ಹಿಂದಿಯಲ್ಲ.. ಇಂಗ್ಲೀಷ್​ನಲ್ಲಿ ಸಂವಹನ ಮಾಡುವ ಹೊಣೆಗಾರಿಕೆ ಕೇಂದ್ರದ್ದು- ಮದ್ರಾಸ್​ ಹೈಕೋರ್ಟ್​

ಹಿಂದಿಯಲ್ಲ.. ಇಂಗ್ಲೀಷ್​ನಲ್ಲಿ ಸಂವಹನ ಮಾಡುವ ಹೊಣೆಗಾರಿಕೆ ಕೇಂದ್ರದ್ದು- ಮದ್ರಾಸ್​ ಹೈಕೋರ್ಟ್​

ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳದೆ ಇರುವ ರಾಜ್ಯಗಳೊಂದಿಗೆ ಆಂಗ್ಲ ಭಾಷೆಯಲ್ಲಿ ವಿಚಾರ ವಿನಿಮಯ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಮಧುರೈ ಲೋಕಸಭಾ ಕ್ಷೇತ್ರದ ಸಂಸದ ಸು. ವೆಂಕಟೇಶನ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್​) ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್ ಮತ್ತು ಎಂ.ದುರೈಸ್ವಾಮಿ ಅವರು, ಅಧಿಕೃತ ಭಾಷೆಗಳ ಕಾಯಿದೆ 1963 ಹಾಗೂ ಅಧಿಕೃತ ಭಾಷೆಗಳ ನಿಯಮಗಳ 1976ರ ಅನ್ವಯ ಕೇಂದ್ರವು ಮೇಲಿನಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿದಾರ ವೆಂಕಟೇಶನ್‌ ಅವರು ಇತ್ತೀಚೆಗೆ ಅರ್ಜಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅದಕ್ಕೆ ಉತ್ತರವನ್ನು ಕೇಂದ್ರ ಸರ್ಕಾರವು ಹಿಂದಿಯಲ್ಲಿ ನೀಡಿದೆ. ತಾವು ಆಂಗ್ಲ ಭಾಷೆಯಲ್ಲಿ ಉತ್ತರವನ್ನು ನೀಡುವಂತೆ ಕೋರಿ ಮತ್ತೆ ಪತ್ರವನ್ನು ಬರೆದಿದ್ದರೂ ಸಹ ತಮಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಹೀಗಾಗಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಎಲ್ಲ ಸಂವಹನಗಳನ್ನೂ ಇಂಗ್ಲಿಷ್‌ನಲ್ಲಿ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ವಿಚಾರಣೆ ವೇಳೆ ನ್ಯಾಯಾಲಯವು, ಒಮ್ಮೆ ಮನವಿಯೊಂದನ್ನು ಇಂಗ್ಲಿಷ್‌ನಲ್ಲಿ ನೀಡಿದ ಮೆಲೆ ಇಂಗ್ಲಿಷ್‌ನಲ್ಲಿಯೇ ಪ್ರತಿಕ್ರಿಯಿಸಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು, ಇದು ಅದಿಕೃತ ಭಾಷೆಗಳ ಕಾಯಿದೆಯ ಪಾಲನೆಯೂ ಆಗಿದೆ ಎಂದು ಹೇಳಿತ್ತು. ಈ ವಿಚಾರವಾಗಿ ನ್ಯಾಯಾಲಯವು ಅಧಿಕೃತ ಭಾಷೆಗಳ ಕಾಯಿದೆ 1963ರ ಸೆಕ್ಷನ್‌ 3 ಅನ್ನು ಅವಲಂಬಿಸಿತ್ತು.

ಇದನ್ನೂ ಓದಿ:AAPನಿಂದ ಗಣೇಶ ಹಬ್ಬ, ರಾಹುಲ್ ಗಾಂಧಿ ವೈಷ್ಣೋದೇವಿ ಯಾತ್ರೆ; ವಿಪಕ್ಷಗಳ ಕಾಲೆಳೆದ ಬಿ.ಎಲ್. ಸಂತೋಷ್

