ಗಣಪನಿಗೆ ₹10 ಲಕ್ಷ ವೆಚ್ಚದಲ್ಲಿ ಚಿನ್ನದ ಕವಚ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

ಗಣಪನಿಗೆ ₹10 ಲಕ್ಷ ವೆಚ್ಚದಲ್ಲಿ ಚಿನ್ನದ ಕವಚ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ‘ಗಣಪತಿ ಬಪ್ಪ ಮೊರೆಯಾ’

ದೇಶದಾದ್ಯಂತ ಎಲ್ಲೆಲ್ಲೂ ವಿಘ್ನನಿವಾರಕ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆ ಮನೆಗಳಲ್ಲೂ ನಿನ್ನೆಯೇ ಗೌರಮ್ಮ ಪ್ರತಿಷ್ಠಾಪನೆಗೊಂಡಿದ್ರೆ, ಇವತ್ತು ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಲಾಗುತ್ತದೆ. ಐದು ದಿನ ನಡೆಯುವ ಗಣೇಶೋತ್ಸವದಲ್ಲಿ, ಎಲ್ಲರೂ ಕೊರೊನಾ ಮಾರ್ಗಸೂಚಿ ಪಾಲಿಸೋದು ಕಡ್ಡಾಯವಾಗಿರುತ್ತೆ. ಹೊಸ ಬಟ್ಟೆ ತೊಟ್ಟು ಜನರು ಓಡಾಡ್ತಿದ್ರೆ, ಇತ್ತ ಮನೆ ಮನೆಗಳಲ್ಲಿ ಗಣಪನಿಗಾಗಿ ಕಾಯಿ ಕಡುಬು, ಮೋದಕ, ಹೋಳಿಗೆ ಸಿದ್ಧವಾಗಿರುತ್ತೆ. ಗಣೇಶ ಹಬ್ಬ ಅಂತ ಮೈಮರೆಯದೇ, ಕೊರೊನಾ ನಿಯಮ ಪಾಲಿಸಿ, ಜನರು ಹಬ್ಬ ಆಚರಿಸೋದು ಒಳಿತು.

2. ಗಣಪನಿಗೆ ₹10 ಲಕ್ಷ ವೆಚ್ಚದಲ್ಲಿ ಚಿನ್ನದ ಕವಚ!

ಹೆಮ್ಮಾರಿ ಕೊರೊನಾ‌ ಕಾರಣದಿಂದ ರಾಜ್ಯಾದ್ಯಂತ ಈ ಬಾರಿ ಸರಳವಾಗಿ ಗಣೇಶ ಹಬ್ಬದ ಆಚರಣೆಗೆ ಅವಕಾಶ ನೀಡಲಾಗಿದೆ. ಅದರಂತೆ, ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಸರಳವಾಗಿ ವಿಶೇಷವಾದ ರೀತಿಯಲ್ಲಿ ಗಣೇಶ ಹಬ್ಬವನ್ನ ಆಚರಿಸಲಾಗಿದೆ. ಇಷ್ಟ ಗಣಪನಿಗೆ ಊರಿನ ಜನರೆಲ್ಲಾ ಸೇರಿ ಚಿನ್ನದ ಕವಚ ತೊಡಿಸಲು ಮುಂದಾಗಿದ್ದಾರೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರೋ ಚಿನ್ನದ ಕವಚ ಗಣಪನಿಗೆ ಸಮರ್ಪಣೆಯಾಗಲಿದೆ. ಜನರೆಲ್ಲಾ ಸೇರಿ ದೊಡ್ಡ ಮೊತ್ತವನ್ನು ಸಂಗ್ರಹಿಸಿ ಈ ಸುಂದರ ಕವಚವನ್ನು ದೇವರಿಗೆ ದಾನವಾಗಿ ನೀಡಿ ಭಕ್ತಿ ಮೆರೆದಿದ್ದಾರೆ.

