನ್​​ ತಮ್ಮ ಕಬ್ಜಾದಲ್ಲಿದೆ ಅಂತಾ ಘೋಷಣೆ ಮಾಡಿ ನಂತರ ಸರ್ಕಾರ ಕೂಡ ತಂತಾನೆ ರಚನೆ ಮಾಡಿಕೊಂಡು ವಿಶ್ವಕ್ಕೆ ತಿಳಿಯುವಂತೆ ಮಾಡಿದ್ರು.. ಸದ್ಯಕ್ಕೆ ಅವರು ಅಂದುಕೊಂಡಂತೆ ಸರ್ಕಾರ ಏನೋ ರಚನೆ ಆಗಿದೆ. ಆದ್ರೆ ಶಾಶ್ವತಾನಾ? ಇಲ್ಲಾ ಅನ್ನುತ್ತಿದ್ದಾರೆ ಹಲವರು..

ಯಾಕೆ ಈ ಮಾತು ಈಗ ಕೇಳಿ ಬಂದಿದೆ ಅನ್ನೋದಕ್ಕೆ ಒಂದು ಕಾರಣ ಇದೆ. ತಾಲಿಬಾನಿಗಳು ಅಫ್ಗಾನ್​​ನ ಒಂದೊಂದೇ ಪ್ರಾಂತ್ಯಗಳನ್ನ ವಶಕ್ಕೆ ಪಡೆದುಕೊಂಡು ಬರುತ್ತಿದ್ದಾಗ, ಅವರಿಗೆ ಸಿಂಹದಂತೆ ಎದುರಾಗಿದ್ದು ಪಂಜ್​ಶೀರ್​ ಪ್ರಾಂತ್ಯ.. ಅದ್ಯಾವ ಮಟ್ಟಿಗೆ ಅಂದ್ರೆ ತಾಲಿಬಾನಿಗಳ ಆಲೋಚನೆಯನ್ನ ಬುಡಮೇಲು ಮಾಡಿಬಿಟ್ಟಿತ್ತು. ಮತ್ತೊಂದು ಕಡೆ ಇಪ್ಪತ್ತು ವರ್ಷಗಳಿಂದ ಎಣೆದಿದ್ದ ಬಲೆಯನ್ನ ಬೇಧಿಸುವ ಮಟ್ಟಿಗೆ ಪಂಜ್​​ಶೀರ್ ಪಡೆ ನಿಂತುಕೊಂಡಿತ್ತು. ಆ ಮೂಲಕ ಎನ್​ ಆರ್​ ಎಫ್​​ ಪಡೆ ನೇರವಾಗಿ ತಾಲಿಬಾನಿಗಳಿಗೆ ಎಚ್ಚರಿಕೆಯ ಸಂದೇಶವನ್ನ ರವಾನಿಸಿ, ಯಾವುದೇ ಕಾರಣಕ್ಕು ಪಂಜ್​​ಶೀರ್ ಅನ್ನ ನಿಮ್ಮ ವಶಕ್ಕೆ ಸಿಗೋದಿಲ್ಲಾ ಅಂದಿದ್ರು.. ಆದ್ರೆ ಸುಮಾರು ಎರಡು ವಾರಗಳ ಕಾಲ ನಿರಂತರವಾಗಿ ಹೋರಾಡಿದ್ದ ಪಂಜ್​​ಶೀರ್ ಸಿಂಹ ಪಡೆ ಕೊನೆಗೆ ಕದನ ವಿರಾಮವನ್ನ ಘೋಷಿಸಿತ್ತು. ಆಗ ಪಂಜ್​ಶೀರ್ ಅನ್ನ ತಮ್ಮ ವಶಕ್ಕೆ ಪಡೆದುಕೊಂಡ ತಾಲಿಬಾನಿಗಳು ಸರ್ಕಾರವನ್ನ ರಚನೆ ಮಾಡೋಕೆ ಮುಂದಾಗಿದ್ದಾರೆ.

