ಕಾಫಿನಾಡಿಗೆ ನಿಫಾ ಭೀತಿ..! -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಕಾಫಿನಾಡಿಗೆ ನಿಫಾ ಭೀತಿ..! -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

1. ಹದಿಹರೆಯದವರಿಗೆ ಕೊರೊನಾಗಿಂತ ಲಸಿಕೆ ಡೇಂಜರ್!

12-15 ವರ್ಷದೊಳಗಿನ ಹುಡುಗರಲ್ಲಿ ಕೊರೊನಾಗಿಂತಲೂ ಲಸಿಕೆಯೇ ಡೇಂಜರ್​ ಅಂತ ಅಮೆರಿಕಾದ ಸಂಶೋಧನಾ ಸಂಸ್ಥೆಯೊಂದು ವರದಿ ಬಿಡುಗಡೆಗೊಳಿಸಿದೆ. ಕ್ಯಾಲಿಫೋರ್ನಿಯಾ ವಿವಿಯ ಡಾ. ಟ್ರೇಸಿ ಹೊಯೆಗ್ ನೇತೃತ್ವದ ತಂಡ ಲಸಿಕೆ ಪಡೆದವರ ಮತ್ತು ಸೋಂಕಿಗೆ ತುತ್ತಾದ ಹದಿಹರೆಯದವರ ಬಗ್ಗೆ ಅಧ್ಯಯನ ಮಾಡಿದೆ. ಈ ವೇಳೆ 12-17 ವರ್ಷ ವಯಸ್ಸಿನ ಮಕ್ಕಳಲ್ಲಿ ಲಸಿಕೆಯಿಂದ ಎದೆ ನೋವಿನ ಅಪಾಯವಿರೋದು ಬಯಲಾಗಿದೆ. ಲಸಿಕೆಯಿಂದ ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆ 6 ಪಟ್ಟು ಹೆಚ್ಚು ಇರಲಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2. ಕಾಫಿನಾಡಿಗೆ ನಿಫಾ ಭೀತಿ!

ಚಿಕ್ಕಮಗಳೂರು ಜಿಲ್ಲೆಗೂ ಇದೀಗ ನಿಫಾ ವೈರಸ್ ಭೀತಿ ಎದುರಾಗಿದೆ. ಚಿಕ್ಕಮಗಳೂರು ನಗರಸಭೆ, ಜಿಲ್ಲಾಡಳಿತದ ಕಚೇರಿ ಆವರಣದಲ್ಲಿರೋ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವಲಿಗಳು ಜೋತು ಬಿದ್ದಿವೆ. ಇದ್ರಿಂದ, ಮರಗಳ ಕೆಳಗೆ ಓಡಾಡೋ ಜನರಲ್ಲಿ ನಿಫಾ ಆತಂಕ ಸೃಷ್ಟಿಯಾಗಿದೆ. ತಕ್ಷಣವೇ ಬಾವಲಿಗಳನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಸಾಲದಕ್ಕೆ ನಗರಸಭೆ ಆವರಣದಲ್ಲಿ ಪಾರ್ಕ್ ಕೂಡ ಇದ್ದು, ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಬರ್ತಾರೆ. ಪಾರ್ಕ್ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆಯೂ ಇರೋದ್ರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