3. ಗಣೇಶ ಹಬ್ಬದ ಶುಭಾಶಯ ತಿಳಿಸಿದ ರಾಷ್ಟ್ರಪತಿ

ದೇಶಾದ್ಯಂತ ಇವತ್ತು ಗಣೇಶ ಚತುರ್ಥಿಯನ್ನ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್ ಅವರು,​ ದೇಶದ ಜನರಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ. ಭಗವಾನ್​ ಗಣೇಶ ಹುಟ್ಟಿದ ದಿನವನ್ನ ನಾವು ಹಬ್ಬವನ್ನಾಗಿ ಆಚರಣೆ ಮಾಡ್ತೀವಿ. ಜ್ಞಾನ, ಸಂಪತ್ತುಗಳ ಮಹತ್ವವನ್ನು ಸಾರುವ ವಿಶೇಷ ದಿನ ಅಂದ್ರೆ ಚೌತಿ. ಸಾಮರಸ್ಯವನ್ನ ಎತ್ತಿಹಿಡಿಯವ ಈ ಹಬ್ಬವನ್ನು ಎಲ್ಲರೂ ಸಂತಸದಿಂದ ಆಚರಿಸಿ. ಆದ್ರೆ ಹಬ್ಬದ ಸಂಭ್ರಮದಲ್ಲಿ ಜನ ಕೊರೊನಾ ನಿಯಮಗಳನ್ನ ಉಲ್ಲಂಘನೆ ಮಾಡಬಾರದು ಅಂತ ರಾಷ್ಟ್ರಪತಿ ಕೋವಿಂದ್​, ಸಲಹೆ ನೀಡಿದ್ದಾರೆ.

4. ಅ. 31ರವರೆಗೆ ಸಮಾರಂಭಗಳಿಗೆ ಬ್ರೇಕ್​

ತಮಿಳುನಾಡಿನಲ್ಲಿ ಹಬ್ಬಗಳು, ರಾಜಕೀಯ ಸಮಾವೇಶ, ಸಮುದಾಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳ ಮೇಲಿನ ನಿಷೇಧವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಿಳಿಸಿದ್ದಾರೆ. ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಪ್ರಕರಣಗಳ ಜೊತೆಗೆ ನಿಫಾ ವೈರಸ್​ ಭೀತಿ ಕೂಡ ಹೆಚ್ಚಾಗಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡಿನಲ್ಲಿ ನಿಷೇಧ ಹೇರಲಾಗಿದೆ. ಹೀಗಾಗಿ ಜನರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನ ಆಚರಿಸುವುದು ಸೂಕ್ತ ಅಂತ ಸಿಎಂ ಸ್ಟಾಲಿನ್​ ಮನವಿ ಮಾಡಿದ್ದಾರೆ.

5. ‘ಶೇ.30ರಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ’

ಲಸಿಕೆ ಪಡೆಯದೆ ದೇಶದಾದ್ಯಂತ ನಮ್ಮಲ್ಲಿ ಯಾರೇ ನಿರ್ಲಕ್ಷ್ಯ ತೋರಿದ್ರೂ, ಅದಕ್ಕೆ ದೇಶ ಭಾರೀ ವೆಚ್ಚ ತೆರಬೇಕಾಗುತ್ತದೆ. ಯಾಕಂದ್ರೆ, ಶೇಕಡಾ 30ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗೋ ಸಾಧ್ಯತೆ ಇದೆ ಮತ್ತು ಅವರಲ್ಲಿ ಅನೇಕರು ತೀವ್ರ ಅನಾರೋಗ್ಯಕ್ಕೆ ಗುರಿಯಾಗಬಹುದು ಅಂತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಕಾರ್ಯಕಾರಿ ತಂಡದ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಹೇಳಿದ್ದಾರೆ. ಕೋವಿಡ್ ಸೂಕ್ತ ನಡವಳಿಕೆ ಅನುಸರಿಸೋದು ಅತ್ಯಗತ್ಯ. ಮುಂಬರೋ ಹಬ್ಬದ ಋತುವಿನ ಹಿನ್ನೆಲೆ ಇದು ನಿರ್ಣಾಯಕ. ಈ ಸಮಯ ಹೊಸ ರೂಪಾಂತರಿಯ ಉಗಮ, 3ನೇ ಅಲೆಯ ಆರಂಭಕ್ಕೂ ಕಾರಣವಾಗಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯ ಕಾರ್ಯಕಾರಿ ತಂಡದ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಎಚ್ಚರಿಸಿದ್ದಾರೆ.