ಯಾವಾಗ ತಾಲಿಬಾನಿಗಳು ತಾವೇ ಸರ್ಕಾರವನ್ನ ರಚನೆ ಮಾಡಿದ್ದೀವಿ ಅನ್ನೋದನ್ನ ಅನೌನ್ಸ್​ ಮಾಡಿತ್ತೋ ಆಗಲೇ ನ್ಯಾಷನಲ್​​​​ ರೆಸಿಸ್ಟೆನ್ಸ್​ ಫ್ರಂಟ್​ ಇದು ಕಾನೂನು ಬಾಹಿರವಾಗಿ ಘೋಷಣೆ ಮಾಡಿಕೊಂಡ ಸರ್ಕಾರ ಎಂದು ಮತ್ತೊಮ್ಮೆ ತಾಲಿಬಾನಿಗಳಿಗೆ ಸೆಡ್ಡು ಹೊಡೆದು ನಿಂತಿತ್ತು. ಅಲ್ಲದೇ ತನ್ನ ಸಂಘರ್ಷ ಇನ್ನು ನಿಂತಿಲ್ಲ ಅನ್ನೊ ಎಚ್ಚರಿಕೆಯನ್ನ ಕೂಡ ರವಾನೆ ಮಾಡಿದ್ದಾರೆ. ಆ ಮೂಲಕ ಇನ್ನೊಂದು ವಾರದಲ್ಲಿ ತಾವೇ ಒಂದು ಸರ್ಕಾರವನ್ನ ರಚನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಇನ್ನು ತಾಲಿಬಾನ್ ಸರ್ಕಾರವನ್ನು ಕಾನೂನುಬಾಹಿರ ಎಂದು ಕರೆದಿರುವ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಇನ್ನೊಂದು ವಾರದಲ್ಲಿ ತಾಲಿಬಾನಿಗಳಿಗೆ ಸಮಾನಾಂತರವಾದ ಸರ್ಕಾರವನ್ನು ಘೋಷಿಸುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನವನ್ನು ವಿರೋಧಿಸಿರುವ ಪಂಜ್‌ಶಿರ್ ಪ್ರಾಂತ್ಯದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಸಹ-ಸಂಸ್ಥಾಪಕ ಅಹ್ಮದ್ ಮಸೂದ್, ಜನರ ಮತಗಳ ಆಧಾರದ ಮೇಲೆ ರೂಪುಗೊಂಡ ಪ್ರಜಾಪ್ರಭುತ್ವ ಮತ್ತು ಕಾನೂನುಬದ್ಧ ಸರ್ಕಾರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.

ತಾಲಿಬಾನ್‌ನ ಕಾನೂನುಬಾಹಿರ ಸರ್ಕಾರದ ಆಡಳಿತವು ವೈರತ್ವ ಗುಂಪಿನ ಸ್ಪಷ್ಟ ಸಂದೇಶ ಸಾರುತ್ತದೆ. ಅಫ್ಘಾನಿಸ್ತಾನದ ಪ್ರದೇಶ ಮತ್ತು ಪ್ರಪಂಚದ ಸ್ಥಿರತೆ ಹಾಗೂ ಭದ್ರತೆಗೆ ಬೆದರಿಕೆಯೊಡ್ಡುವಂತಿದೆ ಎಂದು ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ ಹೇಳಿರುವುದಾಗಿ ಅಲ್ಲಿನ ಖಾಮ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಲಿಬಾನ್ ವಿರುದ್ಧ ಸಿಡಿದೇಳಲು ಕರೆ
ಸದ್ಯ ಅಫ್ಘಾನಿಸ್ತಾನದಲ್ಲಿ ರಚನೆ ಆಗಿರುವ ತಾಲಿಬಾನ್ ಸರ್ಕಾರದ ವಿರುದ್ಧ ದೇಶದ ಜನರು ಸಿಡಿದೇಳಬೇಕು ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಮುಖಂಡ ಅಹ್ಮದ್ ಮಸೂದ್ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದರು. ಈ ವಿಡಿಯೋ ಸಂದೇಶದಲ್ಲಿ ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ, ಯುರೋಪಿಯನ್ ಒಕ್ಕೂಟ, ಯುರೋಪಿಯನ್ ಒಕ್ಕೂಟದ ಮಾನವಹಕ್ಕುಗಳ ಆಯೋಗ, ಸಾರ್ಕ್, ಶಾಂಘೈ, ಎಸ್‌ಎಆರ್‌ಸಿ, ಇಸಿಒ ಮತ್ತು ಒಐಸಿಗಳಂತಹ ಹಲವಾರು ಜಾಗತಿಕ ಏಜೆನ್ಸಿಗಳು ತಾಲಿಬಾನ್‌ನೊಂದಿಗೆ ಸಹಕರಿಸದಂತೆ ಅವರು ಕೋರಿದ್ದಾರೆ ಎಂದು ವರದಿ ಆಗಿದೆ.