3. ‘ಕೃಷಿ ಕಾಯ್ದೆ ನೂರಕ್ಕೆ ನೂರರಷ್ಟು ರೈತರ ಪರ’
ಕೇಂದ್ರ ಸರ್ಕಾರ ಜಾರಿ ಮಾಡಿರೋ 3 ವಿವಾದಾತ್ಮಕ ಕೃಷಿ ಕಾಯ್ದೆಗಳನ್ನ ಪರಿಶೀಲಿಸಲು ಸುಪ್ರೀಂ ಕೋರ್ಟ್​ ತಜ್ಞರ ಸಮಿತಿಯೊಂದನ್ನ ರಚಿಸಿದೆ. ಸಮಿತಿಯ ಸದಸ್ಯರೊಬ್ಬರು ಕೃಷಿ ಕಾನೂನುಗಳ ಬಗ್ಗೆ ಸಮಾಧಾನಕಾರ ಮಾಹಿತಿಯನ್ನ ನೀಡಿದ್ದಾರೆ. ಈಗಾಗ್ಲೇ, ಸುಪ್ರೀಂಗೆ ವರದಿಯನ್ನ ಸಲ್ಲಿಸಿರೋ ಸಮಿತಿಯ ಸದಸ್ಯರು, ಕೃಷಿ ಕಾಯ್ದೆ ನೂರಕ್ಕೆ ನೂರರಷ್ಟು ರೈತರ ಪರವಾಗಿದೆ ಅಂತ ತಿಳಿಸಿದ್ದಾರೆ. ಜೊತೆಗೆ ವರದಿಯನ್ನ ಸರ್ಕಾರ ಹಾಗೂ ಕೋರ್ಟ್​ ಬಹಿರಂಗಪಡಿಸೋ ಬಗ್ಗೆ ಚರ್ಚಿಸಬೇಕಿದೆ. ಅಲ್ಲದೇ, ವರದಿಯನ್ನು ಪ್ರಕಟಿಸಿದ ನಂತರ 9 ತಿಂಗಳಿಂದ ನಡೆಯುತ್ತಿರೋ ರೈತರ ಪ್ರತಿಭಟನೆ ಖಂಡಿತವಾಗಿ ಅಂತ್ಯವಾಗುತ್ತೆ ಅಂತಲೂ ಸಮಿತಿ ಸದಸ್ಯರು ಆಶಯ ವ್ಯಕ್ತಪಡಿಸಿದ್ದಾರೆ.

4. ‘ಆರ್​ಎಸ್​ಎಸ್​ ಸಂಘಟನೆ ಬಹಿಷ್ಕರಿಸಿ’

ಆರ್​ಎಸ್​ಎಸ್​ ಸಂಘಟನೆಯನ್ನು ಬಹಿಷ್ಕಾರ ಮಾಡಬೇಕು ಅಂತ ನಿವೃತ್ತ ಐಪಿಎಸ್​ ಅಧಿಕಾರಿ ಎಂ. ನಾಗೇಶ್ವರ ರಾವ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರೋ ನಾಗೇಶ್ವರ ರಾವ್​, ಎಲ್ಲಾ ಹಿಂದೂಗಳು ಆರ್​ಎಸ್​ಎಸ್​ ಮುಕ್ತ ಭಾರತವನ್ನಾಗಿ ಮಾಡಬೇಕು ಅಂತ ಕರೆ ನೀಡಿದ್ದಾರೆ. ಮುಸ್ಲಿಂ ಧರ್ಮದಲ್ಲಿ ಹಿಂಸೆಯನ್ನು ಹೇಗೆ ಪ್ರಚೋದನೆ ಮಾಡ್ತಾರೋ, ಅದೇ ರೀತಿ ಆರ್​ಎಸ್​ಎಸ್​ ಕೂಡ ಹಿಂಸಾತ್ಮಕ ಗುಣಗಳನ್ನ ಅಳವಡಿಸಿಕೊಂಡಿದೆ. ಈ ಮೂಲಕ ಹಿಂದೂಗಳನ್ನ ಆರ್​ಎಸ್​ಎಸ್​ ವಿನಾಶದ ಕಡೆಗೆ ಕರೆದ್ಯೊಯ್ಯುತ್ತಿದೆ. ಆರ್​ಎಸ್​ಎಸ್​ ಕಾರ್ಯಕರ್ತರೆಲ್ಲರೂ ಹುಸಿ ಹಿಂದೂತ್ವ ಮೋಸಗಾರರು ಅಂತ ಟ್ವಿಟರ್​ನಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಎಂ. ನಾಗೇಶ್ವರ ರಾವ್​ ಬರೆದುಕೊಂಡಿದ್ದಾರೆ.

5. ನಟ ಸಾಯಿ ಧರಮ್ ತೇಜ್​​ಗೆ ಆ್ಯಕ್ಸಿಡೆಂಟ್!