6. ‘ಅಫ್ಘಾನ್ ಉಗ್ರರ ತಾಣವಾಗಲು ಬಿಡಲ್ಲ’

ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 5 ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ರು. ಅಫ್ಘಾನ್ ಬೆಳವಣಿಗೆಯಿಂದ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಧಕ್ಕೆಯಾಗೋ ಆತಂಕ ವ್ಯಕ್ತಪಡಿಸಿರುವ ಬ್ರಿಕ್ಸ್​​ ರಾಷ್ಟ್ರಗಳು, ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಒಂದಾಗುವಂತೆ ಕರೆ ನೀಡಿವೆ. ಜೊತೆಗೆ ಅಫ್ಘಾನ್​​​ನಲ್ಲಿ ಮಾನವ ಹಕ್ಕು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಲು ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನಿಸಿದ್ದಾರೆ. ಭಯೋತ್ಪಾದನೆ ಪ್ರತಿಪಾದಿಸೋ ಸಹಾಯ & ಪ್ರೋತ್ಸಾಹ ನೀಡೋ ರಾಷ್ಟ್ರಗಳು ತಮ್ಮ ತಪ್ಪನ್ನು ಅರಿತು, ಪರಾಮರ್ಶೆ ಮಾಡಿಕೊಳ್ಳಬೇಕು ಅಂತ ಪ್ರಧಾನಿ ಮೋದಿ ಪಾಕ್​​ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

7. ಸೆ.11ರಂದೇ ತಾಲಿಬಾನಿಗಳ ಸರ್ಕಾರ ಕಾರ್ಯಾರಂಭ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ತಮ್ಮ ಕೈವಶ ಮಾಡಿಕೊಂಡ ಬೆನ್ನಲ್ಲೇ, ಇದೀಗ ತಾಲಿಬಾನಿಗಳು ತಮ್ಮದೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈಗಾಗ್ಲೇ, ಮುಖ್ಯ ಇಲಾಖೆಗಳಿಗೆ ಸಚಿವರನ್ನ ನೇಮಿಸಲಾಗಿದ್ದು, ಈ ಸಚಿವರು ಸೆಪ್ಟೆಂಬರ್ 11ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 11, 2001 ಅಲ್​ಖೈದಾ ಉಗ್ರರು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಸಿ ದೊಡ್ಡಮಟ್ಟದ ಅನಾಹುತಕ್ಕೆ ಕಾರಣರಾಗಿದ್ರು. ಅಮೆರಿಕ ಸರ್ಕಾರ ಈ ದಿನವನ್ನು ಪ್ರತಿ ವರ್ಷವೂ ಕರಾಳ ದಿನವನ್ನಾಗಿ ಆಚರಿಸುತ್ತದೆ. ಈ ದಿನವೇ ತಾಲಿಬಾನಿಗಳು ಸಚಿವರ ಪ್ರಮಾಣ ವಚನ ನಡೆಸೋ ಮೂಲಕ ಅಮೆರಿಕಕ್ಕೆ ಸಂದೇಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು, ತಾಲಿಬಾನಿಗಳು ಈಗಾಗ್ಲೇ ಹಲವು ದೇಶಗಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ.

8. ಅಫ್ಘಾನ್​​ನಲ್ಲಿ ಮಹಿಳೆಯರು ಕ್ರಿಕೆಟ್ ಆಡಂಗಿಲ್ಲ!?

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಇನ್ಮುಂದೆ ಕ್ರಿಕೆಟ್​ನಲ್ಲಿ ಭಾಗವಹಿಸುವಂತಿಲ್ಲ ಎಂದು ತಾಲಿಬಾನ್​ ಸಾಂಸ್ಕೃತಿಕ ಆಯೋಗದ ಉಪಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ತಿಳಿಸಿದ್ದಾರೆ. ಮಹಿಳೆಯರು ಕ್ರಿಕೆಟ್ ಆಡೋ ಅನಿವಾರ್ಯತೆ ಇಲ್ಲ. ಯಾಕಂದ್ರೆ ಕ್ರಿಕೆಟ್​ ಆಡೋ ವೇಳೆ ಮಹಿಳೆಯರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಲು ಆಗಲ್ಲ. ನಮ್ಮ ದೇಶದ ಮಹಿಳೆಯರು ಮುಖ ಮತ್ತು ದೇಹವನ್ನ ಪ್ರದರ್ಶಿಸೋದನ್ನ ನಾವು ಸಹಿಸಲ್ಲ ಅಂತ ವಾಸಿಕ್ ತಿಳಿಸಿದ್ದಾರೆ. ತಾಲಿಬಾನ್​ ಹೇಳಿಕೆ ಬೆನ್ನಲ್ಲೇ, ಆಸ್ಟ್ರೇಲಿಯಾ ತಾಲಿಬಾನಿಗಳಿಗೆ ಶಾಕ್​ ನೀಡಿದೆ. ಒಂದ್ವೇಳೆ, ತಾಲಿಬಾನಿಗಳು ಮಹಿಳೆಯರಿಗೆ ಕ್ರಿಕೆಟ್​ ಆಡಲು ನಿಷೇಧಿಸಿದ್ರೆ, ನಾವು ಅಫ್ಘಾನ್ ವಿರುದ್ಧ ಹೋಬರ್ಟ್​ನಲ್ಲಿ ನಡೆಯಬೇಕಿದ್ದ ಟೆಸ್ಟ್​ ಪಂದ್ಯವನ್ನ ರದ್ದುಗೊಳಿಸಬೇಕಾಗುತ್ತದೆ ಅಂತ ಎಚ್ಚರಿಸಿದೆ.