ಪಂಜ್ ಶೀರ್ ಪ್ರಾಂತ್ಯ ವಶಕ್ಕೆ, ತಾಲಿಬಾನ್ ಘೋಷಣೆ
ಪಂಜ್​ಶೀರ್ ಪಡೆ ಮತ್ತೆ ಸಿಡಿದೇಳುತ್ತಿದೆ ಅನ್ನೋದನ್ನ ಅರಿತ ತಾಲಿಬಾನ್​​ ಸಂಘಟನೆಯು ಪಂಜ್ ಶೀರ್ ಪ್ರಾಂತ್ಯವನ್ನು ಸಹ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿರುವುದಾಗಿ ಘೋಷಿಸಿದೆ. ಕಾಬೂಲ್ ನಗರದಿಂದ ಉತ್ತರದಲ್ಲಿರುವ ಪಂಜ್ ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಿರೋಧಿ ಬಣವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಈ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ತಾಲಿಬಾನ್ ಸಾವಿರಾರು ಭಯೋತ್ಪಾದಕರನ್ನು ಕಳುಹಿಸಿಕೊಟ್ಟಿದೆ. ಪಂಜ್ ಶೀರ್ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದ್ದು, ಇಡೀ ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ 1996 ರಿಂದ 2001ರ ಅವಧಿಯಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಿದ್ದ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ವಾಪಸ್ ಆದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅದಾಗ್ಯೂ, ಪಂಜ್ ಶೀರ್ ಪ್ರಾಂತ್ಯದಲ್ಲಿ ಮಾತ್ರ ತಾಲಿಬಾನ್ ಸಂಘಟನೆ ವಿರುದ್ಧ ನ್ಯಾಷನಲ್ ರೆಸಿಸ್ಟನ್ಸ್ ಫ್ರೆಂಟ್ ಆಫ್ ಅಫ್ಘಾನಿಸ್ತಾನ ಪ್ರಾಬಲ್ಯವನ್ನು ಸಾಧಿಸುತ್ತಲೇ ಬಂದಿದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್, ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ಸದ್ಯಕ್ಕೆ ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ.