ಟಾಲಿವುಡ್ ನಟ ಚಿರಂಜೀವಿ ಸೋದರಳಿಯ, ನಟ ಸಾಯಿ ಧರಮ್ ತೇಜ್ ಬೈಕ್ ತಡರಾತ್ರಿ ಅಪಘಾತಕ್ಕೀಡಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ನಟ ಸಾಯಿ ಧರಮ್ ತೇಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೈದ್ರಾಬಾದ್​ನ ದುರ್ಗಮ್​​ಚೆರುವು ಕೇಬಲ್ ಬ್ರಿಡ್ಜ್ ಬಳಿ ಸ್ವಾಂಕಿ ಸ್ಪೋಟ್ಸ್ ಬೈಕ್​​ನಲ್ಲಿ ನಟ ಬರ್ತಿದ್ದ ವೇಳೆ ಸ್ಕಿಡ್ ಆಗಿ ಬಿದ್ದಿದ್ದಾರೆ. ನಟ ಸಾಯಿ ಧರಮ್ ತೇಜ್​​ ಹೆಲ್ಮೆಟ್ ಧರಿಸಿದ್ದ ಪರಿಣಾಮ ಸ್ಪಲ್ವ ತರಚಿದ ಗಾಯಗಳಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಸದ್ಯ, ಹೈದ್ರಾಬಾದ್​ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

6. ರಾಜಕಾರಣಿಗಳ ಹುಟ್ಟುಹಬ್ಬಕ್ಕಿಲ್ವಾ ರೂಲ್ಸ್?

ಪರಿಷತ್ ಸದಸ್ಯ ಹನಮಂತ ನಿರಾಣಿ ಅವರ 54ನೇ ಹುಟ್ಟುಹಬ್ಬದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ. ಸಚಿವ ಮುರುಗೇಶ್ ನಿರಾಣಿ ಸಹೋದರ ಹನಮಂತ ನಿರಾಣಿ ಹುಟ್ಟುಹಬ್ಬದ ವೇಳೆ ಬಾಗಲಕೋಟೆಯ ಬೀಳಗಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಭಾಗಿಯಾಗಿದ್ದು ಕಂಡು ಬಂತು. ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಮಾತ್ರ ಕೊರೊನಾ ನಿಯಮ ಅನ್ವಯವಾಗಲ್ವಾ ಅನ್ನೋ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.

7. ‘ತಾಲಿಬಾನಿಗಳೊಂದಿಗೆ ಮಾತನಾಡುವ ಅಗತ್ಯವಿದೆ’

ತಾಲಿಬಾನಿಗಳ ಜೊತೆ ನಾವು ಮಾತುಕತೆ ನಡೆಸಬೇಕಾದ ಅಗತ್ಯವಿದೆ ಅಂತ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯಾ ಗುಟ್ರೆಸ್​ ತಿಳಿಸಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗುಟ್ರೆಸ್​, ತಾಲಿಬಾನಿಗಳ ಜೊತೆ ನಾವು ಮಾತುಕತೆ ನಡೆಸಿ, ನಮ್ಮ ಅನಿಸಿಕೆಗಳನ್ನ ನೇರವಾಗಿ ಹೇಳಿಕೊಳ್ಳಬೇಕು. ಈ ಮೂಲಕ ಅಫ್ಘಾನ್​ ಜನರಿಗಾಗಿ ನಾವಿದ್ದೇವೆ ಎಂಬುದನ್ನು ತಿಳಿಸಬೇಕು ಅಂತ ಹೇಳಿದ್ದಾರೆ. ಅಫ್ಘಾನ್​ ಜನತೆ ಈಗಾಗ್ಲೇ ಕಷ್ಟಕ್ಕೆ ಸಿಲುಕಿ ನಲುಗಿದ್ದು, ಲಕ್ಷಾಂತರ ಜನರು ಹಸಿವಿನಿಂದ ಸಾಯುವ ಮುನ್ಸೂಚನೆಯೂ ಇದೆ. ಈ ಭೀಕರ ಸಾವುಗಳನ್ನ ತಪ್ಪಿಸುವ ಸಲುವಾಗಿ ತಾಲಿಬಾನಿಗಳೊಂದಿಗೆ ಮಾತಾಡಲೇಬೇಕಿದೆ ಅಂತ ಗುಟ್ರೆಸ್​ ಒತ್ತಿ ಹೇಳಿದ್ದಾರೆ.

8. ಕಣಿವೆ ರಾಜ್ಯಕ್ಕೆ ಹೋಗಲಿದ್ದಾರೆ ಕೇಂದ್ರದ 70 ಸಚಿವರು!