ನ್ಯಾಯಾಲಯವು, ಭಾಷೆ ಮತ್ತು ಸಂಸ್ಕೃತಿ, ಜನಾಂಗೀಯತೆ, ಇತರೆ ವೈವಿಧ್ಯಮಯ ಅನನ್ಯತೆಗಳನ್ನು ರಕ್ಷಿಸಬೇಕು, ಹೊರತಾಗಿ ಅವುಗಳನ್ನು ಕದಡಲು ಮುಂದಾಗುವ ಕ್ರಮಗಳು ಸೂಕ್ಷ್ಮ ವಿಷಯಗಳಾಗಿ ಮಾರ್ಪಡಬಹುದು ಎಂದೂ ಎಚ್ಚರಿಕೆ ನೀಡಿತ್ತು. ಭಾಷಾ ದುರಭಿಮಾನವು ಹೆಚ್ಚು ಅಪಾಯಕಾರಿಯಾಗಿದ್ದು ಅದು ಒಂದು ಭಾಷೆಯು ಮಾತ್ರವೇ ಹೆಚ್ಚು ಶ್ರೇಷ್ಠವಾದುದು ಎನ್ನುವ ಭಾವನೆಯನ್ನು ಮೂಡಿಸುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ದಾಖಲಿಸಿತ್ತು.

ಭಾರತದ ಅಧಿಕೃತ ಭಾಷೆಯನ್ನು ತಮಿಳುನಾಡು ರಾಜ್ಯದೊಂದಿಗೆ ಸಂವಹನಕ್ಕಾಗಿ ಬಳಸಲು ಸಾಧ್ಯವಿಲ್ಲ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳದ ರಾಜ್ಯಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್‌ ಭಾಷೆಯನ್ನು ಬಳಸಬೇಕು ಎನ್ನುವ ಸಂಸತ್ತಿನ ಕಾನೂನಿಗೆ ಕೇಂದ್ರ ಸರ್ಕಾರವು ಬದ್ಧವಾಗಿರಬೇಕಿದೆ, ಎಂದು ನ್ಯಾಯಾಲಯವು ಹೇಳಿತು.

ಸಂವಿಧಾನದ 350ನೇ ವಿಧಿ ಹೇಳುವಂತೆ ಕೇಂದ್ರ ಸರ್ಕಾರಕ್ಕೆ ಅಥವಾ ರಾಜ್ಯ ಸರ್ಕಾರಕ್ಕೆ ಯಾವುದೇ ವ್ಯಕ್ತಿಯು ಒಕ್ಕೂಟದಲ್ಲಿ ಅಥವಾ ರಾಜ್ಯದಲ್ಲಿ ಬಳಸುವ ಯಾವುದೇ ಭಾಷೆಯಲ್ಲಿ ಮನವಿಯನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎನ್ನುವ ಅಂಶವನ್ನು ಹೇಳಿದೆ. ಮುಂದಿನ ದಿನಗಳಲ್ಲಿ ಸಂವಿಧಾನದ 350ನೇ ವಿಧಿಗೆ ಸೂಕ್ತ ಮಾರ್ಪಾಡು ತರುವ ಮೂಲಕ ಕೇಂದ್ರ ಸರ್ಕಾರವು ತನಗೆ ಮನವಿಯನ್ನು ಸಲ್ಲಿಸಲಾದ ಭಾಷೆಯಲ್ಲಿಯೇ ಪ್ರತಿಕ್ರಿಯೆಯನ್ನು ಸಲ್ಲಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದಿತು.  ತಮಿಳುನಾಡಿಗೆ ಸಂಬಂಧಿಸಿದಂತೆ  ನಿರ್ದಿಷ್ಟವಾಗಿ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ತಮಿಳುನಾಡು ಸರ್ಕಾರವು ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿರುವ ಅಧಿಕೃತ ಭಾಷೆಗಳ ಕಾಯಿದೆಯನ್ನು ಜಾರಿಗೊಳಿಸಿದೆ. ಹಾಗಾಗಿ, ಜನತೆಗೆ ಕೇಂದ್ರ ಸರ್ಕಾರವು ಸಂವಿಧಾನದ 350ನೇ ವಿಧಿಯಲ್ಲಿ ಹೇಳಿರುವಂತೆ ಅವರ ಭಾಷೆಯಲ್ಲಿಯೇ ಸಂವಹನ ನಡೆಸುವುದು ಸೂಕ್ತ ಎಂದಿದೆ.

ಇದನ್ನೂ ಓದಿ:‘ನಾನೂ ಕಾಶ್ಮೀರಿ ಪಂಡಿತ.. ಇವರಿಗೆ ಹೇಗೆ ಸಹಾಯ ಮಾಡಬೇಕು ಅಂತ ಬಿಜೆಪಿಗೆ ತೋರಿಸ್ತೇನೆ’

Source: newsfirstlive.com Source link