9. ಚೀನಾದಿಂದ ಟಿಬೆಟ್‌, ಷಿಂಜಿಯಾಂಗ್‌ನಲ್ಲಿ 30 ಏರ್‌ಪೋರ್ಟ್‌ ನಿರ್ಮಾಣ

ಭಾರತಕ್ಕೆ ಹೊಂದಿಕೊಂಡಂತಿರೋ ಟಿಬೆಟ್ ಮತ್ತು ಷಿಂಜಿಯಾಂಗ್ ಪ್ರಾಂತ್ಯಗಳಲ್ಲಿ ಚೀನಾ ಸುಮಾರು 30 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ ಅಂತ ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಡಿ ಪ್ರದೇಶಗಳಲ್ಲಿ ನಾಗರಿಕ ವಿಮಾನಯಾನದ ತ್ವರಿತ ಅಭಿವೃದ್ಧಿಯಿಂದಾಗಿ ವಾಯು ಸಾರಿಗೆಗೆ ಅನುಕೂಲವಾಗುತ್ತೆ ಅಂತ ಪಿಎಲ್‌ಎ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು, ಈ ಗಡಿ ಪ್ರದೇಶಗಳಲ್ಲಿ ರೈಲು, ರಸ್ತೆ ಮತ್ತು ವಿಮಾನ ನಿಲ್ದಾಣಗಳಂಥ ಮೂಲ ಸೌಕರ್ಯಗಳನ್ನ ಚೀನಾ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತಿದ್ದು, ಗಡಿ ಪ್ರದೇಶಗಳಿಗೆ ಸೈನಿಕರು, ಸಾಮಾಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅತ್ಯಂತ ವೇಗವಾಗಿ ಸಾಗಿಸುವ ಸಾಮರ್ಥ್ಯವನ್ನು ಚೀನಾ ಗಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

10. ಶಹಬ್ಬಾಸ್ ಬಾಯ್ಸ್..

ಬೆಂಕಿ ಹತ್ತಿ ಧಗ ಧಗ ಉರಿಯುತ್ತಿದ್ದ ಕಾರ್​ ಒಂದರಲ್ಲಿದ್ದ ಅಜ್ಜ-ಅಜ್ಜಿಯನ್ನು ಯುವಕರು ರಕ್ಷಿಸಿರೋ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಹೆದ್ದಾರಿಯೊಂದರಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರ್​ ಒಳಗಿದ್ದ 90 ವರ್ಷದ ಆಸುಪಾಸಿನ ವೃದ್ಧರು ಕಾರ್​ನಿಂದ ಹೊರಗೆ ಬರಲು ಹರಸಾಹಸಪಟ್ಟಿದ್ದಾರೆ. ಇನ್ನು ಸೀಟ್​ ಬೆಲ್ಟ್​ ಧರಿಸಿದ ಕಾರಣ, ಹೊರಬರಲು ಕಷ್ಟಪಟ್ಟಿದ್ದಾರೆ. ಇದೇ ವೇಳೆ ಅಲ್ಲೇ ಹೋಗುತ್ತಿದ್ದ ಐವರು ಯುವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವೃದ್ಧರನ್ನ ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಯುವಕರ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Source: newsfirstlive.com Source link