ಮುಂದಿನ 9 ವಾರಗಳಲ್ಲಿ 70 ಕೇಂದ್ರ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಂಪರ್ಕ ಕಾರ್ಯಕ್ರಮವನ್ನು ಕಣಿವೆ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 10 ಸಚಿವರು ಮುಂದಿನ 7 ದಿನಗಳ ಒಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ. ಸಚಿವರ ಪಟ್ಟಿಯಲ್ಲಿ ಕೃಷಿ ಸಚಿವ ಸೇರಿದಂತೆ ಕೈಲಾಶ್​ ಚೌಧರಿ, ಶೋಭಾ ಕರಂದ್ಲಾಜೆ, ಅಜಯ್​ ಭಟ್​ ಸೇರಿ ಹಲವರು ಭೇಟಿ ನೀಡಿ ಕೃಷಿ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ತಜ್ಞರನ್ನ ಭೇಟಿಯಾಗಲಿದ್ದಾರೆ

9. ಐನ್​ಸ್ಟೀನ್​ ಐಕ್ಯೂವನ್ನೂ ಮೀರಿಸಿದ 8ರ ಪೋರಿ!

8 ವರ್ಷದ ಬಾಲಕಿಯೊಬ್ಬಳು ಜಗತ್ ವಿಖ್ಯಾತ ವಿಜ್ಞಾನಿ ಆಲ್ಬರ್ಟ್​ ಐನ್​ಸ್ಟೀನ್​ ಹಾಗೂ ಸ್ಟೀಫನ್​ ಹಾಕಿಂಗ್​ ಅವರ ಐಕ್ಯೂವನ್ನೂ ಮೀರಿಸಿದ್ದಾಳೆ. ಮೆಕ್ಸಿಕೋ ದೇಶದ ಬಾಲಕಿ ಅಧಾರಾ ಪರ್ವೇಜ್​ 162 ಐಕ್ಯೂ ಲೇವಲ್​ ಹೊಂದಿದ್ದಾಳೆ. ಈ ಮೂಲಕ 160 ಐಕ್ಯೂ ಹೊಂದಿರುವ ಐನ್​ಸ್ಟೀನ್​ ಹಾಗೂ ಸ್ಟೀಫನ್​ ಅವರನ್ನ ಹಿಂದಿಕ್ಕಿದ್ದಾಳೆ. ಇನ್ನು ಹೆಚ್ಚು ಐಕ್ಯೂ ಹೊಂದಿರೋ ಅಧಾರಾ 8ನೇ ವಯಸ್ಸಿಗೆ ಪ್ರಾಥಮಿಕ, ಮಾಧ್ಯಮ ಹಾಗೂ ಫ್ರೌಢಶಾಲೆಯನ್ನು ಮುಗಿಸಿದ್ದು, 6 ಆನ್​ಲೈನ್​ ಕೋರ್ಸ್​ಗಳನ್ನ ಮುಗಿಸಿದ್ದಾಳೆ. ಅಷ್ಟೇ ಅಲ್ಲದೇ ಪರ್ವೇಜ್​ ಡು ನಾಟ್​ ಗಿವ್​ ಅಪ್​ ಎಂಬ ಪುಸ್ತಕವನ್ನು ಬರೆದಿದ್ದಾಳೆ.

10. ಗಣಪನಿಗೆ ಜೀವಂತ ಇಲಿ ಸಮರ್ಪಣೆ
ಬೆಳೆ ಉಳಿಸುವಂತೆ ವಿಘ್ನನಿವಾರಕ ಗಣಪನಿಗೆ ಜೀವಂತ ಇಲಿಯನ್ನ ರೈತನೋರ್ವ ಭಕ್ತಿಪೂರ್ವಕವಾಗಿ ಸಮರ್ಪಣೆ ಮಾಡಿರೋ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ನಿವಾಸಿ ನಿತಿನ್, ಈ ರೀತಿಯಾಗಿ ಗಣೇಶನಿಗೆ ಭಕ್ತಿ ಸಮರ್ಪಣೆಯನ್ನ ಮಾಡಿದ್ದಾರೆ. ಹೊಲದಲ್ಲಿ ಬೆಳೆಗಳನ್ನು ಇಲಿಗಳು ನಾಶ ಮಾಡುತ್ತಿವೆ. ಹೀಗಾಗಿ ಕೃಷಿಯನ್ನು ಉಳಿಸುವಂತೆ ಮರ್ಕಲ್ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ನಿತಿನ್, ಮೂಷಿಕವನ್ನ ಅರ್ಪಿಸಿದ್ದಾನೆ.

ಐನ್​ಸ್ಟೀನ್​ ಐಕ್ಯೂವನ್ನೂ ಮೀರಿಸಿದ 8ರ ಪೋರಿ!

Source: newsfirstlive.com Source link