ಇನ್ನು ಅಫ್ಘಾನ್ ಸರ್ಕಾರದಲ್ಲಿ ಹಕ್ಕಾನಿ ನಾಯಕನಿಗೂ ಸಚಿವಗಿರಿ ನೀಡಿದ್ದು, ಸೋವಿಯತ್ ವಿರೋಧಿ ಜಿಹಾದ್‌ನ ಪ್ರಸಿದ್ಧ ಕಮಾಂಡರ್ ಪುತ್ರನಾಗಿ ತಾಲಿಬಾನ್‌ನ ಉಪ ನಾಯಕ ಮತ್ತು ಶಕ್ತಿಯುತ ಹಕ್ಕಾನಿ ಜಾಲದ ಮುಖ್ಯಸ್ಥರಾಗಿ ಸಿರಾಜುದ್ದೀನ್ ಹಕ್ಕಾನಿ ಪ್ರಬಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರನ್ನು ಆಂತರಿಕ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಹಕ್ಕಾನಿ ಜಾಲವು ಯುಎಸ್ ನಿಯೋಜಿತ ಭಯೋತ್ಪಾದಕ ಗುಂಪಾಗಿದ್ದು, ಇದನ್ನು ಅಫ್ಘಾನಿಸ್ತಾನದಲ್ಲಿ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಗುಂಪು ಎಂದು ಪರಿಗಣಿಸಲಾಗುತ್ತದೆ. ಆತ್ಮಾಹುತಿ ಬಾಂಬರ್‌ಗಳ ಬಳಕೆಯಲ್ಲಿ ಈ ಜಾಲವು ಅತ್ಯಂತ ಕುಖ್ಯಾತಿಯನ್ನು ಪಡೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾಬೂಲ್‌ನಲ್ಲಿ ನಡೆದ ಭೀಕರ ದಾಳಿಗಳಲ್ಲಿ ಈ ಜಾಲದ ಕೈವಾಡವಿರುವ ಶಂಕೆಯಿದೆ. ತಮ್ಮ ಸ್ವಾತಂತ್ರ್ಯ, ಹೋರಾಟದ ಚಾಣಾಕ್ಷತೆ ಮತ್ತು ಜಾಣತನದ ವ್ಯಾಪಾರ ವ್ಯವಹಾರಗಳಿಗೆ ಹೆಸರುವಾಸಿಯಾಗಿರುವ ಹಕ್ಕಾನಿಗಳು ಮುಖ್ಯವಾಗಿ ಪೂರ್ವ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಮತ್ತು ತಾಲಿಬಾನ್ ನಾಯಕತ್ವ ಮಂಡಳಿಯ ಮೇಲೆ ಗಣನೀಯ ಹಿಡಿತ ಹೊಂದಿದ್ದಾರೆ.

ಇಷ್ಟೆಲ್ಲಾ ಪ್ಲಾನಿಂಗ್ ಮಾಡಿಕೊಂಡು ಸರ್ಕಾರ ಸುಭದ್ರವಾಗಿ ನಡೆಸಿಕೊಂಡು ಹೊಗೋದಕ್ಕೆ ಮೂರನೇ ಸುಪ್ರಿಮ್​​ ಹೈಬತುಕಲ್ಲಾ ಅಖುಂದ್​​ಜಾದಾಗೆ ಸದ್ಯಕ್ಕೆ ಪಂಜ್​ಶೀರ್ ಸಿಂಹ ಪಡೆ ಹಾಗು ನ್ಯಾಷನಲ್​​​ ರೆಸಿಸ್ಟೆನ್ಸ್​​​​ ಫ್ರಂಟ್​​​ ಇನ್ನೊಂದು ವಾರದಲ್ಲಿ ಜನರ ಆಯ್ಕೆಯ ಸರ್ಕಾರ ಬರಲಿದೆ ಅನ್ನೋ ಹೇಳಿಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಹೌದು… ತಾಲಿಬಾನಿಗಳು ಸದ್ಯಕ್ಕಂತೂ ಸೇಫ್ ಅಂತಾ ಅಂದುಕೊಂಡಿದೆ. ಆದ್ರೆ ಮುಂದಿನ ದಿನಗಳಲ್ಲಿ ತನ್ನೆಲ್ಲಾ ವಿರೋಧಿ ಬಣಗಳು ಒಟ್ಟಿಗೆ ಸೇರಿ ತಾಲಿಬಾನಿಗಳ ಹುಟ್ಟಡಗಿಸಲು ಸಜ್ಜಾದ್ರೂ ಆಗಬೋದು, ಆ ಮೂಲಕ ಅಫ್ಘಾನ್​​​ನಲ್ಲಿ ಮತ್ತೊಂದು ಸರ್ಕಾರ ಬಂದರು ಬರಬೋದು, ಆದ್ರೆ ಏನನ್ನು ಹೇಳಲಿಕ್ಕೆ ಆಗೋದಿಲ್ಲ, ಅದಕ್ಕೆಲ್ಲ ಕಾಲವೇ ಉತ್ತರ ನೀಡಬೇಕು..

Source: newsfirstlive.com Source link